ಶುಕ್ರವಾರ, ಡಿಸೆಂಬರ್ 6, 2019
21 °C

ಮಿಶ್ರ ಬೇಸಾಯ; ಎಲೆಕೋಸು ಕೃಷಿಗೆ ಒಲವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿಶ್ರ ಬೇಸಾಯ; ಎಲೆಕೋಸು ಕೃಷಿಗೆ ಒಲವು

ಯಳಂದೂರು: ಉಷ್ಣಾಂಶ ಬೇಡದ ಮುಖ್ಯ ಬೆಳೆ ಎಲೆಕೋಸು. ಈಗ ಎಲ್ಲ ಋತುಮಾನದಲ್ಲೂ ಇಳುವರಿ ತಂದುಕೊಡುವ ತರಕಾರಿ ಬೆಳೆಯಾಗಿದೆ. ಎ ಮತ್ತು ಸಿ ಅನ್ನಾಂಗದ ಆಗರವಾದ ಎಲೆಕೋಸು ಕೃಷಿಯನ್ನು ಈಗ ತಾಲ್ಲೂಕಿನ ಅನ್ನದಾತರೂ ಆಶ್ರಯಿಸಿದ್ದಾರೆ.

ಕಡಿಮೆ ಅವಧಿಯಲ್ಲಿ ಹೆಚ್ಚು ಗಾತ್ರದ ಇಳುವರಿ ನೀಡುವ ನೂತನ ತಳಿ ವೈವಿಧ್ಯದಿಂದ ಉತ್ತಮ ಧಾರಣೆ ಸಿಗುತ್ತಿರುವುದು ಮತ್ತು ಹೊರ ರಾಜ್ಯದ ಮಾರುಕಟ್ಟೆಗೆ ನೇರ ಪೂರೈಕೆಯಾಗುತ್ತಿರುವುದು ಇಲ್ಲಿನ ಹಿಡುವಳಿದಾರರ ಗಮನ ಸೆಳೆದಿದೆ.

ತಾಲ್ಲೂಕಿನಲ್ಲಿ ಅಗರ ಹೋಬಳಿ, ಮಾಂಬಳ್ಳಿ ಮತ್ತು ಉತ್ತಂಬಳ್ಳಿ ಸುತ್ತಲೂ ಗ್ರಾಮೀಣರು ಮಿಶ್ರ ಬೇಸಾಯದ ಭಾಗವಾಗಿ ಎಲೆಕೋಸಿಗೆ ಆದ್ಯತೆ ನೀಡಿದ್ದಾರೆ. ಇದನ್ನು ಎಲ್ಲ ತರಹದ ಮಣ್ಣಿನಲ್ಲಿ ನಾಟಿ ಮಾಡಬಹುದಾದರೂ, ಇಲ್ಲಿನ ಕಪ್ಪು ಮತ್ತು ಮರಳು ಮಿಶ್ರಿತ ಮಣ್ಣಿನಲ್ಲಿ ಹೆಚ್ಚು ಇಳುವರಿ ಪಡೆಯಬಹುದು. ತಂಪಾದ ವಾತಾವರಣದಲ್ಲಿ 90 ದಿನದಲ್ಲಿ ಫಸಲು ಕೈಸೇರುತ್ತದೆ.

ಎಲೆಕೋಸು ಹೆಚ್ಚು ಪೋಷಣೆ ಬೇಡುತ್ತದೆ. ಕಬ್ಬು ಮತ್ತು ತೆಂಗಿನ ತಾಕಿನ ಸುತ್ತಲೂ ನಾಟಿ ಮಾಡಿದರೆ ರೋಗದ ಹಾವಳಿ ತಡೆಗಟ್ಟಬಹುದು. ಬದುಗಳ ಸುತ್ತಲೂ ವೃಕ್ಷ ಕೃಷಿ ಮಾಡಲಾಗಿದೆ. ಇಲ್ಲಿಗೆ ಬರುವ ಪಕ್ಷಿಗಳು ಕ್ರಿಮಿಕೀಟಗಳನ್ನು ಭಕ್ಷಿಸುತ್ತವೆ. ಇದರಿಂದ ಕೀಟನಾಶಕಗಳ ಮೇಲಿನ ವೆಚ್ಚವೂ ಕಡಿಮೆ ಎನ್ನುತ್ತಾರೆ ಇಲ್ಲಿನ ರೈತರು.

ಕೋಸನ್ನು ಜೂನ್‌–ಜುಲೈನಲ್ಲಿ ಮತ್ತು ಅಕ್ಟೋಬರ್–ನವೆಂಬರ್‌ ಅವಧಿಯಲ್ಲಿ ಬೆಳೆಯಬಹುದು. ಮುಂಗಾರು ಪೂರ್ವದ ಬೆಳೆಯಾಗಿ ಈರೋಡ್ ಮೂಲದ ‘ಪ್ರೈಡ್ ಆಫ್‌ ಇಂಡಿಯಾ’, ‘ಅರ್ಲಿಡ್ರಮ್ ಹೆಡ್‌’ ಇಲ್ಲವೇ ‘ಗೋಲ್ಡನ್‌ ಏಕರ್’ ತಳಿ ಇಲ್ಲಿನ ಮಣ್ಣಿಗೆ ಹೊಂದಿಕೊಳ್ಳುತ್ತವೆ. 60–90 ದಿನಗಳ ಅಂತರದಲ್ಲಿ ಕೊಯ್ಲಿಗೆ ಬರುತ್ತದೆ. ಹಾಗಾಗಿ, ಹಿಡುವಳಿದಾರರೂ ಕಡಿಮೆ ಒಳಸುರಿ ಬೇಡುವ ಬೀಜಗಳನ್ನೇ ಬಳಸುತ್ತಾರೆ ಎನ್ನುತ್ತಾರೆ ಮಾಂಬಳ್ಳಿಯ ಎ. ಸೋಮಶೇಖರ್. 

ದುಂಡಾದ ಗಡ್ಡೆ ಹಾಗೂ ಚಪ್ಪಟೆ ಆಕಾರದ ಪ್ರೈಡ್‌ ತಳಿ ಸುಮಧುರ ಪರಿಮಳ ಹೊಂದಿದೆ. ಹಾಗಾಗಿ, ಇದನ್ನೇ ಹೆಚ್ಚು ಬೆಳೆಯಲಾಗುತ್ತದೆ. 1 ಎಕರೆ ಎಲೆಕೋಸು ಕೃಷಿಗೆ ₹50 ಸಾವಿರ ಖರ್ಚು ತಗುಲುತ್ತದೆ. ಧಾರಣೆ ಕೆ.ಜಿಗೆ ₹10 ಇದ್ದರೆ ₹1.40 ಲಕ್ಷದವರೆಗೂ ವರಮಾನ ಕಾಣಬಹುದು. ಈಗ ದರ ₹5–6ಕ್ಕೆ ಇಳಿದಿದೆ. ಆದರೂ, ಎಕರೆಗೆ ₹20,000 ಆದಾಯ ನಿರೀಕ್ಷಿಸಬಹುದು.

‘ಮಧ್ಯವರ್ತಿಗಳು ಇಲ್ಲಿಯೇ ಹಣ ಪಾವತಿಸಿ ತಮಿಳುನಾಡಿನ ಮೆಟ್ಟುಪಾಳ್ಯ, ಈರೋಡು ಜಿಲ್ಲೆಗಳಿಗೆ ಒಯ್ಯುತ್ತಾರೆ. ಇದರಿಂದ ಮಾರುಕಟ್ಟೆ ಹುಡುಕುವ ತಾಪತ್ರಯವೂ ತಪ್ಪುತ್ತದೆ’ ಎನ್ನುತ್ತಾರೆ ಉತ್ತಂಬಳ್ಳಿಯ ರೈತ ಗಣೇಶ್. 

ಈಗಿನ ಹವಾಮಾನ ಹಾಗೂ ತುಂತುರು ಮಳೆ ಎಲೆಕೋಸಿನ ಕೃಷಿಗೆ ಸೂಕ್ತವಲ್ಲ. ದೀರ್ಘಾವಧಿಯ ಚಳಿಗಾಲದ ತಳಿಗಳಾದ ‘ಲೇಟ್‌ ಡ್ರಮ್‌ ಹೆಡ್‌’ ಮತ್ತು ‘ಡ್ಯಾನಿಷ್‌ ಬಾಲ್‌ ಹೆಡ್‌’ 100–120 ದಿನಗಳಲ್ಲಿ ಹಿಡುವಳಿದಾರರ ಕೈಸೇರುತ್ತದೆ. ಪ್ರತಿ ಹೆಕ್ಟೇರ್‌ಗೆ 825– 900 ಗ್ರಾಂ ಬಿತ್ತನೆ ಬೀಜ ಸಾಕು. 25 ಟನ್‌ ಕೊಟ್ಟಿಗೆ ಗೊಬ್ಬರ ಬಳಸಬೇಕು ಎನ್ನುತ್ತಾರೆ ಅವರು.

ಬೀಜಗಳನ್ನು ಪ್ರಮಾಣೀಕರಿಸಿದ ಸಂಸ್ಥೆಗಳಿಂದ ಪಡೆಯಬೇಕು. ಹಾಗಾದಾಗ ಮಾತ್ರ ಪ್ರತಿ ಹೆಕ್ಟೇರಿಗೆ 20 ರಿಂದ 25 ಟನ್ ಇಳುವರಿ ಪಡೆಯಬಹುದು. ಎಲೆಕೋಸು ಮಾಗಿ ಕಾಲದಲ್ಲಿ ಹೆಚ್ಚಿನ ಆರೈಕೆ ಬೇಡುತ್ತದೆ ಎನ್ನುತ್ತಾರೆ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಕೀಟತಜ್ಞ ಶಿವರಾಯನಾವಿ.

 

ಪ್ರತಿಕ್ರಿಯಿಸಿ (+)