ಶನಿವಾರ, ಡಿಸೆಂಬರ್ 14, 2019
22 °C

ಸಂಸತ್ತಿನ ಮುಂಗಾರು ಅಧಿವೇಶನ ಇಂದು ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಸತ್ತಿನ ಮುಂಗಾರು ಅಧಿವೇಶನ ಇಂದು ಆರಂಭ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರ ಆರಂಭವಾಗಲಿದ್ದು ಭಾರಿ ಕೋಲಾಹಲ ಉಂಟಾಗುವ ಸಾಧ್ಯತೆ ಇದೆ. ಚೀನಾ ಗಡಿ ಬಿಕ್ಕಟ್ಟು, ಕಾಶ್ಮೀರದ ವಿಷಮ ಪರಿಸ್ಥಿತಿ, ಗೋರಕ್ಷಣೆ ಹೆಸರಿನಲ್ಲಿ ಹೆಚ್ಚುತ್ತಿರುವ ಹಿಂಸೆ ಮುಂದಿಟ್ಟು ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ.

ಆಗಸ್ಟ್‌ 11ರವರೆಗೆ 26 ದಿನ ನಡೆಯಲಿರುವ ಅಧಿವೇಶನದಲ್ಲಿ 16 ಹೊಸ ಮಸೂದೆಗಳನ್ನು ಮಂಡಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. 18 ಕರಡು ಶಾಸನಗಳಿಗೆ ಅಂಗೀಕಾರ ಪಡೆಯಲು ಉದ್ದೇಶಿಸಿದೆ. ಬಜೆಟ್‌ ಪೂರಕ ಅಂದಾಜಿಗೂ ಸರ್ಕಾರ ಅನುಮೋದನೆ ಪಡೆದುಕೊಳ್ಳಬೇಕಿದೆ.

ವಿವಿಧ ವಿಚಾರ ಚರ್ಚೆ: ಕಾಶ್ಮೀರಕ್ಕೆ ಸಂಬಂಧಿಸಿ ಚೀನಾದ ಜತೆಗೆ ಭಿನ್ನಾಭಿಪ್ರಾಯ ಹೊಸ ಸಮಸ್ಯೆಯಾಗಿದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸುವಂತೆ ಆಗ್ರಹಿಸಲಾಗುವುದು ಎಂದು ಕಾಂಗ್ರೆಸ್‌ ಹೇಳಿದೆ. ದೇಶದ ಸಮಗ್ರತೆ, ಭದ್ರತೆಗೆ ಸಂಬಂಧಿಸಿ ಸರ್ಕಾರಕ್ಕೆ ಬೆಂಬಲ ಇದೆ ಎಂದೂ ಕಾಂಗ್ರೆಸ್‌ ತಿಳಿಸಿದೆ.

ಕಾಶ್ಮೀರದಲ್ಲಿ ಮಾತುಕತೆಯ ಎಲ್ಲ ಬಾಗಿಲುಗಳನ್ನೂ ಸರ್ಕಾರ ಮುಚ್ಚಿದೆ. ಹಾಗಾಗಿ ಅಲ್ಲಿ ಈಗ ರಾಜಕೀಯವಾಗಿ ಉಸಿರುಗಟ್ಟಿಸುವ ವಾತಾವರಣ ಇದೆ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಆರೋಪಿಸಿದ್ದಾರೆ.

ಉದ್ಯೋಗ ಸೃಷ್ಟಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ನೀಡಿದ್ದ ಭರವಸೆ ಈಡೇರಿಕೆ ಆಗಿಲ್ಲ. ಈ ವಿಚಾರವನ್ನು ಅಧಿವೇಶನದಲ್ಲಿ ಎತ್ತಲಾಗುವುದು ಎಂದು ಜೆಡಿಯು ಮುಖಂಡ ಶರದ್‌ ಯಾದವ್‌ ಹೇಳಿದ್ದಾರೆ.

ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯ ಹೆಚ್ಚುತ್ತಿರುವುದನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು. ಮಹಿಳಾ ಮೀಸಲು ಮಸೂದೆ ಅಂಗೀಕಾರಕ್ಕೆ ಒತ್ತಡ ಹೇರಲಾಗುವುದು ಎಂದು ಸಿಪಿಎಂ ಮುಖ್ಯಸ್ಥ ಸೀತಾರಾಮ್‌ ಯೆಚೂರಿ ತಿಳಿಸಿದ್ದಾರೆ.

ವಿರೋಧ ಪಕ್ಷಗಳನ್ನು ಎದುರಿಸಲು ಆಡಳಿತ ಪಕ್ಷವೂ ಸಜ್ಜಾಗಿದೆ. ಆರ್ಥಿಕ ಪ್ರಗತಿ ಮತ್ತು ಕೃಷಿ ಅಭಿವೃದ್ಧಿಯಲ್ಲಿ ಈ ಸರ್ಕಾರದ ಸಾಧನೆ ಹಿಂದಿನ ಯುಪಿಎ ಸರ್ಕಾರಕ್ಕಿಂತ ಉತ್ತಮವಾಗಿದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

ಮುಂಗಾರು ಅಧಿವೇಶನ ಫಲಪ್ರದ ಮತ್ತು ರಚನಾತ್ಮಕವಾಗಬೇಕು ಎಂಬುದು ಸರ್ಕಾರದ ಇಚ್ಛೆ. ಅದಕ್ಕಾಗಿ ವಿರೋಧ ಪಕ್ಷಗಳ ಜತೆಗೆ ಉತ್ತಮ ಸಮನ್ವಯ ಮತ್ತು ಸಂವಹನ ನಡೆಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಮುಖ್ತಾರ್‌ ಅಬ್ಬಾಸ್‌ ನಕ್ವಿ ಹೇಳಿದ್ದಾರೆ.

ತಿರುಗೇಟು ಅಸ್ತ್ರ

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರನ್ನು ‘ಕೇಸರಿ ಭಯೋತ್ಪಾದನೆ’ ಹೆಸರಿನಲ್ಲಿ ಬಂಧಿಸಲು ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಯತ್ನಿಸಲಾಗಿತ್ತು ಎಂಬ ಮಾಧ್ಯಮ ವರದಿಗಳು ಇತ್ತೀಚೆಗೆ ಪ್ರಕಟವಾಗಿವೆ. ಅದನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಲು ಬಿಜೆಪಿ ಸಿದ್ಧತೆ ನಡೆಸಿದೆ.

ಪ್ರತಿಕ್ರಿಯಿಸಿ (+)