ವರಾಟ್ಟಾರ್ ಶಾಪಮೋಕ್ಷಕ್ಕೆ ‘ಕ್ಷಾಮದೇವ’ನೇ ಪ್ರೇರಣೆ

7

ವರಾಟ್ಟಾರ್ ಶಾಪಮೋಕ್ಷಕ್ಕೆ ‘ಕ್ಷಾಮದೇವ’ನೇ ಪ್ರೇರಣೆ

Published:
Updated:
ವರಾಟ್ಟಾರ್ ಶಾಪಮೋಕ್ಷಕ್ಕೆ ‘ಕ್ಷಾಮದೇವ’ನೇ ಪ್ರೇರಣೆ

‘ಮೃತ ನದಿ’ ಎಂದೇ ಕರೆಸಿಕೊಳ್ಳುತ್ತಿದ್ದ ಕೇರಳದ ವರಾಟ್ಟಾರ್ ಈಗ ಮತ್ತೆ ಹರಿಯತೊಡಗಿದ್ದಾಳೆ. ಒಂದೊಮ್ಮೆ ಕಬ್ಬಿನ ಬೆಳೆಗೆ ಹೆಸರಾಗಿದ್ದ ದಕ್ಷಿಣ ಕೇರಳದ ಊರಿದು. ಕಬ್ಬಿನೂರಿನಿಂದ ಈ ಸಿಹಿಸುದ್ದಿ ಹೊರಹೊಮ್ಮಲು ಕಾರಣ ಊರ ಜನ ಒಗ್ಗೂಡಿ ಕೆಲಸಕ್ಕಿಳಿದುದು.

ಪಾತ್ರದ ಅವನತಿಯಿಂದ ವರಾಟ್ಟಾರ್ ಜೀವನದಿಯ ಸ್ಥಾನ ಕಳೆದುಕೊಂಡು ದಶಕಗಳೇ ಆಗಿವೆ. ಆದರೆ ಈಗ ಜನ ಸದ್ದಿಲ್ಲದೆ ಎದ್ದು ನಿಂತು ನದಿಪ್ರೀತಿ ತೋರಲು ನಿಜವಾದ ಪ್ರೇರಕ – ಕ್ಷಾಮದೇವ. ಚರಿತ್ರೆಯಲ್ಲೇ ಮೊದಲ ಬಾರಿಗೆ ಹತ್ತು ಕಿಲೋಮೀಟರ್ ಉದ್ದದ ನದಿಯ ಇಕ್ಕೆಲದ ನೂರಾರು ಬಾವಿಗಳು ಬತ್ತಿದ್ದುವು. ತೀರವಾಸಿಗಳಿಗೆ ಈ ಬೇಸಿಗೆ ಆಘಾತ ಕೊಟ್ಟಿತ್ತು.

ಪುಣ್ಯನದಿಯೆಂದೇ ಹೆಸರಾದ ಪಂಪಾ ನದಿಯ ಶಾಖೆಯಿದು. ದಕ್ಷಿಣ ಕೇರಳದ ಪತ್ತನಾಂತಿಟ್ಟ ಮತ್ತು ಆಲೆಪ್ಪಿ ಜಿಲ್ಲೆಗಳಲ್ಲಿ ಹರಿಯುತ್ತದೆ. ಮೂರು ಪಂಚಾಯಿತಿಗಳನ್ನು ದಾಟಿ ಹೋಗುತ್ತದೆ. ಸರಾಸರಿ ಅತಿಕ್ರಮಣದಿಂದ ಕೆಲವೆಡೆ ಒಂದು ಮೀಟರಿನ ಕಣಿ ಆಗಿತ್ತು!

ನಾಕು ದಶಕದ ಹಿಂದೆ ಈ ನದಿಯ ಇಕ್ಕೆಲಗಳಲ್ಲೂ ಕಬ್ಬು ಬೆಳೆಯುತ್ತಿದ್ದರು. ಕಟಾವಿನ ನಂತರ ಕಬ್ಬನ್ನು ದೊಡ್ಡ ದೋಣಿಗಳಲ್ಲಿ ನದಿ ಮೂಲಕ ಸಾಗಿಸುತ್ತಿದ್ದರು. ತಿರುವಲ್ಲಾದಲ್ಲಿ ಇದ­ಕ್ಕಾಗಿಯೇ ಒಂದು ಸಕ್ಕರೆ ಕಾರ್ಖಾನೆ ಇತ್ತು. ನದಿಯಲ್ಲಿ ಹರಿದುಬಂದ ಮಣ್ಣು ಅಲ್ಲಲ್ಲಿ ತಂಗಿ ನದಿಪಾತ್ರದ ಆಳಗಲಗಳು ಕುಗ್ಗಿದುವು. ಹೊಲ ಅಡ್ಡಕ್ಕೆ, ನದಿಪಾತ್ರಕ್ಕೆ ವಿಸ್ತರಿಸಿತು.

ನದಿಗೆ ಅಡ್ಡಲಾಗಿ ಎರಡು ಸೇತುವೆ ಮತ್ತು ನಾಕು ಮೋರಿಗಳು. ಜಲದಾರಿಯ ಅಗ್ಗದ ಸಾಗಾಟ ಎಂದೋ ನಿಂತುಹೋಯಿತು. ವಾಹನ ಮೂಲಕ ಸಾಗಾಟದೆ ವೆಚ್ಚ ಹಲವು ಪಟ್ಟು ಹೆಚ್ಚು. ನಿಧಾನವಾಗಿ ಕಬ್ಬಿನ ಕೃಷಿಯೂ ಕಾಲು ಕಿತ್ತಿತು; ಅಷ್ಟರಲ್ಲಿ ನದಿ ಅರೆಜೀವವಾಗಿತ್ತು. ಮತ್ತೆ ಇಕ್ಕಡೆಯಿಂದ ಅತಿಕ್ರಮಣ  ಜೋರಾಗಿ ನಡೆಯಿತು.

ವರಟ್ಟಾರ್ ನದಿಯೂ ಸೇರಿದಂತೆ ಈ ಭಾಗದ ನದಿಗಳ ಪುನರುಜ್ಜೀವನದ ಬಗ್ಗೆ ಪಂಪಾ ಸಂರಕ್ಷಣಾ ಸಮಿತಿ ದನಿಯೆತ್ತತೊಡಗಿ ವರ್ಷಗಳಾಗಿವೆ. “ನಾವು ವರಾಟ್ಟಾರ್‍ ನದಿಯ ನೀರಿನ ಹಲವು ಮಾದರಿಗಳ ಪರೀಕ್ಷೆ ಮಾಡಿಸಿದ್ದೆವು, ಅದರಲ್ಲಿ ಆಮ್ಲಜನಕ ಕಮ್ಮಿ, ಕಬ್ಬಿಣ, ಕೋಲಿಫಾರ್ಮ್ ಬ್ಯಾಕ್ಟೀರಿಯಾ ಹೆಚ್ಚಿತ್ತು. ಯಾವುದೂ ಕುಡಿಯಲು ಯೋಗ್ಯ ಆಗಿರಲಿಲ್ಲ” , ನೆನೆಯುತ್ತಾರೆ ಸಮಿತಿಯ ಕಾರ್ಯದರ್ಶಿ ಎನ್.ಕೆ.ಸುಕುಮಾರನ್.

“ಬಾವಿಗಳು ಬತ್ತಿ ಕುಡಿಯುವ ನೀರಿಗೂ ಕುತ್ತು ಬಂದಾಗ ನಮ್ಮ ಜನರಿಗೆ ಇದಕ್ಕೂ ನದಿಗೂ ಸಂಬಂಧವಿದೆ; ನದಿಯನ್ನು ಪುನರುಜ್ಜೀವನ ಮಾಡುವುದು ಅತ್ಯಗತ್ಯ ಎಂಬ ಭಾವನೆ ದಟ್ಟವಾಯಿತು”, ವರಾಟ್ಟಾರ್ ತೀರವಾಸಿ ಪತ್ರಕರ್ತ ಎಸ್.ಡಿ. ವೇಣುಕುಮಾರ್ ಬೊಟ್ಟು

ಮಾಡುತ್ತಾರೆ. ಜನ ಒಂದಾದರು. ನರೇಗಾಮೂಲಕ ಕಾರ್ಯಪಡೆಗಳು, ಸ್ವಯಂಸೇವಕರು ಕೆಲಸಕ್ಕಿಳಿದರು.

ಅತಿಕ್ರಮಣದ ಮಣ್ಣು ತೆಗೆದು ಆಳಗೊಳಿಸುವುದೇ ಮುಖ್ಯ ಕೆಲಸ. ಹಾಗಾಗಿ ಯಂತ್ರಗಳ ಕಾರುಬಾರೇ ಹೆಚ್ಚು. ಸದ್ಯ ಎಂಟು ಮಣ್ಣುಮಾಂದಿಗಳು (ಪೋಕ್ ಲೈನ್) ಕೆಲಸ ಮಾಡುತ್ತಿವೆ. ಊರ ಜನ ಬೇರೆಬೇರೆ ಭಾಗಗಳಲ್ಲಿ ತಂಡತಂಡವಾಗಿ ಕೆಲಸ ಮಾಡುತ್ತಿದ್ದಾರೆ. ಸರಾಸರಿ ದಿನಕ್ಕೆ ನೂರು ಮಂದಿಯಂತೂ ಇದ್ದೇ ಇರುತ್ತಾರೆ. ರಜಾದಿನಗಳಲ್ಲಿ ಹಲವು ಪಟ್ಟು ಹೆಚ್ಚು. ಬಿದಿರು, ಮರ, ಗಿಡಗಂಟಿ – ಕಾಡುಕಳೆಗಳನ್ನು ತೆಗೆಯುವುದೇ ಸ್ವಯಂಸೇವಕ, ನರೇಗಾ ತಂಡಗಳ ಮುಖ್ಯ ಕೆಲಸ,ಈ ನಡುವೆ ಸರ್ಕಾರವೂ ಈ ಕಡೆ ಗಮನ ಹಾಕಿತು. ವಿತ್ತ ಸಚಿವ ಥಾಮಸ್ ಐಸಾಕ್, ಜಲಸಂಪನ್ಮೂಲ ಸಚಿವ ಮ್ಯಾಥ್ಯೂ ಟಿ. ಥಾಮಸ್, ಕೃಷಿಸಚಿವ ಸುನಿಲ್ ಕುಮಾರ್ ಊರವರೊಂದಿಗೆ ಹೊಳೆಬದಿ ನಡೆಯುವ ಕಾರ್ಯಕ್ರಮ ಹಮ್ಮಿಕೊಂಡರು. ಈ ಬಗ್ಗೆಯೇ ಅಲ್ಲಲ್ಲಿ ಜನಸಂಪರ್ಕ ಸಭೆ – ‘ ‘ನಾಟ್ಟುಕೂಟ್ಟ’’ಗಳು ನಡೆದುವು. ಸರಕಾರ ‘ಪಂಪಾ ಕ್ರಿಯಾ ಯೋಜನೆ’ಯಲ್ಲಿ ಇದನ್ನು ಸೇರಿಸಿ ಧನಸಹಾಯ ಒದಗಿಸುವ ಭರವಸೆ ಕೊಟ್ಟಿದೆ.

ಜನರ ಕೆಲಸ ನಿಂತಿಲ್ಲ. ಬೇರೆಬೇರೆ ಸಂಘಟನೆಗಳು, ಪಂಚಾಯತ್ ವರಿಷ್ಠರು,  ಊರ ಪರವೂರ ಸಹೃದಯಿಗಳು, ಸಿನಿಮಾ ನಟರು – ಪುನರುಜ್ಜೀವನ ಕಾಯಕಕ್ಕೆ ದೇಣಿಗೆ ಕೊಡುತ್ತಿದ್ದಾರೆ. ಈ ವರೆಗಿನ ಕೆಲಸ ಜನಶಕ್ತಿಯಿಂದಲೇ, ಅಂದರೆ ಸಮುದಾಯದ ಮಾನವ ಶ್ರಮ, ಆರ್ಥಿಕ ಕೊಡುಗೆಗಳಿಂದಲೇ ಸಾಗಿದೆ.  ನದಿಯ ಬೇರೆಬೇರೆ ಭಾಗಗಳಲ್ಲಿ  ಯಂತ್ರಮೂಲಕ ಮಣ್ಣಿನ ರಾಶಿ ಬಿಡಿಸಿಕೊಟ್ಟು ನೀರು ಹರಿಸತೊಡಗಿದ್ದಾರೆ. ಅಂದಾಜು ಮೂರರಲ್ಲೊಂದು ಭಾಗದಲ್ಲಿ ಈ ಕೆಲಸ ಮುಗಿದಿದೆ.

ಒಟ್ಟು ಮೂರು  ಘಟ್ಟಗಳಲ್ಲಿ ನಡೆಯುವ ಕೆಲಸಕ್ಕೆ ಮೂರು ವರ್ಷ ತಗಲೀತು ಎನ್ನುತ್ತಿದೆ ಸರಕಾರ. ಎರಡನೆ ಘಟ್ಟದಲ್ಲಿ ಕಂದಾಯ ಇಲಾಖೆಯಿಂದ ಭೂಮಿಯ ಅಳತೆ ಮಾಡಿಸಿ ನದಿಯ ಮೂಲ ಪಾತ್ರದಷ್ಟನ್ನು ಉಳಿಸಿ­ಕೊಳ್ಳಲಾಗುವುದು. ಎರಡೂ ಕಡೆಗಳಲ್ಲಿ ಅತಿಕ್ರಮಣ ಅತಿಯಾಗಿಯೇ ನಡೆ­ದಿದ್ದರೂ, ಅವನ್ನು ತೆರವುಗೊಳಿಸುವಾಗ ಆಯಾಯಾ ಪ್ರದೇಶದವರಿಂದ ವಿಶೇಷ ಪ್ರತಿರೋಧ ಬರಲಿಲ್ಲ.

“ವರಾಟ್ಟಾರ್ ಮತ್ತು ಆದಿಪಂಪಾ ನದಿಗಳ ಪುನರುಜ್ಜೀವನದ ನಂತರ ಎರಡೂ ಬದಿಗಳಲ್ಲಿ ಐದು ಮೀಟರಿನ ಇಟ್ಟಿಗೆನಿರ್ಮಿತ ರಸ್ತೆ ಮಾಡ

ಬಯಸಿದ್ದೇವೆ. ಇದನ್ನು ಜನ ವಾಯುವಿಹಾರ ಅಧ್ಯಯನಗಳಿಗಾಗಿ – ಇಕೋ ವಾಕ್ ಗಾಗಿ ಬಳಸಿಕೊಳ್ಳಬಹುದು. ಇದರ ಪಕ್ಕದಲ್ಲಿ ಕೇರಳದ ಎಲ್ಲಾ ಮರಜಾತಿಗಳನ್ನು, ಹಣ್ಣಿನ ಮರಗಳನ್ನು ಹೆಸರಿನ ಫಲಕಗಳೊಂದಿಗೆ ನೆಡಿಸುತ್ತೇವೆ. ಇದು ರಾಜ್ಯದ ಹೆಮ್ಮೆಯ ಸಸ್ಯ

ವೈವಿಧ್ಯ ತಾಣ ಆಗಬೇಕು” ಎನ್ನುತ್ತಾರೆ ಧನಮಂತ್ರಿ ಥಾಮಸ್ ಐಸಾಕ್. ಈ ಉದ್ಯಾನಗಳ ನಿರ್ವಹಣೆಯನ್ನು ಸ್ಥಳೀಯ ಕಾಲೇಜುಗಳ ಸಸ್ಯ

ಶಾಸ್ತ್ರ ವಿಭಾಗಕ್ಕೆ ವಹಿಸುವುದು ಇವರ ಪ್ಲಾನ್.

‘ಸರ್ಕಾರದ  ನೆರವು ಬರಬೇಕಷ್ಟೇ, ಆದರೆ ಕೆಲಸ ಜನಬಲದಿಂದ ನಡೆಯುತ್ತಲೇ ಇದೆ, ಅವರವರ ಪ್ರದೇಶದಲ್ಲಿ ಆಯಾಯಾ ಸಂಘ-ಸಂಘಟನೆಗಳು, ಪಂಚಾಯಿತಿ ಇತ್ಯಾದಿ ನೇತೃತ್ವ ವಹಿಸಿವೆ, ಹೊರತು ಪುನರುಜ್ಜೀವನ ಕೆಲಸದ ಇಡೀ ಮುಖಂಡತ್ವ ಇಂಥವರೇ ವಹಿಸಿದ್ದಾರೆ ಎನ್ನುವಂತಿಲ್ಲ. ಈಗಿನಂತೆಯೇ ನಡೆದರೆ ಎರಡು ತಿಂಗಳಲ್ಲಿ ನದಿ ಸರಿಯಾಗಿ ಹರಿಯುವಂತೆ ಆಗಬಹುದು. ಇನ್ನು ಮುಂದೆ ಇದು ಸರ್ಕಾರದ ಜವಾಬ್ದಾರಿಯಾಗಿ ಮುಂದು­ವರಿಯುವುದು ಸಂತಸದ ವಿಷಯ’ ಎನ್ನುತ್ತಾರೆ ಇನ್ನೊಬ್ಬ ತೀರವಾಸಿ ಆರ್. ಶಶಿಕುಮಾರ್ .

‘ನದಿ ಎಷ್ಟು ಆಳ ಇರಬೇಕು ಎನ್ನುವುದರಿಂದ ತೊಡಗಿ ಎಲ್ಲಾ ವಿಚಾರಗಳನ್ನೂ ವೈಜ್ಞಾನಿಕ ಸಲಹೆಗನುಸಾರ ಕಾರ್ಯಕ್ಕಿಳಿಸು

ತ್ತೇವೆ. ಅಷ್ಟೇ ಸಾಲದು, ನದಿ ವರ್ಷವಿಡೀ ಹರಿಯುವಂತಾಗಲು ಇಕ್ಕಡೆಯ ಭೂಪ್ರದೇಶದಲ್ಲಿ ಜಲಾನಯನ ಅಭಿವೃದ್ಧಿ ಕೆಲಸವನ್ನೂ ಮಾದಲಿದ್ದೇವೆ’ ಎನ್ನುತ್ತಾರೆ ಥಾಮಸ್ ಐಸಾಕ್.

ಈ ಮಹತ್ಕಾರ್ಯದ ಸುದ್ದಿ ಪಂಜಾಬಿನಲ್ಲಿ ಕಾಳಿ ಬೈನ್ ನದಿಯನ್ನು ಪುನರುಜ್ಜೀವನಗೊಳಿಸಿದ ಸಂತ್ ಬಲ್ ಬೀಲ್ ಸಿಂಗ್ ಸೀಚೆವಾಲ್ ಅವರ ಕಿವಿಗೂ ತಲಪಿದೆ. ಅವರ ಇಬ್ಬರು ಅನುಯಾಯಿಗಳನ್ನು – ಪಾಲ್ ಸಿಂಗ್ ಮತ್ತು ಗುರುವಿಂದರ್ ಸಿಂಗ್ – ಅಧ್ಯಯನ ಮಾಡಲು ಇಲ್ಲಿಗೆ ಕಳಿಸಿದ್ದಾರೆ.

ಅಂದ ಹಾಗೆ, ಕರ್ನಾಟಕದಲ್ಲಿ ಹೀಗೆ ಅರೆಬತ್ತಿದ, ಅರೆಜೀವವಾದ ತೋಡು, ಹೊಳೆ ನದಿ `ಗಳು ಎಷ್ಟಿಲ್ಲ? ಕಾಯಬೇಕೇ ನಾವೂ ಊರಲ್ಲಿ ಜೀವಜಲ ಬತ್ತುವ ವರೆಗೆ? ಮಮೆಮಂದಿಯ ಗಂಟಲು ಕಟ್ಟುವ ವರೆಗೆ?

ಸಂಪರ್ಕ: ಎನ್.ಕೆ.ಸುಕುಮಾರನ್, ಪಂಪಾ ಸಂರಕ್ಷಣಾ ಸಮಿತಿ ಕಾರ್ಯದರ್ಶಿ - + 91 94477 90296 (ಮಲೆಯಾಳಮ್, ಇಂಗ್ಲಿಷ್)

–ಶ್ರೀ ಪಡ್ರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry