‘ಪಾಕಿಸ್ತಾನ ಸೇನೆಗೆ ಶಕ್ತಿ, ಉಗ್ರರಿಗೆ ಉತ್ತೇಜನ’

7

‘ಪಾಕಿಸ್ತಾನ ಸೇನೆಗೆ ಶಕ್ತಿ, ಉಗ್ರರಿಗೆ ಉತ್ತೇಜನ’

Published:
Updated:

ನವದೆಹಲಿ: ನೆರೆಯ ಪಾಕಿಸ್ತಾನದಲ್ಲಿ ಶುಕ್ರವಾರ ನಡೆದ ರಾಜಕೀಯ ಬೆಳವಣಿಗೆ ಭಾರತದೊಂದಿಗಿನ ಬಾಂಧವ್ಯದ ಮೇಲೆ  ಯಾವ ಪರಿಣಾಮ ಬೀರಬಹುದು ಎಂಬ ಜಿಜ್ಞಾಸೆ ಆರಂಭವಾಗಿದೆ.   ಪ್ರಧಾನಿ ನವಾಜ್‌ ಷರೀಫ್‌ ಪದಚ್ಯುತಿ ನಂತರ ಪಾಕಿಸ್ತಾನದ ಸೇನೆ ಮತ್ತು ಬೇಹುಗಾರಿಕೆ ಸಂಸ್ಥೆಯಾದ ಐಎಸ್‌ಐ ಇನ್ನೂ ಹೆಚ್ಚಿನ ಸ್ವಾತಂತ್ರ್ಯ ಪಡೆಯಲಿವೆ ಎಂದು ವಿಶ್ಲೇಷಿಸಲಾಗಿದೆ.

ಭಾರತದೊಂದಿಗಿನ ಗಡಿ ನಿಯಂತ್ರಣ ರೇಖೆಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘಿಸಲು ಮತ್ತಷ್ಟು ಹೆಚ್ಚಿನ ಕುಮ್ಮಕ್ಕು ಸಿಗಬಹುದು ಎನ್ನಲಾಗಿದೆ.  ಭಾರತದ ವಿರುದ್ಧ ಪರೋಕ್ಷ ಯುದ್ಧ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಉಭಯ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧವನ್ನು ಹತ್ತಿರದಿಂದ ಬಲ್ಲ ತಜ್ಞರ ಅಭಿಮತವಾಗಿದೆ.

ಲಷ್ಕರ್‌ –ಎ ತಯಬಾ (ಎಲ್‌ಇಟಿ), ಹಿಜ್ಬುಲ್‌ ಮುಜಾಹಿದೀನ್‌ ಮತ್ತು ಜೈಷ್‌ ಎ ಮೊಹಮ್ಮದ್‌ ನಂತಹ ಉಗ್ರ ಸಂಘಟನೆಗಳನ್ನು  ಭಾರತದ ಮೇಲೆ ಛೂ ಬಿಡುವ ಪಾಕಿಸ್ತಾನ ಸೇನೆ ಮತ್ತು ಐಎಸ್‌ಐ ಕುತಂತ್ರ ಇನ್ನೂ ಹೆಚ್ಚಾಗಬಹುದು ಎಂದು ಮೂಲಗಳು ಶಂಕಿಸಿವೆ.  ಪಾಕಿಸ್ತಾನದ ಎಲ್ಲ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತ ಪರಿಣಾಮಗಳ ವಿಶ್ಲೇಷಣೆ ನಡೆದಿದೆ.

ಒಂದು ವೇಳೆ ನವಾಜ್‌ ಷರೀಫ್‌ ಅವರ ಸಹೋದರ ಷಾಬಾಜ್‌ ಷರೀಫ್‌ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರೂ ಪರಿಸ್ಥಿತಿ  ಭಿನ್ನವಾಗಿರುವುದಿಲ್ಲ. ಷಾಬಾಜ್‌ ಅವರು ಪಾಕಿಸ್ತಾನ ಸೇನೆ ಮತ್ತು ಐಎಸ್‌ಐ ಕೈಗೊಂಬೆಯಂತೆ ವರ್ತಿಸುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಭಾರತ–ಪಾಕಿಸ್ತಾನ ರಾಜತಾಂತ್ರಿಕ ಸಂಬಂಧ ಸುಧಾರಣೆಗೆ ಒತ್ತು ನೀಡುವುದಾಗಿ ಹೇಳಿದ್ದ  ನವಾಜ್‌ ಷರೀಫ್‌, ಅಧಿಕಾರ ಅವಧಿಯಲ್ಲಿ ಉಭಯ ರಾಷ್ಟ್ರಗಳ ಸಂಬಂಧದಲ್ಲಿ ಹೇಳಿಕೊಳ್ಳುವಂತಹ ಸುಧಾರಣೆ ಕಾಣಲಿಲ್ಲ.  ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ, ಭಾರತದ ವಾಯುನೆಲೆ ಮತ್ತು ಸೈನಿಕರ ಮೇಲೆ ದಾಳಿ, ಕಾಶ್ಮೀರದಲ್ಲಿ   ಹಿಂಸಾಚಾರ  ಕೊನೆಯಾಗಲೇ ಇಲ್ಲ!

ಮುಂದಿನ ಪ್ರಧಾನಿ ಯಾರು?

ಪ್ರಧಾನಿ ಹುದ್ದೆಯಿಂದ ಉಚ್ಚಾಟಿತರಾದರೂ ಪಿಎಂಎಲ್‌–ಎನ್‌ ಪಕ್ಷದ ಮುಖ್ಯಸ್ಥರಾಗಿ ನವಾಜ್‌ ಷರೀಫ್‌ ಅವರೇ ಮುಂದುವರಿಯಲಿದ್ದಾರೆ. ಹಾಗಾಗಿ ಮುಂದಿನ ಪ್ರಧಾನಿ ಯಾರಾಗಬೇಕು ಎಂಬ ನಿರ್ಧಾರವೂ ಅವರದ್ದೇ ಆಗಿರುತ್ತದೆ. ಜತೆಗೆ ಪ್ರಧಾನಿ ಆಗುವವರು ಷರೀಫ್‌ ಅವರ ಕೈಗೊಂಬೆಯಾಗಿರುವ ಸಾಧ್ಯತೆಯೇ ಹೆಚ್ಚು.

1) ಮಗಳು ಮರಿಯಮ್‌ ನವಾಜ್‌ ಅವರು ಷರೀಫ್‌ ರಾಜಕೀಯ ಉತ್ತರಾಧಿಕಾರಿ ಎಂದೇ ಬಿಂಬಿತವಾಗುತ್ತಿದ್ದಾರೆ. ಆದರೆ ಅವರು ಸಂಸತ್ತಿಗೆ ಆಯ್ಕೆ ಆಗಿಲ್ಲ. ಹಾಗಾಗಿ ಅವರು ಪ್ರಧಾನಿ ಹುದ್ದೆಗೇರಲು ಸಾಧ್ಯವಿಲ್ಲ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಮರಿಯಮ್‌ ಅವರ ಹೆಸರೂ ಇದೆ.

2)ನವಾಜ್‌ ಷರೀಫ್‌ ಅವರ ತಮ್ಮ ಪಂಜಾಬ್‌ ಪ್ರಾಂತ್ಯದ ಮುಖ್ಯಮಂತ್ರಿಯಾಗಿರುವ ಷಾಬಾಜ್‌ ಷರೀಫ್‌ ಅವರ  ಹೆಸರೂ ಕೇಳಿಬರುತ್ತಿದೆ. ಆದರೆ ಅವರೂ ಸಂಸತ್ತಿನ ಸದಸ್ಯರಲ್ಲದಿರುವುದರಿಂದ ಪ್ರಧಾನಿಯಾಗಲು ಅವಕಾಶ ಇಲ್ಲ.

3)ಒಳಾಡಳಿತ ಸಚಿವ ಚೌಧರಿ ನಿಸಾರ್‌ ಅಲಿ ಖಾನ್‌ ಅವರು ಪಿಎಂಎಲ್‌–ಎನ್‌ ಪಕ್ಷದ ಪ್ರಬಲ ಮುಖಂಡ. ಇತ್ತೀಚಿನ ದಿನಗಳಲ್ಲಿ ಚೌಧರಿ ಮತ್ತು ಷರೀಫ್‌ ನಡುವಣ ಸಂಬಂಧ ಸ್ವಲ್ಪ ಹದಗೆಟ್ಟಿದೆ. ಪಕ್ಷದ ನೇತೃತ್ವವನ್ನು ಷರೀಫ್‌ ಅವರಿಂದ ಕಸಿದುಕೊಳ್ಳಲು ಚೌಧರಿ ಪ್ರಯತ್ನಿಸುತ್ತಿದ್ದಾರೆ ಎಂಬುದು ಇದಕ್ಕೆ ಕಾರಣ.

4)ಯೋಜನೆ ಮತ್ತು ಅಭಿವೃದ್ಧಿ ಖಾತೆ ಸಚಿವ ಅಹ್ಸಾನ್‌ ಇಕ್ಬಾಲ್‌ ಅವರು ಮುಂದಿನ ಪ್ರಧಾನಿಯಾಗುವ ಸಾಧ್ಯತೆಯೂ ಇದೆ. ಪ್ರಬಲ ರಾಜಕೀಯ ಕುಟುಂಬದಿಂದ ಬಂದಿರುವ ಅವರು ಷರೀಫ್‌ ಮತ್ತು ಅವರ ಪಕ್ಷದ ಕಾರ್ಯತಂತ್ರ ರೂಪಿಸುವವರು.

5)ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಅವರು ಷರೀಫ್‌ ಅವರ ನಿಷ್ಠಾವಂತ. ಪಾಕಿಸ್ತಾನದ ಸೇನೆಯ ಟೀಕಾಕಾರರಲ್ಲಿ ಇವರದ್ದು ಪ್ರಮುಖ ಹೆಸರು.

6) ನ್ಯಾಷನಲ್‌ ಅಸೆಂಬ್ಲಿಯ ಸ್ಪೀಕರ್‌ ಆಗಿರುವ ಸರ್ದಾರ್‌ ಅಯಾಜ್‌ ಸಾದಿಕ್‌  ಅವರು ಪ್ರಧಾನಿ ಹುದ್ದೆಗೆ ಕೇಳಿ ಬರುತ್ತಿರುವ ಇನ್ನೊಂದು ಪ್ರಬಲ ಹೆಸರು. ಇವರು ಷರೀಫ್‌ ಕುಟುಂಬಕ್ಕೆ ಆಪ್ತ. 2013ರ ಚುನಾವಣೆಯಲ್ಲಿ ಷರೀಫ್‌ ಅವರ ಪ್ರಮುಖ ಪ್ರತಿಸ್ಪರ್ಧಿ ಇಮ್ರಾನ್‌ ಖಾನ್‌ ಅವರನ್ನು ಸೋಲಿಸಿದ್ದರು.

ಒಬ್ಬ ಪ್ರಧಾನಿಯೂ ಐದು ವರ್ಷ ಪೂರೈಸಲಿಲ್ಲ

* ಭಾರತದಿಂದ ಬೇರೆಯಾಗಿ ನೂತನ ರಾಷ್ಟ್ರವಾದ ಪಾಕಿಸ್ತಾನದ ಮೊದಲ ಪ್ರಧಾನಿಯಾಗಿ ಲಿಯಾಖತ್ ಅಲಿ ಖಾನ್ ಆಯ್ಕೆ. ಅಧಿಕಾರ ಸ್ವೀಕರಿಸಿದ ನಂತರದ ನಾಲ್ಕು ವರ್ಷ ಎರಡನೇ ತಿಂಗಳು, 1951ರ ಅಕ್ಟೋಬರ್ 16ರಂದು ಅಲಿ ಖಾನ್ ಅವರ ಹತ್ಯೆ

* 1953ರಲ್ಲಿ ಎರಡನೇ ಪ್ರಧಾನಿಯಾಗಿ ಖ್ವಾಜಾ ನಜೀಮುದ್ದೀನ್ ಆಯ್ಕೆ. ಗವರ್ನರ್ ಜನರಲ್ ಮಲಿಕ್ ಗುಲಾಂ ಮುಹಮ್ಮದ್ ಅವರು, ನಜೀಮುದ್ದೀನ್ ಅವರನ್ನು ಅದೇ ವರ್ಷ ಪದಚ್ಯುತಗೊಳಿಸಿದರು

* ನಜೀಮುದ್ದೀನ್ ಜಾಗಕ್ಕೆ ಮುಹಮ್ಮದ್ ಅಲಿ ಬೋಗ್ರಾ ಆಯ್ಕೆ. ಸಾರ್ವತ್ರಿಕ ಚುನಾವಣೆ ಕಾರಣಕ್ಕೆ 1954ರಲ್ಲಿ   ಪ್ರಧಾನಿ ಹುದ್ದೆಯಿಂದ ಇಳಿದ ಬೋಗ್ರಾ.  ಸಾರ್ವತ್ರಿಕ ಚುನಾವಣೆಯಲ್ಲಿ ಮುಸ್ಲಿಂ ಲೀಗ್‌ಗೆ ಭಾರಿ ಸೋಲು. ಅಲ್ಪಮತದಲ್ಲೇ ಸರ್ಕಾರ ರಚಿಸಿದ ಬೋಗ್ರಾ. 1955ರ ಆಗಸ್ಟ್‌ನಲ್ಲಿ ಬೋಗ್ರಾರನ್ನು ಪದಚ್ಯುತಗೊಳಿಸಿದ ಗರ್ವನರ್ ಜನರಲ್ ಇಸ್ಕಂದರ್ ಮಿರ್ಜಾ. ಮಿರ್ಜಾ ಪಾಕಿಸ್ತಾನದ ಕೊನೆಯ ಗವರ್ನರ್ ಜನರಲ್ ಮತ್ತು ಮೊದಲ ಅಧ್ಯಕ್ಷ.

* 1955ರಲ್ಲಿ ನೂತನ ಪ್ರಧಾನಿಯಾಗಿ ಚೌಧರಿ ಮುಹಮ್ಮದ್ ಅಲಿ ಆಯ್ಕೆ.  ಅಧ್ಯಕ್ಷ ಮಿರ್ಜಾ ಜತೆಗಿನ ಭಿನ್ನಾಭಿಪ್ರಾಯಗಳ ಕಾರಣ ಅಲಿ ಸಹ 1956ರಲ್ಲಿ ರಾಜೀನಾಮೆ ನೀಡಿದರು.

*1956ರ ಸೆಪ್ಟೆಂಬರ್‌ನಲ್ಲಿ ಹುಸೇನ್ ಶಹೀದ್ ಸುಹ್ರಾವಾರ್ದಿ ಪ್ರಧಾನಿಯಾಗಿ ಆಯ್ಕೆ. ಶಹೀದ್ ಅವರನ್ನೂ ಪದಚ್ಯುತಗೊಳಿಸಿದ ಅಧ್ಯಕ್ಷ ಮಿರ್ಜಾ

* 1957ರ ಅಕ್ಟೋಬರ್‌ನಲ್ಲಿ ಮುಸ್ಲಿಂ ಲೀಗ್‌ನ ಇಬ್ರಾಹಿಂ ಇಸ್ಮಾಯಿಲ್ ಚುಂದ್ರಿಗರ್ ಪ್ರಧಾನಿಯಾಗಿ ಆಯ್ಕೆ. ಪಕ್ಷದೊಳಗಿನ ಭಿನ್ನಮತದ ಕಾರಣ 1957ರ ಡಿಸೆಂಬರ್‌ನಲ್ಲೇ ರಾಜೀನಾಮೆ

* ತಮ್ಮದೇ ರಿಪಬ್ಲಿಕನ್ ಪಕ್ಷದ ಮುಖ್ಯಸ್ಥ ಫಿರೋಜ್ ಖಾನ್ ನೂನ್‌ರನ್ನು  ಪ್ರಧಾನಿಯಾಗಿ ನೇಮಕ ಮಾಡಿದ ಆದ್ಯಕ್ಷ  ಮಿರ್ಜಾ. 1958ರಲ್ಲಿ ಅಯೂಬ್ ಖಾನ್ ನೇತೃತ್ವದಲ್ಲಿ ಸೇನಾ ಕ್ರಾಂತಿ. ಪ್ರಧಾನಿಯಾಗಿ ಐದು ದಿನಗಳ ಅಧಿಕಾರ ನಡೆಸಿದ ಅಯೂಬ್ ಖಾನ್.

ಅಧ್ಯಕ್ಷ ಇಸ್ಕಂದರ್ ಮಿರ್ಜಾ ಪದಚ್ಯುತಿ. ಸಂವಿಧಾನ ರದ್ದು. ಹೊಸ ಸಂವಿಧಾನ ಅಂಗೀಕಾರ. ಪ್ರಧಾನಿ ಹುದ್ದೆಯೇ ರದ್ದು.

*1958ರಿಂದ 1973ರವರೆಗೆ ಸೇನಾ ಆಡಳಿತ. 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಪಾಕಿಸ್ತಾನ ಸೋತ ಕಾರಣ, ಅಧ್ಯಕ್ಷ ಯಾಹ್ಯಾ ಖಾನ್ ರಾಜೀನಾಮೆ. 1971ರಲ್ಲಿ ಅಧ್ಯಕ್ಷರಾಗಿ ಜುಲ್ಫೀಕರ್ ಅಲಿ ಭುಟ್ಟೊ ಆಯ್ಕೆ. 1973ರಲ್ಲಿ ನೂತನ ಸಂವಿಧಾನದ ಅಂಗೀಕಾರ, ಜಾರಿ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಪ್ರಧಾನಿಯಾದ ಭುಟ್ಟೊ

* 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಪ್ರಧಾನಿಯಾಗಿ ಭುಟ್ಟೊ ಆಯ್ಕೆ. ಸೇನಾ ಮುಖ್ಯಸ್ಥ ಜನರಲ್ ಮೊಹಮ್ಮದ್ ಜಿಯಾ ಉಲ್ ಹಕ್ ನೇತೃತ್ವದಲ್ಲಿ 1979ರಲ್ಲಿ ಸೇನಾ ಕ್ರಾಂತಿ. ಭುಟ್ಟೊಗೆ ಗಲ್ಲು ಶಿಕ್ಷೆ. ಅಧ್ಯಕ್ಷರಾಗಿ ಹಕ್ ಆಯ್ಕೆ.

* 1985ರಲ್ಲಿ ಪ್ರಧಾನಿಯಾಗಿ ಮುಹಮ್ಮದ್ ಖಾನ್ ಜುನೆಜೊ ಆಯ್ಕೆ. 1988ರಲ್ಲಿ ಸ್ಫೋಟ ಪ್ರಕರಣ ಒಂದರಲ್ಲಿ ಸೇನೆ ವಿರುದ್ಧ ತನಿಖೆಗೆ ಆದೇಶಿಸಿದ ಮರುದಿನವೇ ಅಧಕ್ಷ ಹಕ್, ಜುನೆಜೊ ಅವರನ್ನು ಪದಚ್ಯುತಗೊಳಿಸಿದರು.

* 1988ರ ಡಿಸೆಂಬರ್‌ನಲ್ಲಿ ಪಾಕಿಸ್ತಾನದ ಮೊದಲ ಮಹಿಳಾ ಪ್ರಧಾನಿಯಾಗಿ ಬೆನಜೀರ್ ಭುಟ್ಟೊ ಆಯ್ಕೆ. 20 ತಿಂಗಳ ಆಡಳಿತ. 1990ರಲ್ಲಿ ಸರ್ಕಾರವನ್ನು ರದ್ದುಪಡಿಸಿದ ಪಾಕಿಸ್ತಾನದ ಅಧ್ಯಕ್ಷ

*1990–1993 ನವಾಜ್ ಷರಿಫ್ ಪ್ರಧಾನಿ. 1993ರಿಂದ 1999ರ ನಡುವೆ ಆರು ಜನ ಪ್ರಧಾನಿಗಳು. ಅದರಲ್ಲಿ ಷರೀಫ್ ಒಮ್ಮೆ, ಬೆನಜೀರ್ ಭುಟ್ಟೊ ಒಮ್ಮೆ ಪ್ರಧಾನಿಯಾಗಿದ್ದರು.

*2002ರಲ್ಲಿ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಜಫರ್ಉಲ್ಲಾ ಖಾನ್ ಜಮಾಲಿ ಅವರು, ಅಧ್ಯಕ್ಷ ಪರ್ವೇಜ್ ಮುಷರಫ್  ಜತೆಗಿನ ಭಿನ್ನಾಭಿಪ್ರಾಯದ ಕಾರಣ 2004ರ ಜೂನ್‌ನಲ್ಲಿ ರಾಜೀನಾಮೆ

* 2004ರ ಜೂನ್‌ 30ರಿಂದ ಆಗಸ್ಟ್ 20ರವರೆಗೆ ಪ್ರಧಾನಿಯಾದ ಚೌಧರಿ ಶುಜಾತ್ ಹುಸೇನ್. ಆಗಸ್ಟ್ 20ರಂದು ಮುಷರಫ್ ಆಪ್ತ ಶೌಕತ್ ಅಜೀಜ್ ಪ್ರಧಾನಿಯಾಗಿ ಆಯ್ಕೆ. ಮೂರು ವರ್ಷ ಮೂರು ತಿಂಗಳ ಆಡಳಿತ. ಸಂಸತ್ತಿನ ಅವಧಿ ಮುಗಿಸಿದ ಮೊದಲ ಪ್ರಧಾನಿ

* 2008ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು, ಪ್ರಧಾನಿಯಾಗಿ ಯೂಸುಫ್ ರಜಾ ಗಿಲಾನಿ ಆಯ್ಕೆ. ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮೇಲಿನ ಭ್ರಷ್ಟಾಚಾರ ಆರೋಪ ಸಂಬಂಧ ವಿವಿರ ನೀಡುವಂತೆ ಸ್ವಿಟ್ಜರ್ಲೆಂಡ್ ಸರ್ಕಾರಕ್ಕೆ ಪತ್ರ ಬರೆಯಲಿಲ್ಲ. ನ್ಯಾಯಾಂಗ ನಿಂದನೆ ಕಾರಣ 2013ರ ಜೂನ್‌ನಲ್ಲಿ ಗಿಲಾನಿ ಅವರನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿತು. ಆದರೆ, ಗಿಲಾನಿ ಅತಿ ಹೆಚ್ಚು ಕಾಲ ಆಡಳಿತ ನಡೆಸಿದ (ನಾಲ್ಕು ವರ್ಷ ನಾಲ್ಕು ತಿಂಗಳು) ಪಾಕಿಸ್ತಾನದ ಪ್ರಧಾನಿ ಎನಿಸಿದ್ದಾರೆ

* 2012ರ  ಜೂನ್‌ 22ರಿಂದ 2013ರ ಮಾರ್ಚ್‌ 25ರವರೆಗೆ ರಜಾ ಪರ್ವೇಜ್ ಅಶ್ರಫ್ ಆಡಳಿತ. 2013 ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು, ನವಾಜ್ ಷರೀಫ್ ಪ್ರಧಾನಿಯಾಗಿ ಆಯ್ಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry