ಸೋಮವಾರ, ಡಿಸೆಂಬರ್ 9, 2019
25 °C

ಒಂದು ಅಡಿ ನೀರು ಮಾತ್ರ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದು ಅಡಿ ನೀರು ಮಾತ್ರ ಸಂಗ್ರಹ

ಚನ್ನಗಿರಿ: ಏಷ್ಯಾ ಖಂಡದಲ್ಲಿ  ಎರಡನೇ ಅತಿ ದೊಡ್ಡ ಕೆರೆಯೆನಿಸಿಕೊಂಡಿರುವ ಐತಿಹಾಸಿಕ ಸೂಳೆಕೆರೆ ಈ ಬಾರಿ ಮಳೆಯ ಕೊರತೆಯಿಂದಾಗಿ ಭಾಗಶಃ ಖಾಲಿಯಾಗಿದ್ದು, ಒಂದೇ ಒಂದು ಅಡಿ ಮಾತ್ರ ನೀರಿನ ಸಂಗ್ರಹ ಇದೆ.

ಬಸವನಾಲೆ ಹಾಗೂ ಸಿದ್ಧನಾಲೆಗಳು ಇರುವ ಜಾಗದಲ್ಲಿ ಸುಮಾರು 3 ಕಿ.ಮೀ ಸುತ್ತಳತೆಯಲ್ಲಿ  ಸಂಪೂರ್ಣ ನೀರು ಖಾಲಿಯಾಗಿದ್ದು,  ಬಿರುಕು ಬಿಟ್ಟ ನೆಲ ಕಾಣಿಸುತ್ತಿದೆ. ಸಮೃದ್ಧ ಮಳೆಯಾಗುವವರೆಗೂ ನೀರಿನ ಕೊರತೆ ಮುಂದುವರಿಯುವ ಸಾಧ್ಯತೆ ಇದೆ.

ಸೂಳೆಕೆರೆಯಿಂದ ಚನ್ನಗಿರಿ, ಪಕ್ಕದ ಜಿಲ್ಲೆ ಚಿತ್ರದುರ್ಗ ನಗರ, ಹೊಳಲ್ಕೆರೆ, ಜಗಳೂರು ತಾಲ್ಲೂಕುಗಳಿಗೆ ಹಾಗೂ ಸಿರಿಗೆರೆ, ಮಲ್ಲಾಡಿಹಳ್ಳಿ, ಭೀಮಸಮುದ್ರ ಗ್ರಾಮಗಳು ಸೇರಿದಂತೆ 50ಕ್ಕಿಂತ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಆದರೆ, ಈ ಕೆರೆ ಬತ್ತಿರುವುದರಿಂದ ಈ ಎಲ್ಲ ಭಾಗಗಳಲ್ಲಿಯೂ ನೀರಿಗೆ ತೀವ್ರ ತೊಂದರೆ ಉಂಟಾಗಿದೆ.

2,628 ಹೆಕ್ಟೇರ್ ಸೂಳೆಕೆರೆ ಅಚ್ಚುಕಟ್ಟು ಪ್ರದೇಶವಿದ್ದು, ನೀರಿನ ಕೊರತೆಯಿಂದಾಗಿ ಭತ್ತದ ನಾಟಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ. ಈ ಕೆರೆಯ ಹಿನ್ನೀರಿನ ದಂಡೆಯಲ್ಲಿರುವ 40ಕ್ಕಿಂತ ಹೆಚ್ಚು ಗ್ರಾಮಗಳು ನೀರಿಗಾಗಿ ಈ ಕೆರೆಯನ್ನೇ ಅವಲಂಬಿಸಿವೆ. ರೈತರು ತೋಟಗಳಿಗೂ ನೀರು ಹಾಯಿಸದಷ್ಟು ನೀರಿಗೆ ಹಾಹಾಕಾರ ಎದುರಾಗಿದೆ.

ಭದ್ರಾ ಕಾಲುವೆಯಿಂದ ಪ್ರತಿ ವರ್ಷ 0.65 ಟಿಎಂಸಿ ನೀರನ್ನು ಈ ಕೆರೆಗೆ ಹರಿಸಲಾಗುತ್ತಿತ್ತು.  ಈಗ ಭದ್ರಾ ಅಣೆಕಟ್ಟೆಯಲ್ಲೂ ನೀರಿನ ಸಂಗ್ರಹ ಕಡಿಮೆ ಇರುವುದರಿಂದ ಸೂಳೆ ಕೆರೆಗೆ ನೀರು ಪೂರೈಕೆಯಾಗದೇ ಈ ಭಾಗದ ರೈತರಿಗೆ ತೊಂದರೆಯಾಗಿದೆ.

‘ಎಲ್ಲ ಕಡೆ ಉತ್ತಮ ಮಳೆಯಾಗಲಿ. ಭದ್ರಾ ಅಣೆಕಟ್ಟೆಯಲ್ಲಿ ಯಥೇಚ್ಛವಾಗಿ ನೀರು ಸಂಗ್ರಹವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ’ ಎಂದು ರೈತ ಮನ್ಸೂರ್ ಅಹಮದ್‌ ತಿಳಿಸಿದರು.

ಅಂಕಿ ಅಂಶ

0.65ಟಿಎಂಸಿ ಭದ್ರ ಕಾಲುವೆಯಿಂದ ಹರಿಸುವ ನೀರಿನ ಪ್ರಮಾಣ

2,628 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ

12 ಅಡಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ  ಹೂಳು

* * 

ಕೆರೆಯಲ್ಲಿ 12 ಅಡಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದೆ. ಹೂಳು ಎತ್ತಲು ಇದು ಸಕಾಲ. ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಬೇಕು 

ಸಿದ್ದಪ್ಪ , ರೈತ

 

ಪ್ರತಿಕ್ರಿಯಿಸಿ (+)