ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂಘೋಷಿತ ದೇವಮಾನವ ರಾಮ್‌ಪಾಲ್‌ ಎರಡು ಪ್ರಕರಣಗಳಲ್ಲಿ ಖುಲಾಸೆ

Last Updated 29 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಹಿಸಾರ್‌ : ಹರಿಯಾಣದ ಸ್ವಯಂಘೋಷಿತ ದೇವಮಾನವ ಮತ್ತು ಬರ್‌ವಾಲಾದ ಸತ್‌ಲೋಕ್‌ ಆಶ್ರಮದ ಮುಖ್ಯಸ್ಥ ರಾಮ್‌ಪಾಲ್‌ ಎರಡು ಅಪರಾಧ ಪ್ರಕರಣಗಳಿಂದ ಖುಲಾಸೆಗೊಂಡಿದ್ದಾರೆ.

ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮತ್ತು ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳನ್ನು ಬಾಬಾ ಮತ್ತು ಅನುಯಾಯಿಗಳು ಎದುರಿಸುತ್ತಿದ್ದರು. ಸಾಕ್ಷ್ಯಗಳ ಕೊರತೆಯಿಂದಾಗಿ ರಾಮ್‌ಪಾಲ್ ಹಾಗೂ ಅನುಯಾಯಿಗಳನ್ನು ಹಿಸಾರ್‌ ನ್ಯಾಯಾಲಯ ಮಂಗಳವಾರ ಆರೋಪಮುಕ್ತಗೊಳಿಸಿದೆ.

ಆದರೆ, ಸದ್ಯಕ್ಕೆ ಜೈಲಿನಿಂದ ಬಿಡುಗಡೆಯಾಗುವ ಭಾಗ್ಯ ಅವರಿಗಿಲ್ಲ. ಅವರ ವಿರುದ್ಧ ದಾಖಲಾಗಿರುವ ಕೊಲೆ ಮತ್ತು ದೇಶದ್ರೋಹದ ಎರಡು ಪ್ರತ್ಯೇಕ ಪ್ರಕರಣ ಇತ್ಯರ್ಥವಾಗಬೇಕಿದ್ದು ಅಲ್ಲಿಯವರೆಗೂ ಅವರು ಜೈಲಿನಲ್ಲಿಯೇ ಇರಬೇಕಾಗಿದೆ.

2006ರಲ್ಲಿ ರಾಮ್‌ಪಾಲ್‌ ಸೂಚನೆ ಮೇರೆಗೆ ಅವರ ಬೆಂಬಲಿಗರು ಹಿಸಾರ್ ಬಳಿ ಗ್ರಾಮಸ್ಥರಿಗೆ ಬೆಂಕಿ ಹಚ್ಚಿದ್ದರು. ಈ ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದರು. ಪ್ರಕರಣದ ತೀರ್ಪು ಇನ್ನೂ ಹೊರಬಿದ್ದಿಲ್ಲ.

ಈ ಪ್ರಕರಣದಲ್ಲಿ ಕೊಲೆ ಆರೋಪ ಹೊತ್ತಿದ್ದ ಬಾಬಾ 40 ಸಮನ್ಸ್‌ಗಳ ಹೊರತಾಗಿಯೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಆರೋಪಿಯನ್ನು ಬಂಧಿಸಿ ತರುವಂತೆ ಪಂಜಾಬ್–ಹರಿಯಾಣ ಹೈಕೋರ್ಟ್ ಆದೇಶ ಹೊರಡಿಸಿತ್ತು.

ಸುದ್ದಿಯಾಗಿದ್ದ ಮಾನವ ಗುರಾಣಿ

ಹೈಕೋರ್ಟ್ ಆದೇಶದಂತೆ 2014ರ ನವೆಂಬರ್‌ನಲ್ಲಿ ರಾಮ್‌ಪಾಲ್‌ ಅವರನ್ನು ಬಂಧಿಸಲು ಬರ್‌ವಾಲಾದ ಸತ್‌ಲೋಕ್‌ ಆಶ್ರಮಕ್ಕೆ ತೆರಳಿದ್ದ ಪೊಲೀಸರ ಮೇಲೆ ಬೆಂಬಲಿಗರ ಪಡೆ ಕಲ್ಲು, ಲಾಠಿ, ಬಂದೂಕುಗಳಿಂದ ದಾಳಿ ನಡೆಸಿತ್ತು. ಬಾಬಾ ತನ್ನ ಸಾವಿರಾರು ಅನುಯಾಯಿಗಳನ್ನೇ ಮಾನವ ಗುರಾಣಿಯಂತೆ ಬಳಸಿದ್ದು ದೇಶದಾದ್ಯಂತ ಭಾರಿ ಸುದ್ದಿಯಾಗಿತ್ತು. ಈ ಹಿಂಸಾಚಾರದಲ್ಲಿ ಆರು ಜನ ಮೃತಪಟ್ಟಿದ್ದರು.

ದಿನವಿಡೀ ನಡೆಸಿದ ಕಾರ್ಯಾಚಾರಣೆಯ ನಂತರ ಪೊಲೀಸರು ರಾಮ್‌ಪಾಲ್‌ ಮತ್ತು ಬೆಂಬಲಿಗರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಂಧಿತರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 332, 353 ಅಡಿ ಹಲ್ಲೆ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು.

ಆಶ್ರಮದಲ್ಲಿ ಬಲವಂತವಾಗಿ ಕೂಡಿಟ್ಟಿದ್ದ 15 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಪೊಲೀಸರು ಆಶ್ರಮದಿಂದ ಬಿಡುಗಡೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT