ಶನಿವಾರ, ಡಿಸೆಂಬರ್ 14, 2019
21 °C
ಉದ್ದಿಮೆ ಪರವಾನಗಿ ನವೀಕರಣಕ್ಕೆ ಸೂಚನೆ, ದಂಡ ವಿಧಿಸುವ ಎಚ್ಚರಿಕೆ

ಅನಧಿಕೃತ ಉದ್ದಿಮೆದಾರರಿಗೆ ನಗರಸಭೆ ಚಾಟಿ!

ಎಂ.ಎನ್.ಯೋಗೇಶ್‌ Updated:

ಅಕ್ಷರ ಗಾತ್ರ : | |

ಅನಧಿಕೃತ ಉದ್ದಿಮೆದಾರರಿಗೆ ನಗರಸಭೆ ಚಾಟಿ!

ಮಂಡ್ಯ: ಲೈಸೆನ್ಸ್‌ ನವೀಕರಿಸದ ಅನಧಿಕೃತ ಉದ್ದಿಮೆದಾರರು, ಅಂಗಡಿ ಮಾಲೀಕರಿಗೆ ನಗರಸಭೆ ಚಾಟಿ ಬೀಸಿದ್ದು ದುಪ್ಪಟ್ಟು ದಂಡ ವಿಧಿಸಲು ಮುಂದಾಗಿದೆ.

ನಗರಸಭೆ ವ್ಯಾಪ್ತಿಯಲ್ಲಿ ಅಂಗಡಿ, ಉದ್ಯಮ ನಡೆಸುವವರು ಕಡ್ಡಾಯವಾಗಿ ‘ಉದ್ದಿಮೆ ಪರವಾನಗಿ’ ಪಡೆಯಬೇಕು. ಲೆಸೆನ್ಸ್‌ ಪಡೆಯುವ ಪ್ರಕ್ರಿಯೆ ಪ್ರತಿ ವರ್ಷ ಏ. 1ರಿಂದ ಪ್ರಾರಂಭವಾಗಿ ಮಾರ್ಚ್‌ ತಿಂಗಳಲ್ಲಿ ಕೊನೆಗೊಳ್ಳುತ್ತದೆ. ವರ್ಷದ ಯಾವುದೇ ತಿಂಗಳಲ್ಲಿ ಲೈಸೆನ್ಸ್‌ ಪಡೆದರೂ ಮತ್ತೆ ಏಪ್ರಿಲ್‌ 1ರಿಂದ ನವೀಕರಿಸಿಕೊಳ್ಳಬೇಕು. ನಗರದಲ್ಲಿ ಹಲವು ಉದ್ದಿಮೆದಾರರು ಲೈಸೆನ್ಸ್‌ ಪಡೆಯದೆ ಹಾಗೂ ಪಡೆದ ಲೈಸೆನ್ಸ್‌ ನವೀಕರಿಸದೆ ವ್ಯವಹಾರ ನಡೆಸುತ್ತಿರುವುದು ಪತ್ತೆಯಾಗಿದ್ದು ಅವರ ವಿರುದ್ಧ ನಗರಸಭೆ ಕಾರ್ಯಾಚರಣೆ ಆರಂಭಿಸಿದೆ.

ಕರ್ನಾಟಕ ಪೌರಸಭೆಗಳ ಅಧಿನಿಯಮದ ಅನ್ವಯ ನೀಡಿರುವ ಅಧಿಕಾರ ಬಳಸಿಕೊಂಡು ನಗರಸಭೆ ಅನಧಿಕೃತ ಮಾಲೀಕರಿಗೆ ದಂಡ ವಿಧಿಸುತ್ತಿದೆ. ಲೈಸೆನ್ಸ್‌ ಪಡೆಯಲು ಮೂರು ತಿಂಗಳು ವಿಳಂಬವಾದರೆ ಪರವಾನಗಿ ಶುಲ್ಕದಲ್ಲಿ ಶೇ 10ರಷ್ಟು ದಂಡ ವಿಧಿಸುತ್ತಿದೆ. ಆರು ತಿಂಗಳು ವಿಳಂಬವಾದರೆ ಲೈಸೆನ್ಸ್‌ ಶುಲ್ಕದಲ್ಲಿ ಶೇ 25ರಷ್ಟು ದಂಡ, ಒಂದು ವರ್ಷ ತಡವಾದರೆ ಶೇ 50ರಷ್ಟು ದಂಡ ವಿಧಿಸುತ್ತಿದ್ದು ಅನಧಿಕೃತ ವ್ಯವಹಾರಗಳ ಮೇಲೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಅನುಸರಿಸಿದೆ.

3,500 ಉದ್ದಿಮೆಗಳು: ಸಣ್ಣ ಪುಟ್ಟ ಜನರಲ್‌ ಸ್ಟೋರ್ಸ್‌, ಬಟ್ಟೆ ಅಂಗಡಿಗಳು, ಕ್ಯಾಂಟೀನ್‌ಗಳು ಸೇರಿ ನಗರದಲ್ಲಿ 3,500 ಉದ್ದಿಮೆಗಳಿವೆ. ಎಲ್ಲ ವ್ಯವಹಾರಗಳನ್ನು ಉದ್ದಿಮೆ ಅಡಿ ತಂದು ಪರವಾನಗಿ ಮಾಡಿಸಲಾಗುತ್ತಿದೆ. ಯಾವುದೇ ವ್ಯಾಪಾರಿ ನಗರಸಭೆಯ ಅನುಮತಿ ಪಡೆಯದೇ ವ್ಯವಹಾರ ಮಾಡುವಂತಿಲ್ಲ ಎಂಬ ನಿಯಮ ವಿಧಿಸಲಾಗಿದೆ.

ಹೊಸದಾಗಿ ಲೈಸೆನ್ಸ್‌ ಪಡೆಯುವವರು ನಗರಸಭೆ ಕಚೇರಿಯಲ್ಲಿ ನಿಗದಿತ ಅರ್ಜಿ ಪಡೆದು ಸಲ್ಲಿಸಬೇಕು. ಅಂಗಡಿ ಕಟ್ಟಡಕ್ಕೆ ಪ್ರಸಕ್ತ ವರ್ಷದಲ್ಲಿ ಕಂದಾಯ ಪಾವತಿಸಿದ ರಸೀದಿಯನ್ನು ಅರ್ಜಿಯ ಜೊತೆ ಸಲ್ಲಿಸಬೇಕು. ಬಾಡಿಗೆ ಕಟ್ಟಡವಾಗಿದ್ದರೆ ಕರಾರು ಪತ್ರ ಲಗತ್ತಿಸಬೇಕು. ಉದ್ದಿಮೆದಾರನ ಭಾವಚಿತ್ರ ಹಾಗೂ ಉದ್ದಿಮೆ ನಡೆಯುವ ಸ್ಥಳದ ಬಗ್ಗೆ ವಿವರಣೆ ನೀಡಬೇಕು. ಬೃಹತ್‌ ಉದ್ದಿಮೆಯಾಗಿದ್ದರೆ ಸಂಬಂಧಪಟ್ಟ ಇಲಾಖೆಯಿಂದ ಪಡೆದ ಅನುಮತಿ ಪತ್ರವನ್ನೂ ಅರ್ಜಿಯ ಜೊತೆ ಲಗತ್ತಿಸಬೇಕು.

ಲೈಸೆನ್ಸ್‌ ನವೀಕರಣಕ್ಕೆ ಅರ್ಜಿಯ ಜೊತೆಯಲ್ಲಿ ಹಿಂದಿನ ವರ್ಷದ ಪರವಾನಗಿ ಪತ್ರವನ್ನು ಸಲ್ಲಿಸಬೇಕು. ಜೊತೆಗೆ ಅಂಗಡಿಯ ಮಾಹಿತಿಯನ್ನೊಳಗೊಂಡ ವಿವರ ನೀಡಬೇಕು.

‘ನಗರಸಭೆ ವ್ಯಾಪ್ತಿಯಲ್ಲಿ ಲೈಸೆನ್ಸ್‌ ಪಡೆಯದೇ ಅಥವಾ ನವೀಕರಿಸದೆ ವ್ಯವಹಾರ ನಡೆಸಿದರೆ ಅದು ಅಕ್ರಮವಾಗುತ್ತದೆ. ಒಂದು ವರ್ಷದ ಒಳಗೆ ಅನಧಿಕೃತವಾಗಿ ವ್ಯವಹಾರ ನಡೆಸಿದರೆ ಪರವಾನಗಿ ಶುಲ್ಕದಲ್ಲಿ ಶೇ 50ರವರೆಗೂ ದಂಡ ವಿಧಿಸಲಾಗುವುದು. ಒಂದು ವರ್ಷಕ್ಕಿಂತ ಹೆಚ್ಚು ಕಾಲ ಅನಧಿಕೃತವಾಗಿ ವ್ಯವಹಾರ ನಡೆಸಿರುವುದು ಕಂಡು ಬಂದರೆ ಅವರ ವ್ಯವಹಾರಗಳನ್ನು ರದ್ದು ಮಾಡಲಾಗುವುದು’ ಎಂದು ನಗರಸಭೆ ಆಯುಕ್ತ ಟಿ.ಎನ್‌.ನರಸಿಂಹಮೂರ್ತಿ ಎಚ್ಚರಿಕೆ ನೀಡಿದ್ದಾರೆ.

ಪ್ಲಾಸ್ಟಿಕ್‌ ಬಳಕೆ ನಿಷೇಧ ಷರತ್ತು: ನಗರಸಭೆ ಅಂಗಡಿಗಳಿಗೆ ಪರವಾನಗಿ ನೀಡುವಾಗಲೇ ಪ್ಲಾಸ್ಟಿಕ್‌ ಬಳಸುವಂತಿಲ್ಲ ಎಂಬ ಷರತ್ತು ವಿಧಿಸಿ ಲೈಸೆನ್ಸ್‌ ಮಂಜೂರು ಮಾಡುತ್ತದೆ. ಅಂಗಡಿಕಾರರು ಪ್ಲಾಸ್ಟಿಕ್‌ ಬಳಸದ ಷರತ್ತಿಗೆ ಒಪ್ಪಿ ಲೈಸೆನ್ಸ್‌ ಪತ್ರಕ್ಕೆ ಸಹಿ ಹಾಕಿರುತ್ತಾರೆ.

‘ಅಂಗಡಿ ಮಾಲೀಕರು ಶೀಘ್ರ ಲೈಸೆನ್ಸ್‌ ಪಡೆದು ವ್ಯವಹಾರ ನಡೆಸಬೇಕು. ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಬಳಸುತ್ತಿರುವುದು ಕಂಡುಬಂದರೆ ಪ್ಲಾಸ್ಟಿಕ್‌ ವಶಪಡಿಸಿಕೊಂಡು ದಂಡ ವಿಧಿಸಲಾಗುವುದು. ಮತ್ತೊಮ್ಮೆ ಪ್ಲಾಸ್ಟಿಕ್‌ ಬಳಸಿದರೆ ಅವರ ಅಂಗಡಿ ಪರವಾನಗಿ ರದ್ದು ಮಾಡಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ಹೇಳಿದರು.

**

ಅಂಗಡಿ ಮಾಲೀಕರಿಗೆ ಅರಿವಿನ ಕೊರತೆ

ಮಂಡ್ಯ: ಅಂಗಡಿಗಳ ಪರವಾನಗಿಯನ್ನು ಪ್ರತೀ ವರ್ಷ ನವೀಕರಣ ಮಾಡಿಕೊಳ್ಳಬೇಕು ಎಂಬ ಅರಿವು ನಗರದ ಕೆಲ ಅಂಗಡಿ ಮಾಲೀಕರಿಗೆ ಇಲ್ಲ. ಹೀಗಾಗಿ ಅನಧಿಕೃತವಾಗಿ ವ್ಯವಹಾರ ನಡೆಸುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿದೆ.

‘ಅಂಗಡಿಕಾರರಲ್ಲಿ ಅರಿವು ಮೂಡಿಸುವುದಕ್ಕಾಗಿ ನಗರಸಭೆ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ. ಬಿತ್ತಿಪತ್ರ ಮಾಡಿಸಿ ಅಂಗಡಿಗಳಲ್ಲಿ ಹಂಚಲಾಗಿದೆ. ಆಟೊ ಪ್ರಚಾರದ ಮೂಲಕವೂ ಜಾಗೃತಿ ಮೂಡಿಸಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕೆ ಮಂಡಳಿಯೂ ವಿವಿಧ ಅರಿವು ಕಾರ್ಯಕ್ರಮ ಮಾಡಿಸುತ್ತಿದ್ದು ಲೈಸೆನ್ಸ್‌ ನವೀಕರಿಸಿಕೊಳ್ಳುವಂತೆ ತಿಳಿಸಿದೆ’ ಎಂದು ನಗರಸಭೆ ಆಯುಕ್ತ ಟಿ.ಎನ್‌.ನರಸಿಂಹಮೂರ್ತಿ ಹೇಳಿದರು.

**

ಅಂಗಡಿ ಮಾಲೀಕರಿಗೆ ಅರಿವಿನ ಕೊರತೆ

ಮಂಡ್ಯ: ಅಂಗಡಿಗಳ ಪರವಾನಗಿಯನ್ನು ಪ್ರತೀ ವರ್ಷ ನವೀಕರಣ ಮಾಡಿಕೊಳ್ಳಬೇಕು ಎಂಬ ಅರಿವು ನಗರದ ಕೆಲ ಅಂಗಡಿ ಮಾಲೀಕರಿಗೆ ಇಲ್ಲ. ಹೀಗಾಗಿ ಅನಧಿಕೃತವಾಗಿ ವ್ಯವಹಾರ ನಡೆಸುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿದೆ.

‘ಅಂಗಡಿಕಾರರಲ್ಲಿ ಅರಿವು ಮೂಡಿಸುವುದಕ್ಕಾಗಿ ನಗರಸಭೆ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ. ಬಿತ್ತಿಪತ್ರ ಮಾಡಿಸಿ ಅಂಗಡಿಗಳಲ್ಲಿ ಹಂಚಲಾಗಿದೆ. ಆಟೊ ಪ್ರಚಾರದ ಮೂಲಕವೂ ಜಾಗೃತಿ ಮೂಡಿಸಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕೆ ಮಂಡಳಿಯೂ ವಿವಿಧ ಅರಿವು ಕಾರ್ಯಕ್ರಮ ಮಾಡಿಸುತ್ತಿದ್ದು ಲೈಸೆನ್ಸ್‌ ನವೀಕರಿಸಿಕೊಳ್ಳುವಂತೆ ತಿಳಿಸಿದೆ’ ಎಂದು ನಗರಸಭೆ ಆಯುಕ್ತ ಟಿ.ಎನ್‌.ನರಸಿಂಹಮೂರ್ತಿ ಹೇಳಿದರು.

ಪ್ರತಿಕ್ರಿಯಿಸಿ (+)