ಬುಧವಾರ, ಡಿಸೆಂಬರ್ 11, 2019
25 °C

ವೀರ್ಯವನ್ನು ಪುಷ್ಟಿಗೊಳಿಸುವುದೇ ಆಹಾರ?

Published:
Updated:
ವೀರ್ಯವನ್ನು ಪುಷ್ಟಿಗೊಳಿಸುವುದೇ ಆಹಾರ?

ಏರುಪೇರಾಗುತ್ತಿರುವ  ಜೀವನಶೈಲಿ, ಬದಲಾದ ಆಹಾರಪದ್ಧತಿ, ವಂಶವಾಹಿಯ ಕಾರಣಗಳು ಪುರುಷರಲ್ಲಿ ಫಲವಂತಿಕೆ ಸಮಸ್ಯೆ ಉಂಟಾಗಿಸುತ್ತಿವೆ ಎನ್ನಬಹುದು. ವೀರ್ಯದ ಗುಣಮಟ್ಟ, ವೀರ್ಯ ಶೇಖರಣೆಯಲ್ಲಿನ ಸಮಸ್ಯೆ – ಹೀಗೆ ಸಣ್ಣಪುಟ್ಟ ದೋಷಗಳನ್ನು ತಡೆಯುವಲ್ಲಿ ಕೆಲವು ಸರಳ ಮಾರ್ಗಗಳೂ ಇವೆ. ಅವು ನಮ್ಮ ದಿನನಿತ್ಯದ ಆಹಾರಪದ್ಧತಿಯಲ್ಲೇ ಸೇರಿಕೊಂಡಿದೆ.

ಟೊಮೆಟೊ ಜ್ಯೂಸ್ ಹಾಗೂ ವೀರ್ಯದ ಪ್ರಮಾಣ: ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವ ಹಾಗೂ ವೀರ್ಯದ ಗುಣಮಟ್ಟದಲ್ಲಿ ತೊಂದರೆ ಎದುರಿಸುತ್ತಿರುವ ಪುರುಷರು ಸುಲಭವಾಗಿ ದೊರೆಯಬಲ್ಲ ಟೊಮೆಟೊ ಜ್ಯೂಸನ್ನು ಪ್ರತಿದಿನ ಸೇವಿಸುವುದರಿಂದ ಉತ್ತಮ ಫಲಿತಾಂಶ ಕಾಣಬಹುದು ಎಂಬುದನ್ನು 2017ರ ಅಧ್ಯಯನವೊಂದು ತಿಳಿಸಿದೆ. ಟೊಮೆಟೊ ರಸ, ಆ್ಯಂಟಿಯಾಕ್ಸಿಡಂಟ್ ಲೈಸೋಪೀನ್‌ನ ಹೇರಳ ಮೂಲ ಎಂಬ ಅಂಶವನ್ನು ಈ ಅಧ್ಯಯನ ಎತ್ತಿತೋರಿಸಿದೆ. ಆದ್ದರಿಂದ ಪ್ರತಿದಿನವೂ ಟೊಮೆಟೊ ಜ್ಯೂಸ್ ಸೇವಿಸುವುದರಿಂದ ವೀರ್ಯದ ಗುಣಮಟ್ಟವನ್ನು ಕಾಯ್ದುಕೊಳ್ಳಲು ನೆರವಾಗುವ ಸೆಮಿನಲ್ ಪ್ಲಾಸ್ಮದಲ್ಲಿನ ಲೈಸೊಪೀನ್ ಮಟ್ಟದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಅಧ್ಯಯನವು ವಿಶ್ಲೇಷಿಸಿದೆ.

ಫಲವಂತಿಕೆ ಸಮಸ್ಯೆ ಎದುರಿಸುತ್ತಿರುವ ಪುರುಷರಲ್ಲಿ ವೀರ್ಯದ ಗುಣಮಟ್ಟ ಹೆಚ್ಚಿಸು ವಲ್ಲಿ ನಿರಂತರವಾಗಿ ಟೊಮೆಟೊ ಜ್ಯೂಸ್ ಸೇವನೆ ಯಾವ ಮಟ್ಟದಲ್ಲಿ ಪರಿಣಾಮ ಬೀರಬಲ್ಲದು? ಈ ಪ್ರಶ್ನೆಯೊಂದಿಗೆ ವೀರ್ಯಶೇಖರಣೆಯಲ್ಲಿ ಎದುರಾಗುವ ಸಮಸ್ಯೆ ಅಥವಾ ಕುಂಠಿತ ವೀರ್ಯಚಲನೆಯನ್ನು ಹೊಂದಿರುವ ಪುರುಷರು ಟೊಮೆಟೊ ಜ್ಯೂಸ್ ಸೇವಿಸಿ ಫಲವನ್ನು ಪಡೆದಿರುವ ಉದಾಹರಣೆಗಳನ್ನೂ ಈ ಅಧ್ಯಯನದಲ್ಲಿ ನೀಡಲಾಗಿದೆ. 12 ವಾರಗಳ ಕಾಲ ಟೊಮೆಟೊ ಜ್ಯೂಸ್ ಸೇವಿಸಿದರೆ ಪರಿಣಾಮವನ್ನು ಕಾಣಬಹುದು ಎನ್ನುತ್ತದೆ, ಅಧ್ಯಯನ. ಹೀಗೆ ನಿರಂತರವಾಗಿ ಟೊಮೆಟೊ ಜ್ಯೂಸನ್ನು ಸೇವಿಸುವವರಲ್ಲಿ ಲೈಸೊಪೀನ್ ಎಂಬ ಆ್ಯಂಟಿಯಾಕ್ಸಿಡಂಟ್ ಮಟ್ಟ ಹೆಚ್ಚಾಗುತ್ತದೆ.

ಪುರುಷರಲ್ಲಿ ಫಲವಂತಿಕೆ ಸಮಸ್ಯೆಗೆ ಕಾರಣವಾಗುವ ಸೆಮಿನಲ್ ಬಿಳಿ ರಕ್ತಕಣಗಳ ಸಂಖ್ಯೆ ಅದರಿಂದ ಕ್ಷೀಣಿಸುತ್ತದೆ. ಆರೇ ವಾರಗಳಲ್ಲಿ ವೀರ್ಯದ ಪ್ರಮಾಣ ಹಾಗೂ ಚಲನೆಗಳಲ್ಲಿ ಹೆಚ್ಚಾಗಿರುವುದನ್ನೂ ಗುರುತಿಸಲಾಗಿದೆ. ಅದು ಪರೋಕ್ಷವಾಗಿ ಫಲವಂತಿಕೆ ಸಮಸ್ಯೆಯನ್ನು ನಿವಾರಿಸಲು ಸಹಾಯಕಾರಿ ಎನ್ನಲಾಗಿದೆ. ಆದರೆ  ರಾಸಾಯನಿಕಗಳಿಂದ ತುಂಬಿದ ಟೊಮೆಟೊದ ಸೇವನೆಯಿಂದ ಈ ಪ್ರಯೋಜನವನ್ನು ನಿರೀಕ್ಷಿಸಲಾಗದು. ಶುದ್ಧ ಹಾಗೂ ಸಾವಯವ ಟೊಮೆಟೊಗಳನ್ನು ಆರಿಸಿಕೊಂಡರೆ ಒಳಿತು. ಆದರೆ ಇವೆಲ್ಲಕ್ಕೂ ಮುನ್ನ ವೈದ್ಯರನ್ನು ಅಥವಾ ಡಯಟೀಷಿಯನ್ನರನ್ನು ಭೇಟಿ ಮಾಡಿ, ನಿಖರ ಕಾರಣಗಳನ್ನು ತಿಳಿದುಕೊಳ್ಳುವುದೇ ಉತ್ತಮ ಮಾರ್ಗ.

ಮೆಡಿಟರೇನಿಯನ್ ಡಯೆಟ್: ವೀರ್ಯದ ಪ್ರಮಾಣ ಹಾಗೂ ಗುಣಮಟ್ಟ ಕಾಯ್ದಿರಿಸುವಲ್ಲಿ ಮೆಡಿಟರೇನಿಯನ್  ಆಹಾರಪದ್ಧತಿ ಅನುಸರಿಸುವುದೂ ಒಂದು. ಹೆಚ್ಚಿನ ಮಟ್ಟದಲ್ಲಿ ಹಣ್ಣು ಮತ್ತು ತರಕಾರಿಗಳ ಸೇವನೆ; ಧಾನ್ಯಗಳು, ಕಾಳುಗಳು, ಮೀನು, ಸಮುದ್ರಾಹಾರ, ಆಲಿವ್ ಎಣ್ಣೆ ಸೇವನೆಗಳು ಈ ಆಹಾರಪದ್ಧತಿಯ ವ್ಯಾಪ್ತಿಗೆ ಸೇರುತ್ತವೆ. ಕೆಂಪುಮಾಂಸದ ಸೇವನೆ ಕಡಿಮೆ ಇದ್ದರೆ ಒಳಿತು.

ಈ ಆಹಾರಪದ್ಧತಿಯನ್ನು ಅನುಸರಿಸುವ ಪುರುಷರಿಗೆ ಹೋಲಿಸಿದರೆ, ಕಡಿಮೆ ಮಟ್ಟದಲ್ಲಿ ಇವುಗಳನ್ನು ಸೇವಿಸುವ ಪುರುಷರಲ್ಲಿ ವೀರ್ಯದಲ್ಲಿ  ಅಸಹಜತೆಯ ಪ್ರಮಾಣ 2.6ರಷ್ಟು ಹೆಚ್ಚು ಎನ್ನುತ್ತದೆ ಈ ಅಧ್ಯಯನ. ಇದಕ್ಕೆ ಕಾರಣ, ಈ ಆಹಾರಗಳಲ್ಲಿನ ಆ್ಯಂಟಿಯಾಕ್ಸಿಡಂಟ್‌ಗಳ ಪ್ರಮಾಣ.

ವೀರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಈ ಮೆಡಿಟರೇನಿಯರ್ ಡಯೆಟ್ ಖರ್ಚಿಲ್ಲದೆ ನೈಸರ್ಗಿಕವಾಗಿ ಚಿಕಿತ್ಸೆಯಂತೆ ಕೆಲಸ ಮಾಡಬಲ್ಲದು.  ಸಂಸ್ಕರಿತ ಆಹಾರ, ಸೋಡಾ ಅತಿ ಇರುವ, ಕೆಂಪು ಮಾಂಸದ ಅತಿಯಾದ ಸೇವನೆ ವೀರ್ಯದ ಮೇಲೆ ಹಾನಿಕಾರಕವಾಗಬಲ್ಲದು ಎಂಬ ಅಂಶವನ್ನು ‘ಆಹಾರಪದ್ಧತಿ ಹಾಗೂ ವೀರ್ಯದ ಗುಣಮಟ್ಟ’ – ಈ ವಿಷಯದ ಮೇಲೆ ನಡೆಸಿರುವ ಇನ್ನೂ ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ.

ಫಲವಂತಿಕೆ ಸಮಸ್ಯೆ: ಪರಿಶೀಲನೆಗೆ  ಪರಿಣಾಮಕಾರಿ ಚಿಕಿತ್ಸೆ

ವೀರ್ಯಾಣುವಿಗೆ ಹಾನಿ ಮಾಡದೆ ಅವುಗಳನ್ನು ಪರೀಕ್ಷೆಗೊಳಪಡಿಸುವ ಹೊಸ ತಂತ್ರವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಇವು ಫಲವಂತಿಕೆ ಸಮಸ್ಯೆಗಳ ಸೂಕ್ತ ಪರಿಹಾರಕ್ಕೂ ನೆರವಾಗಬಲ್ಲದು ಎನ್ನಲಾಗಿದೆ. ಈ ತಂತ್ರಜ್ಞಾನವೇ ‘ಮ್ಯಾಗ್ನೆಟಿಕ್ ರೆಸೊನನ್ಸ್ ಸ್ಪೆಕ್ಟ್ರೋಸ್ಕೋಪಿ.’  ಈ ವಿಧಾನದಲ್ಲಿ ಶಕ್ತಿಯುತ ಅಯಸ್ಕಾಂತಗಳನ್ನು ಬಳಸಿ ವೀರ್ಯದ ಮಾದರಿ ಮೇಲೆ ಪ್ರಯೋಗವನ್ನು ನಡೆಸಲಾಗುತ್ತದೆ.

ಸತ್ವಯುತ ವೀರ್ಯ ಅಥವಾ ಸತ್ವ ಕಳೆದುಕೊಂಡ ವೀರ್ಯವನ್ನು ಗುರುತಿಸಲು ಈ ವಿಧಾನದಲ್ಲಿ ಸಾಧ್ಯ ಇನ್ನಿತರ ಹಾನಿಕಾರಕ ಪರೀಕ್ಷಾ ಪದ್ಧತಿಗಳಿಗಿಂತ ಇದು ಸದ್ಯಕ್ಕೆ ಉತ್ತಮ ಹಾಗೂ ಪರಿಣಾಮಕಾರಿ ಮಾರ್ಗ ಎನ್ನಬಹುದು; ಕೃತಕಗರ್ಭಧಾರಣೆಗೂ ಇದು ಸಹಕಾರಿಯಾಗಬಹುದು.

ಜೀವಕೋಶಗಳು ಮತ್ತು ಅಂಗಾಂಶಗಳ ಚಿತ್ರಗಳ ಮೂಲಕ ವೈದ್ಯರು ಸಮಸ್ಯೆಯ ಮೂಲವನ್ನು ಕಂಡುಕೊಳ್ಳುತ್ತಿದ್ದ ತಂತ್ರದಂತೆಯೇ ಈ ವಿಧಾನವೂ ಕೆಲಸ ಮಾಡುತ್ತದೆ.

ಪ್ರತಿಕ್ರಿಯಿಸಿ (+)