ಗುರುವಾರ , ಮೇ 6, 2021
23 °C
ಪಡಿತರ ವ್ಯವಸ್ಥೆಯ ಕೊರತೆಗಳನ್ನು ಸರಿಪಡಿಸಿ ವ್ಯವಸ್ಥೆಯನ್ನು ಇನ್ನೂ ಉತ್ತಮಪಡಿಸುವ ದಿಕ್ಕಿನಲ್ಲಿ ಸರ್ಕಾರಗಳು ಕೆಲಸ ಮಾಡಲಿ

ಬಲಿಷ್ಠ ಸರ್ಕಾರದ ದುರ್ಬಲ ಕ್ಷಣಗಳು

ಶಾರದಾ ಗೋಪಾಲ Updated:

ಅಕ್ಷರ ಗಾತ್ರ : | |

ಬಲಿಷ್ಠ ಸರ್ಕಾರದ ದುರ್ಬಲ ಕ್ಷಣಗಳು

ಪಡಿತರದಲ್ಲಿ ಕಾಳಿನ ಚೀಲದ ಬದಲಿಗೆ ಕಾಸಿನ ಥೈಲಿಯನ್ನು ಭಾರತದ ಪ್ರಧಾನ ಮಂತ್ರಿಗಳು ಮತ್ತೊಮ್ಮೆ ಝಣಝಣಿಸಿದ್ದಾರೆ. ಮೊದಲು ಪಂಜಾಬ್, ಹರಿಯಾಣಗಳಲ್ಲಿ ನೇರ ನಗದು ಕೊಡುವುದನ್ನು ಪ್ರಾಯೋಗಿಕವಾಗಿ ಜಾರಿ ಮಾಡಿ, ನಂತರ ಇಡೀ ದೇಶಕ್ಕೂ ಆ ಯಶಸ್ಸನ್ನು ಹಬ್ಬಿಸುವುದಾಗಿ ಪ್ರಧಾನಿಗಳು ಹೇಳಿದ್ದಾರೆ.

ಒಂದು ಕಾಲದಲ್ಲಿ ಸಾರ್ವತ್ರಿಕವಾಗಿ ಅಂದರೆ ಎಲ್ಲರಿಗೂ ಪಡಿತರವನ್ನು ಕೊಡಬೇಕೆಂದು ವಾದ ಮಾಡಿದ ಮುಖ್ಯಮಂತ್ರಿಗಳು, ಪ್ರಧಾನಿಯಾಗುತ್ತಲೇ ತಮ್ಮ ನಿಲುವನ್ನು ಬದಲಾಯಿಸಿಕೊಂಡಿರುವ ವಿಚಾರವನ್ನು ನಾವು ಮರೆಯುವುದಿಲ್ಲ. ಆಹಾರ ಭದ್ರತಾ ಕಾನೂನಿನಲ್ಲಿ ಯಾವಾಗ ಕಾಳಿನ ಬದಲಿಗೆ ಕಾಸಿನ ವಿಚಾರ ಒಳನುಸುಳಿತೋ ಆಗಿನಿಂದಲೂ ಭೂತದ ಮುಖ ಆಗಾಗ ಗೋಚರವಾಗುತ್ತಲೇ ಇರುತ್ತದೆ.

ಬಹುಶಃ ಇದನ್ನೋದುವ ಮಧ್ಯಮ, ಮೇಲ್ಮಧ್ಯಮ ವರ್ಗದವರಿಗೆ ‘ಕಾಳು ಕೊಟ್ಟರೇನು, ಕಾಸು ಕೊಟ್ಟರೇನು, ಯಾವುದನ್ನೂ ಕೊಡುವುದು ಬೇಡ, ಕೊಡುತ್ತ ಹೋದರೆ ಜನರೆಲ್ಲ ಆಲಸಿಗಳಾಗಿಬಿಡುತ್ತಾರೆ’ ಎಂಬ ವಿಚಾರವಿರಬಹುದು. ಆದರೆ ಪಡಿತರ ಆಹಾರ, ನಿತ್ಯದ ಊಟದ ಒಂದು ಮುಖ್ಯಭಾಗವೇ ಆಗಿರುವ ದೇಶದ ಕೋಟಿ ಕೋಟಿ ಜನರಿಗೆ ಮಾತ್ರ ಒಮ್ಮೆ ಮೈನಡುಕ ಹುಟ್ಟುವುದು ಮಾತ್ರ ಸುಳ್ಳಲ್ಲ. ಮಧ್ಯಪ್ರದೇಶ ಸರ್ಕಾರ ಕೂಡ ಶೀಘ್ರವೇ ಒಂದೆರಡು ಜಿಲ್ಲೆಗಳಲ್ಲಿ ನೇರ ನಗದು ಕಾರ್ಯಕ್ರಮವನ್ನು ಪ್ರಾರಂಭಿಸುವ ಉತ್ಸಾಹ ತೋರಿಸಿದೆ.

ಇದರ ಹಿಂದೆಯೇ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವೆಯಾಗಿದ್ದ (ಈಗ ರಕ್ಷಣಾ ಖಾತೆಯ ಹೊಣೆ ಹೊತ್ತಿದ್ದಾರೆ) ನಿರ್ಮಲಾ ಸೀತಾರಾಮನ್‌ ಅವರು, ಭಾರತದಲ್ಲಿ ಪಡಿತರ ಪದ್ಧತಿ ಮತ್ತು ಕೃಷಿಗೆ ಸಬ್ಸಿಡಿಯನ್ನು ಎಲ್ಲಿಯವರೆಗೆ ಇರಿಸಬೇಕಾಗುತ್ತದೆಯೋ ಅಲ್ಲಿಯವರೆಗೆ ನಾವು ಇರಿಸುವವರೇ ಎಂದು ಮತ್ತೊಮ್ಮೆ ಖಡಾಖಂಡಿತವಾಗಿ ಹೇಳಿರುವುದೂ ಇದೆ.

ಮತ್ತೆ ಮತ್ತೆ ಪಡಿತರದ ಅಥವಾ ಆಹಾರ ಭದ್ರತೆಯ ವಿಚಾರ ಚರ್ಚೆಗೆ ಯಾತಕ್ಕೆ ಬರುತ್ತದೆಯೆಂದರೆ ಇದರಲ್ಲಿ ಅನೇಕ ವಿಚಾರಗಳು ಒಳಗೊಂಡಿವೆ. ದೇಶದಲ್ಲಿ ರೈತರಿಂದ ಆಹಾರಧಾನ್ಯಗಳ ಖರೀದಿ, ಅವನ್ನು ಸರ್ಕಾರದ ಗೋದಾಮುಗಳಲ್ಲಿ ಸಂಗ್ರಹಿಸಿಡುವುದು, ಪಡಿತರದಲ್ಲಿ ವಿತರಿಸುವುದು, ನೇರ ನಗದು ವರ್ಗಾವಣೆ– ಇವೆಲ್ಲವುಗಳ ಮಧ್ಯೆ ವಿಶ್ವ ವ್ಯಾಪಾರ ಸಂಘಟನೆಯೊಂದಿಗಿನ ಒಡಂಬಡಿಕೆಗಳು... ಇವೆಲ್ಲವೂ ಸಾರ್ವಜನಿಕ ಚರ್ಚೆಗೆ ಮತ್ತೆ ಮತ್ತೆ ಒದಗಬೇಕು.

ಕೃಷಿಕರಿಗೆ ಬೆಂಬಲ ಬೆಲೆ ಕೊಟ್ಟು ಧಾನ್ಯ ಖರೀದಿ ಮಾಡುತ್ತದೆ ಸರ್ಕಾರ. ಬೆಂಬಲ ಬೆಲೆಯನ್ನು ಸರ್ಕಾರ ಘೋಷಿಸದಿದ್ದರೆ ಮಾರುಕಟ್ಟೆಯ ಖರೀದಿದಾರರು ಮನಬಂದ ಅತಿ ಅಗ್ಗದ ಬೆಲೆಗೆ ಹೊತ್ತೊಯ್ಯುವ ಸಂಭವವಿದೆ. ಬೆಂಬಲ ಬೆಲೆ ಘೋಷಿಸಿದಾಗ ಅದಕ್ಕಿಂತ ಸ್ವಲ್ಪ ಜಾಸ್ತಿ ಬೆಲೆ ಕೊಟ್ಟಾದರೂ ಖರೀದಿಸುತ್ತಾರೆ. ಆದರೆ ‘ರೈತರಿಗೆ ಬೆಂಬಲ ಬೆಲೆ, ಸಬ್ಸಿಡಿಗಳನ್ನು ಕೊಟ್ಟು ರಕ್ಷಿಸಬೇಡಿ’ ಎಂಬುದು ವಿಶ್ವ ಬಂಡವಾಳದಾರರ ಷರತ್ತು.

ಎರಡನೆಯ ಮುಖ್ಯ ವಿಷಯವೆಂದರೆ ಆಪತ್ಕಾಲಕ್ಕೆಂದು ಆಹಾರ ಸಂಗ್ರಹಣೆಯನ್ನು ಮಾಡಿಟ್ಟುಕೊಳ್ಳುವುದು. ಬರಗಾಲ, ನೆರೆಹಾವಳಿ, ಭೂಕಂಪ ಮುಂತಾದ ನೈಸರ್ಗಿಕ ವಿಕೋಪಗಳ ಸಮಯಕ್ಕೆಂದು ಬೇಕಾಗುವಷ್ಟು ಆಹಾರವನ್ನು ಕಾಪಿಡುವ ಜವಾಬ್ದಾರಿ ಸರ್ಕಾರದ ಮೇಲಿರುತ್ತದೆ. ಆದರೆ ಈ ಬಗ್ಗೆ ವಿಶ್ವ ವ್ಯಾಪಾರಿ ಉದ್ದಿಮೆಗಳಿಗೆ ಬಲು ದೊಡ್ಡ ಉರಿಗಣ್ಣು. ಕಾಪಿಡುವುದೇಕೆ? ನಾವಿಲ್ಲವೇ? ಮಾರುಕಟ್ಟೆಯಿಲ್ಲವೇ? ಅವರ ಪ್ರಶ್ನೆ.

ಇವೆರಡೂ ವಿಚಾರಗಳ ಮೇಲೆ ಪಡಿತರ ವಿತರಣೆ ಮತ್ತು ನೇರ ನಗದು ವರ್ಗಾವಣೆ ನಿಂತಿವೆ. ‘ಜನಸಾಮಾನ್ಯರಿಗೆ ಪಡಿತರ ಕೊಟ್ಟು ಆಹಾರದ ಭದ್ರತೆ ಮಾಡಿಕೊಟ್ಟರೆ ಅವರು ಆಲಸಿಗಳಾಗುತ್ತಾರೆ, ಮಾರುಕಟ್ಟೆಯಲ್ಲಿ ಖರೀದಿ ಮಾಡುವ ಸ್ಪರ್ಧೆಗೆ ಅವರು ಬರುವುದೇ ಇಲ್ಲ. ಆಹಾರವಿರಲಿ, ಆರೋಗ್ಯವಿರಲಿ ನಾಗರಿಕರ ರಕ್ಷಣೆ ಮಾಡುತ್ತ ಕುಳಿತುಕೊಳ್ಳಬೇಡಿ’ ಎಂಬುದು ಸರ್ಕಾರಗಳಿಗೆ ಮುಂದುವರಿದ ದೇಶಗಳ ತಾಕೀತು.

90ರ ದಶಕದಿಂದಲೂ ವಿಶ್ವ ವ್ಯಾಪಾರ ಒಪ್ಪಂದಗಳ ಮೂಲಕ ಭಾರತದಂಥ ಅಭಿವೃದ್ಧಿಶೀಲ ದೇಶಗಳ ಮೇಲೆ ಮುಂದುವರಿದ ದೇಶಗಳ ದೊಡ್ಡ ಉದ್ದಿಮೆಗಳ ಇಂತಹ ಷರತ್ತುಗಳು ಮುಂದುವರಿದೇ ಇವೆ. ರೈತರಿಗಾಗಲೀ ಜನಸಾಮಾನ್ಯರಿಗಾಗಲೀ ಕೈಗಾರಿಕೆಗಳಿಗಾಗಲೀ ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಹಾಕಿ, ಎಲ್ಲವನ್ನೂ ಮಾರುಕಟ್ಟೆ, ಸ್ಪರ್ಧೆಗೆ ಬಿಡಿ ಎಂದು ಒತ್ತಡ. 1995ರಲ್ಲಿ ಡಬ್ಲ್ಯುಟಿಒಗೆ ಸಹಿ ಹಾಕಿ ಬಂದಾಗಿನಿಂದ ಒಂದೊಂದು ರಕ್ಷಣಾತ್ಮಕ ಕವಚವೂ ಕಳಚಿ ಬೀಳುತ್ತಲೇ ಇದೆ. ಗಡಿ ರಕ್ಷಣೆಗೆ ಹೆಚ್ಚೆಚ್ಚು ಶಸ್ತ್ರಾಸ್ತ್ರಗಳನ್ನು ಒದಗಿಸುತ್ತ ದೇಶದೊಳಗಿನ ಸಂಪತ್ತನ್ನು ಕೊಳ್ಳೆ ಹೊಡೆಯುವ, ದೇಶವನ್ನು ಸಂಪೂರ್ಣ ಬಲಹೀನ ಮಾಡಿ ನಿಷ್ಕ್ರಿಯ ಮಾಡುವ, ಎಂತಹ ದೇಶಭಕ್ತರನ್ನೂ ಅಸಹಾಯಕರನ್ನಾಗಿ ಮಾಡುವ ಯೋಜನೆ ಇದು.

ದೇಶದ ಕೃಷಿ, ಔಷಧ ಸಂಶೋಧನೆಗಳನ್ನು ಹಾಗೂ ದೇಶಿ ಕೈಗಾರಿಕೆಗಳನ್ನು ರಕ್ಷಿಸುತ್ತಿದ್ದ 1970ರ ಬೌದ್ಧಿಕ ಸ್ವಾಮ್ಯಹಕ್ಕು ಕಾಯ್ದೆಯನ್ನು ಬದಲು ಮಾಡಿದ್ದು ಅತಿ ದೊಡ್ಡ ಪ್ರಹಾರ. ಸಾಧನವನ್ನು ತಯಾರಿಸುವ ಪದ್ಧತಿಯ ಮೇಲೆ ಸ್ವಾಮ್ಯ ಹಕ್ಕು ಪಡೆಯುವಂಥ ಜಗತ್ತಿನಲ್ಲಿಯೇ ಅತ್ಯುತ್ತಮವಾದ ಪೇಟೆಂಟ್ ಪದ್ಧತಿ ನಮ್ಮದಾಗಿತ್ತು. ಅದನ್ನು ತೆಗೆದು ಹಾಕಿ ಸಾಧನದ ಮೇಲೆ ಪೇಟೆಂಟ್ ಪಡೆಯುವ, ಪೇಟೆಂಟ್ ಅವಧಿ 20 ವರ್ಷಗಳವರೆಗೆ ಇರುವಂತಹ 2005ರ ಪೇಟೆಂಟ್ ಕಾಯ್ದೆ ಜಾರಿಗೆ ಬಂತು (ಇಷ್ಟಾದರೂ ಬಂಡವಾಳಶಾಹಿ ಕಂಪೆನಿಗಳಿಗೆ, ದೇಶಗಳಿಗೆ ಸಮಾಧಾನವಾಗಿಲ್ಲ).

(ಟ್ರಿಪ್ಸ್ ಮುಗಿಯಿತು, ಇನ್ನು ಟ್ರಿಪ್ಸ್ ಪ್ಲಸ್ ಬೇಕು) ಪೇಟೆಂಟ್ ಅವಧಿಯನ್ನು ಕನಿಷ್ಠ 25ರಿಂದ 30 ವರ್ಷ ಮಾಡಬೇಕು ಎನ್ನುವ ಬೇಡಿಕೆ. ಬಹುರಾಷ್ಟ್ರೀಯ ಒಪ್ಪಂದಗಳನ್ನು ಬದಿಗಿಟ್ಟು ಹೊಸ ಹೊಸ ಷರತ್ತುಗಳೊಂದಿಗೆ ದ್ವಿಪಕ್ಷೀಯ ವ್ಯಾಪಾರದ ಮಾತುಕತೆಗಳಿಗೆ ಅವು ಸಜ್ಜಾದವು. ಮತ್ತೆ 2013ರಲ್ಲಿ ಬಾಲಿಯಲ್ಲಿ ವಿಶ್ವ ವಾಣಿಜ್ಯ ಒಪ್ಪಂದ. ವಿಶ್ವವೇ ಒಂದು ಮಾರುಕಟ್ಟೆ. ಅದರ ಮಧ್ಯೆ ದೇಶದ ಕಾನೂನುಗಳ ಅಡ್ಡಿ ಇರಬಾರದು ಎನ್ನುತ್ತ ದೇಶದಿಂದ ದೇಶಕ್ಕೆ ಸಾಮಾನುಗಳು, ದವಸ ಧಾನ್ಯಗಳು ಹರಿದು ಬರಲು ಬಂದರಿನಲ್ಲಿ ಆಮದು ಸುಂಕ, ಸುಂಕದ ಕಟ್ಟೆಯ ಷರತ್ತುಗಳು ರಫ್ತುದಾರರನ್ನು ಬಾಧಿಸಬಾರದು, ಎಲ್ಲವೂ ಪಾರದರ್ಶಕವಾಗಿ ನಡೆಯಬೇಕು ಎಂಬ ಷರತ್ತಿಗೆ ಸಹಿ ಹಾಕಿಸಿದವು.

ತಾನು ಕೃಷಿ ವಸ್ತುಗಳನ್ನು ರಫ್ತು ಮಾಡುವಾಗ ಅವುಗಳ ಮೇಲೆ ತನಗೆ ಸುಂಕ ಹಾಕಲೇಕೂಡದು ಎಂದು ಅಮೆರಿಕ, ಯುರೋಪಿನ ಕಂಪೆನಿಗಳು ಕೃಷಿ ವಸ್ತುಗಳನ್ನೇ ಹೆಚ್ಚಾಗಿ ರಫ್ತು ಮಾಡುತ್ತಿದ್ದ ತೃತೀಯ ಜಗತ್ತಿನ ದೇಶಗಳಿಗೆ ವಿಶ್ವ ವ್ಯಾಪಾರ ಒಪ್ಪಂದಗಳ ಮೂಲಕ ಒತ್ತಡ ಹೇರಿದವು. ಅಮದು-ರಫ್ತನ್ನು ಪಾರದರ್ಶಕ ಮಾಡಲು ತಮ್ಮ ಸರ್ಕಾರ ಎಷ್ಟು ಕೆಲಸ ಮಾಡುತ್ತಿದೆ ಎಂದು ವಾಣಿಜ್ಯ ಮಂತ್ರಿಗಳು ಬೆನ್ನು ತಟ್ಟಿಕೊಳ್ಳುತ್ತಾರೆ. ಆದರೆ ವಿದೇಶಗಳಿಂದ ಸರಾಗವಾಗಿ ದವಸ ಧಾನ್ಯಗಳು ಹರಿದು ಬಂದಾಗ ಸ್ಥಳೀಯ ರೈತರ ಬೆಳೆಗಳಿಗೇನಾದೀತು, ಅವುಗಳ ಬೆಲೆಗೇನಾದೀತು ಎಂಬ ಪ್ರಶ್ನೆಯನ್ನೇ ಅವರು ಎತ್ತಿಕೊಳ್ಳುವುದಿಲ್ಲ.

ಬಾಲಿ ಮಾತುಕತೆಯಲ್ಲಿ ಚರ್ಚೆಗೆ ಬಂದ ಇನ್ನೊಂದು ಮುಖ್ಯ ವಿಷಯ ದೇಶದ ಧಾನ್ಯ ಸಂಗ್ರಹಾಗಾರಗಳದ್ದು. ಅಲ್ಲಿ ಚರ್ಚೆ ಪೂರ್ಣಗೊಳ್ಳದಿದ್ದಾಗ ಮತ್ತೆ 2015ರಲ್ಲಿ ನೈರೋಬಿಯಲ್ಲಿ ಒಪ್ಪಂದ. ಈ ಒಪ್ಪಂದವಾದ ನಂತರ ದೇಶದ ಧಾನ್ಯ ಸಂಗ್ರಹಾಗಾರಗಳನ್ನು ತೆಗೆದು ಹಾಕಲು ಮೂರು ವರ್ಷಗಳ ಗಡುವು ಇತ್ತು. ‘ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ’ಯ ಸಂಕಟ ಸರ್ಕಾರದ್ದು. ಮಾಡಿ ನೋಡಿಯೇ ಬಿಡುವ ಎಂದು ಅಲ್ಲಲ್ಲಿ ಪಡಿತರದ ಬದಲಿಗೆ ನೇರ ನಗದು ವರ್ಗಾವಣೆ ಕಾರ್ಯಕ್ರಮ ಶುರುಮಾಡುತ್ತದೆ, ಜನರಿಂದ ವಿರೋಧ ಜೋರಾದಾಗ ‘ಇಲ್ಲ, ಮಾಡುವುದಿಲ್ಲ’. ಎಂದು ಹೇಳಿಕೆ ಕೊಡುತ್ತಾರೆ. ಮಂತ್ರಿಗಳ ಹೇಳಿಕೆ, ಪ್ರಯೋಗ, ಪ್ರಯತ್ನಗಳು ನಡೆಯುತ್ತಲೇ ಇವೆ. ಪ್ರಧಾನ ಮಂತ್ರಿಗಳು ವಿಶ್ವ ವ್ಯಾಪಾರ ಸಂಘಟನೆಯೊಂದಿಗೆ ಸತತ ಮಾತುಕತೆಯಲ್ಲಿ ತೊಡಗಿ ಭಾರತದ ಫುಡ್ ಕಾರ್ಪೊರೇಷನ್‌ನ್ನು ಬರಿದು ಮಾಡಿ ಕಳಚಿಹಾಕಲು ಕೊಟ್ಟ ಮೂರು ವರ್ಷಗಳ ಗಡುವನ್ನು ತೆಗೆದು ಹಾಕಿಸಿ ನಮ್ಮ ರೈತರಿಗೆ ಅವಶ್ಯವಿರುವವರೆಗೆ ಬೆಂಬಲ ಬೆಲೆ, ಜನರಿಗೆ ಅವಶ್ಯವಿರುವವರೆಗೆ ಪಡಿತರವನ್ನು ಜಾರಿಯಲ್ಲಿ ಇಡುತ್ತೇವೆ ಎಂದು ವಿಶ್ವ ವ್ಯಾಪಾರ ಸಂಘಟನೆಯ ಸಾಮಾನ್ಯ ಸಭೆಯಲ್ಲಿ ಒಪ್ಪಿಸಿಯೇ ಸಹಿ ಹಾಕಿದ್ದು ಎಂದು ನಿರ್ಮಲಾ ಸೀತಾರಾಮನ್‌ ವಾದಿಸುತ್ತಾರೆ.

ನಿರ್ಮಲಾ ಅವರು ಏನೇ ಹೇಳಲಿ, ಕೃಷಿಯಲ್ಲಿ ತೊಡಗಿಕೊಂಡಿರುವ ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಾತ್ರ ಸಂಪೂರ್ಣ ವಿಜಯ ದೊರಕುವವರೆಗೆ ಸಮಾಧಾನವಿಲ್ಲ. ಅಂದು ಅಮೆರಿಕ, ಯುರೋಪಿನ ಬಹುರಾಷ್ಟ್ರೀಯ ಕಂಪೆನಿಗಳು ಆ ದೇಶಗಳ ಸರ್ಕಾರಗಳ ಮೇಲೆ ಒತ್ತಡ ತಂದು ವಿಶ್ವ ವ್ಯಾಪಾರ ಸಂಘಟನೆಯ ಮೂಲಕ ದೇಶ ದೇಶಗಳನ್ನು ಮಣಿಸಿದ್ದವು. ಆದರಿಂದು ಭಾರತವನ್ನೂ ಸೇರಿಸಿ ಜಪಾನ್‌, ದಕ್ಷಿಣ ಕೊರಿಯಾ, ನ್ಯೂಜಿಲೆಂಡ್‌ ಮುಂತಾದ ಏಷ್ಯಾದ 16 ದೇಶಗಳ ಬಂಡವಾಳಶಾಹಿ ಕಂಪೆನಿಗಳು ತಮ್ಮೊಳಗೇ ಒಪ್ಪಂದಗಳನ್ನು ಮಾಡಿಕೊಂಡು ನಮ್ಮ ಸರ್ಕಾರಗಳ ಮೇಲೆ ಒತ್ತಡ ತರುತ್ತಿವೆ. ‘ಪ್ರಾದೇಶಿಕ ಸಮಗ್ರ ಆರ್ಥಿಕ ಒಡಂಬಡಿಕೆ ಎಂದು ಅದರ ಹೆಸರು. ಬಾಂಗ್ಲಾ, ಭೂತಾನ್‌ದಂಥ ಎಷ್ಟೋ ಅತಿಹಿಂದುಳಿದ ದೇಶಗಳ ಪ್ರತಿನಿಧಿಗಳಿಗೆ ಈ ಮಾತುಕತೆಗಳ ಸ್ವರೂಪವೂ ಅರ್ಥವಾಗುತ್ತಿಲ್ಲ. ಬಲಿಷ್ಠ ಕಂಪೆನಿಗಳು ಇತ್ತೀಚೆಗೆ ಹೈದರಾಬಾದಿನಲ್ಲಿ ಸೇರಿ 19ನೇ ಸುತ್ತಿನ ಮಾತುಕತೆ ಮುಗಿಸಿದವು. ಎಲ್ಲವೂ ಸುಗಮವಾಗಿ ಸಾಗಿದವೆಂದರೆ 20ನೇ ಸುತ್ತಿನ ಮಾತುಕತೆಯಲ್ಲಿ ಅಂತಿಮ ಒಪ್ಪಂದಕ್ಕೆ ಸರ್ಕಾರಗಳು ಮುದ್ರೆಯೊತ್ತಬೇಕು.

ಮುಖ್ಯವಾಗಿ ಕೃಷಿ, ಆರೋಗ್ಯ, ಹೈನುಗಾರಿಕೆಗಳಿಗೆ ಸಂಬಂಧಪಡುವ ಒಪ್ಪಂದಗಳಿವು. ಆಮದು ಸುಂಕವನ್ನು ಸಂಪೂರ್ಣವಾಗಿ ತೊಡೆದು ಹಾಕುವ ಬೇಡಿಕೆಗಳು. ಆಮದಾಗುವ ಕೃಷಿ ವಸ್ತುಗಳಿಗೆ ಸುಂಕವನ್ನು ಈಗಾಗಲೇ ಶೇ 25ರಿಂದ ಶೇ 5ಕ್ಕೆ ಇಳಿಸಿಯಾಗಿದೆ. ಜಪಾನ್‌ ಹಾಗೂ ದಕ್ಷಿಣ ಕೊರಿಯಾದ ಬೀಜ ಕಂಪೆನಿಗಳು ಕೃಷಿಗೆ ಸಂಬಂಧಿಸಿದ ಎಲ್ಲ ಹಕ್ಕುಗಳನ್ನೂ ಬೀಜ ಕಂಪೆನಿಗಳಿಗೇ ಕೊಡಬೇಕೆಂದು ಬೇಡಿಕೆ ಇಟ್ಟಿವೆ. ರೈತ ತನಗೆ ಬೇಕಾದ ಬೀಜಗಳನ್ನು ಈ ಕಂಪೆನಿಯಿಂದಲೇ ಖರೀದಿಸಬೇಕು, ಅದಕ್ಕೆ ಬೇಕಾದ ರಾಸಾಯನಿಕಗಳನ್ನು ಕೂಡ. ಅಂಥ ಕಾನೂನು ಬದಲಾವಣೆಗಳನ್ನು ಸರ್ಕಾರಗಳು ಮಾಡಬೇಕು. ಅದೇ ರೀತಿ ಹಾಲು ಉತ್ಪಾದನೆಯಲ್ಲಿ ಜಗತ್ತಿಗೆ ಎರಡನೆಯ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ನ ಕಂಪೆನಿಗಳು ‘ಹಾಲು ಮತ್ತು ಹೈನಿನ ಪದಾರ್ಥಗಳನ್ನು ನಿಮ್ಮ ದೇಶದೊಳಗೆ ಹರಿಬಿಡಲು ನಮಗೆ ಅವಕಾಶ ಕೊಡಿ’ ಎಂದು ಕೇಳುತ್ತಿವೆ.

ರೈತರು ಸಂಪೂರ್ಣವಾಗಿ ಬೀಜ ಕಂಪೆನಿಗಳ ಹಿಡಿತದೊಳಗಿರಬೇಕು. ಭೂಮಿ ಕೂಡ ರೈತರ, ಸರ್ಕಾರದ ಹಿಡಿತ ಬಿಟ್ಟು ಬಹುರಾಷ್ಟ್ರೀಯ ಕಂಪೆನಿಗಳದಾಗಬೇಕು. ಈಗಾಗಲೇ ಕೃಷಿಗೆ ಸುರಿಯುವ ಬಂಡವಾಳ ದಿನದಿಂದ ದಿನಕ್ಕೆ ಹೆಚ್ಚುತ್ತ, ಬರುವ ಬೆಳೆಗೆ ಬೆಲೆಯೇ ಇಲ್ಲದೆ ಕೃಷಿ ಅವಲಂಬಿತರ ಉಸಿರು ಸಿಕ್ಕಿಹಾಕಿಕೊಂಡಿದೆ. ಹಿಂದೆಂದಿಗಿಂತಲೂ ಹೆಚ್ಚು ರೈತರ ಆತ್ಮಹತ್ಯೆ, ರೈತ ಭೂಮಿ ಬಿಡುವುದನ್ನು ಹಿಂದಿನ ಹತ್ತು ವರ್ಷಗಳಲ್ಲಿ ನೋಡುತ್ತಿದ್ದೇವೆ. ಹಾಲು, ಸಕ್ಕರೆ, ಅಹಾರಧಾನ್ಯ, ಹಣ್ಣು ಮುಂತಾದವುಗಳು ದೊಡ್ಡ ಪ್ರಮಾಣದಲ್ಲಿ ಬಂದು ಬಿದ್ದರೆ ಬೆಲೆ ಇಳಿದು ನಮ್ಮ ದೇಶದ 60 ಕೋಟಿ ಕೃಷಿಕರು, ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ 15 ಕೋಟಿ ಜನರು ಜೀವನಾಧಾರವನ್ನೇ ಕಳೆದುಕೊಂಡು ನೆಲಕ್ಕೆ ಬೀಳಲಿದ್ದಾರೆ. ಸಹಕಾರಿ ಉದ್ದಿಮೆಗಳಾದ ಅಮುಲ್, ನಂದಿನಿ ಇವು ಕೂಡ ನೆಲ ಕಚ್ಚಲಿವೆ.

ಪ್ರಧಾನ ಮಂತ್ರಿಗಳ, ವಾಣಿಜ್ಯ ಮಂತ್ರಿಗಳ ಹೇಳಿಕೆಗಳ ಹಿಂದಿನ ಸತ್ಯವಿದು. ವಿಶ್ವ ವಾಣಿಜ್ಯ ಒಪ್ಪಂದವನ್ನು ತಡೆಯಲು ನಮಗಾಗಲಿಲ್ಲ. ಪೇಟೆಂಟ್ ಕಾನೂನು ತಿದ್ದುಪಡಿಯನ್ನು ತಡೆಯುವುದು ನಮಗಾಗಲಿಲ್ಲ. ಬಲು ಬಲಿಷ್ಠ ಸರ್ಕಾರ ಬಂದಿದೆ ಈಗ ಎಂದು ಹೇಳಿಕೊಳ್ಳುತ್ತಿದೆ ಭಾರತ. ‘ಒಂದೇ ದೇಶ, ಒಂದೇ ಕಾನೂನು’ ಎನ್ನುವ ಬಲಿಷ್ಠ ಸರ್ಕಾರ, ರೈತರ ಬೆನ್ನೆಲುಬು ಮುರಿಯುವ, ದೇಶವನ್ನು ಬರಿದು ಮಾಡುವ, ಜನರ ಹೊಟ್ಟೆಯ ಮೇಲೆ ಬಡಿಯುವ, ದೇಶವನ್ನು ದುರ್ಬಲಗೊಳಿಸುವ ಒಪ್ಪಂದಗಳಿಗೆ ಸಹಿ ಹಾಕಿ ಪದೇ ಪದೇ ತನ್ನ ಕಾನೂನುಗಳನ್ನು ಬದಲು ಮಾಡುತ್ತದೇಕೆ? ಅದು ಬಲಿಷ್ಠ ಸರ್ಕಾರದ ದೌರ್ಬಲ್ಯದ ಸೂಚನೆಯಲ್ಲವೇ?

ನಮ್ಮ ಸಾರ್ವಜನಿಕ ಪಡಿತರ ವ್ಯವಸ್ಥೆ ಖಂಡಿತವಾಗಿ ಪರಿಪೂರ್ಣವಲ್ಲ. ವ್ಯವಸ್ಥೆಯಲ್ಲಿ ಕೊರತೆಗಳು ಬಹಳ ಇವೆ. ಅದರಲ್ಲಿ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಸ್ಥಳೀಯ ಆಹಾರ ಪದ್ಧತಿಯಿಂದ ಹೊರತಾಗಿದೆ. ಹೆಚ್ಚೆಚ್ಚು ಜನರನ್ನು ಅದರೊಳಗಿಂದ ಹೊರದೂಡಲಾಗುತ್ತಿದೆ. ಆದರೂ ದೇಶದ ಜನರಿಗೆ ಆಹಾರ ಭದ್ರತೆಯನ್ನು ಒದಗಿಸುವ ಇಡೀ ಜಗತ್ತಿನಲ್ಲೇ ಅಪರೂಪದ ವ್ಯವಸ್ಥೆಯಿದು. ಕೊರತೆಗಳನ್ನು ಸರಿಪಡಿಸಿ ವ್ಯವಸ್ಥೆಯನ್ನು ಇನ್ನೂ ಉತ್ತಮಪಡಿಸುವ ದಿಕ್ಕಿನಲ್ಲಿ ಸರ್ಕಾರಗಳು ಕೆಲಸ ಮಾಡಬೇಕೇ ವಿನಾ ತೆಗೆದುಹಾಕುತ್ತೇವೆಂದು ಹೆದರಿಸುವುದಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.