ಶುಕ್ರವಾರ, ಡಿಸೆಂಬರ್ 6, 2019
17 °C
ರಾಜ್ಯ ಸರ್ಕಾರಕ್ಕೆ ಶಿಫಾರಸು

ಲೈಂಗಿಕ ವೃತ್ತಿನಿರತರ ಪುನಶ್ಚೇತನಕ್ಕೆ ವಾರ್ಷಿಕ ₹ 733 ಕೋಟಿ ಮೀಸಲಿಡಿ

ರಾಜೇಶ್ ರೈ ಚಟ್ಲ Updated:

ಅಕ್ಷರ ಗಾತ್ರ : | |

ಲೈಂಗಿಕ ವೃತ್ತಿನಿರತರ ಪುನಶ್ಚೇತನಕ್ಕೆ ವಾರ್ಷಿಕ ₹ 733 ಕೋಟಿ ಮೀಸಲಿಡಿ

ಬೆಂಗಳೂರು: ‘ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಲೈಂಗಿಕ ವೃತ್ತಿನಿರತರಿದ್ದು, ಈ ಸಮುದಾಯದ ಪುನಶ್ಚೇತನ ಮತ್ತು ಸಶಕ್ತೀಕರಣಕ್ಕೆ ವಾರ್ಷಿಕ ₹ 733 ಕೋಟಿ ಮೀಸಲಿಡಬೇಕು’ ಎಂದು ‘ಲೈಂಗಿಕ ಕಾರ್ಯಕರ್ತೆಯರ ಅಧ್ಯಯನ ಸಮಿತಿ’ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಲೈಂಗಿಕ ವೃತ್ತಿಯಲ್ಲಿ ತೊಡಗಿರುವ ಮಹಿಳೆಯರ ಸ್ಥಿತಿಗತಿ ಅಧ್ಯಯನ ಮಾಡಿ ವರದಿ ಸಲ್ಲಿಸಲು ವಿಧಾನಪರಿಷತ್‌ ಸದಸ್ಯೆ ಜಯಮಾಲಾ ನೇತೃತ್ವದ 21 ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು.

ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ, ಈ ವೃತ್ತಿಯಲ್ಲಿ ತೊಡಗಿರುವ ಹೆಣ್ಣು ಮಕ್ಕಳ ಶೋಷಣೆಯ ಸ್ವರೂಪದ ವಿಶ್ಲೇಷಣೆ,  ಅವರು ಎದುರಿಸುತ್ತಿರುವ ಅಪಾಯಗಳನ್ನು ಅಧ್ಯಯನ ಮಾಡಿ, ಈ ವರ್ಗದ ಜೀವನಮಟ್ಟ ಸುಧಾರಣೆಗೆ ನೀತಿ ಮತ್ತು ಕಾರ್ಯಸೂಚಿಗಳನ್ನು ಒಳಗೊಂಡ ಮಹತ್ವದ ವರದಿಯನ್ನು ಐದು ತಿಂಗಳ ಹಿಂದೆಯೇ ಸಲ್ಲಿಸಿದೆ. ಆದರೆ, ಅನುಷ್ಠಾನ ವಿಷಯದಲ್ಲಿ ಸರ್ಕಾರ ಮೌನವಾಗಿದೆ.

ಸಮಿತಿ ಸಂಗ್ರಹಿಸಿದ ಮಾಹಿತಿಗಳ ಪ್ರಕಾರ ರಾಜ್ಯದಲ್ಲಿ 1,00,676 ಮಹಿಳೆಯರು ಲೈಂಗಿಕ ವೃತ್ತಿಯಲ್ಲಿ ತೊಡಗಿದ್ದಾರೆ. ಸರ್ಕಾರೇತರ ಸಂಸ್ಥೆಗಳ ಪ್ರಕಾರ ಈ ಸಂಖ್ಯೆ ಏಳೆಂಟು ಪಟ್ಟು ಹೆಚ್ಚು. ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಈ ದಂಧೆಗೆ ಹೋಲಿಸಿದರೆ, ಕರ್ನಾಟಕದಲ್ಲಿ ಮನೆಗಳಲ್ಲಿ ಲೈಂಗಿಕ ವೃತ್ತಿ ಹೆಚ್ಚು ನಡೆಯುತ್ತಿದೆ. ಹೀಗಾಗಿ ಈ ಸಂಖ್ಯೆ ನಿಖರವಾಗಿ ಪತ್ತೆ ಮಾಡುವುದು ಕಷ್ಟ ಎಂದು ಸಮಿತಿ ಹೇಳಿದೆ.

ಸರ್ಕಾರದ 25 ಇಲಾಖೆಗಳಿಂದ ಒಟ್ಟು 277 ಯೋಜನೆಗಳು ಮಹಿಳೆಯರಿಗಾಗಿ ಮೀಸಲಾಗಿವೆ. ವಾರ್ಷಿಕ ₹ 16,000 ಕೋಟಿಗೂ ಹೆಚ್ಚು ಮೊತ್ತವನ್ನು ಮಹಿಳೆಯರ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ವೆಚ್ಚ ಮಾಡಲಾಗುತ್ತಿದೆ. ಈ ಪೈಕಿ ಲೈಂಗಿಕ ವೃತ್ತಿಯಲ್ಲಿ ತೊಡಗಿರುವ ಮಹಿಳೆಯರಿಗಾಗಿ ಇರುವ ಯೋಜನೆಗಳು ಶೇಕಡಾ 0.7ಕ್ಕಿಂತಲೂ ಕಡಿಮೆ.

‘ಮಾಹಿತಿ ವಿನಿಮಯ ಮತ್ತು ವಿವಿಧ ಇಲಾಖೆಗಳ ಸಮನ್ವಯದ ಕೊರತೆಯಿಂದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಲೈಂಗಿಕ ವೃತ್ತಿನಿರತರ ಬಗೆಗಿನ ನಿರ್ಲಕ್ಷ್ಯ, ಈ ಮಹಿಳೆಯರನ್ನು ಗುರುತಿಸುವಲ್ಲಿನ ವೈಫಲ್ಯ, ಕಳಂಕ, ಅಪಮಾನದಿಂದಾಗಿ ಯೋಜನೆಗಳ ಸೌಲಭ್ಯ ಈ ಸಮುದಾಯಕ್ಕೆ ತಲುಪುವುದೇ ಇಲ್ಲ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ನೀಡಲಾಗುವ ವಾರ್ಷಿಕ ಆಯವ್ಯಯದಲ್ಲಿ ಈ ಸಮುದಾಯಕ್ಕೆ ಪ್ರತ್ಯೇಕ ಅನುದಾನ ಮೀಸಲಿಡಬೇಕು ಎಂದು ಸಮಿತಿ ಒತ್ತಿ ಹೇಳಿದೆ.

ರಾಜ್ಯದಲ್ಲಿ ಎಚ್‌ಐವಿ ಸೋಂಕಿತ ಲೈಂಗಿಕ ವೃತ್ತಿನಿರತರು ಸುಮಾರು ಎಂಟು ಸಾವಿರ ಇದ್ದಾರೆ. ಆ ಸಮುದಾಯಕ್ಕೆ ತಕ್ಷಣ ಅಂತ್ಯೋದಯ ರೇಷನ್‌ ಕಾರ್ಡ್ ವಿತರಿಸುವ ಜೊತೆಗೆ ಪೌಷ್ಟಿಕ ಆಹಾರ, ಆರ್ಥಿಕ ಭದ್ರತೆಯಾಗಿ ಮಾಸಿಕ ತಲಾ ₹5 ಸಾವಿರ ನೀಡಬೇಕು. ಇದಕ್ಕೆ ₹48 ಕೋಟಿ ಸರ್ಕಾರ ಮೀಸಲಿಡಬೇಕು. ಅಂಗವಿಕಲರಾಗಿರುವ ಅಂದಾಜು 1,800 ಮಂದಿ ಈ ದಂಧೆಯಲ್ಲಿದ್ದಾರೆ. 45 ವಯಸ್ಸು ಮೀರಿದ ಸುಮಾರು 20 ಸಾವಿರ ಮಹಿಳೆಯರು ಒಬ್ಬಂಟಿಗಳಾಗಿ ಲೈಂಗಿಕ ವೃತ್ತಿಯಲ್ಲಿದ್ದಾರೆ ಎಂಬ ಅಂಶವನ್ನು ಸಮಿತಿ ಗುರುತಿಸಿದೆ.

ದಂಧೆಯಲ್ಲಿರುವವರ ಜೀವನಮಟ್ಟ ಸುಧಾರಿಸಲು, ‘ದೌರ್ಜನ್ಯ ತಡೆ, ಸಂರಕ್ಷಣೆ, ಸಶಕ್ತೀಕರಣ’ ಎಂಬ ತ್ರಿಸೂತ್ರ ಅನುಷ್ಠಾನಗೊಳಿಸಬೇಕು. ಆ ಮೂಲಕ ಅವರು ಗೌರವದಿಂದ ಬದುಕುವ ಅವಕಾಶ ಕಲ್ಪಿಸಬೇಕಾದುದು ರಾಜ್ಯ ಸರ್ಕಾರದ ಸಾಂವಿಧಾನಿಕ ಕರ್ತವ್ಯ ಎಂದೂ ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ.

ಲೈಂಗಿಕ ವೃತ್ತಿಯಲ್ಲಿರುವವರನ್ನು ಶೋಷಣೆಯ ವಿಷವರ್ತುಲದಿಂದ ಹೊರತರಬೇಕು. ಅವರಿಗಾಗಿ ಸುಸ್ಥಿರವಾದ ಮತ್ತು ಮಹಿಳಾ ಕೇಂದ್ರಿತವಾದ ಕಾರ್ಯಯೋಜನೆ ಅನುಷ್ಠಾನಗೊಳಿಸಬೇಕು. ಯೋಜನೆಗೆ ಒದಗಿಸುವ ಅನುದಾನದ ಸಮರ್ಪಕ ಬಳಕೆ ಮತ್ತು ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪಿಸಲು ಏಕಗವಾಕ್ಷಿಯಾಗಿ ‘ಕರ್ನಾಟಕ ದಮನಿತ ಮಹಿಳೆಯರ  (ಸಂರಕ್ಷಣಾ, ಪುನಶ್ಚೇತನಾ ಮತ್ತು ದಮನ ತಡೆ) ಕೋಶ’ ರಚಿಸಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಈ ಕೋಶದಲ್ಲಿ ಕಾನೂನು ತಜ್ಞರು, ಆರೋಗ್ಯ, ಪೊಲೀಸ್‌ ಇಲಾಖೆ ಅಧಿಕಾರಿಗಳು, ಕಾನೂನು ಸೇವಾ ಪ್ರಾಧಿಕಾರದ ಪ್ರತಿನಿಧಿಗಳು, ಸಮುದಾಯದ ಪ್ರತಿನಿಧಿಗಳು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಸದಸ್ಯರಾಗಿರಬೇಕು. ಈ ಸಮಿತಿಯ ಅಡಿಯಲ್ಲಿ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅನುಷ್ಠಾನ ಸಮಿತಿ ರಚಿಸಬೇಕು.ಯೋಜನೆ ಅನುಷ್ಠಾನದ ಮೌಲ್ಯಮಾಪನಕ್ಕೆ ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಒಳಗೊಂಡ ಸಲಹಾ ಸಮಿತಿ ರಚಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಶಿಫಾರಸುಗಳ ಜಾರಿಗೆ ಮಾರ್ಗದರ್ಶಿ ಸೂತ್ರಗಳನ್ನು ತಯಾರಿಸಲು ಸಮುದಾಯದ ಪ್ರತಿನಿಧಿಗಳು ಮತ್ತು ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳ ಕಾರ್ಯಕರ್ತರನ್ನು ಒಳಗೊಂಡ ಏಳು ಸದಸ್ಯರ ‘ಅನುಷ್ಠಾನ ಮೇಲ್ವಿಚಾರಣಾ ಸಮಿತಿ’ ರಚಿಸಬೇಕು. ಮೂರು ತಿಂಗಳ ಒಳಗಾಗಿ ಈ ಸಮಿತಿ ಕಾರ್ಯಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದೂ ಸಮಿತಿ ಸೂಚಿಸಿದೆ.

(ರಾಜ್ಯದಲ್ಲಿರುವ ಲೈಂಗಿಕ ವೃತ್ತಿನಿರತರು ಎಷ್ಟು? ನಾಳಿನ ಸಂಚಿಕೆ ನೋಡಿ)

ಲೈಂಗಿಕ ವೃತ್ತಿನಿರತರಲ್ಲ: ದಮನಿತ ಮಹಿಳೆಯರು!

ಈ ವರದಿಯ ಉದ್ದಕ್ಕೂ ‘ಲೈಂಗಿಕ ವೃತ್ತಿನಿರತರು’ ಎಂಬ ಪದಕ್ಕೆ ಪರ್ಯಾಯವಾಗಿ ‘ದಮನಿತ ಮಹಿಳೆ’ ಎಂದು ಬಳಸಲಾಗಿದೆ. ‘ಲೈಂಗಿಕ ವೃತ್ತಿ’ ಪದಕ್ಕೆ ಬದಲು ‘ದಂಧೆ’ ಎಂದು  ಬಳಸಲಾಗಿದೆ. ಈ ವೃತ್ತಿಯಲ್ಲಿರುವ ಮಹಿಳೆಯರಿಗೆ ವೇಶ್ಯೆ, ಗಣಿಕೆ, ಸೂಳೆ, ಗುಡಸೆಟ್ಟಿ, ವಾರಾಂಗನೆ, ನಾಯಕಸಾನಿ ಇತ್ಯಾದಿ ಹೆಸರುಗಳು ಪ್ರಚಲಿತದಲ್ಲಿದ್ದರೂ, ಇವೆಲ್ಲವೂ ಮಹಿಳೆಯ ವ್ಯಕ್ತಿತ್ವವನ್ನು ನೈತಿಕ ಪಾತಳಿಯಲ್ಲಿ ತುಚ್ಛೀಕರಿಸಿರುವುದರಿಂದ ಕೈಬಿಡಲಾಗಿದೆ ಎಂದು ಸಮಿತಿ ಹೇಳಿಕೊಂಡಿದೆ. ವೇಶ್ಯಾಗೃಹ (ಬ್ರಾಥೆಲ್‌), ಬೀದಿ, ಮನೆ ಅಥವಾ ಯಾವುದಾದರೂ ನಿರ್ದಿಷ್ಟ ಜಾಗದಲ್ಲಿ ದೇಹವನ್ನು ವಿನಿಮಯದ ಸರಕಾಗಿಸಿರುವ ಎಲ್ಲ ವಯಸ್ಸಿನ (ಮಾನವ ಕಳ್ಳಸಾಗಣೆಗೆ ಒಳಗಾಗಿರುವವರೂ ಸೇರಿ) ಮಹಿಳೆಯರ ಬದುಕಿನ ಚಿತ್ರಣ ಈ ವರದಿಯಲ್ಲಿದೆ.

‘ದಂಧೆ’ಯ ಒಡಲಾಳ 1:

‘ಲೈಂಗಿಕ ವೃತ್ತಿನಿರತರ ಸ್ಥಿತಿಗತಿಗಳ ಅಧ್ಯಯನ’ಕ್ಕಾಗಿ ನೇಮಿಸಿದ್ದ ವಿಧಾನ ಪರಿಷತ್‌ ಸದಸ್ಯೆ ಜಯಮಾಲಾ ನೇತೃತ್ವದ ಸಮಿತಿ, ಈ ದಂಧೆಯಲ್ಲಿರುವ11,000 ಮಂದಿಯಿಂದ ಮಾಹಿತಿ ಪಡೆದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿ ಐದು ತಿಂಗಳುಗಳು ಕಳೆದಿವೆ. ಆದರೆ, ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ವರದಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದ್ದು, ಅದರಲ್ಲೇನಿದೆ ಎನ್ನುವುದು ಸರಣಿಯಾಗಿ ಪ್ರಕಟವಾಗಲಿದೆ.

ಪ್ರತಿಕ್ರಿಯಿಸಿ (+)