ಭಾನುವಾರ, ಡಿಸೆಂಬರ್ 15, 2019
21 °C

ಮಹದಾಯಿ, ಕಳಸಾ–ಬಂಡೂರಿ ಹೋರಾಟಕ್ಕೆ 2 ವರ್ಷ: ‘ಮಾಡು ಇಲ್ಲವೇ ಮಡಿ’ ನಿರ್ಣಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹದಾಯಿ, ಕಳಸಾ–ಬಂಡೂರಿ ಹೋರಾಟಕ್ಕೆ 2 ವರ್ಷ: ‘ಮಾಡು ಇಲ್ಲವೇ ಮಡಿ’ ನಿರ್ಣಯ

ನರಗುಂದ (ಗದಗ ಜಿಲ್ಲೆ): ‘ಮಹದಾಯಿ ಸಮಸ್ಯೆ ಇತ್ಯರ್ಥ ಪಡಿಸಲು ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ಈ ಭಾಗದ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಅವರ ಮೇಲೆ ಒತ್ತಡ ಹೇರಬೇಕು’ ಎಂಬ ನಿರ್ಣಯವನ್ನು ಭಾನುವಾರ ಇಲ್ಲಿ ನಡೆದ ರೈತರ ಬೃಹತ್‌ ಸಮಾವೇಶದಲ್ಲಿ ತೆಗೆದುಕೊಳ್ಳಲಾಯಿತು.

ಮಹದಾಯಿ, ಕಳಸಾ–ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಇಲ್ಲಿ ನಡೆಯುತ್ತಿರುವ ನಿರಂತರ ಧರಣಿ ಸತ್ಯಾಗ್ರಹ ಎರಡು ವರ್ಷ ಪೂರೈಸಿದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಈ ಸಮಾವೇಶದಲ್ಲಿ, ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಅವರು ‘ಮಾಡು ಇಲ್ಲವೇ ಮಡಿ’ ಧ್ಯೇಯದೊಂದಿಗೆ ಈ ನಿರ್ಣಯ ಪ್ರಕಟಿಸಿದರು.

‘ಪ್ರಧಾನಿ ಮಧ್ಯಸ್ಥಿಕೆ ಮೂಲಕ ಮಹದಾಯಿ ಸಮಸ್ಯೆ ಇತ್ಯರ್ಥಪಡಿಸುವ ಗುರುತರ ಜವಾಬ್ದಾರಿಯನ್ನು ಈ ಭಾಗದ ಸಂಸದರು, ಶಾಸಕರು ಮತ್ತು ರಾಜ್ಯದ ಮುಖ್ಯಮಂತ್ರಿಯ ಹೆಗಲಿಗೆ ವರ್ಗಾಯಿಸಿದ್ದೇವೆ. ಇದು ಅಂತಿಮ ನಿರ್ಣಯ. ಈ  ನಿರ್ಣಯ ಜಾರಿಗೆ ಬರುವ ತನಕ, ಇದೇ ಧರಣಿ ವೇದಿಕೆಯಲ್ಲಿ ಇಂದಿನಿಂದಲೇ ನಿರಂತರ ಉಪವಾಸ ಸತ್ಯಾಗ್ರಹ ಪ್ರಾರಂಭಿಸುತ್ತಿದ್ದೇನೆ’ ಎಂದು ಸೊಬರದಮಠ ಪ್ರಕಟಿಸಿದರು. ಸಮಾವೇಶದಲ್ಲಿ ಭಾಗವಹಿಸಿದ್ದ ಐದು ಸಾವಿರಕ್ಕೂ ಹೆಚ್ಚು ರೈತರು ಕೈಗಳನ್ನು ಮೇಲೆತ್ತಿ ಚಪ್ಪಾಳೆ ತಟ್ಟುವ ಮೂಲಕ ನಿರ್ಣಯ ಅಂಗೀಕರಿಸಿದರು.

‘ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಎರಡು ವರ್ಷ ಕಳೆದರೂ ಈ ಹೋರಾಟದ ಮೂಲ ಉದ್ದೇಶ ಈಡೇರಿಲ್ಲ. ಅಹಿಂಸಾತ್ಮಕವಾಗಿ ನಡೆಯುತ್ತಿರುವ ಹೋರಾಟವು ಹಿಂಸಾರೂಪ ಪಡೆಯುವ ಮುನ್ನವೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು’ ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಆಗ್ರಹಿಸಿದರು.

ಪಟ್ಟಣದಲ್ಲಿ ಅಘೋಷಿತ ಬಂದ್‌ ವಾತಾವರಣ ಇತ್ತು.  ಶಾಸಕ ಕೆ.ಎಸ್. ಪುಟ್ಟಣ್ಣಯ್ಯ, ರೈತ ಸೇನೆ ಉಪಾಧ್ಯಕ್ಷ ಶಂಕರಪ್ಪ ಆರ್‌. ಅಂಬಲಿ, ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸ ಮಾಲೀ­ಪಾಟೀಲ ಇದ್ದರು.

ಮುಖ್ಯಾಂಶಗಳು

* ಉಪವಾಸ ಆರಂಭಿಸಿದ ಸೊಬರದಮಠ

* 5 ಸಾವಿರಕ್ಕೂ ಹೆಚ್ಚು ರೈತರು ಭಾಗಿ

ಪ್ರತಿಕ್ರಿಯಿಸಿ (+)