ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿತನ ಮೂಲಭೂತ ಹಕ್ಕು: ವ್ಯಕ್ತಿ ಸ್ವಾತಂತ್ರ್ಯ, ಲೈಂಗಿಕ ಒಲವು, ಗರ್ಭಪಾತದ ಹಕ್ಕುಗಳ ವ್ಯಾಖ್ಯಾನ ಬದಲು

Last Updated 25 ಆಗಸ್ಟ್ 2017, 6:08 IST
ಅಕ್ಷರ ಗಾತ್ರ

ನವದೆಹಲಿ: ಎಲ್ಲ ಭಾರತೀಯರ ಬದುಕಿನ ಮೇಲೆ ಪರಿಣಾಮ ಬೀರುವಂತಹ ಚಾರಿತ್ರಿಕ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಖಾಸಗಿತದ ಹಕ್ಕು ಸಂವಿಧಾನ ನೀಡಿರುವ ಮೂಲಭೂತ ಹಕ್ಕಿನ ಭಾಗವೇ ಆಗಿದೆ ಎಂದು ಸರ್ವಾನುಮತದಿಂದ ಹೇಳಿದೆ.

ಸಾಮಾಜಿಕ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಯೋಜನೆಗಳ ಅಡಿಯಲ್ಲಿನ ಸೌಲಭ್ಯಗಳನ್ನು ಪಡೆಯುವುದಕ್ಕೆ ಆಧಾರ್‌ ನೋಂದಣಿಯನ್ನು ಕಡ್ಡಾಯಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜಿ.ಎಸ್‌. ಖೇಹರ್‌ ನೇತೃತ್ವದ ಪೀಠವು ಈ ತೀರ್ಪುನೀಡಿದೆ.

ದೇಶದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದ ಈ ವಿಚಾರದ ವಿಚಾರಣೆ ಸಂದರ್ಭದಲ್ಲಿ, ಖಾಸಗಿತನವು ಮೂಲಭೂತ ಹಕ್ಕು ಅಲ್ಲ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿತ್ತು.

‘ಆಧಾರ್‌ ನೋಂದಣಿಗಾಗಿ ಜನರು ತಮ್ಮ ಬೆರಳಚ್ಚು, ಕಣ್ಣು ಪಾಪೆಯ ಗುರುತುಗಳು ಮತ್ತು ವೈಯಕ್ತಿಕ ಮಾಹಿತಿಗಳನ್ನು ಸರ್ಕಾರಕ್ಕೆ ನೀಡಬೇಕು. ಆದರೆ ಈ ಮಾಹಿತಿಗಳನ್ನು ವಾಣಿಜ್ಯ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ. ಹಾಗಾಗಿ ಇದು ಖಾಸಗಿತನದ ಹಕ್ಕಿನ ಉಲ್ಲಂಘನೆ’ ಎಂದು ಆಧಾರ್‌ ಕಡ್ಡಾಯಗೊಳಿಸುವಿಕೆಯನ್ನು ಪ್ರಶ್ನಿಸಿದ್ದ ಅರ್ಜಿದಾರರು ವಾದಿಸಿದ್ದರು.

ತೀರ್ಪಿನ ಸಾರಾಂಶವನ್ನು ಜೆ.ಎಸ್‌. ಖೇಹರ್‌ ಅವರು ಓದಿದರು. ಪೀಠದ ಒಂಬತ್ತು ನ್ಯಾಯಮೂರ್ತಿಗಳಲ್ಲಿ ಖಾಸಗಿತನ ಮೂಲಭೂತ ಹಕ್ಕು ಹೌದು ಎಂಬ ಬಗ್ಗೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಆದರೆ ಕೆಲವು ನ್ಯಾಯಮೂರ್ತಿಗಳು ಈ ನಿರ್ಧಾರಕ್ಕೆ ಬರಲು ಬೇರೆ ಬೇರೆ ಆಧಾರಗಳನ್ನು ನೀಡಿದ್ದಾರೆ. ಹಾಗಾಗಿ ಅವರು ಪ್ರತ್ಯೇಕ ತೀರ್ಪುಗಳನ್ನು ಬರೆದಿದ್ದಾರೆ ಎಂದು ತೀರ್ಪು ಓದುವ ಮುನ್ನ ಖೇಹರ್‌ ತಿಳಿಸಿದರು.

ಸಂವಿಧಾನ ಪೀಠ ನೀಡಿರುವ ತೀರ್ಪು ಖಾಸಗಿತನ ಮೂಲಭೂತ ಹಕ್ಕು ಹೌದೇ ಅಲ್ಲವೇ ಎಂಬುದನ್ನು ನಿರ್ಧರಿಸುವುದಕ್ಕೆ ಮಾತ್ರ ಸೀಮಿತವಾಗಿದೆ. ಆಧಾರ್‌ ಯೋಜನೆಯು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತಿದೆಯೇ ಎಂಬುದನ್ನು ಐವರು ನ್ಯಾಯಮೂರ್ತಿಗಳ ಪ್ರತ್ಯೇಕವಾದ ಸಂವಿಧಾನ ಪೀಠ 2015ರಿಂದಲೇ ವಿಚಾರಣೆ ನಡೆಸುತ್ತಿದೆ.

ಈಗಿನ ತೀರ್ಪಿನ ಆಧಾರದಲ್ಲಿ ಆಧಾರ್‌ ಯೋಜನೆಯು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತಿದೆಯೇ ಎಂಬುದು ನಿರ್ಧಾರವಾಗಲಿದೆ. 

ಸಂವಿಧಾನ ಪೀಠ: ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌, ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್‌, ಎಸ್‌.ಎ. ಬೊಬ್ಡೆ, ಆರ್‌.ಕೆ. ಅಗರ್‌ವಾಲ್‌, ಆರ್‌.ಎಫ್‌. ನಾರಿಮನ್‌, ಎ.ಎಂ. ಸಪ್ರೆ, ಡಿ.ವೈ. ಚಂದ್ರಚೂಡ್‌,  ಎಸ್‌. ಕೆ. ಕೌಲ್‌, ಎಸ್‌. ಅಬ್ದುಲ್‌ ನಜೀರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT