ಭಾನುವಾರ, ಡಿಸೆಂಬರ್ 15, 2019
17 °C

ಕ್ವಾರ್ಟರ್‌ಫೈನಲ್‌ಗೆ ಸುಮಿತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ವಾರ್ಟರ್‌ಫೈನಲ್‌ಗೆ ಸುಮಿತ್

ಕ್ಯಾಲ್ಗರಿ: ಭಾರತದ ಮನು ಅತ್ರಿ ಮತ್ತು ಬಿ. ಸುಮಿತ್ ರೆಡ್ಡಿ  ಜೋಡಿಯು ಇಲ್ಲಿ ನಡೆಯುತ್ತಿರುವ ಕೆನಡಾ ಓಪನ್ ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್‌ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು. ಆದರೆ ಸಿಂಗಲ್ಸ್‌ನಲ್ಲಿ ಎಚ್‌.ಎಸ್. ಪ್ರಣಯ್ ಆಘಾತ ಅನುಭವಿಸಿದರು.

ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಮನು ಮತ್ತು ಸುಮಿತ್ ಅವರು 21–17, 17–21, 21–13 ಗೇಮ್‌ಗಳಿಂದ ಕೊರಿಯಾದ ಚೊಯ್ ಸಲ್ಗಾಯು ಮತ್ತು ಜೇ ಹ್ವಾನ್ ಜೋಡಿಯ ವಿರುದ್ಧ ಜಯಿಸಿದರು. 45 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ  ಭಾರತದ ಜೋಡಿಯು ಮೊದಲ ಗೇಮ್‌ನಲ್ಲಿ ಕೊರಿಯಾ ಆಟಗಾರರ ಕಠಿಣ ಪೈಪೋಟಿಯನ್ನು ದಿಟ್ಟತನದಿಂದ ಎದುರಿಸಿ ಗೆದ್ದಿತು.

ಆದರೆ ಎರಡನೇ ಗೇಮ್‌ನಲ್ಲಿ ಪರಸ್ಪರ ಹೊಂದಾಣಿಕೆಯ ಕೊರತೆಯಿಂದ ಕೆಲವು ಪಾಯಿಂಟ್‌ಗಳನ್ನು ಕೈಚೆಲ್ಲಿದ್ದು ದುಬಾರಿಯಾಯಿತು. ಆದ್ದರಿಂದ ಗೇಮ್‌ನಲ್ಲಿ ಸೋಲಬೇಕಾಯಿತು. ಆದರೆ ಮೂರನೇ ಗೇಮ್‌ನಲ್ಲಿ ಪುಟಿದೆದ್ದ ಮನು ಮತ್ತು ಸುಮಿತ್ ಅಮೋಘ ಆಟವಾಡಿದರು. ನಿಖರವಾದ ಡ್ರಾಪ್ ಮತ್ತು ಚುರುಕಾದ ಸ್ಮ್ಯಾಷ್‌ಗಳ ಮೂಲಕ ಎದುರಾಳಿ ಜೋಡಿಯ ಮೇಲೆ ಒತ್ತಡ ಹೇರಿದರು.ಗೇಮ್ ಜಯಿಸುವಲ್ಲಿಯೂ ಸಫಲರಾದರು.

ಮನು–ಸುಮಿತ್ ಅವರು ಎಂಟರ ಘಟ್ಟದಲ್ಲಿ ಕೊರಿಯಾದ ಕಿಮ್ ವೊನ್ ಹೊ ಮತ್ತು ಸಿಯಾಂಗ್ ಜೇ ಸಿಯೊ ಅವರನ್ನು ಎದುರಿಸಲಿದ್ದಾರೆ.

ಪ್ರಣವ್–ಸಿಕ್ಕಿಗೆ ಜಯ: ದ್ವಿತೀಯ ಶ್ರೇಯಾಂಕದ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಎನ್. ಸಿಕ್ಕಿ ರೆಡ್ಡಿ ಅವರ ಜೋಡಿಯು ಮಿಶ್ರ ಡಬಲ್ಸ್‌ ಕ್ವಾರ್ಟರ್‌ಫೈನಲ್ ಪ್ರವೇಶಿಸಿತು.

ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ಪ್ರಣವ್ ಜೋಡಿಯು 21–11, 21–7ರಿಂದ ನೆದರ್ಲೆಂಡ್ಸ್‌ನ ರಾಬಿನ್ ಟೇಬಲಿಂಗ್ ಮತ್ತು ಚೆರೈಲ್ ಸೀನನ್ ವಿರುದ್ಧ ಜಯಿಸಿದರು. ಪ್ರಣವ್ ಮತ್ತು ಸಿಕ್ಕಿ ಅವರು ಈಚೆಗೆ ಸೈಯದ್ ಮೋದಿ ಇಂಟರ್‌ನ್ಯಾಷನಲ್ ಚಾಂಪಿಯನ್‌ಷಿಪ್‌ ಗೆದ್ದು ಕೊಂಡಿದ್ದರು. ಇದೀಗ ಮತ್ತೊಂದು ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)