ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಕ್ಕಾ ದಿಢೀರ್‌ ರಾಜೀನಾಮೆ

ನಾರಾಯಣ ಮೂರ್ತಿ ವಿರುದ್ಧ ನೇರ ಆರೋಪ ಮಾಡಿದ ಆಡಳಿತ ಮಂಡಳಿ
Last Updated 19 ಆಗಸ್ಟ್ 2017, 17:26 IST
ಅಕ್ಷರ ಗಾತ್ರ

ಬೆಂಗಳೂರು: ಹಠಾತ್‌ ಬೆಳವಣಿಗೆಯೊಂದರಲ್ಲಿ, ಸಾಫ್ಟ್‌ವೇರ್‌ ದೈತ್ಯ ಸಂಸ್ಥೆ ಇನ್ಫೊಸಿಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ವಿಶಾಲ್‌ ಸಿಕ್ಕಾ (50) ಅವರು ತಮ್ಮ ಹುದ್ದೆಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

ಸಂಸ್ಥೆಯ ಸಹ ಸ್ಥಾಪಕರಲ್ಲದ ಮೊದಲ ಸಿಇಒ ಆಗಿ ಅಧಿಕಾರವಹಿಸಿಕೊಂಡಿದ್ದ ಮೂರು ವರ್ಷಗಳ ನಂತರ ಸಿಕ್ಕಾ ಅವರು ಪದತ್ಯಾಗದ ನಿರ್ಧಾರ ಪ್ರಕಟಿಸಿದ್ದಾರೆ.

ಎನ್‌. ಆರ್‌. ನಾರಾಯಣಮೂರ್ತಿ ಅವರ ನೇತೃತ್ವದಲ್ಲಿ ಸಂಸ್ಥೆಯ ಸಹ ಸ್ಥಾಪಕರು ಮತ್ತು ನಿರ್ದೇಶಕ ಮಂಡಳಿ ಮಧ್ಯೆ ನಡೆಯುತ್ತಿದ್ದ ಬೋರ್ಡರೂಂ ಕಲಹವು ಇತ್ತೀಚಿನ ದಿನಗಳಲ್ಲಿ ತಾರಕಕ್ಕೆ ಏರಿದ್ದರಿಂದ ಸಿಕ್ಕಾ ಅವರು ಹುದ್ದೆ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ.

‘ನನ್ನ ವಿರುದ್ದದ ಆಧಾರರಹಿತ, ಸುಳ್ಳಿನ, ದುರುದ್ದೇಶದಿಂದ ಕೂಡಿದ ವೈಯಕ್ತಿಕ ಆರೋಪಗಳಿಂದ ಬೇಸತ್ತು ಸಂಸ್ಥೆ ತೊರೆಯುವ ನಿರ್ಧಾರಕ್ಕೆ ಬಂದಿರುವೆ’ ಎಂದು ಸಿಕ್ಕಾ ಹೇಳಿದ್ದಾರೆ.

ಶುಕ್ರವಾರ ಇಲ್ಲಿ ಸಭೆ ಸೇರಿದ್ದ ನಿರ್ದೇಶಕ ಮಂಡಳಿಯು ಸಿಕ್ಕಾ ಅವರ ರಾಜೀನಾಮೆ ಅಂಗೀಕರಿಸಿದೆ. ತಾತ್ಕಾಲಿಕ ನೆಲೆಯಲ್ಲಿ ಅವರಿಗಾಗಿ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹುದ್ದೆ ಸೃಷ್ಟಿಸಿದೆ.

ಹೊಸ ವ್ಯವಸ್ಥಾಪಕ ನಿರ್ದೇಶಕ ಮತ್ತು ‘ಸಿಇಒ’ ನೇಮಕಗೊಳ್ಳುವವರೆಗೆ ಸಿಕ್ಕಾ ಅವರು ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಅಲ್ಲಿಯವರೆಗೆ 1 ಡಾಲರ್‌ನಷ್ಟು  ವಾರ್ಷಿಕ ವೇತನ ಪಡೆಯಲಿದ್ದಾರೆ.

ಜರ್ಮನಿಯ ಐ.ಟಿ ಸಂಸ್ಥೆ ಎಸ್‌ಎಪಿಯ ಮುಖ್ಯ ತಾಂತ್ರಿಕ ಅಧಿಕಾರಿಯಾಗಿದ್ದ ಸಿಕ್ಕಾ ಅವರು, ಮೂರು ವರ್ಷಗಳ ಹಿಂದೆ ಸಂಸ್ಥೆಯ ಸಿಇಒ ಆಗಿ ನೇಮಕಗೊಂಡಿದ್ದರು.  2018ರ ಮಾರ್ಚ್‌ ತಿಂಗಳ ಒಳಗೆ ಹೊಸ ಸಿಇಒ ನೇಮಕವಾಗಬೇಕಾಗಿದೆ.

ಹಂಗಾಮಿ ಸಿಇಒ: ಸಂಸ್ಥೆಯ ಮುಖ್ಯ ಕಾರ್ಯಕಾರಿಣಿ ಅಧಿಕಾರಿಯಾಗಿರುವ (ಸಿಒಒ) ಪ್ರವೀಣ್‌ ರಾವ್‌ ಅವರು ಹಂಗಾಮಿ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಹಿಂದೊಮ್ಮೆ ದೇಶಿ ಐ.ಟಿ ಕ್ಷೇತ್ರದ ಯಶೋಗಾಥೆಯ ಹೆಗ್ಗುರುತು ಆಗಿದ್ದ ಇನ್ಫೊಸಿಸ್‌ನಲ್ಲಿನ ಬೋರ್ಡ್‌ರೂಂ ಕಲಹವು ಇತ್ತೀಚೆಗೆ  ಬೀದಿಗೆ ಬಂದಿತ್ತು. ಉನ್ನತ ಅಧಿಕಾರಿಗಳ ವೇತನ, ಭತ್ಯೆ ಮತ್ತು ಸ್ವಾಧೀನ ಪ್ರಕ್ರಿಯೆಯಲ್ಲಿ ಕಾರ್ಪೊರೇಟ್‌ ಆಡಳಿತದ ನಿಯಮಗಳನ್ನು ದಕ್ಷ ರೀತಿಯಲ್ಲಿ ಪಾಲಿಸುತ್ತಿಲ್ಲ ಎಂದು ಕೆಲ ಸಹಸ್ಥಾಪಕರು ನಿರಂತರವಾಗಿ ಟೀಕಾ ಪ್ರಹಾರ ನಡೆಸುತ್ತ ಬಂದಿದ್ದರು.

‘ನಿರಂತರ ಟೀಕೆ ಮತ್ತು ಅಡಚಣೆಗಳು ತುಂಬ ವೈಯಕ್ತಿಕವಾಗುತ್ತ ಹೋಗಿದ್ದರಿಂದ ನಾನು ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿರುವೆ. ಇಂತಹ ಆರೋಪಗಳು ವಿವಿಧ ಸ್ವತಂತ್ರ ತನಿಖೆಗಳಿಂದ ಸುಳ್ಳು ಎಂಬುದೂ ಸಾಬೀತಾಗಿದೆ. ಇದರ ಹೊರತಾಗಿಯೂ ನನ್ನ ವಿರುದ್ಧದ ವಾಗ್ದಾಳಿ ನಿಲ್ಲಲಿಲ್ಲ. ಸಂಸ್ಥೆಯ ವಹಿವಾಟಿಗೆ ಹೊಸ ದಿಕ್ಕು ನೀಡುವ ನಿಟ್ಟಿನಲ್ಲಿ ಕೈಗೊಂಡಿದ್ದ ಭಾರಿ ಪರಿವರ್ತನೆಯ ಹಂತದಲ್ಲಿ ನಮ್ಮ ಬೆನ್ನಿಗೆ ನಿಲ್ಲಬೇಕಾದವರೇ ಟೀಕಾಪ್ರಹಾರ ತೀವ್ರಗೊಳಿಸಿದರು’ ಎಂದು ಸಿಕ್ಕಾ ಅವರು ನಿರ್ದೇಶಕ ಮಂಡಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
*
‘ಸಿಕ್ಕಾ ನಿರ್ಗಮನಕ್ಕೆ ಮೂರ್ತಿ ಹೊಣೆ’
ಸಹ ಸ್ಥಾಪಕ ಎನ್‌. ಆರ್‌. ನಾರಾಯಣಮೂರ್ತಿ ಅವರು ನಡೆಸಿದ ನಿರಂತರ ವಾಗ್ದಾಳಿಯೇ ವಿಶಾಲ್‌ ಸಿಕ್ಕಾ ಅವರು ಸಂಸ್ಥೆ ತೊರೆಯುವ ನಿರ್ಧಾರಕ್ಕೆ ಬರಲು ಮುಖ್ಯ ಕಾರಣ ಎಂದು ಇನ್ಫೊಸಿಸ್‌ ನಿರ್ದೇಶಕ ಮಂಡಳಿಯು ಕಟುಮಾತಿನ ವಾಗ್ದಾಳಿ ನಡೆಸಿದೆ.

ಸಿಕ್ಕಾ ಅವರ ಕಾರ್ಯವೈಖರಿಯನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಮಂಡಳಿಯು, ಅವರ ದಕ್ಷ ಕಾರ್ಯನಿರ್ವಹಣೆಯ ಫಲವಾಗಿಯೇ ಸಂಸ್ಥೆಯು ಲಾಭದಾಯಕ ವರಮಾನ ಬೆಳವಣಿಗೆ ಕಾಣುವಂತಾಗಿದೆ ಎಂದು ಪ್ರತಿಪಾದಿಸಿದೆ.
*
ನಿರಂತರ ಟೀಕೆ ಮತ್ತು ಅಡಚಣೆಗಳು ತುಂಬ ವೈಯಕ್ತಿಕ ಮಟ್ಟಕ್ಕೆ ಹೋಗಿದ್ದರಿಂದ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿರುವೆ
- ವಿಶಾಲ್‌ ಸಿಕ್ಕಾ
*
ನಿರ್ದೇಶಕ ಮಂಡಳಿಯು ನನ್ನ ವಿರುದ್ಧ ಮಾಡಿರುವ ಆಧಾರರಹಿತ ಆರೋಪಗಳಿಗೆ ಪ್ರತಿಕ್ರಿಯಿಸುವುದು ನನ್ನ ಘನತೆಗೆ ತಕ್ಕುದಲ್ಲ.
- ಎನ್‌. ಆರ್‌. ನಾರಾಯಣಮೂರ್ತಿ
ಇನ್ಫೊಸಿಸ್‌ನ ಸಹ ಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT