ಜಿಡಿಪಿ ಕುಸಿತ ಆತಂಕದ ಸಂಗತಿ ಅರ್ಥವ್ಯವಸ್ಥೆಗೆ ಬೇಕು ಕಾಯಕಲ್ಪ

7

ಜಿಡಿಪಿ ಕುಸಿತ ಆತಂಕದ ಸಂಗತಿ ಅರ್ಥವ್ಯವಸ್ಥೆಗೆ ಬೇಕು ಕಾಯಕಲ್ಪ

Published:
Updated:
ಜಿಡಿಪಿ ಕುಸಿತ ಆತಂಕದ ಸಂಗತಿ ಅರ್ಥವ್ಯವಸ್ಥೆಗೆ ಬೇಕು ಕಾಯಕಲ್ಪ

ಈ ಹಣಕಾಸು ವರ್ಷದ ಮೊದಲ ಮೂರು ತಿಂಗಳ ಅವಧಿಯಲ್ಲಿ ಅಂದರೆ ಏಪ್ರಿಲ್‌– ಜೂನ್‌ ನಡುವೆ ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇ 5.7ಕ್ಕೆ ಇಳಿದಿದೆ. ಇದರ ಹಿಂದಿನ ತ್ರೈಮಾಸಿಕದಲ್ಲಿ ಅದು ಶೇ 6.1 ಇತ್ತು. ಅಂದರೆ ಆರು ತಿಂಗಳಿಂದ ನಮ್ಮ ಜಿಡಿಪಿ ದರ ಚೀನಾದ ಜಿಡಿಪಿ ದರಕ್ಕಿಂತ ಕಡಿಮೆ ಇದೆ.

ನಮ್ಮ ಆರ್ಥಿಕ ಪ್ರಗತಿ ಮಂದಗತಿಯಲ್ಲಿದೆ ಎಂಬುದನ್ನು ಇದು ಸಾರಿ ಹೇಳುತ್ತಿದೆ. ಇದು ಕಳವಳಕಾರಿ ವಿದ್ಯಮಾನ. ಆದರೆ ಜಿಡಿಪಿ ದರ ಕುಸಿತದ ಹಿಂದೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿಯ ಜಾರಿ ಮತ್ತು ನೋಟುಗಳ ರದ್ದತಿಯ ಪ್ರಭಾವವೂ ದೊಡ್ಡದು ಎನ್ನುವುದನ್ನು ಕಡೆಗಣಿಸಲು ಸಾಧ್ಯವಿಲ್ಲ.

ಕಳೆದ ವರ್ಷದ ನವೆಂಬರ್‌ 8ರಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ₹ 500 ಮತ್ತು ₹ 1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿತ್ತು. ಆಗ, ‘ಕಪ್ಪುಹಣ ಹೊರ ತೆಗೆಯುವುದು, ಭ್ರಷ್ಟಾಚಾರಕ್ಕೆ ಕಡಿವಾಣ, ಭಯೋತ್ಪಾದನೆಗೆ ಹಣ ಪೂರೈಕೆಯಾಗುವುದನ್ನು ನಿಯಂತ್ರಿಸುವುದು ಮತ್ತು ನಕಲಿ ನೋಟುಗಳ ಹಾವಳಿ ಮಟ್ಟಹಾಕುವುದಕ್ಕಾಗಿ ಈ ತೀರ್ಮಾನ’ ಎಂದು ಸಮಜಾಯಿಷಿ ಕೊಟ್ಟಿತ್ತು.

ಹೀಗೆ ರದ್ದಾದ ನೋಟುಗಳ ಮೌಲ್ಯವೇ ಸುಮಾರು ₹ 15.44 ಲಕ್ಷ ಕೋಟಿ. ಅಂದರೆ ಚಲಾವಣೆಯಲ್ಲಿದ್ದ ನೋಟುಗಳಲ್ಲಿ ಶೇ 86ರಷ್ಟು ನೋಟುಗಳು ₹ 500 ಮತ್ತು ₹ 1000 ಮುಖಬೆಲೆಯವು. ನಮ್ಮ ಅರ್ಥ ವ್ಯವಸ್ಥೆಯಲ್ಲಿ ಸುಮಾರು 3 ಲಕ್ಷ ಕೋಟಿಯಿಂದ 4 ಲಕ್ಷ ಕೋಟಿ ರೂಪಾಯಿಯಷ್ಟು ಕಪ್ಪು ಹಣ ಇರಬಹುದು ಎಂದು ಆಗ ಅಂದಾಜು ಮಾಡಲಾಗಿತ್ತು.

‘ಇದು ತೆರಿಗೆ ಜಾಲಕ್ಕೆ ಬರದೇ ಇರುವುದರಿಂದ ತೆರಿಗೆ ಆದಾಯಕ್ಕೆ ಕತ್ತರಿ ಬೀಳುತ್ತಿದೆ, ಪರ್ಯಾಯ ಅರ್ಥ ವ್ಯವಸ್ಥೆಯನ್ನು ಸೃಷ್ಟಿಸಿದೆ’ ಎಂಬ ಸರ್ಕಾರದ ವಿವರಣೆಯನ್ನು ಜನ ಕೂಡ ನಂಬಿ ನೋಟು ರದ್ದತಿಗೆ ಅಂತಹ ವಿರೋಧ ತೋರಿಸಿರಲಿಲ್ಲ. ಈಗೇನಾಗಿದೆ ಎಂದರೆ ರದ್ದಾದ ನೋಟುಗಳಲ್ಲಿ ಶೇ 99ರಷ್ಟು ನೋಟುಗಳು ಅಂದರೆ ₹ 15.28 ಲಕ್ಷ ಕೋಟಿ ಮೌಲ್ಯದ ನೋಟುಗಳು ಬ್ಯಾಂಕುಗಳಿಗೆ ಮರಳಿ ಬಂದಿವೆ.

ಹಾಗಿದ್ದರೆ ದೇಶದಲ್ಲಿ ಕಪ್ಪು ಹಣದ ಪ್ರಮಾಣ ₹ 16 ಸಾವಿರ ಕೋಟಿ ಮಾತ್ರವೇ? ಇಷ್ಟು ಕಡಿಮೆ ಹಣವನ್ನು ಹೊರಕ್ಕೆ ತೆಗೆಸಲು ನೋಟು ರದ್ದತಿಯಂತಹ ಕಠೋರ ಕ್ರಮದ ಅಗತ್ಯ ಇತ್ತೇ? ನೋಟು ರದ್ದತಿಯಿಂದ ವ್ಯಾಪಾರ, ವಹಿವಾಟು, ನಿರ್ಮಾಣ, ಸೇವಾ ಕ್ಷೇತ್ರಗಳು ಬಹಳ ತೊಂದರೆ ಅನುಭವಿಸಿದ್ದವು.

ನಮ್ಮ ದೇಶದ ಇನ್ನೊಂದು ವಿಶೇಷ ಎಂದರೆ ನಮ್ಮ ಗ್ರಾಮೀಣ ಅರ್ಥ ವ್ಯವಸ್ಥೆ ನಗದು ಹಣದ ಚಲಾವಣೆ ಮೇಲೆ ನಿಂತಿದೆ. ಹೀಗಾಗಿ ನೋಟು ರದ್ದತಿ, ಹಳ್ಳಿಗರ ಮೇಲೂ ಗಂಭೀರ ಪರಿಣಾಮ ಬೀರಿತ್ತು. ಇಡೀ ದೇಶ ಬಹಳಷ್ಟು ಸಂಕಷ್ಟ ಅನುಭವಿಸಿದರೂ ಅದಕ್ಕೆ ತಕ್ಕ ಪ್ರತಿಫಲ ಇದುವರೆಗಂತೂ ಸಿಕ್ಕಿಲ್ಲ. ಸಿಕ್ಕಿದ್ದರೆ ಜಿಡಿಪಿ ಇಳಿಯುತ್ತಿರಲಿಲ್ಲ, ಉದ್ಯೋಗ ಸೃಷ್ಟಿ ಕುಂಠಿತವಾಗುತ್ತಿರಲಿಲ್ಲ. ಹಾಗಿದ್ದರೆ ಈ ಪ್ರಕ್ರಿಯೆ ನಿರರ್ಥಕ ಕಸರತ್ತಾಯಿತೇ? ‘ಅಲ್ಲ’ ಎನ್ನುವುದಾದರೆ ಅದಕ್ಕೆ ಪೂರಕವಾದ ಅಂಕಿಅಂಶಗಳನ್ನು ಜನರ ಮುಂದೆ ಇಡುವುದು ಕೇಂದ್ರ ಸರ್ಕಾರದ ಕರ್ತವ್ಯ.

ಜನರ ಬಳಿಯ ಹಣದ ಮೂಲ ಯಾವುದು ಎಂಬುದನ್ನು ತಿಳಿಯುವ ಸರ್ಕಾರದ ಉದ್ದೇಶ ಈಡೇರಿದೆ ಎಂದು ಹಣಕಾಸು ಸಚಿವ ಅರುಣ ಜೇಟ್ಲಿ ಹೇಳುತ್ತಿದ್ದಾರೆ. ಆದಾಯ ತೆರಿಗೆ ಪಾವತಿಸಿದವರ ಸಂಖ್ಯೆಯಲ್ಲಿ ಶೇ 25ರಷ್ಟು ಏರಿಕೆ ಆಗಿದೆ, ಜುಲೈಯಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಏರಿಕೆ ಕಂಡು ಬಂದಿದೆ, ನಗದುರಹಿತ ವಹಿವಾಟಿನ ಪ್ರಮಾಣ ಹೆಚ್ಚಾಗಿದೆ ಎಂದು ಅವರು ವಿವರಣೆ ಕೊಟ್ಟಿದ್ದಾರೆ.

ಸರ್ಕಾರದ ಬಳಿ ಈಗ ಪ್ರತೀ ವ್ಯಕ್ತಿಯ ಹಣದ ಮಾಹಿತಿ ಇದೆ. ಅವರ ಘೋಷಿತ ಆದಾಯಕ್ಕೆ ತಾಳೆ ಹಾಕಲು ಅದು ತಂತ್ರಜ್ಞಾನ ಬಳಸಿಕೊಳ್ಳುತ್ತಿದೆ. 18 ಲಕ್ಷ ಖಾತೆಗಳನ್ನು ಪರಿಶೀಲನೆಗೆ ಒಳಪಡಿಸಿದೆ. 3 ಲಕ್ಷ ನೋಂದಾಯಿತ ಕಂಪೆನಿಗಳ ಮೇಲೆ ಕಣ್ಗಾವಲು ಇಟ್ಟಿದೆ. ಕಪ್ಪುಹಣ ಸೃಷ್ಟಿ ಮತ್ತು ಹವಾಲಾ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದ 36 ಸಾವಿರ ಕಂಪೆನಿಗಳನ್ನು ಗುರುತಿಸಿದೆ.

‘ನೋಟು ರದ್ದತಿಯಿಂದ ಅಲ್ಪಾವಧಿ ಹಿನ್ನಡೆಯಾಗಿತ್ತು. ಅದರಿಂದ ಹೊರ ಬಂದಿದ್ದೇವೆ’ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಹೇಳಿದ್ದಾರೆ. ಹಾಗಿದ್ದರೂ ಜಿಡಿಪಿ ವೃದ್ಧಿಯ ದರ ಮೂರು ವರ್ಷಗಳಲ್ಲೇ ಅತ್ಯಂತ ಕನಿಷ್ಠಕ್ಕೆ ಇಳಿದಿದೆ. ಆದ್ದರಿಂದ ಇದೇ ಪ್ರವೃತ್ತಿ ಮುಂದುವರಿಯದಂತೆ ತಡೆಯಬೇಕು. ಆರ್ಥಿಕತೆ ಚೇತರಿಕೆಗೆ ಮತ್ತು ಉದ್ಯೋಗ ಸೃಷ್ಟಿಗೆ ನಿರ್ದಿಷ್ಟವಾದ, ತ್ವರಿತ ಫಲಿತಾಂಶ ನೀಡಬಲ್ಲ ದೃಢ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry