ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಧ್ವಜದ ವಿನ್ಯಾಸ ಬದಲಿಸದಿರಿ’: ವಾಟಾಳ್‌ ನಾಗರಾಜ್‌

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಈಗಿರುವ ಹಳದಿ ಮತ್ತು ಕೆಂಪು ಬಣ್ಣಗಳ ಕನ್ನಡ ಧ್ವಜವನ್ನೇ ರಾಜ್ಯದಲ್ಲಿ ಬಳಸಬೇಕು’ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಸರ್ಕಾರ ಸಮಿತಿಯೊಂದನ್ನು ರಚಿಸಿ ರಾಜ್ಯದ ಧ್ವಜವನ್ನು ಮರುವಿನ್ಯಾಸ ಮಾಡಿ ಹೊಸ ರೂಪ ನೀಡಲು ಮುಂದಾಗಿದೆ. ಇದರಿಂದ ಜನರಲ್ಲಿ ಅನಗತ್ಯ ಗೊಂದಲ ಉಂಟಾಗುತ್ತಿದೆ’ ಎಂದು ದೂರಿದರು.

‘ಈಗ ಬಳಸುತ್ತಿರುವ ಹಳದಿ–ಕೆಂಪು ಧ್ವಜವನ್ನು1966ರಲ್ಲಿ ಮ.ರಾಮಮೂರ್ತಿ ಮತ್ತು ನಾನೂ ಸೇರಿ ರೂಪಿಸಿದ್ದೆವು. ಅದನ್ನು ರಾಜ್ಯದ ಜನ ಒಪ್ಪಿದ್ದಾರೆ. ಧ್ವಜವನ್ನು ಏಕಾಏಕಿ ಬದಲಿಸಲು ಮುಂದಾಗಿರುವುದನ್ನು ಖಂಡಿಸಬೇಕು. ಈಗಿನ ಧ್ವಜದ ಒಂದು ಗೆರೆಯನ್ನೂ ಬದಲು ಮಾಡಬಾರದು’ ಎಂದರು.

‘ಧ್ವಜದ ಹಳದಿ–ಕೆಂಪು ಬಣ್ಣಗಳು ಶುಭಸೂಚಕವಾಗಿವೆ. ಅವು ನಾಡಿನ ಏಕತೆಯನ್ನು ಬಿಂಬಿಸುತ್ತವೆ. ಧ್ವಜ ವಿನ್ಯಾಸ ಸಮಿತಿಯನ್ನು ವಿಸರ್ಜಿಸಬೇಕು. ಇಲ್ಲದಿದ್ದರೆ, ಯಾವ ಧ್ವಜ ಬೇಕೆಂಬುದನ್ನು ನಿರ್ಧರಿಸಲು ಜನಮತಗಣನೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಧ್ವಜ ವಿನ್ಯಾಸ ಸಮಿತಿಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿ, ಸಾಹಿತ್ಯ ಪರಿಷತ್‌ ಪ್ರತಿನಿಧಿಗಳು ಇದ್ದಾರೆ. ನನ್ನನ್ನು ಕಡೆಗಣಿಸಿದ್ದಾರೆ. ಕನ್ನಡದ ಬಗ್ಗೆ ಅವರಿಗೇನು ಗೊತ್ತು ಮಣ್ಣು’ ಎಂದು ಕಿಡಿಕಾರಿದರು.

‘ಈಗಿನ ಧ್ವಜದ ಮಹತ್ವ ಸಾರಲು ಜುಲೈ 29ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಬಾವುಟ ಸಮ್ಮೇಳನ ಹಮ್ಮಿಕೊಳ್ಳುತ್ತೇವೆ’ ಎಂದರು. ‘ರಾಜ್ಯದಲ್ಲಿ ಗಡಿ, ನೀರಿಗೆ ಸಂಬಂಧಿಸಿದ ನೂರಾರು ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸುವತ್ತ ಸರ್ಕಾರ ಹೆಚ್ಚು ಗಮನ ಕೊಡಬೇಕು’ ಎಂದರು.

‘ಬ್ಯಾಂಕ್‌ ವ್ಯವಹಾರ ಕನ್ನಡದಲ್ಲಿರಲಿ’
ಬೆಂಗಳೂರು: ‘ರಾಜ್ಯದಲ್ಲಿನ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು’ ಎಂದು ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಸಹಸಂಚಾಲಕ ಮೋಹನ್‌ ದಾಸರಿ ಒತ್ತಾಯಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ರಾಜ್ಯದಲ್ಲಿನ ಎಲ್ಲ ಬ್ಯಾಂಕ್‌ಗಳ ಚಲನ್‌ ಹಾಗೂ ಅರ್ಜಿಗಳನ್ನು ಕನ್ನಡದಲ್ಲಿ ಮುದ್ರಿಸಬೇಕು. ಎಟಿಎಂಗಳಲ್ಲೂ ಕನ್ನಡ ಭಾಷೆ ಬಳಸುವ ತಂತ್ರಾಂಶ ಅಳವಡಿಸಬೇಕು. ಬ್ಯಾಂಕ್‌ ನೌಕರರಿಗೆ ಸ್ಥಳೀಯ ಭಾಷೆ ಕಲಿಸಬೇಕು. ಗ್ರಾಮೀಣ ಪ್ರದೇಶದ ಬ್ಯಾಂಕಿಂಗ್‌ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT