ಭಾನುವಾರ, ಡಿಸೆಂಬರ್ 8, 2019
21 °C
ಮಠಾಧೀಶರ, ರೈತ ಸಂಘಟನೆಗಳ ಸಮಾವೇಶ

ಕೃಷಿ ಸಾಲ ಸಂಪೂರ್ಣ ಮನ್ನಾಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷಿ ಸಾಲ ಸಂಪೂರ್ಣ ಮನ್ನಾಕ್ಕೆ ಆಗ್ರಹ

ಹುಬ್ಬಳ್ಳಿ: ‘ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು, ಮಹದಾಯಿ ವಿವಾದವನ್ನು ಆದಷ್ಟು ಬೇಗನೇ ಪರಿಹರಿಸಬೇಕು’ ಎಂದು ಎಲ್ಲಾ ರೈತ ಸಂಘಟನೆಗಳ ಮುಖಂಡರು ಮತ್ತು ಮಠಾಧೀಶರು ಸೋಮವಾರ ಇಲ್ಲಿ ಒಕ್ಕೊರಲಿನಿಂದ ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟವು ನಗರದಲ್ಲಿ ಹಮ್ಮಿಕೊಂಡಿದ್ದ ಮಠಾಧೀಶರ ಮತ್ತು ರೈತ ಸಂಘಟನೆಗಳ ಬೃಹತ್‌ ಸಮಾವೇಶದಲ್ಲಿ ಈ ಒತ್ತಾಯ ಕೇಳಿಬಂತು.

ಪ್ರಾಸ್ತಾವಿಕವಾಗಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ವೈ.ಬಿ. ಇನಾಮತಿ, ‘₹ 50 ಸಾವಿರದವರೆಗಿನ ಸಾಲ ಮನ್ನಾ ಮಾಡಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳಿಕೊಳ್ಳುತ್ತಿದೆ. ಇದಕ್ಕಾಗಿ 14 ಷರತ್ತುಗಳನ್ನು ಮುಂದಿಟ್ಟಿದೆ. ರೈತರನ್ನೇ ಮುಂದಿಟ್ಟುಕೊಂಡು ರಾಜಕಾರಣಿಗಳು ಆಟವಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಅಚ್ಛೇ ದಿನ್‌ ಎಂದು ಬೀಗುತ್ತಿರುವ ಕೇಂದ್ರ ಸರ್ಕಾರವು ಮಹದಾಯಿ ಯೋಜನೆ ಜಾರಿಗೆ ಹಿಂದೇಟು ಹಾಕುತ್ತಿದೆ. ಸತತ ಎರಡು ವರ್ಷಗಳಿಂದ ಈ ಭಾಗದ ರೈತರು ಹೋರಾಟ ಮಾಡುತ್ತಿದ್ದರೂ ಪ್ರಧಾನಿ ಮೌನ ವಹಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದವರು ನಾಟಕದ ಕಂಪೆನಿಯ ಒಂದೇ ಕಲಾವಿದರು’ ಎಂದು ಕೂಡಲಸಂಗಮದ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಲೇವಡಿ ಮಾಡಿದರು.

‘ರೈತರಲ್ಲಿ ಒಗ್ಗಟ್ಟಿನ ಕೊರತೆ ಇದೆ. ಇದರ ಲಾಭವನ್ನು ರಾಜಕಾರಣಿಗಳು ಪಡೆದುಕೊಳ್ಳುತ್ತಿದ್ದಾರೆ. ಹಿಂಸೆಗೆ ರಾಜಕಾರಣಿಗಳೇ ಪ್ರಚೋದನೆ ಕೊಡುತ್ತಿದ್ದಾರೆ. ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಇರುವ ರೈತರ ಸಾಲವನ್ನು ಮನ್ನಾ ಮಾಡಿದರೆ ಮಾತ್ರ ರೈತರಿಗೆ ಅಚ್ಛೇ ದಿನ್‌ ಬರಲು ಸಾಧ್ಯ’ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)