ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ –ಭಾರತ ಸಂಬಂಧ ಮತ್ತಷ್ಟು ವೃದ್ಧಿಸಲು ವಿಪುಲ ಅವಕಾಶ

ವಿದೇಶಾಂಗ ಕಾರ್ಯದರ್ಶಿ ಡಾ.ಎಸ್‌.ಜೈಶಂಕರ್‌ ಅಭಿಪ್ರಾಯ
Last Updated 4 ಆಗಸ್ಟ್ 2017, 19:56 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮಲ್ಲಿರುವ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ತಂತ್ರಜ್ಞಾನ ಸಾಮಾರ್ಥ್ಯವನ್ನು ಸಮರ್ಥವಾಗಿ ಬಳಸಿಕೊಂಡರೆ ಅಮೆರಿಕದ ಜತೆಗಿನ ಸಂಬಂಧವನ್ನು ಇನ್ನಷ್ಟು ವೃದ್ಧಿಸಿಕೊಳ್ಳಲು ಅವಕಾಶವಿದೆ’ ಎಂದು ವಿದೇಶಾಂಗ ಕಾರ್ಯದರ್ಶಿ ಡಾ.ಎಸ್‌.ಜೈಶಂಕರ್‌ ಅಭಿಪ್ರಾಯಪಟ್ಟರು.

ನಗರದಲ್ಲಿ ಶುಕ್ರವಾರ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ (ಎನ್‌ಐಎಎಸ್‌) ಕೆ.ಸುಬ್ರಹ್ಮಣ್ಯಂ ಸ್ಮರಣಾರ್ಥ ಆಯೋಜಿಸಿದ್ದ ‘ಅನಿಶ್ಚಿತ ವಿಶ್ವದಲ್ಲಿ ದೇಶ ಮುನ್ನಡೆಸುವ ಪರಿ’ ವಿಷಯ ಕುರಿತು ಅವರು ಮಾತನಾಡಿದರು.

‘ಜಾರ್ಜ್‌ ಡಬ್ಲ್ಯು ಬುಷ್‌ ಅವಧಿಯಲ್ಲೇ ಎಚ್‌1ಬಿ ವಿಸಾ ಸಂಖ್ಯೆ ಕಡಿತವಾಗಿತ್ತು. ಬರಾಕ್‌ ಒಬಾಮ ಅವಧಿಯಲ್ಲೂ ಎಚ್‌1ಬಿ ವಿಸಾ ಶುಲ್ಕ ಹೆಚ್ಚಳವಾಗಿತ್ತು. ಆದರೆ, ಆಗ ಈ ವಿಷಯ ಹೆಚ್ಚು ಚರ್ಚೆಗೆ ಬರಲಿಲ್ಲ. ಟ್ರಂಪ್‌ ಅವಧಿಯಲ್ಲಿ ಅಮೆರಿಕ ಸ್ಥಳೀಯರ ಉದ್ಯೋಗ ರಕ್ಷಣೆಗೆ ಎಚ್‌1ಬಿ ವಿಸಾ ವಿತರಣೆಯಲ್ಲಿ ಬಿಗಿ ಕ್ರಮ ಅನುಸರಿಸಿರುವುದು ಹೆಚ್ಚು ಚರ್ಚಿತವಾಗುತ್ತಿದೆ. ಅಮೆರಿಕಕ್ಕೆ ಮಾನವ ಸಂಪನ್ಮೂಲದ ಅಗತ್ಯವಿದ್ದು, ಬೇರೆ ಬೇರೆ ಕ್ಷೇತ್ರಗಳಲ್ಲಿನ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ಡಿಜಿಟಲ್‌ ಇಂಡಿಯಾ ಅಭಿವೃದ್ಧಿಗೆ ಅಮೆರಿಕದ ಪಾಲುದಾರಿಕೆ ಪಡೆಯಲು ನಾವು ಗಮನ ಹರಿಸಬೇಕಿದೆ. ನಮ್ಮ ದೇಶದ ಆರ್ಥಿಕ ಬೆಳವಣಿಗೆಯಿಂದ ಅಮೆರಿಕಕ್ಕೂ ಲಾಭವಿದೆ’ ಎಂದರು.

‘ಚಬಹಾರ್‌ ಬಂದರು ನಿರ್ಮಾಣ ಯೋಜನೆಯ ದ್ವಿಪಕ್ಷೀಯ ಒಪ್ಪಂದದಿಂದ ಇರಾನ್‌ ಹೊರ ನಡೆದಿಲ್ಲ. ಯೋಜನೆಗಾಗಿ ಬೇರೆ ರಾಷ್ಟ್ರಗಳತ್ತ ಮುಖ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್‌ ಪ್ರವಾಸದಿಂದಾಗಿ ಇರಾನ್‌ ಮತ್ತು ಭಾರತ ನಡುವಿನ ಸಂಬಂಧದಲ್ಲೂ ಯಾವುದೇ ವ್ಯತ್ಯಾಸ ಆಗಿಲ್ಲ’ ಎಂದು ಅವರು ಸಭಿಕರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಭಾರತದ ಮಹತ್ವಾಕಾಂಕ್ಷೆ ಮಧ್ಯ ಏಷ್ಯಾ ರಾಷ್ಟ್ರಗಳೊಂದಿಗೆ ಸಂಪರ್ಕ ಬೆಸೆಯುವ ಚಬಹಾರ್‌ ಬಂದರು ನಿರ್ಮಾಣಕ್ಕೆ ಮಾತ್ರ ಸೀಮಿತವಾಗಿಲ್ಲ. ಇದರಲ್ಲಿ ನಾವು ಬಹಳಷ್ಟು ಮುಂದೆ ಸಾಗಿದ್ದು, ರಷ್ಯಾವರೆಗೂ ಸರಕು ಸಾಗಣೆ ಕಾರಿಡಾರ್‌ ನಿರ್ಮಾಣ ಮಾಡಿ, ಪರೀಕ್ಷಾರ್ಥ ಪ್ರಯೋಗದಲ್ಲೂ ಯಶಸ್ವಿಯಾಗಿದ್ದೇವೆ’ ಎಂದರು.

ಅಪಘಾನಿಸ್ಥಾನದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಭಾರತ ಹೂಡಿಕೆ ಮಾಡಿದ ಹಣ ಸಾರ್ಥಕ ರೀತಿಯಲ್ಲಿ ವಿನಿಯೋಗವಾಗಿದೆ. ಎರಡೂ ರಾಷ್ಟ್ರಗಳ ನಡುವೆ ಸ್ನೇಹ ವೃದ್ಧಿಸುವುದಷ್ಟೇ ಅಲ್ಲ, ವಿಶ್ವಮಟ್ಟದಲ್ಲಿ ದೇಶದ ವರ್ಚಸ್ಸು ಹೆಚ್ಚಿದೆ ಎಂದರು.

ಚೀನಾ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಈಶಾನ್ಯ ರಾಜ್ಯಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯವಾಗಿಲ್ಲ. ದೇಶದ ಆಂತರಿಕ ರಕ್ಷಣೆ ಮತ್ತು ಗಡಿಭದ್ರತೆಗೆ ಅಗತ್ಯವಿರುವಷ್ಟು ಮೂಲಸೌಕರ್ಯ ಅಭಿವೃದ್ಧಿಯಾಗಿದೆ ಎಂದು ಸಂವಾದದಲ್ಲಿ ಎದುರಾದ ಪ್ರಶ್ನೆಗೆ ಅವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT