ಶುಕ್ರವಾರ, ಡಿಸೆಂಬರ್ 6, 2019
17 °C
ಕಾವೇರಿ ಅರ್ಕಾವತಿ ಸಂಗಮ ತಾಣದಲ್ಲಿ ಅಧ್ಯಾತ್ಮ ಸಾಧಕರ ನಿವಾಸ ನಿರ್ಮಾಣ

ನಿರಾಸೆ ಮೂಡಿಸಿದ ಹೈಕೋರ್ಟ್‌ ಆದೇಶ

ಬಿ.ಎಸ್. ಷಣ್ಮುಖಪ್ಪ Updated:

ಅಕ್ಷರ ಗಾತ್ರ : | |

ನಿರಾಸೆ ಮೂಡಿಸಿದ ಹೈಕೋರ್ಟ್‌ ಆದೇಶ

ಬೆಂಗಳೂರು: ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ಬೊಮ್ಮಸಂದ್ರ ಗ್ರಾಮದಲ್ಲಿ ಅಧ್ಯಾತ್ಮ ಸಾಧಕರಿಗೆ ಮೀಸಲಾದ ಖಾಸಗಿ ಬಡಾವಣೆ ನಿರ್ಮಾಣಕ್ಕೆ ಹೈಕೋರ್ಟ್‌ ಆದೇಶ ನಿರಾಸೆ ಮೂಡಿಸಿದೆ.

‘ಕಟ್ಟಡ ನಿರ್ಮಿಸಲು ಅಗತ್ಯವಾದ ಪರಿಕರ ಸಾಗಿಸುವುದಕ್ಕೆ ಅರಣ್ಯ ಮಧ್ಯದಲ್ಲಿ ಹಾದು ಹೋಗಿರುವ ರಸ್ತೆ ಉಪಯೋಗಕ್ಕೆ ಅನುಮತಿ ನೀಡುವಂತೆ ನಿರ್ದೇಶಿಸಬೇಕು’ ಎಂದು  ಕರ್ನಲ್‌ ಕೃಷ್ಣನ್‌ ದತ್‌ ಶೆಲ್ಲಿ  ಹಾಗೂ ಓಂ ಶಾಂತಿಧಾಮ ವೇದ ಗುರುಕುಲದ ಕಾರ್ಯದರ್ಶಿ ಸತ್ಯವ್ರತ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾ ಮಾಡಿದೆ.

ವೇದಗುರುಕುಲಕ್ಕೆ ಅಂಟಿಕೊಂಡಂತೆ 7 ರಿಂದ 8 ಎಕರೆ ಪ್ರದೇಶದಲ್ಲಿ ‘ನಿಸರ್ಗ ನಿಕುಂಜ ನಿರ್ಮಾಣ’ ಹೆಸರಿನ ಬಡಾವಣೆ ನಿರ್ಮಿಸಲಾಗಿದೆ. ಇಲ್ಲಿ ಅಧ್ಯಾತ್ಮ ಸಾಧಕರಿಗೆ ಮಾತ್ರವೇ ನಿವೇಶನ ನೀಡಲಾಗಿದೆ. ನಿವೃತ್ತ ಸೇನಾಧಿಕಾರಿಯೂ ಆದ ಸ್ಥಳೀಯ ಬಿ.ಅನಂತಪ್ಪ (ಇವರನ್ನು ಈಗ ಆರ್ಯಮುನಿ ಎಂದು ಕರೆಯಲಾಗುತ್ತದೆ) ಇದರ ನಿರ್ಮಾತೃ.

ಈಗಾಗಲೇ ಇಲ್ಲಿ ಏಳೆಂಟು ಸಾಧಕರು ನೆಲೆಸಿದ್ದಾರೆ. ಇವರೆಲ್ಲಾ ವೃತ್ತಿಯಲ್ಲಿ ಎಂಜಿನಿಯರ್, ವೈದ್ಯ, ವಕೀಲರಾಗಿದ್ದವರು. ಇಲ್ಲಿ ನಿವೇಶನ ಪಡೆದುಕೊಂಡ ಉತ್ತರ ಪ್ರದೇಶದ ಕರ್ನಲ್‌ ಕೃಷ್ಣನ್‌ ದತ್‌ ಶೆಲ್ಲಿ (ನಿವೃತ್ತ ಎಚ್‌ಎಲ್‌ ಅಧಿಕಾರಿ) ಕಳೆದ ವರ್ಷ ಮನೆ ನಿರ್ಮಿಸಲು ಮುಂದಾದರು.

ಕಟ್ಟಡ ಸಾಮಗ್ರಿ ರವಾನಿಸಲು ಸಂಗಮದಿಂದ ಗಾಳಿಬೋರೆ ಕಡೆ ಸಾಗುವ ಆರಡಿ ಅಗಲ ಹಾಗೂ  ಒಂದು ಮೈಲಿ ಉದ್ದದ ರಸ್ತೆಯನ್ನೇ ಶೆಲ್ಲಿ ಅವಲಂಬಿಸಿದ್ದರು. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು, ‘ಈ ರಸ್ತೆ ಕೇವಲ ಬಂಡಿ ದಾರಿ. ಇಲ್ಲಿ ಭಾರಿ ವಾಹನಗಳಿಗೆ ಪ್ರವೇಶವಿಲ್ಲ’ ಎಂಬ ತಕರಾರು ತೆಗೆದು ಸಾಮಗ್ರಿ ಸಾಗಿಸಲು ತಡೆ ಒಡ್ಡಿದರು.

ಈ ಕುರಿತಂತೆ ಅರಣ್ಯ ಇಲಾಖೆಯ ಚಾಮರಾಜನಗರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಮಗ್ರ ವಿಚಾರಣೆ ನಡೆಸಿದರು. ಆದರೆ ತೀರ್ಮಾನ ಪ್ರಕಟಿಸಲಿಲ್ಲ. ಇದನ್ನು ಪ್ರಶ್ನಿಸಿ ಕರ್ನಲ್‌ ಶೆಲ್ಲಿ ಹಾಗೂ ಸತ್ಯವ್ರತ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು.

ಅರ್ಜಿದಾರರ ವಾದ: ‘ಸಂಗಮದಿಂದ ಗಾಳಿಬೋರೆ  ಹಾಗೂ ಬೊಮ್ಮಸಂದ್ರ ಗ್ರಾಮದ ಕಡೆ ಸಾಗುವ ಜನರು ಇದೇ ಅರಣ್ಯ ರಸ್ತೆ ಉಪಯೋಗಿಸುತ್ತಾರೆ.  ಜಂಗಲ್‌ ಲಾಡ್ಜ್‌  ಕಡೆ ಸಾಗುವ ಜನರೂ ಭಾರಿ ವಾಹನಗಳಲ್ಲಿ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ನಮ್ಮದು ಕಂದಾಯ ಭೂಮಿ. ನಾವು ಯಾವುದೇ ಕಾನೂನು ಉಲ್ಲಂಘಿಸಿಲ್ಲ.  ಮೈಸೂರು ಮಹಾರಾಜರ ಕಾಲದಿಂದಲೂ ಈ ರಸ್ತೆ ಬಳಕೆಯಲ್ಲಿದೆ’ ಎಂದು ಅರ್ಜಿದಾರರ ವಕೀಲ ಕಿರಣ್‌ ವಿ.ರಾನ್‌ ವಾದ ಮಂಡಿಸಿದ್ದರು.

ಸರ್ಕಾರದ ವಾದ: ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್‌ ಎ.ಜಿ.ಶಿವಣ್ಣ, ‘ವನ್ಯಜೀವಿ ಕಾಯ್ದೆ–1972ರ ಕಲಂ 18ರ ಅನುಸಾರ ಈ ಪ್ರದೇಶವನ್ನು ಕಾವೇರಿ ವನ್ಯಜೀವಿ ಸಂರಕ್ಷಣಾ ವಲಯ ಎಂದು ಗುರುತಿಸಲಾಗಿದೆ.   ಈ ರಸ್ತೆ ಚಿಲಂದವಾಡಿ ಅರಣ್ಯ ಪ್ರದೇಶ ವ್ಯಾಪ್ತಿಗೆ ಒಳಪಡುತ್ತದೆ. ಆದ್ದರಿಂದ ಇಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ ನಿಷಿದ್ಧ’ ಎಂದು ಪ್ರತಿವಾದ ಮಂಡಿಸಿದ್ದರು.

ವಿವಾದಿತ ಬಡಾವಣೆ ಗುರುಕುಲದ ಭಾಗ

ವಿವಾದಿತ ಬಡಾವಣೆ  ವೇದ ಗುರುಕುಲದ ಭಾಗವಾಗಿಯೇ  ಅಭಿವೃದ್ಧಿ ಹೊಂದುತ್ತಿದೆ. 1988ರಿಂದ ನಡೆಯುತ್ತಿರುವ ಗುರುಕುಲ 32 ಎಕರೆ 31 ಗುಂಟೆಗಳಲ್ಲಿ ಹರಡಿಕೊಂಡಿದೆ. ಇದು ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮ ತಟದಲ್ಲಿದ್ದು, ಸುಮಾರು 75 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.

ರಾಜ್ಯ ಪಠ್ಯಕ್ರಮ ಹೊಂದಿದ ಇಲ್ಲಿನ ಶಿಕ್ಷಣ ಸಂಪೂರ್ಣ ವೇದಾಧ್ಯಯನ ಮತ್ತು ಗುರುಕುಲ ಪದ್ಧತಿ ಹೊಂದಿದೆ.  ಹರಿಯಾಣ, ಬಿಹಾರ, ಕೇರಳ ಸೇರಿದಂತೆ ದೇಶದ ವಿವಿಧ ಭಾಗಗಳ ಎಲ್ಲ ಜಾತಿಯ ವಿದ್ಯಾರ್ಥಿಗಳಿಗೆ ಇಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ.

ಇದು ಉಜ್ಜಯಿನಿ ಮಹರ್ಷಿ ಸಾಂದೀಪಿನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನದ ಅಂಗಸಂಸ್ಥೆಯಾಗಿದೆ.

* ಪ್ರಾಚೀನ ಕಾಲದ ಸಂಸ್ಕೃತಿಯ ಪುನರುಜ್ಜೀವನವೇ ನಮ್ಮ ಗುರಿ. ನಾವು ಪ್ರಕೃತಿ ಪ್ರಿಯರು. ಪ್ರಕೃತಿಯೇ ನಮ್ಮ ದೇವರು. ಇಲ್ಲಿ ವಾಣಿಜ್ಯ ಚಟುವಟಿಕೆ ಇಲ್ಲವೇ ಇಲ್ಲ.

–ಸತ್ಯವ್ರತ, ಕಾರ್ಯದರ್ಶಿ, ವೇದ ಗುರುಕುಲ

ಮುಖ್ಯಾಂಶಗಳು

* ಅರಣ್ಯ ಮಧ್ಯದ ಬಂಡಿದಾರಿ ಉಪಯೋಗದ ತಕರಾರು 

* ವೇದ ಗುರುಕುಲ ಮತ್ತು ಸಾಧಕರ ರಿಟ್‌ ಅರ್ಜಿ ವಜಾ

ಪ್ರತಿಕ್ರಿಯಿಸಿ (+)