ಶುಕ್ರವಾರ, ಡಿಸೆಂಬರ್ 6, 2019
17 °C

ಜನಪದ ಆಮೋದ

Published:
Updated:
ಜನಪದ ಆಮೋದ

ಚಿತ್ರ: ಜಗ್ಗ ಜಾಸೂಸ್ (ಹಿಂದಿ)

ನಿರ್ಮಾಣ: ಸಿದ್ಧಾರ್ಥ್ ರಾಯ್ ಕಪೂರ್, ರಣಬೀರ್ ಕಪೂರ್, ಅನುರಾಗ್ ಬಸು

ನಿರ್ದೇಶನ: ಅನುರಾಗ್ ಬಸು

ತಾರಾಗಣ: ರಣಬೀರ್ ಕಪೂರ್, ಶಾಶ್ವತ ಚಟರ್ಜಿ, ಕತ್ರಿನಾ ಕೈಫ್, ಸೌರಭ್ ಶುಕ್ಲ

ತಮ್ಮೂರಿನ ಹೊಳೆಯಲ್ಲಿ ಹೆಣಗಳು ತೇಲಿಬರುತ್ತಿದ್ದುದನ್ನು ಹಾಗೂ ಅವುಗಳ ಹಿಂದೆ ಆಸಕ್ತಿಕರವಾದ ಕಥೆಗಳು ಇರುತ್ತಿದ್ದುದನ್ನು ಸಾಹಿತಿ ಚಂದ್ರಶೇಖರ ಕಂಬಾರರು ಒಮ್ಮೆ ನೆನಪಿಸಿಕೊಂಡಿದ್ದರು. ‘ಜಗ್ಗ ಜಾಸೂಸ್’ ಹಿಂದಿ ಚಿತ್ರ ಪ್ರಾರಂಭವಾಗುವುದು ಪ್ಯಾರಾಷೂಟ್‌ಗಳಿಂದ ದೊಡ್ಡ ದೊಡ್ಡ ಪೆಟ್ಟಿಗೆಗಳು ಹಳ್ಳಿಯ ಹೊಲವೊಂದರಲ್ಲಿ ಇಳಿಯುವ ದೃಶ್ಯದಿಂದ. ಆ ಪೆಟ್ಟಿಗೆಗಳನ್ನು ಕುತೂಹಲದಿಂದ ತೆರೆಯುವ ಸ್ಥಳೀಯರಿಗೆ ತರಹೇವಾರಿ ಬಂದೂಕುಗಳು ಸಿಗುತ್ತವೆ. ಕಂಬಾರರು ಹೇಳಿದ್ದ ತೇಲಿಬರುವ ಹೆಣಗಳ ಕಥೆಗಳಂತೆ ಇಲ್ಲಿ ವಿಮಾನದಿಂದ ಇಳಿದುಬರುವ ಬಂದೂಕು ಪೆಟ್ಟಿಗೆಗಳಿಗೂ ಕಥೆಗಳಿವೆ. ಅವುಗಳನ್ನು ರೋಚಕವಾಗಿ, ‘ಕಾಮಿಕ್ ರಿಲೀಫ್’ ಬೆರೆತ ತಂತ್ರದೊಟ್ಟಿಗೆ, ಅಲ್ಲಲ್ಲಿ ಭಾವಗೀತಾತ್ಮಕವಾಗಿ ತೋರಿಸಿದ್ದಾರೆ ನಿರ್ದೇಶಕ ಅನುರಾಗ್ ಬಸು.

ಇದು ಅಪ್ಪ- ಮಗನ ಕಥೆ. ಉಗ್ಗುವ ಮಗನಿಗೆ ಹಾಡಿನಿಂದಲೇ ಮಾತಾಡುವುದನ್ನು ಕಲಿಸುವ ಅಪ್ಪನ ನಡೆಗಳು ನಿಗೂಢ. ಪ್ರಶ್ನೆಗಳಿಗೆಲ್ಲ ತಾನೇ ಉತ್ತರ ಹುಡುಕುವ ಜಾಯಮಾನದವನು ಮಗ. ವಿದ್ಯಾರ್ಥಿನಿಲಯದಲ್ಲಿ ಕಲಿಯುವಾಗಲೇ ಅವನು ‘ಜಾಸೂಸ್’ (ಪತ್ತೆದಾರಿ) ಆಗುತ್ತಾನೆ. ಸಹಜವಾಗಿಯೇ ಅವನಿಗೂ ಪೊಲೀಸರಿಗೂ ನಂಟು. ಪ್ರತಿವರ್ಷ ಜನುಮದಿನಕ್ಕೆ ತಪ್ಪದೆ ಒಂದು ಶುಭಾಶಯ ಸಂದೇಶವಿರುವ ವಿಡಿಯೊ ಕ್ಯಾಸೆಟ್ ಕಳುಹಿಸುವ ಅಪ್ಪ ಬೇರೆ ಬೇರೆ ದೇಶಗಳಲ್ಲಿ ಕೆಲಸ ಮಾಡುತ್ತಿರುತ್ತಾನೆ. ಅವನು ಯಾವ ಕೆಲಸ ಮಾಡುತ್ತಾನೆ ಎನ್ನುವುದೂ ನಿಗೂಢ. ಒಮ್ಮೆ ಜನುಮದಿನದ ಸಂದರ್ಭದಲ್ಲಿ ಅಪ್ಪನ ವಿಡಿಯೊ ಕ್ಯಾಸೆಟ್ ಬರುವುದಿಲ್ಲ. ಕಾದು ಕಾದು ಕಂಗಾಲಾಗುವ ಮಗ, ನಾಪತ್ತೆಯಾದ ಅಪ್ಪನನ್ನು ಹುಡುಕಿಕೊಂಡು ಸಾಗುತ್ತಾನೆ. ಆ ಹುಡುಕಾಟಕ್ಕೆ ಜತೆಯಾಗುವ ಗೆಣೆಗಾತಿಯದ್ದು ಇನ್ನೊಂದು ಫಜೀತಿ. ಎಲ್ಲ ಸೇರಿ ಉರುಳೆ ಜಾರುವಾಟ (ರೋಲರ್ ಕೋಸ್ಟರ್ ರೈಡ್) ನೋಡುವ ಭಾಗ್ಯ ಪ್ರೇಕ್ಷಕನದ್ದು.

ಒಂದೂವರೆ ದಶಕ ದೃಶ್ಯ ಮಾಧ್ಯಮದಲ್ಲಿ ತಾವು ಪಡೆದುಕೊಂಡ ಅನುಭವದ ಸಾರ–ಸತ್ವ ಬಸಿಯಬೇಕೆಂಬ ಅನುರಾಗ್ ಬಸು ಮಹತ್ವಾಕಾಂಕ್ಷೆಯ ಫಲವಿದು. ಮಕ್ಕಳ ದೃಷ್ಟಿಯಲ್ಲಿ ಇದು ಕಾಮಿಕ್ ಸಿನಿಮಾ. ರಸಿಕರ ದೃಷ್ಟಿಯಲ್ಲಿ ಭಾವಗೀತಾತ್ಮಕ ನಾಟಕ. ಮನರಂಜನಾ ಮೋಹಿಗಳಿಗೆ ಸಾಹಸೀ ಪಯಣ.

ಬಾಲ್ಯದಿಂದ ತಾವು ಕೇಳಿದ–ನೋಡಿದ ಜನಪದಗಳನ್ನೆಲ್ಲ ಸೋಸಿ, ಅನುರಾಗ್ ಈ ಚಿತ್ರಕಥೆ ಸಿದ್ಧಪಡಿಸಿದ್ದಾರೆ ಎನ್ನುವುದಕ್ಕೆ ದಂಡಿಯಾಗಿ ಉದಾಹರಣೆಗಳು ಸಿಗುತ್ತವೆ. ಕೋಲ್ಕತ್ತದ ಪರಿಸರ, ಅಲ್ಲಿನ ಹೆಸರುಗಳು, ಅಲ್ಲಿನವರೇ ಆದ ಸುಭಾಷ್ ಚಂದ್ರ ಬೋಸ್ ಎಲ್ಲವೂ ಚಿತ್ರದಲ್ಲಿವೆ. ಮಕ್ಕಳಿಗೆಂದೇ ಸತ್ಯಜಿತ್ ರೇ ಸೃಷ್ಟಿಸಿದ್ದ ಗೌಪಿ– ಬಾಘೆ ಕಲ್ಪನಾ ಪಾತ್ರಗಳ ಪ್ರಭಾವವೂ ತೆಳುವಾಗಿ ಕಾಣುತ್ತದೆ.

ಸಾಹಸ, ಹಾಸ್ಯ, ಮಾಧುರ್ಯ, ನೃತ್ಯ ಲಾಲಿತ್ಯ ಯಾವುದೂ ಇಲ್ಲ ಎನ್ನುವಂತಿಲ್ಲ. ಸ್ವರ ಸಂಯೋಜಕ ಪ್ರೀತಂ ಅವರಿಗೆ ಇಡೀ ಚಿತ್ರದಲ್ಲಿ ತಮ್ಮ ನಾದದಲೆ ಹರಡುವ ದೊಡ್ಡ ಅವಕಾಶ ಸಿಕ್ಕಿದೆ. ಅದನ್ನು ಅವರು ಸದುಪಯೋಗಪಡಿಸಿಕೊಂಡಿದ್ದಾರೆ.

ಎರಡು ಹಾಡುಗಳ ನೃತ್ಯದಲ್ಲಿ ರಣಬೀರ್ ಕಪೂರ್ ಲಯ ಶ್ಲಾಘನೀಯ. ಹಾಡಿನಲ್ಲೇ ಮಾತನಾಡುವ, ಪದೇ ಪದೇ ಉಗ್ಗುವ ಪಾತ್ರದ ಹಲವು ರಸಗಳಿಗೂ ಅವರು ಅರ್ಥ ದಕ್ಕಿಸಿಕೊಟ್ಟಿದ್ದಾರೆ. ಅವರ ತಂದೆಯಾಗಿ ಶಾಶ್ವತ ಚಟರ್ಜಿ ಅಭಿನಯಕ್ಕೆ ಹೆಚ್ಚು ಅಂಕಗಳು ಸಲ್ಲಬೇಕು. ಕತ್ರಿನಾ ಕೈಫ್ ಸುಂದರ ವದನ ನೋಡುಗರಿಗೆ ಬೋನಸ್ಸು. ಫೋಟೊಗ್ರಫಿ ನಿರ್ದೇಶಕ ರವಿವರ್ಮನ್ ಕುಶಲತೆಗೂ ಚಿತ್ರದಲ್ಲಿ ಒತ್ತೊತ್ತಾಗಿ ಸಾಕ್ಷ್ಯಗಳು ಸಿಗುತ್ತವೆ.

ಐದು ವರ್ಷಗಳ ನಂತರ ಅನುರಾಗ್ ಬಸು ಅವರದ್ದೊಂದು ಚಿತ್ರ ಈ ರೂಪದಲ್ಲಿ ತೆರೆಕಂಡಿದೆ. ಅಲ್ಲಲ್ಲಿ ಭಾರವೆನಿಸಿದರೂ ಜನಪದದ ಗುಣ ದೀರ್ಘ ಕಾಲ ಕಾಡುತ್ತದೆ.

ಪ್ರತಿಕ್ರಿಯಿಸಿ (+)