ಶನಿವಾರ, ಡಿಸೆಂಬರ್ 7, 2019
24 °C

‘ಐಐಟಿ ಸೀಟು ಸಿಕ್ಕಿದೆ; ಓದಲು ಹಣವಿಲ್ಲ’

Published:
Updated:
‘ಐಐಟಿ ಸೀಟು ಸಿಕ್ಕಿದೆ; ಓದಲು ಹಣವಿಲ್ಲ’

* ನನ್ನ ಹೆಸರು ಅಂಕಿತ. ನಾನು ಎಸ್‌ಎಸ್ಎಲ್‌ಸಿ 2ನೇ ದರ್ಜೆಯಲ್ಲಿ ಪಾಸು ಮಾಡಿದ್ದೇನೆ. ಮುಂದೆ ಕೆಲಸ ಮಾಡಿ ಸಂಪಾದಿಸಬೇಕು ಅನ್ನುವ ಆಸೆ ಇದೆ. ನಿಮ್ಮ ಸಲಹೆ ಏನು?
ಉತ್ತರ: ನಿಮ್ಮ ಆಸಕ್ತಿ ಮೇರೆಗೆ ನೀವು ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಸ್ನೇಹಿತೆ, ನೆಂಟರು, ಅಕ್ಕಪಕ್ಕದವರು ಆ ಕೋರ್ಸ್ ಅನ್ನು ಆಯ್ಕೆ ಮಾಡಿದ್ದಾರೆ ಎಂದು ನೀವು ಅದನ್ನೇ ಆರಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಬೇರೆ ಬೇರೆ ಅಹರ್ತೆ ಇರುತ್ತದೆ. ನಿಮ್ಮ ಅಹರ್ತೆ–ಆಸಕ್ತಿಗಳಿಗೆ ಅನುಗುಣವಾಗಿ ಕೋರ್ಸ್ ಅನ್ನು ಆಯ್ಕೆ ಮಾಡಿ. ‘ಡಿಪ್ಲೋಮಾ ಆಫ್ ಆಫೀಸ್ ಮ್ಯಾನೇಜ್‌ಮೆಂಟ್’ ಎಂಬ ಕೋರ್ಸ್ ಅನ್ನು ಎಸ್‌ಎಸ್‌ಎಲ್‌ಸಿ ಆದ ನಂತರ ಮಾಡಬಹುದು.

ನಿಮಗೆ ಕಂಪ್ಯೂಟರ್ ಜ್ಞಾನ ಇದ್ದರೆ ಉತ್ತಮ. ಈ ಕೋರ್ಸ್‌ಗೆ ಶಾಂತ ಸ್ವಭಾವ, ತಾಳ್ಮೆ, ತಕ್ಷಣ ಗ್ರಹಿಸುವಿಕೆಯ ಶಕ್ತಿ, ಶಿಷ್ಟಚಾರ – ಇಂಥ ಗುಣಗಳು ಬೇಕು. ಇಲ್ಲಿ 12ರಿಂದ 15 ಸಾವಿರಗಳವರೆಗೆ ಸಂಬಳ ಸಿಗುತ್ತದೆ. ಇದು ಒಂದು ಉದಾಹರಣೆ ಮಾತ್ರ. ಇದೇ ರೀತಿ ಹಲವಾರು ಜಾಬ್ ಓರಿಯೆಂಟೆಡ್‌, ಒಕೇಷನಲ್ ಕೋರ್ಸ್‌ಗಳು ಹುಡುಗರಿಗೂ/ ಹುಡುಗಿಯರಿಗೂ ಇದೆ. ಈಗಾಗಲೇ ಸಮಯ ಮೀರಿರಬಹುದು; ಕೂಡಲೇ ಪ್ರಯ್ನತಿಸಿ. ಕರಿಯರ್‌ನಲ್ಲಿ ಪ್ರತಿಯೊಬ್ಬರು ಗಮನಿಸಬೇಕಾದ ವಿಷಯವೆಂದರೆ ಪ್ಲಾನಿಂಗ್‌ – ಯೋಜನೆ. ಸರಿಯಾದ ಪ್ಲಾನಿಂಗ್ ನಿಮ್ಮ ಮುಂದಿದ್ದರೆ ಗುರಿಯನ್ನು ನಿರಾಯಾಸವಾಗಿ ತಲುಪಬಹುದು.

* ನನ್ನ ಹೆಸರು ಭೃಗು. ನಾನು ದ್ವಿತೀಯ ಪಿಯುಸಿಯಲ್ಲಿ ಫೇಲ್ ಆಗಿದ್ದೇನೆ. ಮನೆಯ ವಾತಾವರಣ ಚೆನ್ನಾಗಿಲ್ಲ; ಮೂರು ಹೊತ್ತು ಜಗಳ. ಈಗ ನಾನು ಫೇಲ್ ಆದೆ ಅಂತ ನನ್ನನ್ನು ಹೊಡೆದರು. ಇದಕ್ಕೆಲ್ಲಾ ಕಾರಣ ನಮ್ಮ ಮನೆ. ದಯವಿಟ್ಟು ನನಗೆ ದಿಕ್ಕು ತೋರಿಸಿ.
ಉತ್ತರ: ನೀವು ನನಗೆ ಪತ್ರ ಬರೆದಿದ್ದೆ ನನಗೆ ಸಂತೋಷವಾಗಿದೆ. ಸಲಹೆ ಬೇಕು, ಮುಂದೆ ಸಾಧಿಸಬೇಕು ಎಂಬ ಹಂಬಲ ಬಹಳ ಮುಖ್ಯ. ಯಾವುದೇ ಕಾರಣಕ್ಕೂ ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಿಕೊಳ್ಳಬೇಡಿ. ಪ್ರತಿಯೊಬ್ಬ ವಿದ್ಯಾರ್ಥಿಗೂ ತಂದೆ–ತಾಯಿಯರ ಒಲವು, ಮನೆಯಲ್ಲಿ ಹಿತವಾದ ವಾತಾವರಣ, ಓದಲು ಪ್ರೋತ್ಸಾಹ, ಮಕ್ಕಳ ಬಗ್ಗೆ ಕಾಳಜಿ ಇರಲೇಬೇಕು. ಯಾರ ಮನೆಯಲ್ಲಿ ಜಗಳ ಇಲ್ಲ ಹೇಳಿ? ಬಡ, ಮಧ್ಯಮ, ಶ್ರೀಮಂತ – ಹೀಗೆ ಎಲ್ಲ ಅಂತಸ್ತಿನಲ್ಲೂ ಬಗೆಬಗೆಯ ಸಮಸ್ಯೆಗಳು ಇರುತ್ತವೆ. ಪೋಷಕರು ಅದನ್ನು ಗಮನಿಸಿ ತಮ್ಮ ವರ್ತನೆ ಬದಲಾಯಿಸಿಕೊಂಡರೆ ಉತ್ತಮ. 'ಫೈಲ್ಯೂರ್ ಈಸ್ ದ ಸ್ಟೆಪಿಂಗ್ ಸ್ಟೋನ್ ಆಫ್ ಸಕ್ಸಸ್'.

ಅದನ್ನು ನೀವು ಗಮನದಲ್ಲಿರಿಸಿಕೊಂಡು ಹೊಸ ಹೆಜ್ಜೆ ಇರಿಸಿ. ಏನು ಮಾಡಬೇಕು ಎಂಬುದನ್ನು ನಿರ್ಧರಿಸಿ. ಅದಕ್ಕೆ ತಕ್ಕ ಸಿದ್ಧತೆ ಮಾಡಿಕೊಳ್ಳಿ. ಯಾವ ಪ್ರವೇಶಪರೀಕ್ಷೆ ಇದೆ, ಯಾವಾಗ ಪರೀಕ್ಷೆ ನಿಗದಿ ಮಾಡುತ್ತಾರೆ, ಎಲ್ಲೆಲ್ಲಿ ಕೋರ್ಸ್ ಇದೆ, ಫೀಸ್ ಎಷ್ಟು, ನಿಮ್ಮನ್ನು ಮನೆಯಲ್ಲಿ ಬೇರೆ ಊರಿಗೆ ಕಳುಹಿಸಬಲ್ಲರೆ – ಈ ಬಗ್ಗೆ ವಿಷಯ ಸಂಗ್ರಹ ಮಾಡಿ. ವೆಬ್‌ಸೈಟ್‌ಗಳನ್ನು ಹುಡುಕಿ. ಒಂದು ವರ್ಷ ಹೋದರೇನಂತೆ, ಮುಂದೆ ಇಡೀ ಜೀವನ ನಿಮಗಾಗಿ ಕಾದಿದೆ. ಒಂದು ಮಾತು ಗಮನಿಸಿ: ಜಗಳವಿಲ್ಲದ ಮನೆ ಎಂದರೆ ಸಾವಿಲ್ಲದ ಮನೆಯಲ್ಲಿ ಸಾಸಿವೆಯನ್ನು ಹುಡುಕಿ ದಂತೆ. ಜಗಳ ಆದರೆ ಆಗಲಿ, ನೀವು ನಿಮ್ಮ ಗುರಿಯನ್ನು ಸಾಧಿಸಲೇಬೇಕು ಎಂಬ ಹಂಬಲದಿಂದ ಮುನ್ನಡೆಯಿರಿ.

* ನನಗೆ ಓದಿನಲ್ಲಿ ಆಸಕ್ತಿ ಇಲ್ಲ. ಎಸ್‌ಎಸ್‌ಎಲ್‌ಸಿ ನಂತರ ಏನೂ ಮಾಡುತ್ತಿಲ್ಲ. ನನಗೆ ಹೇರ್‌ ಸ್ಟೈಲ್, ಮೇಕಪ್ – ಇಂಥವುಗಳಲ್ಲಿ ಆಸಕ್ತಿಯಿದೆ.  ಯಾವುದಾದರೂ ಕೋರ್ಸ್ ಇದೆಯಾ?
ಉತ್ತರ:
ಎಲ್ಲರೂ ಓದಿ ಡಿಗ್ರಿಗಳನ್ನೇ ತೆಗೆದುಕೊಳ್ಳಬೇಕು ಎಂದೇನಿಲ್ಲ. ನಿಮ್ಮ ಒಲವು ಯಾವ ಕಡೆ ಇದೆ ಎನ್ನುವ ಸೂಚನೆ ಕೊಟ್ಟಿದ್ದೀರಿ. ಕಲಾತ್ಮಕತೆ ಹಾಗೂ ಪರಿಣತಿಯೇ ನಾವು ಮಾಡುವ ಕೆಲಸದಲ್ಲಿ ಮುಖ್ಯವಾಗಬೇಕು. ಹೇರ್‌ಸ್ಟೈಲ್, ಮೇಕಪ್‌, ಬ್ರೈಡಲ್ ಮೇಕಪ್‌ – ಇಂಥವನ್ನು ಕಲಿತು ಒಬ್ಬರು ತಜ್ಞರ ಜೊತೆ 2ರಿಂದ 3 ವರ್ಷ ತರಬೇತಿ ತೆಗೆದುಕೊಂಡರೆ ನೀವು ನಿಮ್ಮದೇ ಆದ ಪಾರ್ಲರ್ ತೆರೆಯಬಹುದು. ‘ಪರ್ಸ್‌ನಲ್ ಗ್ರೂಮರ್’ ಆಗಿ ಕೆಲಸ ಮಾಡಬಹುದು.

ಒಬ್ಬ ಪ್ರಖ್ಯಾತ ವ್ಯಕ್ತಿಯ ‘ಪರ್ಸನಲ್ ಬ್ಯೂಟಿಷಿಯನ್’ ಆಗಿ ಕೂಡ ಕೆಲಸ ಮಾಡಬಹುದು. ನಿಮ್ಮ ಬೆಳವಣಿಗೆಯು ನೀವು ಹಾಕುವ ಶ್ರಮ, ನಿಮ್ಮ ಆತ್ಮವಿಶ್ವಾಸ, ನಡೆ–ನುಡಿ, ಯಾವ ಕೆಲಸವೇ ಆಗಲಿ ಇದನ್ನು ಮಾಡಲೇಬೇಕು ಎಂಬ ಸಂಕಲ್ಪ– ಈ ಅಂಶಗಳ ಮೇಲೆ ನಿಂತಿದೆ. ಸಾಧಿಸುವ ಛಲ ನಿಮ್ಮ ಗುರಿಯಾಗಿರಲಿ. ಬ್ಯೂಟಿಷೀಯನ್ ಕೋರ್ಸ್ ಆಯ್ಕೆ ಮಾಡುವ ಮೊದಲು ಅದು ಹೆಸರಾಂತ ಸಂಸ್ಥೆಯೇ ಎಂಬುದನ್ನು ಗಮನಿಸಿ. ಓವರ್‌ಸೀಸ್‌ನಲ್ಲೂ ಕೋರ್ಸ್ ಮಾಡುವ ಅವಕಾಶವಿದೆ.

* ನಾನು ದ್ವಿತೀಯ ಪಿಯುಸಿಯಲ್ಲಿ ಶೇ. 92 ಅಂಕ ಪಡೆದಿದ್ದೇನೆ. ನಮ್ಮ ತಂದೆ ಮಾಲಿ. ನಾವು ಮೂವರು ಮಕ್ಕಳು. ನನಗೆ ಐಐಟಿಯಲ್ಲಿ ಸೀಟು ಸಿಕ್ಕಿದೆ. ಓದಲು ಹಣವಿಲ್ಲ. ನನ್ನ ಓದಿಗೆ ಯಾರಿಂದಲಾದರೂ ಸಹಾಯ ಸಿಗುವುದೆ?
ಉತ್ತರ
: ಇದು ಅಂತಿಮ ಸಮಯ. ಈಗಾಗಲೇ ನೀವು ಇದರ ಬಗ್ಗೆ ಮಾಹಿತಿ ಸಂಗ್ರಹಿಸಬೇಕಾಗಿತ್ತು. ನಿಮಗೆ ಯಾವ ಐಐಟಿನಲ್ಲಿ ಸೀಟು ಸಿಕ್ಕಿದೆಯೋ ಗೊತ್ತಿಲ್ಲ. ಇಂದಿನ ಫೀಸ್ ಐಐಟಿನಲ್ಲಿ ವರ್ಷಕ್ಕೆ 2 ಲಕ್ಷ ರೂಪಾಯಿಗಳು. (ಶೇ. 122 ಹೆಚ್ಚು 2015ಕ್ಕಿಂತ) ಒಟ್ಟು ಖರ್ಚು ಮೆಸ್ ಮತ್ತು ಇತರ ಖರ್ಚುಗಳು ಸೇರಿ ಸುಮಾರು 3.5 ಲಕ್ಷ ರೂಪಾಯಿಗಳಷ್ಟಾಗುತ್ತದೆ. ಪದವಿ ಕೋರ್ಸ್‌ಗಳಿಗೆ 2500 ವಿದ್ಯಾರ್ಥಿಗಳಿಗೆ ಐಐಟಿ ಫಂಡ್‌ನಿಂದ ವಿದ್ಯಾರ್ಥಿವೇತನ ದೊರೆಯುತ್ತದೆ.

ಸಾಧಾರಣವಾಗಿ ಇಲ್ಲಿ ಸೇರುವ ಶೇ.50ಕ್ಕೂ ಹೆಚ್ಚು ವಿ‌ದ್ಯಾರ್ಥಿಗಳು ಹಣದ ಕೊರತೆ ಇರುವ ಮಕ್ಕಳೇ. ಐಐಟಿ ಸೀಟ್ ಸಿಕ್ಕಿದ ಮೇಲೆ ಯಾವ ವಿದ್ಯಾರ್ಥಿಯನ್ನೂ ನಿರಾಕರಿಸುವುದಿಲ್ಲ; ಅಲ್ಲಿ ಸಂಪರ್ಕಿಸಿ ಮಾತನಾಡಿ. ವಿದ್ಯಾರ್ಥಿವೇತನದಲ್ಲಿ ಹಲವಾರು ತರಗತಿಗಳಿಗೆ ಮೆರಿಟ್ ಸ್ಕಾಲರ್‌ಶಿಪ್‌, ಮೆರಿಟ್ ಕಮ್ ಮೀಲ್ಸ್ ಸ್ಕಾಲರ್‌ಶಿಪ್‌, ಕಾಸ್ಟ್ ಸ್ಕಾಲರ್‌ಶಿಪ್‌, ಲೋನ್ ಸ್ಕಾಲರ್‌ಶಿಪ್‌, ಗೌರ್ಮೆಂಟ್ ಸ್ಕಾಲರ್‌ಶಿಪ್‌ , ಇವುಗಳಲ್ಲದೆ ಖಾಸಗಿ ಟ್ರಸ್ಟ್‌ಗಳಿಂದಲೂ ಸಹಾಯ ಪಡೆಯಬಹುದು. ಇದಕ್ಕೆ ಮುಖ್ಯವಾಗಿರುವುದು ವಿಷಯಸಂಗ್ರಹಣೆ, ನಿಮ್ಮ ನಿರಂತರ ಪ್ರಯತ್ನ. ಈ ಸದಾವಕಾಶವನ್ನು ನೀವು ಬಿಡಬಾರದು. ಜಾಗ್ರತರಾಗಿ. ನೀವು ಒಮ್ಮೆ ಐಐಟಿನಲ್ಲಿ ಓದಿದಿರಿ ಎಂದರೆ ನಿಮ್ಮ ಜೀವನದ ಗತಿಯೇ ಬದಲಾಗುತ್ತದೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು