ಸೋಮವಾರ, ಡಿಸೆಂಬರ್ 16, 2019
18 °C

ಮುಖವಾಡ ಕಳಚಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಖವಾಡ ಕಳಚಿ!

ಝೆನ್‌ಗುರುವನ್ನು ಒಬ್ಬ ಶಿಷ್ಯ ಪ್ರಶ್ನಿಸಿದ: ’ಗುರುಗಳೇ ಝೆನ್‌ ಎಂದರೇನು?’

ಗುರುಗಳು ಉತ್ತರಿಸಿದರು: ‘ಹಸಿವಾದಾಗ ತಿನ್ನು, ನಿದ್ರೆ ಬಂದಾಗ ಮಲಗು.’

ಬಹುಶಃ ಆ ಶಿಷ್ಯನಿಗೆ ಗುರುಗಳ ಮಾತಿನಿಂದ ತುಂಬ ನಿರಾಶೆ ಆಗಿರಬೇಕು. ಝೆನ್‌ ಎಂದರೆ ಏನೇನೋ ದೊಡ್ಡ ಮಾತುಗಳನ್ನು ಹೇಳಬಹುದು ಎಂದು ಊಹಿಸಿದ್ದ ಅವನಿಗೆ ಗುರುಗಳ ಮಾತು ಆಶ್ಚರ್ಯವನ್ನೂ ತಂದಿರಬಹುದು. ಅಷ್ಟು ಗಹನವಾದ ತತ್ತ್ವ ಇಷ್ಟು ಸರಳವಾಗಿರಬಹುದೆ– ಎಂದೆನಿಸಿರಲೂಬಹುದು. ಮಾತ್ರವಲ್ಲ, ಗುರುಗಳ ಮಾತಿಗೂ ಝೆನ್‌ಗೂ ಸಂಬಂಧ ಇಲ್ಲ ಎಂದೂ ಅನಿಸಿರಬಹುದು. ನಮ್ಮ ಪಾಡು ಕೂಡ ಹೀಗೆ ಇರುತ್ತದೆಯೆನ್ನಿ!

ಗುರುಗಳ ಮಾತು ಎಷ್ಟು ಕ್ಷುಲ್ಲಕ? ಗಹನವಾದ ವಿಷಯದ ಬಗ್ಗೆ ಕೇಳಿದರೆ ಎಂಥ ಅಗ್ಗದ ಮಾತು ಹೇಳಿದರು? ಹೀಗೆ ನಮಗೂ ಅನಿಸಬಹುದು. ಏಕೆಂದರೆ ನಾವು ಕೂಡ ಆ ಶಿಷ್ಯನ ವಾರಸುದಾರರೇ ಅಲ್ಲವೆ?

ಹೌದು, ಗುರುಗಳ ಮಾತು ತೀರ ಸಾಮಾನ್ಯವಾದದ್ದು ಎಂದೇ ಅಂದುಕೊಳ್ಳೋಣ. ಹಾಗೆ ‘ಸಾಮಾನ್ಯ’ವಾದ ರೀತಿಯಲ್ಲಿ ನಾವು ಬದುಕುತ್ತಿದ್ದೇವೆಯೆ? ಅಥವಾ ಬದುಕಲು ಸಾಧ್ಯವೆ? ಒಮ್ಮೆ ಅವಲೋಕಿಸೋಣ. ‘ಝೆನ್‌’ ಎನ್ನುವುದು ‘ಅಧ್ಯಾತ್ಮದ ಒಂದು ಮಾರ್ಗ’ ತಾನೆ? ಅಧ್ಯಾತ್ಮದ ‘ಗುರಿ’ಯಾದರೂ ಏನು? ನಮ್ಮ ಜೀವನವನ್ನು ಆನಂದಮಯವಾಗಿಸುವುದೇ ಅದರ ಗುರಿ.  ಆನಂದವನ್ನು ಪಡೆಯಲು ನಾವು ಏನನ್ನು ಮಾಡಬೇಕೆಂದೂ ಅಧ್ಯಾತ್ಮ ಹೇಳುತ್ತದೆ. 

’ಸಹಜವಾಗಿರಿ’ – ಇದೇ ಅಧ್ಯಾತ್ಮಮಾರ್ಗದ ರಹಸ್ಯ. ಸಹಜವಾಗಿರುವುದು ಎಂದರೇನು: ಝೆನ್‌ ಗುರು ಹೇಳಿದಂತೆ – ಹಸಿವಾದಾಗ ತಿನ್ನುವುದು, ನಿದ್ರೆ ಬಂದಾಗ ಮಲಗುವುದು. ಈ ಮಾತಿಗೆ ಹಲವು ಧ್ವನಿಗಳು ಉಂಟು; ಅದರಲ್ಲಿ ಒಂದು: ‘ಮುಖವಾಡಗಳನ್ನು ಹಾಕಿಕೊಂಡು ಬದುಕಬಾರದು.’ ಇದೇ ಅಧ್ಯಾತ್ಮದ ದಾರಿ.

ನಮ್ಮ ಜೀವನ ಅಸಹಜಗಳ ಬಲೆಯಾಗಿದೆ. ನಮ್ಮ ಆಸೆ, ಕೋಪ, ದುಃಖ, ಸುಖ, ಓದು, ಮಾತು – ಹೀಗೆ ಎಲ್ಲವೂ ಮುಖವಾಡಗಳ ಹಿನ್ನೆಲೆಯಲ್ಲಿ ಪ್ರಕಟವಾಗಿರುತ್ತವೆ. ನಮ್ಮ ಹೃದಯಕ್ಕೂ ಮೆದುಳಿಗೂ ಅಂತರ ತುಂಬ ಇರುವುದರಿಂದ, ಅವೆರಡರ ನಡುವೆ ಸಾಮರಸ್ಯವೂ ದೂರವಾಗಿದೆಯೇನೋ? ಮನಸ್ಸಿನಲ್ಲಿ ಒಂದು ಯೋಚಿಸುತ್ತೇವೆ; ಹೊರಗೆ ಇನ್ನೊಂದು ರೀತಿಯಲ್ಲಿ ಮಾತನಾಡುತ್ತಿರುತ್ತೇವೆ.

ನಮ್ಮ ಆಚಾರ–ವಿಚಾರಗಳು ಕೃತಕ ಮಾತ್ರವೇ ಅಲ್ಲ, ಅಪ್ರಮಾಣಿಕವೂ ಆಗಿರುತ್ತವೆ. ಇದು ಅಧ್ಯಾತ್ಮದ ದಾರಿಯಲ್ಲ. ನಮ್ಮ ಭಾವಕ್ಕೂ ಬುದ್ಧಿಗೂ ನಿಷ್ಠವಾಗಿ ಬದುಕನ್ನು ನಡೆಸುವುದು ಸುಲಭವೇನಲ್ಲ. ನಮ್ಮ ಆಧುನಿಕ ಜೀವನಶೈಲಿಯಂತೂ ಇದನ್ನು ಸದಾ ನಿರೂಪಿಸುತ್ತಲೇ ಇರುತ್ತದೆ.

ನಮಗೆ ಹಸಿವಾದಾಗಲಷ್ಟೆ ತಿನ್ನುವಷ್ಟು ನಮ್ಮ ಚಪಲದ ಮೇಲೆ ನಾವು ನಿಯಂತ್ರಣ ಸಾಧಿಸಿದ್ದೇವೆಯೆ? ನಮಗೆ ನಿದ್ರೆ ಬಂದಾಗ ಮಲಗುವಷ್ಟು ಸಮಾಧಾನ ನಮಗಿದೆಯೆ? ನಗು ಬಂದಾಗ ನಗುವಷ್ಟು ಸಹಜ ವಾತಾವರಣ ನಮ್ಮ ಸುತ್ತಲು ಇದೆಯೆ? – ಹೀಗೆ ಒಂದೊಂದು ನಮ್ಮ ‘ಸಾಮಾನ್ಯ’ ಕ್ರಿಯೆಗಳನ್ನು ವಿಶ್ಲೇಷಿಸಿದರೆ, ನಾವು ಸಹಜತೆಯಿಂದ ಎಷ್ಟು ದೂರ ಸರಿದಿದ್ದೇವೆ –ಎನ್ನುವುದು ಸ್ಪಷ್ಟವಾಗುತ್ತದೆ. ಆಧುನಿಕತೆ, ಮತ್ಸರ, ಪೈಪೋಟಿ, ದ್ವೇಷ, ನಾಗರಿಕತೆ – ಹೀಗೆ ಏನೋನೋ ಮುಖವಾಡಗಳ ಕಾರಣದಿಂದಾಗಿ ನಾವು ನಾವಾಗಿಲ್ಲವಷ್ಟೆ!

– ಹರಿತಸ

ಪ್ರತಿಕ್ರಿಯಿಸಿ (+)