ಭಾನುವಾರ, ಡಿಸೆಂಬರ್ 8, 2019
21 °C
ವಸತಿ ನಿಲಯ ವಿದ್ಯಾರ್ಥಿನಿಯರ ಪ್ರತಿಭಟನೆ; ಕೊಳೆತ ತರಕಾರಿ ಬಳಕೆ ಆರೋಪ

ಜಾತಿ ನಿಂದನೆ, ಕಳಪೆ ಆಹಾರ ಪೂರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾತಿ ನಿಂದನೆ, ಕಳಪೆ ಆಹಾರ ಪೂರೈಕೆ

ಹಾಸನ: ‘ವಸತಿ ನಿಲಯದಲ್ಲಿ ಜಾತಿ ನಿಂದನೆ ಹಾಗೂ ಕಳಪೆ ಆಹಾರ ನೀಡುತ್ತಿದ್ದಾರೆ’ ಎಂದು ಆರೋಪಿಸಿ ನಗರದ ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಭಾನುವಾರ ಸಂಜೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

‘ಮೂರು ದಿನಗಳಿಂದ ಕೊಳೆತ ತರಕಾರಿ ಬಳಸುತ್ತಿದ್ದಾರೆ. ಶೌಚಾಲಯ ಸ್ವಚ್ಛತೆಗೆ ಪುರುಷನನ್ನು ನೇಮಿಸಲಾಗಿದೆ. ಆತ ವಿದ್ಯಾರ್ಥಿನಿಯರ ನ್ಯಾಪ್ಕಿನ್‌ಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಮಾನ ಹರಾಜು ಹಾಕಿದ್ದಾನೆ. ವಾರ್ಡ್‌ನ್‌ ಕೂಡ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದರು.

ಕಳಪೆ ಗುಣಮಟ್ಟದ ಆಲೂಗೆಡ್ಡೆ, ಬಿಟ್‌ರೂಟ್‌, ಟೊಮೆಟೊಗಳನ್ನು ವಿದ್ಯಾರ್ಥಿಗಳು ನೆಲಕ್ಕೆ ಬಿಸಾಡಿ ವಾರ್ಡನ್‌ ಸುಮಾ ವಿರುದ್ಧ ಧಿಕ್ಕಾರ ಕೂಗಿದರು.

‘ವಸತಿ ನಿಲಯದಲ್ಲಿ 600ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು, ಮಲಗಲು 50 ಕೊಠಡಿಗಳು ಮಾತ್ರ ಇವೆ. ಒಂದು ಕೊಠಡಿಗೆ 20 –30 ಮಂದಿ ಹಾಕಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಇದೆ. ದಿಂಬು, ಹಾಸಿಗೆ ಖರೀದಿಗೆ ಅನುದಾನ ಬಿಡುಗಡೆಯಾಗಿ 2 ತಿಂಗಳು ಕಳೆದರೂ ಸಾಮಗ್ರಿ ಖರೀದಿಸಿಲ್ಲ. ತರಕಾರಿ ಪದಾರ್ಥ ಖರೀದಿಗೆ ಪ್ರತಿ ವಿದ್ಯಾರ್ಥಿಗೆ ₹100  ಸರ್ಕಾರ ಹೆಚ್ಚಿಸಿದೆ.

ಆದರೆ ಅದರ ಸದುಪಯೋಗ ಆಗುತ್ತಿಲ್ಲ. ವಸತಿ ನಿಲಯಕ್ಕೆ ಬರುತ್ತಿರುವ ಸಾಮಗ್ರಿಗಳು ಕಾಳ ಸಂತೆಯಲ್ಲಿ ಮಾರಾಟವಾಗುತ್ತಿವೆ. ಹಾಸ್ಟೇಲ್‌ನಲ್ಲಿ ಅಶುಚಿತ್ವದಿಂದಾಗಿ ಸಾಂಕ್ರಾಮಿಕ ಕಾಯಿಲೆ ಹೆಚ್ಚಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವಾರ್ಡನ್‌ ಸುಮಾ ಅವರು ಕೆಳ ಜಾತಿಯವರನ್ನು ಕೀಳು ಮಟ್ಟದಿಂದ ನೋಡುತ್ತಾರೆ. ಪರಸ್ಪರರಲ್ಲಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಸಮಾಜ ಕಲ್ಯಾಣಾಧಿಕಾರಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

**

ಯಾವ ವಿದ್ಯಾರ್ಥಿ ಮೇಲೂ ವೈಯಕ್ತಿಕ ದ್ವೇಷ ಇಲ್ಲ. ವಿದ್ಯಾರ್ಥಿಗಳ ಆರೋಪ ಸಂಪೂರ್ಣ ಸುಳ್ಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆಗೂ ಸಿದ್ಧ.

-ಸುಮಾ,

ಹಾಸ್ಟೆಲ್ ವಾರ್ಡನ್‌

**

ವಿದ್ಯಾರ್ಥಿಗಳೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ವಾರ್ಡನ್‌ಗೆ ಸೂಚನೆ ನೀಡಲಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು.

-ಪುಂಡಲೀಕ, 

ಸಮಾಜ ಕಲ್ಯಾಣ ಇಲಾಖೆ ಅಧೀಕ್ಷಕ

ಪ್ರತಿಕ್ರಿಯಿಸಿ (+)