ಗುರುವಾರ , ಡಿಸೆಂಬರ್ 12, 2019
17 °C

ನಿತೀಶ್ ಕುಮಾರ್‌ ಜತೆ ವೇದಿಕೆ ಹಂಚಿಕೊಳ್ಳದ ತೇಜಸ್ವಿ ಯಾದವ್

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ನಿತೀಶ್ ಕುಮಾರ್‌ ಜತೆ ವೇದಿಕೆ ಹಂಚಿಕೊಳ್ಳದ ತೇಜಸ್ವಿ ಯಾದವ್

ಪಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಜತೆಗೆ ಕಾರ್ಯಕ್ರಮವೊಂದರಲ್ಲಿ ವೇದಿಕೆ ಹಂಚಿಕೊಳ್ಳಬೇಕಿದ್ದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಕೊನೇ ಕ್ಷಣದಲ್ಲಿ ಗೈರುಹಾಜರಾಗಿದ್ದಾರೆ. ಇದು ಆಡಳಿತಾರೂಢ ಮಿತ್ರಪಕ್ಷಗಳ ನಡುವಣ ವೈಮನಸ್ಸು ಹೆಚ್ಚಾಗಿರುವುದನ್ನು ತೋರಿಸಿದೆ ಎಂದು ಮೂಲಗಳು ಹೇಳಿವೆ.

ಅಧಿಕಾರಿಗಳ ಹೇಳಿಕೆ ಪ್ರಕಾರ, ವಿಶ್ವ ಕೌಶಲ ದಿನದ ಅಂಗವಾಗಿ ಪಟ್ನಾದ ಜ್ಞಾನ ಭವನದಲ್ಲಿ ಸರ್ಕಾರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಜತೆಗೆ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಸಹ ಪಾಲ್ಗೊಳ್ಳಬೇಕಿತ್ತು. ಅವರ ಹೆಸರುಳ್ಳ ಫಲಕವನ್ನೂ ವೇದಿಕೆಯಲ್ಲಿ ಇರಿಸಲಾಗಿತ್ತು. ಆರಂಭದಲ್ಲಿ ನಾಮಫಲಕಕ್ಕೆ ಬಟ್ಟೆಯನ್ನು ಮುಚ್ಚಲಾಗಿದ್ದು, ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಅದನ್ನು ತರಾತುರಿಯಲ್ಲಿ ತೆರವುಗೊಳಿಸಲಾಗಿದೆ ಎನ್ನಲಾಗಿದೆ.

ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವುದರಿಂದ ತೇಜಸ್ವಿ ಅವರು ಉಪ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ನಿತೀಶ್ ಬಯಸಿದ್ದರು. ಇದಕ್ಕೆ ಆಡಳಿತಾರೂಢ ಮಿತ್ರ ಪಕ್ಷ ಆರ್‌ಜೆಡಿಯ ಶಾಸಕರು, ಸಂಸದರು ಹಾಗೂ ನಾಯಕರು ಒಕ್ಕೊರಲ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ತೇಜಸ್ವಿ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದರು.

ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಅವರ ಮಗ ತೇಜಸ್ವಿ ಯಾದವ್ ಹಾಗೂ ಕುಟುಂದವರ ನಿವಾಸ, ಕಚೇರಿಗಳ ಮೇಲೆ ಇತ್ತೀಚೆಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.

ಪ್ರತಿಕ್ರಿಯಿಸಿ (+)