7

ನವೆಂಬರ್‌ನಲ್ಲಿ ‘ಪದ್ಮಾವತಿ’ ಬಿಡುಗಡೆ: ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಟ್ವೀಟ್

Published:
Updated:
ನವೆಂಬರ್‌ನಲ್ಲಿ ‘ಪದ್ಮಾವತಿ’ ಬಿಡುಗಡೆ: ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಟ್ವೀಟ್

ಬೆಂಗಳೂರು: ಈ ವರ್ಷದ ಅದ್ದೂರಿ ಚಿತ್ರವೆಂದೇ ಪರಿಗಣಿಸಲಾಗಿರುವ ‘ಪದ್ಮಾವತಿ’ ಸಿನಿಮಾದ ಮುಹೂರ್ತ ಚಿತ್ರೀಕರಣ ಸರಿಯಾದ ಮುಹೂರ್ತದಲ್ಲಿ ಶುರುವಾಗಿಲ್ಲ, ಅದಕ್ಕೇ ಹೆಜ್ಜೆಹೆಜ್ಜೆಗೂ ವಿಘ್ನಗಳು ಎದುರಾಗುತ್ತಿವೆ ಎಂದು ಬಾಲಿವುಡ್‌ ಗಲ್ಲಿಯಲ್ಲಿ ಗುಲ್ಲೆದ್ದಿದೆ. ಆದರೆ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಇದಕ್ಕೆಲ್ಲ ಕ್ಯಾರೇ ಅಂದಿಲ್ಲ. ‘ಪದ್ಮಾವತಿ ಬಿಡುಗಡೆ ದಿನಾಂಕ 17.11.17’ ಎಂದು ಗರಮ್ಮಾಗಿ ಟ್ವೀಟ್‌ ಮಾಡಿ ವದಂತಿಗಳಿಗೆ ತೆರೆ ಎಳೆಯುವ ಯತ್ನ ಮಾಡಿದ್ದಾರೆ.

‘ಪದ್ಮಾವತಿ’ಯ ಕೃಪಾಕಟಾಕ್ಷ ಬನ್ಸಾಲಿ ಮೇಲೆ ಬಿದ್ದಂತಿಲ್ಲ. ಕಳೆದ ವರ್ಷದಿಂದ ಪದೇ ಪದೇ ಚಿತ್ರೀಕರಣ, ಬಿಡುಗಡೆ ದಿನಾಂಕ ಮುಂದೋಡುತ್ತಲೇ ಇರುವುದನ್ನು ನೋಡಿದರೆ ಹಾಗನಿಸದೇ ಇರದು. ಬನ್ಸಾಲಿ, ‘ಪದ್ಮಾವತಿ’ಗಾಗಿ ಪುರಾಣದ ಕತೆಯನ್ನು ತಿರುಚಿದ್ದಾರೆ ಎಂದು ಆರೋಪಿಸಿ ಧಾರ್ಮಿಕ ಸಂಘಟನೆಗಳು ಚಿತ್ರೀಕರಣದ ಸೆಟ್‌ ಮೇಲೆ ದಾಳಿ ನಡೆಸಿದ್ದಲ್ಲದೆ, ಬನ್ಸಾಲಿ ಅವರ ಮೇಲೆ ಹಲ್ಲೆಯನ್ನೂ ನಡೆಸಿದ್ದರು. ಪರಿಣಾಮವಾಗಿ, ಜೈಪುರದಿಂದ ಚಿತ್ರೀಕರಣ ಸೆಟ್‌ನ್ನು ಎತ್ತಂಗಡಿ ಮಾಡಲಾಗಿತ್ತು. ಅದಾದ ಬಳಿಕ ದೀಪಿಕಾ ತಮ್ಮ ಹಾಲಿವುಡ್‌ ಸಿನಿಮಾ ಚಿತ್ರೀಕರಣಕ್ಕಾಗಿ ವಿಮಾನ ಹತ್ತಿದ್ದರು.

ಬನ್ಸಾಲಿ ಸಿನಿಮಾವೆಂದರೆ ಅದ್ದೂರಿ, ವಿಲಾಸಿ, ಮಸ್ತ್‌ ಹಾಡು, ಬಹುತಾರಾಗಣ ಎಂಬುದು ಸಿದ್ಧಮಂತ್ರ. ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಅವರ ರೊಮ್ಯಾನ್ಸ್‌ ‘ರಾಮ್‌ಲೀಲಾ’ದಂತೆ ‘ಪದ್ಮಾವತಿ’ಯಲ್ಲಿಯೂ ಗಿಮಿಕ್‌ ಮಾಡುತ್ತದೆ ಎಂಬ ಲೆಕ್ಕಾಚಾರ ಹಾಕಿಯೇ ಬನ್ಸಾಲಿ ಈ ಜೋಡಿಯನ್ನು ಮತ್ತೊಮ್ಮೆ ತೆರೆಗೆ ತರಲು ಯೋಚಿಸಿದ್ದರು. ಆದರೆ ಸಿನಿಮಾ ಚಿತ್ರೀಕರಣ ಈ ರೀತಿ ಕುಂಟುತ್ತಾ, ಎಡವುತ್ತಾ ಸಾಗಿದರೆ ಸಿನಿಮಾ ಪ್ರೇಕ್ಷಕರ ಕುತೂಹಲ ಕಳೆದುಕೊಳ್ಳುತ್ತಾನೆ. ಅಷ್ಟೇ ಅಲ್ಲ, ದೀಪಿಕಾ–ರಣವೀರ್‌ ಜೋಡಿಯ ಮೇಲೂ ಇದು ದುಷ್ಪರಿಣಾಮ ಬೀರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ ಬಾಲಿವುಡ್‌ ಪಂಡಿತರು.

ದೀಪಿಕಾ ಮತ್ತು ಶಾಹಿದ್‌ ಕಪೂರ್‌ ಬನ್ಸಾಲಿಗೆ ಕೊಟ್ಟಿದ್ದ ಡೇಟ್‌ಗಳು ಮುಗಿದಿರುವ ಕಾರಣ ದೀಪಿಕಾ ಸದ್ದಿಲ್ಲದೆ ರಜೆಯ ಮೋಜು ಅನುಭವಿಸುತ್ತಿದ್ದಾರಂತೆ. ವದಂತಿಗಳನ್ನು ನಂಬುವುದಾದರೆ, ಒಂದು ಬಾರಿ ಬ್ರೇಕ್‌ ಅಪ್‌ ಆಗಿ ದೀಪಿಕಾ–ರಣವೀರ್‌ ಜೋಡಿ, ‘ಪದ್ಮಾವತಿ’ ಮೂಲಕ ಮತ್ತೆ ಒಂದಾಗಿದೆ. ಇಬ್ಬರೂ ಮದುವೆಯಾಗುತ್ತಾರೆಂಬ ಗುಸುಗುಸು ಈಗ ಜೋರಾಗಿಯೇ ಕೇಳಿಬರುತ್ತಿದೆ. ಚಿತ್ರೀಕರಣದಿಂದ ಬ್ರೇಕ್‌ ಸಿಕ್ಕಿರುವ ಕಾರಣ ಈ ಜೋಡಿ ಇದೀಗ ಮೋಜಿನ ಪ್ರವಾಸದಲ್ಲಿ ರೊಮ್ಯಾನ್ಸ್‌ ಮಾಡುತ್ತಿದೆ.

ದೀಪಿಕಾ, ರಣವೀರ್‌ ಅಲ್ಲದೆ ಶಾಹಿದ್‌ ಕಪೂರ್‌ ಮತ್ತು ಅದಿತಿ ರಾವ್ ಹೈದರಿ ಕೂಡಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ದೀಪಿಕಾ, ರಾಣಿ ಪದ್ಮಾವತಿ, ಶಾಹಿದ್‌ ಆಕೆಯ ಪತಿಯಾಗಿ, ರಣವೀರ್‌ ಅಲಾವುದೀನ್‌ ಖಿಲ್ಜಿಯಾಗಿ ಹಾಗೂ ಅದಿತಿ ರಾವ್‌ ಅಲಾವುದೀನ್‌ ಪತ್ನಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಬನ್ಸಾಲಿ ಅವರ ಈಗಿನ ಲೆಕ್ಕಾಚಾರದಂತೆ ಚಿತ್ರೀಕರಣದ ಕಾಲು ಭಾಗವೂ ಮುಗಿದರೆ ಅಕ್ಟೋಬರ್‌ನಲ್ಲಿ ಪ್ರಚಾರ ಕಾರ್ಯ ಶುರುವಾಗಲಿದೆ. ಆದರೆ ಪ್ರಚಾರದ ವೇಳೆ ದೀಪಿಕಾ–ರಣವೀರ್‌ ಜೋಡಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಚಿತ್ರದ ಪಾತ್ರಗಳಾಗಿ ಅಂದರೆ ದೀಪಿಕಾ–ಶಾಹಿದ್‌ ಮತ್ತು ರಣವೀರ್‌–ಅದಿತಿ ಜೊತೆಯಾಗಿ ಪ್ರಚಾರ ಮಾಡಲಿದ್ದಾರೆ.

‘ಪದ್ಮಾವತಿ’, ಅಲಾವುದೀನ್‌ ಖಿಲ್ಜಿಗೆ ಕಪಾಳಮೋಕ್ಷ ಮಾಡುವ ದೃಶ್ಯದ ಚಿತ್ರೀಕರಣವೂ ಸುದ್ದಿಯಾಗಿತ್ತು. ದೃಶ್ಯ ಪರಿಣಾಮಕಾರಿಯಾಗಿ ಮೂಡಿಬರಬೇಕು ಎಂಬ ಉದ್ದೇಶದಿಂದ ಮತ್ತೆ ಮತ್ತೆ ರಿಟೇಕ್‌ ಆಗುತ್ತಲೇ ಇತ್ತು. ಆ ದೃಶ್ಯ ಪೂರ್ಣಗೊಳ್ಳುವ ಹೊತ್ತಿಗೆ ದೀಪಿಕಾ ರಣವೀರ್‌ ಕೆನ್ನೆಗೆ 21 ಬಾರಿ ಬಾರಿಸಿದ್ದರಂತೆ!

ಮಂಗಳವಾರ ಮಧ್ಯಾಹ್ನ ಸಂಜಯ್‌ ಲೀಲಾ ಬನ್ಸಾಲಿ ಟ್ವೀಟ್‌ ಮಾಡಿ ‘17.11.17ರಂದು ‘ಪದ್ಮಾವತಿ’ ಬಿಡುಗಡೆಯಾಗುವುದಾಗಿ ಪ್ರಕಟಿಸಿದ್ದರೂ ಚಿತ್ರ ತೆರೆ ಕಾಣುವುದು ಮುಂದಿನ ಫೆಬ್ರುವರಿಯಲ್ಲಿಯೇ ಎಂದು ಹೇಳಲಾಗುತ್ತಿದೆ. ಇದು ನಿಜವಾದಲ್ಲಿ, ಮತ್ತೊಂದು ಬಹುನಿರೀಕ್ಷೆಯ ಸಿನಿಮಾ, ಅನುಷ್ಕಾ ಶರ್ಮಾ ಅಭಿನಯದ ‘ಪಾರಿ’ ಜತೆ ‘ಪದ್ಮಾವತಿ’ಗೆ ಬಾಕ್ಸ್‌ಆಫೀಸ್‌ ಸಮರ ನಡೆಯುವುದು ಖಚಿತ. ಯಾಕೆಂದರೆ ‘ಪಾರಿ’ಯನ್ನು 2018ರ ಫೆಬ್ರುವರಿಯಲ್ಲಿ ಬಿಡುಗಡೆ ಮಾಡಲು ಎಲ್ಲಾ ಸಿದ್ಧತೆಗಳು ನಡೆದಿವೆ.

ಎಲ್ಲಕ್ಕಿಂತ ಹೆಚ್ಚಿನ ಕುತೂಹಲಕರಿ ಸಂಗತಿ ಎಂದರೆ, ‘ಪದ್ಮಾವತಿ’ಯನ್ನು ಭಾರತದಲ್ಲಿ 8,000ಕ್ಕೂ ಹೆಚ್ಚು ತೆರೆಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಣ ಸಂಸ್ಥೆ ವಯಕಾಂ18 ಸಿದ್ಧತೆ ನಡೆಸಿರುವುದು. ಸಾರ್ವಕಾಲಿಕ ಹಿಟ್‌ ಚಿತ್ರ ಎಂದೇ ಬಿಂಬಿತವಾಗಿರುವ ‘ಬಾಹುಬಲಿ’ಗಿಂತಲೂ ದೊಡ್ಡ ಪ್ರಮಾಣದಲ್ಲಿ ‘ಪದ್ಮಾವತಿ’ ಚಿತ್ರಮಂದಿರಗಳಲ್ಲಿ ಸದ್ದು ಮಾಡಬೇಕು ಎಂಬುದು ಬನ್ಸಾಲಿ ಮತ್ತು ವಯಾಕಾಂ ಮಹತ್ವಾಕಾಂಕ್ಷೆ. ‘ಬಾಹುಬಲಿ’ 7,500 ತೆರೆಗಳಲ್ಲಿ ಪ್ರದರ್ಶನ ಕಂಡಿತ್ತು.

‘ಪದ್ಮಾವತಿ’ ಚಿತ್ರೀಕರಣ ಮುಗಿದರೆ ತಾನೇ ಬನ್ಸಾಲಿ ಕನಸುಗಳ ಬಗ್ಗೆ ಮಾತನಾಡುವುದು?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry