ಸೋಮವಾರ, ಡಿಸೆಂಬರ್ 9, 2019
26 °C

‘ಯೋಗ ನನ್ನ ಫಿಟ್‌ನೆಸ್‌ ಮಂತ್ರ’

Published:
Updated:
‘ಯೋಗ ನನ್ನ ಫಿಟ್‌ನೆಸ್‌ ಮಂತ್ರ’

‘ನಾನು ಹುಟ್ಟಿ, ಬೆಳದದ್ದು ಟಿ.ದಾಸರಹಳ್ಳಿಯಲ್ಲಿ. ಶೇಷಾದ್ರಿಪುರಂ ಕಾಲೇಜಿನಲ್ಲಿ ಪಿ.ಯು ಮುಗಿಸಿದೆ. ಪದವಿಯಲ್ಲಿ ಪತ್ರಿಕೋದ್ಯಮ ವಿಷಯ ಆಯ್ಕೆ ಮಾಡಿಕೊಳ್ಳಬೇಕು ಎಂಬ ಆಸೆಯಿದೆ. ಜೊತೆಗೆ ರೂಪದರ್ಶಿಯಾಗಿಯೂ ಹೆಸರು ಮಾಡಬೇಕೆಂಬ ಕನಸು ನನ್ನದು. ಅದಕ್ಕಾಗಿ ಮೂರು ತಿಂಗಳ ಗ್ರೂಮಿಂಗ್‌ ತರಬೇತಿ ಪಡೆದಿದ್ದೇನೆ. ಜುಲೈ 22ರಂದು ನಡೆಯುವ ಪ್ರಿನ್ಸೆಸ್‌ ಸೌತ್ ಇಂಡಿಯಾ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದೇನೆ.  

ಕಾಲೇಜಿನಲ್ಲಿರುವಾಗಲೇ ಫ್ಯಾಷನ್‌ ಶೋಗಳನ್ನು ಆಯೋಜಿಸುತ್ತಿದ್ದೆವು. ಮಾಡೆಲ್‌ ಆಗಬೇಕೆಂಬ ಗುರಿ ಇದ್ದುದರಿಂದ ಅವಕಾಶಗಳಿಗಾಗಿ ಕಾಯುತ್ತಿದ್ದೆ. ಫೇಸ್‌ಬುಕ್‌ನಲ್ಲಿ ಸಿಲ್ವರ್‌ಸ್ಟಾರ್‌ ಫ್ಯಾಷನ್‌ ಸ್ಕೂಲ್‌ನವರು ರೂಪದರ್ಶಿಯರಿಗೆ ತರಬೇತಿ ನೀಡುತ್ತಾರೆ ಎಂಬ ವಿಷಯ ತಿಳಿಯಿತು. ಗ್ರೂಮಿಂಗ್‌ ತರಬೇತಿ ಪಡೆದೆ. ನಡೆಯುವ ಶೈಲಿ, ಹಾವಭಾವ, ಕ್ಯಾಮೆರಾ ಎದುರಿಸುವ ರೀತಿ, ಸಂವಹನ... ಹೀಗೆ ಅನೇಕ ವಿಷಯಗಳನ್ನು ಕಲಿತೆ.

ಕಲ್ಯಾಣ್‌ ಜ್ಯುವೆಲರ್ಸ್‌, ಜಿ.ಆರ್‌.ಟಿ. ಸೇರಿದಂತೆ ಅನೇಕ ಬ್ರ್ಯಾಂಡ್‌ಗಳಿಗೆ ಜಾಹೀರಾತು ರೂಪದರ್ಶಿಯಾಗಿದ್ದೇನೆ. ಕೆಲವು ಡಿಸೈನರ್‌ ಶೋಗಳು ಹಾಗೂ ಜಾಹೀರಾತುಗಳಿಗೆ ಬಿಕಿನಿ ಧರಿಸುವಂತೆ ಹೇಳುತ್ತಾರೆ. ಆದರೆ ಮಾಡೆಲಿಂಗ್‌ ಕ್ಷೇತ್ರಕ್ಕೆ ಈಗಿನ್ನೂ ಕಾಲಿಟ್ಟಿರುವುದರಿಂದ ನನಗೆ ಕಂಫರ್ಟ್‌ ಎನಿಸುವಂತ ಉಡುಪುಗಳನ್ನಷ್ಟೇ ಹಾಕಿಕೊಳ್ಳುತ್ತೇನೆ. ಹೆಸರು ಮಾಡಿದ ಮೇಲೆ ಆ ಬಗ್ಗೆ ಯೋಚಿಸುತ್ತೇನೆ.

ಚಿಕ್ಕವಳಿದ್ದಾಗಿನಿಂದ ನಾನು ತೆಳ್ಳಗಿದ್ದೇನೆ, ಎತ್ತರ 5.4 ಅಡಿ. ಹಾಗಾಗಿ ಮಾಡೆಲಿಂಗ್‌ಗೆ ಹೇಳಿಮಾಡಿಸಿದಂಥ ಮೈಕಟ್ಟು ನನ್ನದು. ದೇಹದ ಫಿಟ್‌ನೆಸ್‌ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅತೀಯಾಗಿ ಎಣ್ಣೆ ಬಳಸಿದ ಆಹಾರ, ಜಂಕ್‌ ಫುಡ್‌ ತಿನ್ನೋದಿಲ್ಲ. ಮನೆ ಊಟ, ತರಕಾರಿ ಜ್ಯೂಸ್‌ ಸೇವಿಸುತ್ತೇನೆ. ಹೆಚ್ಚು ನೀರು ಕುಡಿಯುತ್ತೇನೆ.

ಪ್ರತಿದಿನ ಬೆಳಿಗ್ಗೆ ಒಂದು ಗಂಟೆ ಅಮ್ಮನೊಂದಿಗೆ ಯೋಗ ಮಾಡುತ್ತೇನೆ. ಪ್ರೌಢ ಶಾಲೆಯಲ್ಲಿದ್ದಾಗಿನಿಂದ ಯೋಗ ಅಭ್ಯಾಸ ಮಾಡುತ್ತಿರುವುದೇ ನನ್ನ ಫಿಟ್‌ನೆಸ್‌ ರಹಸ್ಯ. ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಗಳಿಗೂ ಭಾಗವಹಿಸಿ, ಪ್ರಶಸ್ತಿ ಗಳಿಸಿದ್ದೇನೆ. ಇಂದಿಗೂ ಅಭ್ಯಾಸವನ್ನು ಬಿಟ್ಟಿಲ್ಲ. ಜೊತೆಗೆ ಜಿಮ್‌ನಲ್ಲಿ ಅರ್ಧಗಂಟೆ ಕಾರ್ಡಿಯೊ, ಟ್ರೆಡ್‌ಮಿಲ್‌, ಪುಷ್‌ಅಪ್ಸ್‌ ಮಾಡಲೇಬೇಕು. ಸಂಜೆ ಒಂದು ಗಂಟೆ ವಾಕಿಂಗ್‌ ತಪ್ಪಿಸುವುದಿಲ್ಲ.

ತ್ವಚೆಯ ರಕ್ಷಣೆ ಹೀಗೆ: ಮಳೆಗಾಲ ಆಗಿರುವುದರಿಂದ ತ್ವಛೆಯ ರಕ್ಷಣೆಗೆ ಹೆಚ್ಚು ಗಮನಹರಿಸುತ್ತೇನೆ. ರಾತ್ರಿ ಮಲಗುವ ಮುಂಚೆ ಮುಖ ತೊಳೆದುಕೊಂಡು ಕೋಲ್ಡ್‌ ಕ್ರೀಂ ಹಾಕಿಕೊಳ್ಳುತ್ತೇನೆ. ನಂತರ ಬಾಡಿ ಲೋಷನ್‌ ಹಚ್ಚುತ್ತೇನೆ. ದ್ವಿಚಕ್ರ ವಾಹನದಲ್ಲಿ ಹೋಗುವುದಾದರೆ ಕೂಲಿಂಗ್‌ ಗ್ಲಾಸ್‌ ಹಾಕಿಕೊಳ್ಳುತ್ತೇನೆ. ಮುಖಕ್ಕೆ ಸ್ಕಾರ್ಫ್‌ ಕಟ್ಟಿಕೊಳ್ಳುತ್ತೇನೆ. ದೂಳಿನಿಂದ ಚರ್ಮದ ರಕ್ಷಣೆ ಮಾಡಿಕೊಳ್ಳುವುದು ಮುಖ್ಯ.

ಬಿಡುವಿನ ವೇಳೆಯಲ್ಲಿ ನೃತ್ಯ ತರಬೇತಿಗೆ ಹೋಗುತ್ತೇನೆ, ಚಿಕ್ಕಂದಿನಲ್ಲೇ ಭರತನಾಟ್ಯ ಜೂನಿಯರ್‌ ಮುಗಿಸಿದ್ದೇನೆ. ಈಗ ಬೆಲ್ಲಿ ನೃತ್ಯವನ್ನೂ ಕಲಿಯುತ್ತಿದ್ದೇನೆ. ಮನೆಮಂದಿಯೆಲ್ಲ ಸೇರಿ ದೇವಸ್ಥಾನಗಳಿಗೆ ಹೋಗುವುದೆಂದರೆ ನನಗೆ ಇಷ್ಟ.

ಪ್ರತಿಕ್ರಿಯಿಸಿ (+)