ಶನಿವಾರ, ಡಿಸೆಂಬರ್ 7, 2019
24 °C
ಸುದೀರ್ಘ ವಿಚಾರಣೆ ಬಳಿಕ ತೀರ್ಪು ನೀಡಿದ ಹಸಿರು ಪೀಠ

ಗಂಗಾ ನದಿ ತೀರದ 500 ಮೀಟರ್‌ ಅಂತರದಲ್ಲಿ ಕಸ ಸುರಿದರೆ ₹ 50 ಸಾವಿರ ದಂಡ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಗಂಗಾ ನದಿ ತೀರದ 500 ಮೀಟರ್‌ ಅಂತರದಲ್ಲಿ ಕಸ ಸುರಿದರೆ ₹ 50 ಸಾವಿರ ದಂಡ

ನವದೆಹಲಿ: ಗಂಗಾ ನದಿ ದಂಡೆಯಿಂದ 500 ಮೀಟರ್ ಅಂತರದಲ್ಲಿ ಯಾವುದೇ ಬಗೆಯ ಕಸ ಸುರಿಯುವುದನ್ನು ನಿಷೇಧಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಇದನ್ನು ಉಲ್ಲಂಘಿಸುವವರಿಗೆ ₹ 50 ಸಾವಿರ ದಂಡ ವಿಧಿಸಲು ಸೂಚಿಸಿದೆ.

ನ್ಯಾಯಮೂರ್ತಿ ಸ್ವತಂತ್ರ ಕುಮಾರ್‌ ಅವರ ನೇತೃತ್ವದ ಹಸಿರು ನ್ಯಾಯಪೀಠ ಗುರುವಾರ ಈ ಆದೇಶ ಹೊರಡಿಸಿದೆ.

ಗಂಗಾ ನದಿ ತಟದ ಉನ್ನಾವ್‌ ಮತ್ತು ಹರಿದ್ವಾರಗಳಲ್ಲಿ ನದಿ ಸಮೀಪ ಕಸ ಸುರಿಯುವುದನ್ನು ಕಟ್ಟು ನಿಟ್ಟಾಗಿ ತಡೆಯಬೇಕೆಂದು ನ್ಯಾಯಪೀಠ ಅಲ್ಲಿನ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.

‌ಗಂಗಾ ನದಿ ಸಮೀಪದಲ್ಲಿರುವ ಚರ್ಮ ಸಂಸ್ಕರಣಾ ಘಟಕಗಳನ್ನು ಆರು ವಾರಗೊಳಗೆ ಸ್ಥಳಾಂತರಿಸುವಂತೆ ನ್ಯಾಯಪೀಠವು ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ.

ಅಲ್ಲದೆ, ಗಂಗಾ ನದಿ ತೀರದಿಂದ 100 ಮೀಟರ್‌ ಅಂತರದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಬಾರದು ಎಂದು ನ್ಯಾಯಪೀಠ ಆದೇಶಿಸಿದೆ.

ಗಂಗಾ ನದಿ ತೀರದಲ್ಲಿರುವ ಘಾಟ್‌ ಮತ್ತು ಪವಿತ್ರ ಸ್ಥಳಗಳಲ್ಲಿ ನದಿಗೆ ಹಾನಿಯಾಗದಂತೆ ಧಾರ್ಮಿಕ ಆಚರಣೆಗಳನ್ನು ನಡೆಸಲು ಮಾರ್ಗಸೂಚಿ ತಯಾರಿಸುವಂತೆ ಎನ್‌ಜಿಟಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ.

**

₹ 7,000 ಕೋಟಿ ವೆಚ್ಚ: ಸಿಬಿಐ ತನಿಖೆಗೆ ಆಗ್ರಹ

ಹರಿದ್ವಾರದಿಂದ ಉನ್ನಾವೊವರೆಗೆ ಗಂಗಾ ನದಿ ಸ್ವಚ್ಛತೆಗೆ ಕೇಂದ್ರ ಮತ್ತು ಉತ್ತರಪ್ರದೇಶ ರಾಜ್ಯ ಸರ್ಕಾರಗಳು ₹7,000 ಕೋಟಿ ವೆಚ್ಚ ಮಾಡಿದ್ದು ಈ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಪರಿಸರವಾದಿ ಎಂ.ಸಿ. ಮೆಹ್ತಾ ಆಗ್ರಹಿಸಿದ್ದಾರೆ.

ನದಿ ಸ್ವಚ್ಛತೆಗಾಗಿ ವಿವಿಧ ಸಂಸ್ಥೆಗಳು ₹7,000 ಕೋಟಿ ವೆಚ್ಚ ಮಾಡಿದ್ದರೂ ಗಣನೀಯವಾದ ಯಾವ ಸುಧಾರಣೆಯೂ ಆಗಿಲ್ಲ ಎಂದು ಅವರು ಆರೋಪಿಸಿದ್ದಾರೆ.

**

‘ಹಸಿರು’ ನಿರ್ದೇಶನ

* ಗಂಗಾ ನದಿ ಮತ್ತು ಅದರ ಉಪನದಿಗಳ ದಡಗಳಲ್ಲಿ ಧಾರ್ಮಿಕ ಆಚರಣೆ ನಡೆಸುವುದಕ್ಕೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ಮಾರ್ಗದರ್ಶಿ ಸೂತ್ರ ರಚಿಸಬೇಕು.

* ಗಂಗಾ ಜಲಾನಯನ ಪ್ರದೇಶದ ಕೈಗಾರಿಕಾ ಘಟಕಗಳು ಮನಸೋಇಚ್ಛೆ ಅಂತರ್ಜಲ ತೆಗೆಯುವುದನ್ನು ನಿಯಂತ್ರಿಸಬೇಕು.

* ಗಂಗಾ ನದಿ ಸ್ವಚ್ಛತೆ ಕೆಲಸವನ್ನು ವಿವಿಧ ಹಂತಗಳಾಗಿ ವಿಂಗಡಿಸಲಾಗಿದೆ.  ಗೋಮುಖದಿಂದ ಹರಿದ್ವಾರದವರೆಗಿನ ಸ್ವಚ್ಛತೆಯನ್ನು ಹಂತ–1 ಎಂದು ಗುರುತಿಸಲಾಗಿದೆ.

* ಮೊದಲ ಹಂತಕ್ಕೆ ಸಂಬಂಧಿಸಿದ ತೀರ್ಪನ್ನು 2015ರ ಡಿಸೆಂಬರ್‌ನಲ್ಲಿಯೇ ನೀಡಲಾಗಿತ್ತು.

* ಖ್ಯಾತ ಪರಿಸರವಾದಿ ಎಂ.ಸಿ. ಮೆಹ್ತಾ ಅವರ1985ರಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಈ ತೀರ್ಪು ನೀಡಲಾಗಿದೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು 2014ರಲ್ಲಿ ಹಸಿರುಪೀಠಕ್ಕೆ ವರ್ಗಾಯಿಸಲಾಗಿತ್ತು.

ಪ್ರತಿಕ್ರಿಯಿಸಿ (+)