ಸೋಮವಾರ, ಡಿಸೆಂಬರ್ 16, 2019
26 °C
ನಾಲ್ಕು ತಿಂಗಳ ನರಕ ನೆನೆದು ಕಣ್ಣೀರಿಟ್ಟ ಒಡಿಶಾದ ಸಂತ್ರಸ್ತರು

ಇಟ್ಟಿಗೆ ಕಾರ್ಖಾನೆಯ ಜೀತದಿಂದ ಮುಕ್ತಿ

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

ಇಟ್ಟಿಗೆ ಕಾರ್ಖಾನೆಯ ಜೀತದಿಂದ ಮುಕ್ತಿ

ರಾಮನಗರ: ‘ನಾಲ್ಕು ತಿಂಗಳ ಕಾಲ ಕಣ್ಣೀರಿನಲ್ಲಿ ಕೈತೊಳೆದಿದ್ದೇವೆ. ಮತ್ತೆ ಇನ್ನೆಂದು ಇತ್ತ ಬರಲಾರೆವು. ನಮ್ಮೂರಿನಲ್ಲೇ ಹಸಿವೆಯಿಂದ ಸತ್ತರೂ ಸರಿಯೇ....’

ಚನ್ನಪಟ್ಟಣ ತಾಲ್ಲೂಕಿನ ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಜೀತದಾಳುಗಳಾಗಿ ದುಡಿದು ಹೈರಾಣಾಗಿ, ಪೊಲೀಸರು ಹಾಗೂ ಸ್ವಯಂಸೇವಾ ಸಂಸ್ಥೆಗಳ ನೆರವಿನೊಂದಿಗೆ ವಿಮೋಚನೆಗೊಂಡ ಕುಟುಂಬವೊಂದರ ನಿಟ್ಟುಸಿರಿನ ನುಡಿಗಳಿವು.

ಒಡಿಶಾ ರಾಜ್ಯದ ಬೋಲಂಗೀರ್ ಜಿಲ್ಲೆಯ ನೀಲ್‌ಜಿ ಬಹರ್‌ ಎನ್ನುವ ಪುಟ್ಟ ಹಳ್ಳಿಗೆ ವಾಪಸ್‌ ಆಗಲು ಹಾತೊರೆಯುತ್ತಿದ್ದ ಈ ನಾಲ್ವರು ಚನ್ನಪಟ್ಟಣ ತಹಶೀಲ್ದಾರ್‌ ಕಚೇರಿಯ ಎದುರು ‘ಪ್ರಜಾವಾಣಿ’ ಜೊತೆ ತಮ್ಮ ನೋವಿನ ಕಥೆಯನ್ನು ಹಂಚಿಕೊಂಡರು.

‘ಸ್ವಂತ ಊರಿನಲ್ಲಿ ದಿನಕ್ಕೊಂದು ಊಟ ಸಿಗದಷ್ಟು ಬರ. ಹೀಗಾಗಿ ಕರ್ನಾಟಕಕ್ಕೆ ಕೆಲಸಕ್ಕೆ ಬರಲು ಮನಸ್ಸು ಮಾಡಿದೆವು. ಸುಮಾರು ನಾಲ್ಕು ತಿಂಗಳ ಹಿಂದೆ ಬೆಂಗಳೂರಿಗೆ ಕಾಲಿಟ್ಟ ಸಂದರ್ಭ ಅಲ್ಲಿ  ಮಧ್ಯವರ್ತಿಯೊಬ್ಬನ ಪರಿಚಯ ಆಯಿತು. ಆತ ಉದ್ಯೋಗ, ಕೈತುಂಬ ಸಂಬಳ ಕೊಡಿಸುವುದಾಗಿ ಹೇಳಿ ನಮ್ಮನ್ನು ಚನ್ನಪಟ್ಟಣದ ಇಟ್ಟಿಗೆ ಕಾರ್ಖಾನೆಯೊಂದಕ್ಕೆ ಕರೆದೊಯ್ದ. ಆರಂಭದ ಒಂದೆರಡು ದಿನ ನಮ್ಮನ್ನು ಚೆನ್ನಾಗಿ ನೋಡಿಕೊಂಡ ಮಾಲೀಕರು ನಂತರ ಕಿರುಕುಳ ನೀಡಲು ಆರಂಭಿಸಿದರು. ಅಲ್ಲಿಂದ ಮುಂದೆ ನರಕವೇ ಸೃಷ್ಟಿಯಾಯಿತು’ ಎಂದು ನೆನೆದು ಕಣ್ಣೀರಿಟ್ಟರು.

‘ಒಂದು ಸಾವಿರ ಇಟ್ಟಿಗೆ ಮಾಡಿಕೊಟ್ಟರೆ ₹ 700 ಕೂಲಿ ಕೊಡುವುದಾಗಿ ಮಾಲೀಕರು ಭರವಸೆ ನೀಡಿದ್ದರು. ಅದರೆ ಒಂದು ರೂಪಾಯಿ ಕೊಡಲಿಲ್ಲ. ಊರಿಗೆ ಹೋಗುವಾಗ ಕೊಡುವುದಾಗಿ ಹೇಳಿದ್ದರು. ಆದರೆ ನಮಗೆ ಊಟ ಬಿಟ್ಟರೆ ಬೇರೇನೂ ನೀಡಲಿಲ್ಲ. ಬೆಳಿಗ್ಗೆ 6ಕ್ಕೆ ಕೆಲಸ ಆರಂಭವಾದರೆ ಸಂಜೆ 6ರವರೆಗೂ ನಡೆಯುತ್ತಿತ್ತು. ದಿನಕ್ಕೆ 1000–1200 ಇಟ್ಟಿಗೆಗಳನ್ನು ಮಾಡಿಕೊಡುತ್ತಿದ್ದೆವು’ ಎಂದು ಅವರು ವಿವರಿಸಿದರು.

ಲೈಂಗಿಕ ದೌರ್ಜನ್ಯಕ್ಕೂ ಯತ್ನ:  ಗುಂಪಿನಲ್ಲಿ ಕಿರಿಯಳಾಗಿದ್ದ ಮಹಿಳೆಯ ಮೇಲೆ ಇಟ್ಟಿಗೆ ಕಾರ್ಖಾನೆಯ ಮಾಲೀಕ ಒಮ್ಮೆ ಅತ್ಯಾಚಾರಕ್ಕೆ ಯತ್ನಿಸಿದ್ದೂ ಉಂಟು. ‘ಅದೊಂದು ದಿನ ಮಾಲೀಕ ನನ್ನ ಸೀರೆ ಸೆರಗು ಹಿಡಿದು ಎಳೆದಾಡಿದರು. ನಾನು ಹೇಗೋ ಕೊಸರಿಕೊಂಡು ಪಾರಾಗಿದ್ದೆ’ ಎಂದು ಸಂತ್ರಸ್ತ ಮಹಿಳೆ ಹೇಳಿದರು.

ಗೃಹಬಂಧನ–ಶೌಚಕ್ಕೆ ಬಕೆಟ್‌: ‘ಪ್ರತಿ ಸಂಜೆ 6ರ ನಂತರ ನಮ್ಮನ್ನು ಕೋಣೆಯೊಂದರಲ್ಲಿ ಕೂಡಿ ಹಾಕಲಾಗುತ್ತಿತ್ತು. ಅದರೊಳಗೆ ಶೌಚಾಲಯವೂ ಇರಲಿಲ್ಲ. ಕೇಳಿದ್ದಕ್ಕೆ ಒಂದು ಬಕೆಟ್‌ ಕೊಟ್ಟು ಇದರಲ್ಲಿ ಮಾಡಿಕೊಳ್ಳಿ ಎಂದರು. ಸಂಬಂಧಿಕರಿಗೆ ಕರೆ ಮಾಡದಂತೆ ನಮ್ಮ ಮೊಬೈಲ್‌ ಅನ್ನೂ ಕಸಿಯಲಾಗಿತ್ತು. ಕೂಲಿ ಕೇಳಿದರೆ, ಊರಿಗೆ ಹೋಗಬೇಕು ಎಂದರೆ ನಮ್ಮನ್ನು ಥಳಿಸುತ್ತಿದ್ದರು’ ಎಂದು ಅವರು ಹೇಳಿದರು.

ಬೆಳಕಿಗೆ ಬಂದದ್ದು ಹೇಗೆ?: ‘ಕೂಲಿಗೆ ಬಂದವರ ಪೈಕಿ ಒಬ್ಬ ವ್ಯಕ್ತಿ ಊರಿನಲ್ಲಿರುವ ತನ್ನ ಮಗಳು ಹುಷಾರು ತಪ್ಪಿದ್ದು, ರಜೆ ಬೇಕೇ ಬೇಕು ಎಂದು ಹೇಳಿ ಒತ್ತಾಯಿಸಿ ಮಾಲೀಕರಿಂದ ತಪ್ಪಿಸಿಕೊಂಡಿದ್ದ. ಕಡೆಗೆ ಉಳಿದ ಮೂವರ ವಿಚಾರವು ಒಡಿಶಾದಲ್ಲಿರುವ ಅವರ ಕುಟುಂಬದವರಿಗೆ ತಿಳಿಯಿತು. ಅಲ್ಲಿನ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಯಿತು. ನಂತರ ನಮ್ಮ ಗಮನಕ್ಕೆ ಬಂತು. ನಾವು ರಾಮನಗರದ ಜಿಲ್ಲಾಧಿಕಾರಿ ಗಮನಕ್ಕೆ ತಂದು ಕಾರ್ಮಿಕರನ್ನು ರಕ್ಷಿಸುವಂತೆ ಕೋರಿದೆವು’ ಎಂದು ಇಂಟರ್‌ನ್ಯಾಷನಲ್‌ ಜಸ್ಟೀಸ್‌ ಮಿಷನ್‌ ಸಂಘಟನೆಯ ಸಿಬ್ಬಂದಿ ತಿಳಿಸಿದರು.

ಸಂತ್ರಸ್ತರಿಗೆ ಪರಿಹಾರ: ಜೀತಪದ್ಧತಿಯಿಂದ ಬಿಡುಗಡೆಯಾದ ಕಾರ್ಮಿಕರಿಗೆ ಚನ್ನಪಟ್ಟಣ ತಾಲ್ಲೂಕು ಆಡಳಿತದ ವತಿಯಿಂದ ಸೋಮವಾರ ರೈಲು ಪ್ರಯಾಣದ ಟಿಕೆಟ್‌, ಬಿಡುಗಡೆ ಪತ್ರ ಹಾಗೂ ಪರಿಹಾರದ ಮುಂಗಡವಾಗಿ ತಲಾ ₹ 5,000 ವಿತರಿಸಲಾಯಿತು.

‘ಕೇಂದ್ರ ಸರ್ಕಾರವು ನಿರಾಶ್ರಿತರಿಗೆ ಅವರ ಊರಿನಲ್ಲಿಯೇ ಅಗತ್ಯ ಸೌಲಭ್ಯ ಹಾಗೂ ಉದ್ಯೋಗ ನೀಡಲಿದೆ. ಇದಲ್ಲದೇ ಜೀತಪದ್ಧತಿ ನಿರ್ಮೂಲನಾ ಕಾಯ್ದೆಯ ಅಡಿ ಒಂದು ಲಕ್ಷ ರೂಪಾಯಿಯಷ್ಟು ಪರಿಹಾರವೂ ಸಿಗಲಿದೆ’ ಎಂದು ತಹಶೀಲ್ದಾರ್‌ ರಮೇಶ್ ತಿಳಿಸಿದರು.

ಮಧ್ಯವರ್ತಿ ಬಂಧನ

ಇಟ್ಟಿಗೆ ಕಾರ್ಖಾನೆಗೆ ಕಾರ್ಮಿಕರನ್ನು ಕರೆದೊಯ್ದ ಆರೋಪಿ ರಂಜಿತ್‌ ಎಂಬಾತನನ್ನು ಚನ್ನಪಟ್ಟಣ ಪೊಲೀಸರು ಸೋಮವಾರ ಬಂಧಿಸಿದ್ದಾರೆ.ಆರೋಪಿಯೂ ಒಡಿಶಾ ಮೂಲದವನಾಗಿದ್ದು, ಅಮಾಯಕರನ್ನು ಕರೆತಂದು ಇಲ್ಲಿನ ಇಟ್ಟಿಗೆ ಕಾರ್ಖಾನೆಗಳು, ಕ್ರಷರ್‌ ಮೊದಲಾದವುಗಳಿಗೆ ಕಾರ್ಮಿಕರಾಗಿ ಪೂರೈಸುವ ಜಾಲದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂದು ಪೊಲೀಸರು ತಿಳಿಸಿದರು.

* ರಕ್ಷಣೆಗೆ ಒಳಗಾದ ಒಡಿಶಾ ಕಾರ್ಮಿಕರು ಸೋಮವಾರ ಊರಿಗೆ ತೆರಳಿದರು. ಪ್ರಕರಣದ ಮಧ್ಯವರ್ತಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ

–ಕೆ. ರಮೇಶ್‌, ತಹಶೀಲ್ದಾರ್, ರಾಮನಗರ

ಪ್ರತಿಕ್ರಿಯಿಸಿ (+)