ಭಾನುವಾರ, ಡಿಸೆಂಬರ್ 15, 2019
21 °C
ಕೆಎಸ್‌ಆರ್‌ಟಿಸಿ, ಬಿಎಂಟಿಸಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಸಲಹೆ

ಬಸ್‌ಗಳು ಕನ್ನಡದ ರಾಯಭಾರಿಗಳಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸ್‌ಗಳು ಕನ್ನಡದ ರಾಯಭಾರಿಗಳಾಗಲಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ  (ಕೆಎಸ್‌ಆರ್‌ಟಿಸಿ) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳು ಕನ್ನಡದ ರಾಯಭಾರಿಗಳಂತೆ. ಅವುಗಳಲ್ಲಿ ಕನ್ನಡ ಎದ್ದು ಕಾಣಿಸುತ್ತಿರಬೇಕು. ಕನ್ನಡವೇ ಕೇಳುತ್ತಿರಬೇಕು...

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ ಅವರು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಸಂಸ್ಥೆಗಳಿಗೆ ನೀಡಿದ ಸಲಹೆ ಇದು. ಈ ಎರಡೂ ಸಂಸ್ಥೆಗಳ ಕೇಂದ್ರ ಕಚೇರಿಗೆ ಮಂಗಳವಾರ ಭೇಟಿ ನೀಡಿದ ಅವರು, ಸಂಸ್ಥೆಗಳಲ್ಲಿ ಕನ್ನಡ ಅನುಷ್ಠಾನದ ಕುರಿತು ಪರಿಶೀಲನೆ ನಡೆಸಿದರು.

‘ಸಾರಿಗೆ ಸಂಸ್ಥೆಗಳು ಆಡಳಿತದಲ್ಲಿ ಮಾತ್ರ ಕನ್ನಡ ಬಳಸಿದರೆ ಸಾಲದು. ವಿದೇಶಿಗರು, ಅನ್ಯರಾಜ್ಯದ ಜನರು  ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಬಸ್‌ಗಳಲ್ಲಿ ಕನ್ನಡವನ್ನು ನೋಡಿದಾಗ, ಕನ್ನಡ ಪದಗಳನ್ನು ಆಲಿಸಿದಾಗ  ಅವರಲ್ಲೂ   ಭಾಷೆ ಬಗ್ಗೆ ಕುತೂಹಲ ಮೂಡುತ್ತದೆ’ ಎಂದರು.

ಕನ್ನಡ ಕಲಿಕೆಗೆ ನೆರವಾಗಿ: ‘ಪ್ರಯಾಣದ ವೇಳೆ ಬಳಸಲು ಅಗತ್ಯವಿರುವಷ್ಟು ಕನ್ನಡವನ್ನು ಕಲಿಯಲು ಅನೇಕ ಅನ್ಯಭಾಷಿಕರು ಉತ್ಸುಕರಾಗಿರುತ್ತಾರೆ. ಅವರಿಗೆ ನೆರವಾಗಲು ಬಸ್‌ನ ಸೀಟುಗಳ ಬಳಿ  ಮಾಹಿತಿ ಕೈಪಿಡಿ ಇಡಬೇಕು. ಕನ್ನಡ ಕಲಿಯಲು ಬೇಕಾದ ಮಾಹಿತಿಯನ್ನು ಇಂಗ್ಲಿಷ್, ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ಮುದ್ರಿಸಬೇಕು’ ಎಂದು ಎರಡೂ ಸಾರಿಗೆ ಸಂಸ್ಥೆಗಳಿಗೆ ಅವರು ಸೂಚಿಸಿದರು.

ವೆಬ್‌ಸೈಟ್‌ ಕನ್ನಡದಲ್ಲೇ ಇರಲಿ: ‘ಸಂಸ್ಥೆಗಳ ವೆಬ್‌ಸೈಟ್‌ಗಳನ್ನು ತೆರೆದಾಗ ಅಲ್ಲಿ ಕನ್ನಡವೇ ಪ್ರಧಾನ ಭಾಷೆಯಾಗಿ ಕಾಣಿಸಿಕೊಳ್ಳಬೇಕು. ಇಂಗ್ಲಿಷ್‌ನಲ್ಲಿ ಮಾಹಿತಿಗೆ ಎರಡನೇ ಪ್ರಾಶಸ್ತ್ಯ ಸಿಗಬೇಕು. ಈ ಬಗ್ಗೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೂ ಇದು ಅನುಷ್ಠಾನ ಆಗಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಆದಷ್ಟು ಶೀಘ್ರ ಇದನ್ನು ಅನುಷ್ಠಾನಕ್ಕೆ ತರುವುದಾಗಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್‌.ಆರ್‌.ಉಮಾಶಂಕರ್‌ ಹಾಗೂ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಭರವಸೆ ನೀಡಿದರು.

ತಂತ್ರಾಂಶಗಳೂ ಕನ್ನಡದಲ್ಲಿರಲಿ: ‘ಭವಿಷ್ಯದಲ್ಲಿ ಕಚೇರಿಯ ಎಲ್ಲ ವ್ಯವಹಾರಗಳೂ ಕಾಗದರಹಿತವಾಗಿಯೇ ನಡೆಯಲಿವೆ. ಹಾಗಾಗಿ, ಆಡಳಿತಕ್ಕೆ ಬಳಸುವ ತಂತ್ರಾಂಶಗಳನ್ನು ಕನ್ನಡದಲ್ಲೇ ನಿರ್ವಹಿಸಲು ಸಾಧ್ಯವಾಗುವಂತೆ ರೂಪಿಸಬೇಕು. ಇವುಗಳನ್ನು ಇಂಗ್ಲಿಷ್‌ನಲ್ಲಿ ರೂಪಿಸಿದರೆ  ಪರಿಣಾಮಕಾರಿಯಾಗಿ ಕನ್ನಡ ಅನುಷ್ಠಾನ  ಸಾಧ್ಯವಾಗದು’ ಎಂದರು.

ಕನ್ನಡ ಬಳಸುವ ಸಿಬ್ಬಂದಿಯನ್ನು ಸನ್ಮಾನಿಸಿ: ಪ್ರಯಾಣಿಕರ ಜೊತೆ ವ್ಯವಹರಿಸುವಾಗ ಅಚ್ಚ ಕನ್ನಡ ಬಳಸುವ ನಿರ್ವಾಹಕರನ್ನು  ಗುರುತಿಸಿ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಗೌರವಿಸುವ ಪರಿಪಾಠ ಆರಂಭಿಸುವಂತೆ ಹಿರಿಯ ಕವಿ ಸಿದ್ದಲಿಂಗಯ್ಯ ಸಲಹೆ ನೀಡಿದರು.

ಕನ್ನಡ ನಿರ್ಲಕ್ಷ್ಯ-ಬಿಎಂಟಿಸಿ ಅಧ್ಯಕ್ಷರಿಂದಲೇ ಪತ್ರ: ‘ಬಿಎಂಟಿಸಿಯಲ್ಲಿ ಕೆಲವು ಅಧಿಕಾರಿಗಳು ಕಚೇರಿ ವ್ಯವಹಾರಕ್ಕೆ ಕನ್ನಡವನ್ನು ಬಳಸುತ್ತಿಲ್ಲ ಎಂದು ಸ್ವತಃ ಬಿಎಂಟಿಸಿ ಅಧ್ಯಕ್ಷರೇ ನನಗೆ ಪತ್ರ ಬರೆದಿದ್ದಾರೆ. ಇಂತಹ ಪರಿಸ್ಥಿತಿ ಏಕೆ ನಿರ್ಮಾಣವಾಯಿತು’ ಎಂದು   ಸಿದ್ದರಾಮಯ್ಯ ಅವರು ನಿಗಮದ ಹಿರಿಯ ಅಧಿಕಾರಿಗಳನ್ನು ಪ್ರಶ್ನಿಸಿದರು.

‘ಆಡಳಿತದಲ್ಲಿ ಕನ್ನಡ ಸಂಪೂರ್ಣ ಜಾರಿ ಆಗಬೇಕು. ಇಲ್ಲದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕ್ರಮಕ್ಕೆ ಶಿಫಾರಸು ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಪ್ರಾಧಿಕಾರದ ಸೂಚನೆಗಳು

*  ನೇಮಕಾತಿ ನಡೆಸುವಾಗ ಅರ್ಜಿ ನಮೂನೆಗಳು ಕನ್ನಡದಲ್ಲೇ ಇರಬೇಕು.

* ಕನ್ನಡದಲ್ಲೇ ಆನ್‌ಲೈನ್‌ ಮುಂಗಡ ಬುಕ್ಕಿಂಗ್‌ ಮಾಡುವುದಕ್ಕೆ ಅವಕಾಶವಿರಬೇಕು

* ಪ್ರಯಾಣಿಕರಿಗೆ ಮಾಹಿತಿ ನೀಡುವ ಮೊಬೈಲ್‌ ಆ್ಯಪ್‌ಗಳಲ್ಲೂ ಕನ್ನಡವೇ ಪ್ರಧಾನ ಭಾಷೆಯಾಗಿ ಬಳಕೆ ಆಗಬೇಕು

* ಕನ್ನಡ ಬಳಕೆ ಉತ್ತೇಜಿಸುವ  ಸೂಕ್ತಿಗಳು, ಕವಿವಾಣಿಗಳು, ಜೀವನ ಸಂದೇಶಗಳನ್ನು ಬಸ್‌ಗಳಲ್ಲಿ ಎದ್ದುಕಾಣಿಸುವಂತೆ ಪ್ರಕಟಿಸಬೇಕು

‘ಕನ್ನಡವನ್ನು ಅಪಭ್ರಂಶಗೊಳಿಸದಿರಿ’

ಬಸ್‌ಗಳಲ್ಲಿ ಸ್ಥಳನಾಮಗಳನ್ನು ತಪ್ಪಾಗಿ ಬರೆಯುವ ಕುರಿತು ಕೂಡಾ ಸಭೆಯಲ್ಲಿ ಚರ್ಚೆಯಾಯಿತು. ‘ಕಾಡುಗುಡಿಯನ್ನು  ಕಾಡುಗೋಡಿ ಎಂದೇ ಬಸ್‌ಗಳಲ್ಲಿ ಬರೆಯುತ್ತಿದ್ದೀರಿ. ಕ್ರಮೇಣ ಇದೇ ಶಬ್ದ ಚಾಲ್ತಿಗೆ ಬರುತ್ತದೆ’ ಎಂದು ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದರು.

‘ಬಸ್‌ಗಳಲ್ಲಿ ನಿಲ್ದಾಣದ ಹೆಸರನ್ನು ಘೋಷಣೆ ಮಾಡುವಾಗ ಕನ್ನಡದ ‘ದೇವಸ್ಥಾನ’ಗಳು ‘ಟೆಂಪಲ್‌’ಗಳಾಗುತ್ತಿವೆ. ‘ವೃತ್ತ’ಗಳು ‘ಸರ್ಕಲ್‌’ಗಳಾಗುತ್ತಿವೆ. ‘ಬಸವನ ಗುಡಿ’ಯನ್ನು ಬುಲ್‌ಟೆಂಪಲ್‌ ಎಂದು ಕರೆಯಲಾಗುತ್ತದೆ. ಇದು ಸಣ್ಣ ವಿಚಾರ ಅಲ್ಲ. ಕ್ರಮೇಣ ಕನ್ನಡ ಪದ ಬಳಕೆ ನಶಿಸುವುದಕ್ಕೆ ಕಾರಣವಾಗುತ್ತದೆ. ಇದಕ್ಕೆ ಅವಕಾಶ ಕಲ್ಪಿಸಬಾರದು. ಕನ್ನಡ ಉಳಿಸುವಲ್ಲಿ ಸಾರಿಗೆ ಸಂಸ್ಥೆಗಳ ಪಾತ್ರ ಮಹತ್ತರವಾದುದು’ ಎಂದು  ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್‌ ಸಲಹೆ ನೀಡಿದರು.

ಪ್ರತಿಕ್ರಿಯಿಸಿ (+)