ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಟ್ಟಿ ಬಿಡಿ; ಕ್ಷೇತ್ರಗಳತ್ತ ಗಮನವಿಡಿ’

Last Updated 17 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೆಪಿಸಿಸಿಯ ನೂತನ ಪದಾಧಿಕಾರಿಗಳ ಪಟ್ಟಿ ಬಗ್ಗೆ ಅಸಮಾಧಾನ ಹೊರಹಾಕಿರುವ ಶಾಸಕರ ವಿರುದ್ಧ  ಸಿಟ್ಟಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ವಿಷಯವನ್ನು ಕೆಪಿಸಿಸಿ ಅಧ್ಯಕ್ಷರ ವಿವೇಚನೆಗೆ ಬಿಡುವಂತೆ ಸಲಹೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ, ‘ವಿಧಾನ ಸಭೆ ಚುನಾವಣೆ ಹತ್ತಿರ ಬರುತ್ತಿದೆ. ನಿಮ್ಮ ನಿಮ್ಮ ಕ್ಷೇತ್ರದತ್ತ ಗಮನ ಕೊಡಿ’ ಎಂದು ಶಾಸಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 

‘ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡಿ ಪಕ್ಷದ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರಬೇಡಿ. ಚುನಾವಣೆ ಗಮನದಲ್ಲಿಟ್ಟು ಸರ್ಕಾರದ ಯೋಜನೆಗಳನ್ನು ಜನರ ಬಳಿಗೆ ತಲುಪಿಸಿ. ಹೆಚ್ಚಿನ ಸ್ಥಾನ ಗೆಲ್ಲುವ ಕಡೆಗೆ ಗಮನಹರಿಸಿ’ ಎಂದು ಮುಖ್ಯಮಂತ್ರಿ ತಾಕೀತು ಮಾಡಿದರು.

ಕೆಪಿಸಿಸಿಗೆ ಹೊಸತಾಗಿ ಪದಾಧಿಕಾರಿಗಳನ್ನು ನೇಮಿಸಿದ ಸಂದರ್ಭದಲ್ಲಿ ತಮಗೆ ಆದ್ಯತೆ ನೀಡದಿರುವ ವಿಧಾನಸಭೆ ಸದಸ್ಯರು ಪ್ರಸ್ತಾಪಿಸುವ ಮೊದಲೇ ಮುಖ್ಯಮಂತ್ರಿಯೇ ಈ ಬಗ್ಗೆ ಉಲ್ಲೇಖಿಸಿದರು.

ಅಲ್ಲದೆ, ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸಿದ ಶಾಸಕರಿಗೆ ಹಿತವಚನ ಹೇಳಿದರು. ಶಾಸಕರು, ಮುಖ್ಯಮಂತ್ರಿಯ ಸಿಟ್ಟು ನೋಡಿ ಮೌನಕ್ಕೆ ಶರಣಾದರು ಎಂದು ಗೊತ್ತಾಗಿದೆ.

ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ‘ಚುನಾವಣೆ ಕಾರಣದಿಂದ ಶಾಸಕರಿಗೆ ಪಕ್ಷದ ಕೆಲಸದ ಹೊರೆ ಬೇಡ ಎಂದು ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ನೀಡಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಶಾಸಕರಿಗೆ ಪಕ್ಷದ ಕೆಲಸದ ಹೊರೆ ಹೊರಿಸಬೇಡಿ ಎಂದು ಹೈಕಮಾಂಡ್ ಸೂಚನೆ ನೀಡಿತ್ತು. ಹೈಕಮಾಂಡ್‌ ಸೂಚನೆ ಪಾಲಿಸಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

‘ಪದಾಧಿಕಾರಿಗಳಾಗಲು ಸಮರ್ಥರಲ್ಲ ಎಂಬ ಕಾರಣಕ್ಕೆ ಶಾಸಕರನ್ನು ನೇಮಕ ಮಾಡಿಲ್ಲ ಎಂಬುದು ಸರಿಯಲ್ಲ’ ಎಂದು ಸಮರ್ಥಿಸಿಕೊಂಡರು.

ಪದಾಧಿಕಾರಿ ಪಟ್ಟಿ ಪರಿಷ್ಕರಣೆ?
ಕೆಪಿಸಿಸಿಗೆ ಪದಾಧಿಕಾರಿಗಳ ನೇಮಕದಿಂದ ಉಂಟಾಗಿರುವ ಅತೃಪ್ತಿ ತಣಿಸಲು ಮುಂದಾಗಿರುವ ಪಕ್ಷದ ಹೈಕಮಾಂಡ್, ಪಟ್ಟಿಯನ್ನು ಪರಿಷ್ಕರಿಸಲು ನಿರ್ಧರಿಸಿದೆ.

ಚುನಾವಣೆ ಸಮೀಪಿಸುತ್ತಿರುವಾಗ ಪಕ್ಷದಲ್ಲಿ ಭಿನ್ನಮತ ಮೂಡಿದರೆ ವ್ಯತಿರಿಕ್ತ ಪರಿಣಾಮ ಆಗಬಹುದು ಎಂದು ಅರಿತಿರುವ ವರಿಷ್ಠರು, ಪಟ್ಟಿಯಲ್ಲಿ ಇನ್ನಷ್ಟು ಮಂದಿಗೆ ಅವಕಾಶ ನೀಡಲು ಮುಂದಾಗಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಮತ್ತು ಕೆಲವು ಹಿರಿಯ ಸಚಿವರು, ನಾಯಕರುಗಳ ಜೊತೆ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ದೂರವಾಣಿಯಲ್ಲಿ ಮಾತನಾಡಿದ್ದಾರೆ.

ಪದಾಧಿಕಾರಿಗಳ ಪಟ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯರಿಗೆ ಮಣೆ ಹಾಕಲಾಗಿದೆ. ವಿಧಾನಸಭಾ ಸದಸ್ಯರನ್ನು ಪರಿಗಣಿಸಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನ ಉಂಟಾಗಿತ್ತು. ಕೆಲವು ಹಿರಿಯ ನಾಯಕರು ಬೆಂಬಲಿಗರಿಗೆ ಅವಕಾಶ ಕಲ್ಪಿಸಲು ಲಾಬಿ ನಡೆಸಿದ್ದರು ಅವರ ಶಿಫಾರಸಿಗೆ ಮನ್ನಣೆ ಸಿಕ್ಕಿಲ್ಲ. ಹೀಗಾಗಿ ಕೆಲವರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.

‘ಎಲ್ಲರಿಗೂ ಸ್ಥಾನ’
ಕೆಪಿಸಿಸಿ ಪದಾಧಿಕಾರಿಗಳ ನೇಮಕ ಕುರಿತು ವ್ಯಕ್ತವಾದ ಅತೃಪ್ತಿಗೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ, ‘ಲೆಫ್ಟ್, ರೈಟ್, ಫ್ರಂಟ್, ಬ್ಯಾಕ್ ಎಲ್ಲರಿಗೂ ಕೆಪಿಸಿಸಿಯಲ್ಲಿ ಸ್ಥಾನ ಸಿಕ್ಕಿದೆ. ಯಾರನ್ನೂ ಸುಮ್ಮನೆ ದೂರುವುದು ಸರಿಯಲ್ಲ’ ಎಂದು ತಮಾಷೆ ಮಾಡಿದರು.

ಕೆಪಿಸಿಸಿಗೆ ಹೊಸತಾಗಿ ನೇಮಕಗೊಂಡಿರುವ 171 ಪದಾಧಿಕಾರಿಗಳಲ್ಲಿ 100 ಮಂದಿ ಬೆಂಗಳೂರು ಕೇಂದ್ರೀಕೃತವಾಗಿದ್ದಾರೆ. ಉಳಿದ 70 ಪದಾಧಿಕಾರಿಗಳು ಮಾತ್ರ ಇಡೀ ರಾಜ್ಯಕ್ಕೆ ಇತರ ಕಡೆಯವರು  ಎಂದು ಸಂಸದ ಕೆ.ಎಚ್. ಮುನಿಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT