ಶುಕ್ರವಾರ, ಡಿಸೆಂಬರ್ 13, 2019
21 °C

ಶೋಷಣೆಯ ಅಡ್ಡೆಗಳಾದ ಸಿನಿಮಾ ಸಂಸ್ಥೆಗಳು

ಎಂ.ಅಬ್ದುಲ್ ರೆಹಮಾನ್ ಪಾಷ Updated:

ಅಕ್ಷರ ಗಾತ್ರ : | |

ಶೋಷಣೆಯ ಅಡ್ಡೆಗಳಾದ ಸಿನಿಮಾ ಸಂಸ್ಥೆಗಳು

ಬೆಂಗಳೂರಲ್ಲಿ ಇತ್ತೀಚೆಗೆ ನಡೆದ ತಮ್ಮ ‘ಫ್ರೀಡಂ-ಮೈ ಸ್ಟೋರಿ’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಸಿನಿಮಾ ಲೇಖಕಿ, ನಿರ್ದೇಶಕಿ, ಸಂಕಲನಕಾರರಾದ ಅರುಣಾ ರಾಜೆಯವರು ‘ಸಿನಿಮಾ ಶಿಕ್ಷಣವೂ ವಾಣಿಜ್ಯೀಕರಣಗೊಂಡಿದೆ. ಬೀದಿಬೀದಿಗೂ ಸಿನಿಮಾ ಇನ್‌ಸ್ಟಿಟ್ಯೂಟ್‌ಗಳು ತಲೆ ಎತ್ತುತ್ತಿವೆ. ಇದರಿಂದ ಸಿನಿಮಾ ಗುಣಮಟ್ಟ ಕಡಿಮೆಯಾಗುತ್ತಿದೆ’ ಎಂದು ವಿಷಾದಿಸಿದ್ದಾರೆ.

ಕೆಲವು ದಿನಗಳ ಹಿಂದೆ ಒಂದು ಸಂಸ್ಥೆಯಲ್ಲಿ ನಾನು ಚಿತ್ರಕಥೆ ರಚನೆ ಕಮ್ಮಟವನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಬಂದಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯ ಅಧ್ಯಕ್ಷ ಸಾ.ರಾ.ಗೋವಿಂದು ಅವರೂ ಇನ್ನೂ ಮುಂದಕ್ಕೆ ಹೋಗಿ, ‘ನಕಲಿ ಇನ್‌ಸ್ಟಿಟ್ಯೂಟ್‌ಗಳು ಎಷ್ಟೊಂದು ಆಗಿವೆ ಎಂದರೆ, ಕೆಲವೊಮ್ಮೆ ಇಲ್ಲಿ ಹಣ ಕಟ್ಟಿ ಮೋಸ ಹೋದ ಅಭ್ಯರ್ಥಿಗಳು ಮತ್ತು ಸಂಸ್ಥೆಗಳ ನಡುವೆ ಹೊಡೆದಾಟಗಳನ್ನು ಬಗೆಹರಿಸಲು ನಾವು ಹೋಗಬೇಕಾಗಿ ಬಂದಿದೆ’ ಎಂಬಂಥ ಮಾತನ್ನು ಬೇಸರದಿಂದ ಆಡಿದ್ದರು. ನಿಜ. ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟು ಇಂಥ ಸಿನಿಮಾ ಸಂಸ್ಥೆಗಳಿವೆ ಎಂದು ಅಧಿಕೃತವಾಗಿ ಯಾರಿಗೂ ಗೊತ್ತಿಲ್ಲ. ಕೆಲವು ಪ್ರತಿಷ್ಠಿತ ಸಂಸ್ಥೆಗಳು ನಡೆಸುವ ಡಿಪ್ಲೊಮಾಗಳು, ಮಿತಾವಧಿ ತರಬೇತಿಗಳನ್ನು ಬಿಟ್ಟರೆ ಹೆಚ್ಚಿನ ತರಬೇತಿ ಸಂಸ್ಥೆಗಳು ಈ ಶೋಷಕರ ಗುಂಪಿಗೆ ಸೇರಿದವು.

ಇವುಗಳ ಜಾಹೀರಾತುಗಳನ್ನು ನೋಡಿ: ಚಲನಚಿತ್ರ ನಿರ್ದೇಶನ, ಅಭಿನಯ, ಚಿತ್ರಕಥೆ ರಚನೆ, ಸಿನಿಮಾಟೊಗ್ರಫಿ, ಎಡಿಟಿಂಗ್ ಇತ್ಯಾದಿ ಎಲ್ಲ ಕಲೆ, ಕೌಶಲಗಳಲ್ಲಿ ಇವು ತರಬೇತಿಯನ್ನು ನೀಡುತ್ತವೆ. ಹೆಚ್ಚಿನವು 3-6 ತಿಂಗಳ ಅವಧಿಯ ಫಾಸ್ಟ್ (ಫುಡ್ ತರಹ) ತರಬೇತಿಗಳು. ಒಬ್ಬ ಏನೂ ಗೊತ್ತಿಲ್ಲದ ಯುವಕ–ಯುವತಿಯನ್ನು ಐದಾರು ತಿಂಗಳಲ್ಲಿ ಫುಲ್ ಫ್ಲೆಡ್ಜ್ ನಿರ್ದೇಶಕನನ್ನಾಗಿ ಪರಿವರ್ತಿಸುವ ಪವಾಡವನ್ನು ಮಾಡುವುದಾಗಿ ಈ ಸಂಸ್ಥೆಗಳು ಹೇಳಿಕೊಳ್ಳುತ್ತವೆ. ನಾನು ಆಗಾಗ ಒಂದೆರಡು ಗೋಷ್ಠಿಗಳಿಗಾಗಿ ಹೋಗುವ ಏಳೆಂಟು ಸಂಸ್ಥೆಗಳ ಅನುಭವದಿಂದ ಹೇಳುವುದಾದರೆ ಇಲ್ಲಿಗೆ ಬರುವ ಅಭ್ಯರ್ಥಿಗಳ ಹಿನ್ನೆಲೆ ಬೆರಗುಗೊಳಿಸುತ್ತದೆ. ಹೆಚ್ಚಿನವರು ಪಿಯುಸಿಯನ್ನೂ ಮುಗಿಸದೇ ಇರುವ ವಿದ್ಯಾಶತ್ರುಗಳು, ಚಿಕ್ಕಪುಟ್ಟ ನೌಕರಿ ಮಾಡುವವರು ಅಥವಾ ನಿರುದ್ಯೋಗಿಗಳು, ಚಿಕ್ಕ ಚಿಕ್ಕ ಪಟ್ಟಣಗಳಿಂದ ಹುಸಿ ಕನಸುಗಳನ್ನು ಹೊತ್ತುಕೊಂಡು ಬೆಂಗಳೂರಿಗೆ (ಓಡಿ) ಬಂದವರು; ಹೆಚ್ಚಿನವರು ತಂದೆತಾಯಂದಿರಿಗೂ ಗೊತ್ತಿಲ್ಲದ ಹಾಗೆ. ಒಂದು ನಿರ್ದೇಶಕರ ತರಬೇತಿಯಲ್ಲಿ ಬೇಲ್ದಾರ್ ಕೆಲಸ ಮಾಡುವ, ಹೋಟಲಿನಲ್ಲಿ ಕ್ಲೀನರ್ ಕೆಲಸವನ್ನು ಮಾಡುವ ಯುವಕರೂ ಇದ್ದರು. ಕಡಿಮೆ ಓದಿದವರು, ಕೆಳಸ್ತರದ ಕೆಲಸಗಳನ್ನು ಮಾಡುವವರು ಪ್ರತಿಭಾವಂತ ನಿರ್ದೇಶಕರು ಆಗಬಾರದು ಎಂದು ಖಂಡಿತ ಇಲ್ಲ. ಆದರೆ ಈ ಸಂಸ್ಥೆಗಳಲ್ಲಿ ನೀಡಲಾಗುವ ತರಬೇತಿಯ ಪರಿಣಾಮವಾಗಿ ಮಾತ್ರ ಖಂಡಿತ ಆಗುವುದಿಲ್ಲ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

ಇನ್ನು ಇಲ್ಲಿ ತರಬೇತಿ ನೀಡುವವರು ಯಾರು? ಹಾಲಿ ಸಿನಿಮಾ ನಿರ್ಮಾಣದಲ್ಲಿ ಬಿಡುವಿಲ್ಲದೇ ತೊಡಗಿಸಿಕೊಂಡವರಿಗೆ ಇಲ್ಲಿ ಬಂದು ತರಬೇತಿ ನೀಡುವಷ್ಟು ಸಮಯವಿರುವುದಿಲ್ಲ. ಸಮಯವಿರುವುದು ಯಾವಾಗಲೋ ಒಂದಷ್ಟು ಸಿನಿಮಾಗಳನ್ನು ಮಾಡಿ, ಹಾಲಿ ಸಿನಿಮಾ ಕೆಲಸವಿಲ್ಲದೇ ಕುಳಿತಿರುವ ನನ್ನಂಥ ಮಾಜಿ ನಿರ್ದೇಶಕರು–ತಂತ್ರಜ್ಞರು. ಆದರೂ ಇಂಥ ಸಂಸ್ಥೆಗಳು ಪ್ರಕಟಿಸುವ ಜಾಹೀರಾತುಗಳಲ್ಲಿ ಹೆಸರಾಂತ ನಿರ್ದೇಶಕರು, ಸ್ಟಾರುಗಳು ರಾರಾಜಿಸುತ್ತಾರೆ. ಅಭ್ಯರ್ಥಿಗಳ ಅದೃಷ್ಟವಿದ್ದರೆ ಅವರು ಒಂದು ಗಂಟೆ ಹೊತ್ತು ಮಿಂಚಿದರೂ ಮಿಂಚಬಹುದು. ಅಲ್ಲದೇ ಸಿನಿಮಾ ಮಾಡುವವರೆಲ್ಲ ಉತ್ತಮ ತರಬೇತಿದಾರರೂ ಆಗಿರಬೇಕು ಎಂಬುದು ಒಂದು ಬಹುದೊಡ್ಡ ಭ್ರಮೆ. ಯಾವುದೇ ಕಲೆ–ಕೌಶಲ ತರಬೇತಿ ಎಂದರೆ ಅದೊಂದು ವಿಶೇಷ ಅರ್ಹತೆ, ಅನುಭವ. ಈ ಸಿದ್ಧತೆ ಸಿನಿಮಾ ತರಬೇತಿದಾರರಲ್ಲಿ ಅಪರೂಪ. ವಸ್ತುಸ್ಥಿತಿ ಹೀಗಿರುವಾಗ, ಇಂಥ ತರಬೇತಿ ಸಂಸ್ಥೆಗಳಿಂದ ಸಿನಿಮೋದ್ಯಮಕ್ಕೆ ಕಲಾವಿದರು, ತಂತ್ರಜ್ಞರು ಒದಗುವುದು ದೂರವೇ ಉಳಿಯಿತು. ಹೆಚ್ಚು ದುರಂತದ ಸಂಗತಿಯೆಂದರೆ, ಚಿಕ್ಕ ಚಿಕ್ಕ ಪಟ್ಟಣದಲ್ಲಿದ್ದುಕೊಂಡು ಸಿನಿಮಾಗಳನ್ನು ನೋಡಿ ತಾವೂ ಏನೋ ಆಗಬೇಕು ಎಂಬ ಕನಸನ್ನು ಕಟ್ಟಿಕೊಂಡು, ಇಂಥ ಸಂಸ್ಥೆಗಳಲ್ಲಿ ಹೇಗಾದರೂ ಮಾಡಿ ಸೇರಿಕೊಂಡರೆ ಉದ್ಯಮದಲ್ಲಿ ಯಶಸ್ವಿಯಾಗುತ್ತೇವೆ ಎಂಬ ದಟ್ಟವಾದ ನಂಬಿಕೆಯನ್ನು ಇಟ್ಟುಕೊಂಡು ಬಂದು ಮೋಸಹೋಗುವ ಯುವಜನ. ವಿದ್ಯೆಯೂ ಬರಲಿಲ್ಲ, ಹಣವೂ ಉಳಿಯಲಿಲ್ಲ. ಈ ಸ್ಥಿತಿ ಏರ್ಪಟ್ಟು ಜಾಹೀರಾತುಗಳಲ್ಲಿ ಮಾತು ಕೊಟ್ಟು ಪೂರೈಸಲು ಆಗದಿದ್ದಕ್ಕಾಗಿ ವಿರಸ ಉಂಟಾಗಿ ಹಲವು ಸಲ ಅಭ್ಯರ್ಥಿಗಳು–ಸಂಸ್ಥೆಗಳ ನಡುವೆ ಹೊಡೆದಾಟಗಳೂ ಆಗಿದ್ದಿವೆ.

ಈ ಸ್ಥಿತಿಗೆ ಕಾರಣ? ವ್ಯಕ್ತಿಗಳಲ್ಲಿ ಕನಸುಗಳನ್ನು ಬಿತ್ತಿ, ಅವುಗಳನ್ನು ಸಾಕಾರಗೊಳಿಸುವ ಭರವಸೆಯನ್ನು ಕೊಟ್ಟು ತರಾತುರಿಯಲ್ಲಿ ಹಣ ಮಾಡಿಕೊಳ್ಳುವುದು ವಾಣಿಜ್ಯೀಕರಣದ ಒಂದು ಗುಣಲಕ್ಷಣ. ಸಿನಿಮಾ ಹುಚ್ಚು ಇಂಥ ಶೋಷಣೆಗೆ ಹೇಳಿ ಮಾಡಿಸಿದಂಥ ಮನಸ್ಥಿತಿ. ಇದನ್ನು ಅರಿತ ಜಾಣರು ಹೊಸ ಹೊಸ ಹೆಸರಿನಲ್ಲಿ ನಗರಗಳ ಹೊರವಲಯಗಳಲ್ಲೂ ಸಿನಿಮಾ ತರಬೇತಿ ಸಂಸ್ಥೆಗಳನ್ನು ತೆರೆಯುತ್ತಾರೆ. ಹೊಸ ಹೊಸ ಮೀನುಗಳಿಗೆ ಜಾಲವನ್ನು ಬೀಸುತ್ತಾರೆ. ಈ ಸಂಸ್ಥೆಗಳಿಗೆ ಯಾವುದೇ ಬಗೆಯ ಅಧಿಕೃತತೆ, ಪ್ರಮಾಣಕತೆ, ಮನ್ನಣೆ ಎನ್ನುವುದು ಇಲ್ಲ. ಹೀಗಾಗಿ ಅಭ್ಯರ್ಥಿಗಳಿಗೆ ಸೇರುವ ಮುನ್ನ ಅವುಗಳ ಗುಣಮಟ್ಟವನ್ನು ಅಳೆಯಲು ಸಾಧ್ಯವಾಗುವುದಿಲ್ಲ. ಮೊದಲು ಸಿಕ್ಕ ಸಂಸ್ಥೆಗೆ ಸೇರಿ ಮೋಸ ಹೋಗುತ್ತಾರೆ.

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಪಾತ್ರ ಇರುವುದು ಇಲ್ಲಿಯೇ. ಇದೊಂದು ಅಕಾಡೆಮಿ ಎನ್ನುವುದನ್ನು ಮರೆಯಬಾರದು. ಚಲನಚಿತ್ರ ಉದ್ಯಮದ ‘ಸೃಜನಶೀಲ’ ಕ್ಷೇತ್ರದ ಬೆಳವಣಿಗೆಯಲ್ಲಿ ಇದು ಹೆಚ್ಚಿನ ಮತ್ತು ವಿಶಿಷ್ಟ ಆಸಕ್ತಿಯನ್ನು ವಹಿಸಬೇಕು. ಸಿನಿಮಾ ಕಲೆ ಮತ್ತು ಕೌಶಲದ ಕುರಿತು ಪುಸ್ತಕಗಳು, ಕೈಪಿಡಿಗಳು, ಕಾರ್ಯಾಭ್ಯಾಸ ಪ್ರಧಾನ ತರಬೇತಿಗಳು, ಪೂರಕ ಸಾಹಿತ್ಯ, ಧ್ವನಿದೃಶ್ಯ ಸಾಧನಗಳು ಇವುಗಳನ್ನು ಅಭಿವೃದ್ಧಿಪಡಿಸುವುದು ಇನ್ಯಾವುದೇ ಸಂಸ್ಥೆಗೆ ಸಾಧ್ಯವಾಗದೇ ಚಲನಚಿತ್ರ ಅಕಾಡೆಮಿಗೆ ಮಾತ್ರ ಸಾಧ್ಯವಾಗುವ ಶೈಕ್ಷಣಿಕ ಕಾರ್ಯ. ಸ್ವತಃ ಅಕಾಡೆಮಿ ಅತ್ಯುತ್ತಮ ತರಬೇತಿ, ಕಾರ್ಯಾತ್ಮಕ ತರಬೇತಿ ನಡೆಸುವ ಇನ್‌ಸ್ಟಿಟ್ಯೂಟನ್ನು ನಡೆಸಬೇಕು. ಸದ್ಯಕ್ಕೆ ಆಗದಿದ್ದಲ್ಲಿ ಕನಿಷ್ಠ ವಿವಿಧ ವಾಣಿಜ್ಯ ಸಂಸ್ಥೆಗಳು ನಡೆಸುತ್ತಿರುವ ತರಬೇತಿ ಸಂಸ್ಥೆಗಳಿಗಾಗಿ ಸಾಮಾನ್ಯ ಒಂದು ಪಠ್ಯಕ್ರಮವನ್ನು ರೂಪಿಸಿ, ನಿರ್ದೇಶಿಸಬೇಕು.  ಕಡಿಮೆ ಅವಧಿಯಲ್ಲಿ ನಿರ್ದೇಶಕ, ಛಾಯಾಗ್ರಾಹಕ, ಸಂಕಲನಕಾರ, ಸಂಗೀತನಿರ್ದೇಶಕ ಇತ್ಯಾದಿ ತರಬೇತಿ ಸಾಮರ್ಥ್ಯಗಳನ್ನು ನೀಡುತ್ತೇವೆ ಎಂಬ ಭ್ರಮೆಯನ್ನು ಬಿಟ್ಟು, ಸಹಾಯಕ ನಿರ್ದೇಶಕ, ಸಹನಿರ್ದೇಶಕ, ಚಿತ್ರಕಥೆ ಸಹಾಯಕ, ಕಲಾಸಹಾಯಕ ನಿರ್ದೇಶಕ, ಸಂಕಲನ ಸಹಾಯಕ, ಛಾಯಾಗ್ರಹಣ ಸಹಾಯಕ ಹೀಗೆ ಕೌಶಲ ಪ್ರಧಾನವಾದ ಅರ್ಹತೆಗಳನ್ನು ನೀಡುವ ಕೆಲಸವಾಗಬೇಕು. ಇಂಥ ತರಬೇತಿಯಿಂದ ಉದ್ಯಮಕ್ಕೆ ಹೊಸ ಹೊಸ ಕೆಲಸಗಾರರು ಒದಗುತ್ತಾರೆ, ಇವರಿಗೆ ಉದ್ಯೋಗವೂ ದೊರಕುತ್ತದೆ. ಕ್ಷೇತ್ರದಲ್ಲಿ ಕೆಲಸ ಮಾಡುತ್ತಲೇ ಈ ಅಭ್ಯರ್ಥಿಗಳು ತಮ್ಮಲ್ಲಿ ನಿಜವಾಗಿಯೂ ಪ್ರತಿಭೆ ಇದ್ದರೆ ನಿರ್ದೇಶಕರು ಇತ್ಯಾದಿಯಾಗಿ ಬೆಳೆಯುತ್ತಾರೆ. ಈ ಬೆಳವಣಿಗೆ ನೈಜ. ನಿರಂತರ. ಅಕಾಡೆಮಿ ಇಂಥ ಸಹಾಯಕರನ್ನು ಸಜ್ಜುಗೊಳಿಸುವ ವಿಶಿಷ್ಟವಾದ ಪಠ್ಯಕ್ರಮಗಳನ್ನು, ತರಬೇತಿ ಕ್ರಮಗಳನ್ನು ರೂಪಿಸಬೇಕು. ಇದಕ್ಕೆ ಬೇಕಾದ ಸಾಹಿತ್ಯ, ಸಾಮಗ್ರಿಗಳನ್ನು ಕೇಂದ್ರೀಯವಾಗಿ ತಯಾರಿಸಿ ಆಸಕ್ತ ಸಂಸ್ಥೆಗಳಿಗೆ ಉಚಿತ ಬೆಲೆಗೆ ಒದಗಿಸಬೇಕು. ಮತ್ತು ಇಂಥ ಶಿಸ್ತುಗಳನ್ನು ಅಳವಡಿಸಿಕೊಂಡ ಸಂಸ್ಥೆಗಳಿಗೆ ಷರತ್ತುಬದ್ಧವಾದ ‘ಮನ್ನಣೆ’ಯನ್ನು ನೀಡಬೇಕು. ‘ಚಲನಚಿತ್ರ ಅಕಾಡೆಮಿಯ ಅಧಿಕೃತ ಮನ್ನಣೆ ಪಡೆದಿದೆ’ ಎಂಬ ಗುರುತು ಅಭ್ಯರ್ಥಿಗಳಿಗೆ ಕನಿಷ್ಠವಾದರೂ ಭದ್ರತೆಯನ್ನು ನೀಡುತ್ತದೆ.

ಕೇಂದ್ರ ಸರ್ಕಾರ ತರಬೇತಿ ಮತ್ತು ಉದ್ಯೋಗ ಸಚಿವಾಲಯಕ್ಕಾಗಿ ಈ ಹಿಂದೆ ನಾಗಾಭರಣ ಅವರು ಅಧ್ಯಕ್ಷರಾಗಿದ್ದಾಗ ಸುಮಾರು 14 ಇಂಥ ಕೌಶಲ ತರಬೇತಿ ಪಠ್ಯಕ್ರಮಗಳನ್ನು ರೂಪಿಸಿಕೊಡಲಾಗಿದೆ. ಇದರಲ್ಲಿ ಸೈದ್ಧಾಂತಿಕ ಕಲಿಕೆಗಿಂತ ಹೆಚ್ಚಾಗಿ ಮಾಡಿ ಕಲಿಯುವುದಕ್ಕೆ ಹೆಚ್ಚಿನ ಅವಕಾಶವನ್ನು ಕಲ್ಪಿಸಲಾಗಿದೆ. ಈಗಲೂ ಪ್ರಧಾನಿಯವರ ಹೊಸ ‘ಸ್ಕಿಲ್ ಇಂಡಿಯಾ’ ಯೋಜನೆಯಲ್ಲಿ ಸಿನಿಮಾ ಕ್ಷೇತ್ರದ ಕುರಿತೂ ಕೌಶಲ ತರಬೇತಿಗಳನ್ನು ನೀಡುವ ಅನೇಕ ಅವಕಾಶಗಳಿವೆ. ಒಂದು ಕಡೆ ಯುವಜನರಿಗೆ, ಆಸಕ್ತರಿಗೆ ಉದ್ಯೋಗದ ಅವಕಾಶಗಳು ತೆರೆಯಬೇಕು, ಇನ್ನೊಂದು ಕಡೆ ಕನ್ನಡ ಸಿನಿಮೋದ್ಯಮಕ್ಕೆ ನುರಿತ, ತರಬೇತಿ ಹೊಂದಿದ ಕಾರ್ಯಪಡೆ ಒದಗಬೇಕು, ಮತ್ತೊಂದು ಕಡೆ ಭ್ರಮೆಗಳನ್ನು ಬಿತ್ತಿ ಯುವಜನರಿಂದ ಹಣವನ್ನು ಹೀರುವ ಕಳ್ಳ ತರಬೇತಿ ಸಂಸ್ಥೆಗಳನ್ನು ಮಟ್ಟ ಹಾಕಬೇಕು. ಇದೆಲ್ಲಾ ಅಗಬೇಕು ಎಂದರೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಶೀಘ್ರವೇ ಈ ಶೈಕ್ಷಣಿಕ ಕಾರ್ಯದ ಕಡೆಗೆ ನಿರ್ದಿಷ್ಟವಾದ ಕ್ರಮವನ್ನು ತೆಗೆದುಕೊಳ್ಳಬೇಕು.

ಪ್ರತಿಕ್ರಿಯಿಸಿ (+)