7

ಪರಿಪೂರ್ಣ ಸಂಸಾರಕ್ಕೆ ಉಂಟೆ ವ್ಯಾಖ್ಯಾನ?

Published:
Updated:
ಪರಿಪೂರ್ಣ ಸಂಸಾರಕ್ಕೆ ಉಂಟೆ ವ್ಯಾಖ್ಯಾನ?

ಅರವತ್ತೈದರ ಅವಿವಾಹಿತ ಚಿಕ್ಕಪ್ಪನಲ್ಲಿ ಹರಟೆ ಹೊಡಿಯುತ್ತಿದ್ದೆ. ‘ಈಗ ತುಂಬಾ ಒಂಟಿ ಅನಿಸುತ್ತಿದೆಯಾ ಚಿಕ್ಕಪ್ಪ?’ ಅರಿವಿಲ್ಲದೇ ಮಾತು ಬಾಯಿಂದ ಬಂದಿತ್ತು. ತಮ್ಮ ಎಂದಿನ ಲಘುಧಾಟಿಯಲ್ಲಿ ‘ಇಲ್ಲ, ಒಂಟಿ ಅಂದ್ರೇನು? ನಾನೂ ನಿಮ್ಮಂತೇ ಸಂಸಾರಿಯೇ. ವ್ಯತ್ಯಾಸವೆಂದರೆ ನಿಮ್ಮೆಲ್ಲರಿಗೂ ಭೌತಿಕ ಸಂಗಾತಿಯಿದ್ದರೆ ನನಗೆ ನನ್ನ ಏಕಾಂತವೇ ಸಂಗಾತಿ.

ಬದುಕಿಗೆ ಸಂಗಾತಿ ಒಂದು ಆಯ್ಕೆಯೇ ಹೊರತು ಅನಿವಾರ್ಯವಲ್ಲ, ನನ್ನದೂ ಎಲ್ಲರ ಬದುಕಂತೇ ಸಹಜ ಬದುಕೇ ಹೊರತು ವಿಚಿತ್ರ ಅಥವಾ ಸಲ್ಲದ ಬದುಕಲ್ಲವಲ್ಲ’ – ಎಂದು ತಣ್ಣಗಿನ ದನಿಯಲ್ಲಿ ಹೇಳಿದಾಗ ‘ಹೌದಲ್ಲವೇ!’ ಎನಿಸಿತ್ತು.

ನಾಲ್ಕು ದಶಕಗಳ ಹಿಂದೆ ಚಿಕ್ಕಪ್ಪನ ‘ಸಿಂಗಲ್‌ಸ್ಟೇಟಸ್’ ಊರಿಗೆ ಊರೇ ಮಾತಾಡಲು ವಿಷಯವಾಗಿತ್ತು. ಕುಟುಂಬವೇ ನಾಗರಿಕತೆಯ, ಸುಖೀಜೀವನದ ವ್ಯಾಖ್ಯಾನ ಎನ್ನುವ ಸಿದ್ಧಮಾದರಿಗೆ ಹೊರತಾದ ಸಾವಿರಾರು ಪೂರ್ಣಬದುಕುಗಳೂ ನಮ್ಮ ನಡುವೆ ಇವೆ ಎನ್ನುವುದೂ ಅರಿವಾಗುತ್ತಿದೆ, ಅವರಂದ ಮಾತಿನಿಂದ.

ಜಗತ್ತಿಗೆ ಕೌಟುಂಬಿಕ ಜೀವನದ ಅಪೂರ್ವ ಮಾದರಿ ಕೊಟ್ಟ ಈ ನೆಲದ ಘಮದಲ್ಲಿ ಒಂಟಿ ಬದುಕು, ಏಕಾಂತಜೀವನದ, ವಿವಾಹ–ಮಕ್ಕಳು ಹೊರತಾದ ಸಮೃದ್ಧ ನೆಮ್ಮದಿಯ ಬದುಕು ನೋಡಿದ ಮಾದರಿಗಳೂ ಇವೆ. ನಾವೆಲ್ಲರೂ ಅರಿತುಕೊಳ್ಳಬೇಕಾದ ಘನವಾದ ವಿಷಯವೆಂದರೆ ಪರಿಪೂರ್ಣ ಬದುಕು, ಸಂಸಾರ ಎನ್ನುವ ಕಲ್ಪನೆಯೇ ಮನುಷ್ಯನ ಯೋಚನೆಗೆ ಸರಿಯಾದುದಲ್ಲ ಎನ್ನುವುದು.

ಈ ಭೂಮಿಯ ಅನೇಕ ಕೌತುಕಗಳಲ್ಲಿ ಮನುಷ್ಯ ಕೂಡ ಒಬ್ಬ. ಸಾಂಗತ್ಯ ಪ್ರತಿ ಜೀವಿಗೂ ಅಗತ್ಯ ನಿಜ. ಆದರೆ ಮನುಷ್ಯ ತನ್ನ ಸಾಂಗತ್ಯದ ವ್ಯಾಖ್ಯಾನವನ್ನು ಅದ್ಯಾವುದೋ ಗಳಿಗೆಯಲ್ಲಿ ಕುಟುಂಬದ ಜೊತೆಗೆ ಗಂಟು ಹಾಕಿಕೊಂಡ. ಹಾಗೇ ಅದಕ್ಕೊಂದು ಚೌಕಟ್ಟು ಹುಡುಕಿ ಅದರೊಳಗೇ ಸುಖ, ಅಗತ್ಯಗಳನ್ನೂ ಕಂಡುಕೊಂಡು ಮನುಷ್ಯನೆಂದರೆ ಸಂಸಾರ, ಕುಟುಂಬ ಎನ್ನುವಂತಾಯಿತು. ಹಾಗೇ ಎದುರಿಗಿದ್ದ ಮಾದರಿ ಸರ್ವರಿಗೂ ಸ್ವೀಕೃತವಾಗಿ ಕುಟುಂಬದೊಂದಿಗೆ ಮನುಷ್ಯನನ್ನು ಗುರುತಿಸುವಂತಾಯಿತು.

ಆದರೆ ಬದುಕು ಬರೆದಿಟ್ಟ ಚಿತ್ರಕಥೆಯಲ್ಲವಲ್ಲ. ಇಲ್ಲಿ ವ್ಯಕ್ತಿವ್ಯಕ್ತಿಯ ಆಶಯಗಳು ಅವನಿಗೆ ದಕ್ಕುತ್ತಾ ಹೋಗುವ ಕಣ್ಣ ಮುಂದಿನ ಜೀವಂತ ಉದಾಹರಣೆಗಳ ನೆರಳಲ್ಲಿ ಮತ್ತು ಮನಸ್ಸಿಗೆ ಹಿತವೆನ್ನಿಸುವ ಆಯ್ಕೆಯ ಆಧಾರದಲ್ಲಿ ರೂಪುಗೊಳ್ಳುತ್ತಾ ಸಾಗುತ್ತವೆ. ಪ್ರತಿ ಮನುಷ್ಯನ ಆಸಕ್ತಿಗಳು, ಆಲೋಚನೆಗಳು ಆಯ್ಕೆಗಳೂ ಸಂಪೂರ್ಣ ಭಿನ್ನ ಮತ್ತು ವಿನೂತನ ಕೂಡ.

ಸಾಂಗತ್ಯದ ಕಲ್ಪನೆಯೂ ಹೀಗೆ. ದಾಂಪತ್ಯ, ಗಂಡು –ಹೆಣ್ಣಿನ ಸಹಬಾಳ್ವೆ, ಸನ್ಯಾಸ, ಒಂಟಿಜೀವನದಂತಹ ಆಯ್ಕೆಗಳು ಕಾರ್ಯರೂಪಕ್ಕೆ ಬರುವುದೂ ಬದುಕಲ್ಲಿ ದೊರೆಯುವ ಭಿನ್ನ ಭಿನ್ನ ಮಾದರಿಗಳಿಂದ ಮತ್ತು ಒದಗುವ ಅವಕಾಶಗಳಿಂದ.

ಒಂದೇ ವಾತಾವರಣದಲ್ಲಿ ಬೆಳೆದ ಒಡಹುಟ್ಟಿದವರ ಮನಃಸ್ಥಿತಿಗಳು ಸಂಪೂರ್ಣ ಭಿನ್ನವಾಗಿದ್ದು, ತೀರಾ ವಿರುದ್ಧ ದಿಕ್ಕಿನಲ್ಲಿ ಯೋಚಿಸುವುದನ್ನು ನೋಡಿದಾಗ ಮನುಷ್ಯನ ಮನಸ್ಸು ಅದೆಷ್ಟು ವಿಶೇಷ ಎನ್ನುವುದು ಅರ್ಥವಾಗುತ್ತದೆ. ಒಬ್ಬ ಸೋದರ ಲೋಕರೂಢಿಯಂತೇ ಸಂಸಾರಿಯಾದರೆ, ಇನ್ನೊಬ್ಬ ಹಿಮಾಲಯದತ್ತ ಮುಖ ಮಾಡಿ ನಡೆದಾಗ ಬದುಕಿನ ನಿಗೂಢತೆಯ ಅರಿವಾಗುತ್ತದೆ.

ಸಂಸಾರ, ಕುಟುಂಬ ಎನ್ನುವುದು ನಿಜಕ್ಕೂ ಸಾಮಾಜಿಕ ವ್ಯವಸ್ಥೆ ಎನ್ನುವುದಕ್ಕಿಂತ  ಮಾನಸಿಕ ವ್ಯವಸ್ಥೆ ಎನ್ನಬಹುದೇನೋ? ಸಂಸಾರಿಯಾಗಿದ್ದರೂ ಕುಟುಂಬವನ್ನು ಅಕ್ಕರೆಯಿಂದ ಪ್ರೀತಿಸದಿದ್ದಾಗ, ಮದುವೆ, ಹೆಂಡತಿ ಮಕ್ಕಳು ಎನ್ನುವುದನ್ನು ಕೇವಲ ಪರಂಪರಾಗತ ಅಭ್ಯಾಸವನ್ನಾಗಿಸಿಕೊಂಡವ ನಿಜವಾಗಿ ಒಂಟಿ ತಾನೇ!

ಅವಿವಾಹಿತನಾಗಿಯೂ ತನ್ನ ಏಕಾಂತದ ಕ್ಷಣಗಳನ್ನು ಸಮೃದ್ಧವಾಗಿ ಆನಂದದಿಂದ ಕಳೆಯುವವ, ಸುತ್ತಲಿನ ಬದುಕುಗಳಿಗೆ, ಮನುಷ್ಯರೊಂದಿಗೆ ಸ್ನೇಹದಿಂದ ಕಳೆಯುವವ ನಿಜವಾದ ಕುಟುಂಬಜೀವಿಯಲ್ಲವೇ? ಕುಟುಂಬ–ಸಾಂಗತ್ಯದ ಅನೇಕ ಮಾದರಿಗಳು ನಮ್ಮ ಮುಂದಿವೆ. ಯಾವ ಮಾದರಿಯೂ ಅಸಹಜವಲ್ಲ.

ಪ್ರತಿ ಮನುಷ್ಯನ ವಿಶಿಷ್ಟತೆಯ ಅರಿವು ನಮಗಾಗುವುದೇ ಹೊಸ ಮಾದರಿಗಳಿಂದ. ಹೀಗೆ, ಏಕಾಂಗಿ ಗಂಡಸಿನ ಬದುಕಿನಂತೇ ಒಂಟಿ ಮಹಿಳೆಯ ಸಂಸಾರವೂ ಪ್ರತಿಯೊಂದು ಗೌರವಕ್ಕೆ ಅರ್ಹ. ಈ ಸಮಾಜದಲ್ಲಿ ಕಠಿಣವಾಗಿ ಕಂಡರೂ ದಿಟ್ಟತನದಿಂದ ಬದುಕುವವರಿಗೆ ನೆಮ್ಮದಿ ಪಡೆಯುವ ಅವಕಾಶವಿದೆ. ನಮ್ಮ ಪುರಾಣಗಳು ನಮ್ಮಲ್ಲಿ ಬಿತ್ತಿರುವ ಬದುಕುಗಳ ವಿಶಿಷ್ಟತೆ ನೋಡಿದರೆ ಪ್ರತಿಯೊಂದು ವ್ಯಕ್ತಿಯ ವೈಯಕ್ತಿಕ ಸಂಸಾರದೆಡೆಗೆ ಗೌರವ ಮೂಡುತ್ತದೆ.

ಪುರಾಣದ ಮಹಿಳೆಯರಲ್ಲಿ ದಿಟ್ಟ ಹೆಣ್ಣಾಗಿ ಕಾಣುವ ದ್ರೌಪದಿಯ ಕುಟುಂಬ ಅನೇಕ ವೈರುಧ್ಯಗಳ ಜೊತೆಯಲ್ಲೇ ವಿಶೇಷ ಕೂಡ. ಒಂದೊಂದು ದಿಕ್ಕಿನೆಡೆಗೆ ಮುಖ ಮಾಡಿದಂತಿದ್ದ ಗುಣಗಳ ಪಂಚಪಾಂಡವರ ಪತ್ನಿ, ಏಕಾಂತದಲ್ಲಿ ಒಂಟಿಸಂಸಾರಿಯೇ. ಆಕೆಯ ಮನಸ್ಸಿಗೆ ಹಿತ ಮೂಡಿಸುತ್ತಿದ್ದ ಭೀಮನೂ ಮಕ್ಕಳೈವರನ್ನು ಕಳೆದುಕೊಂಡ ಹೊತ್ತಲ್ಲಿ ದ್ರೌಪದಿಯ ಶೋಕ ಅರಿಯದೇ ಹೋಗುತ್ತಾನೆ. ಇಡೀ ಮಹಾಭಾರತದ ಕಣ್ಣಿನಂತಿದ್ದ ಮಹಾಬ್ರಹ್ಮಚಾರಿ ಭೀಷ್ಮನಿಗಿಂತ ದೊಡ್ಡ ಸಂಸಾರಿಯನ್ನು ಈ ನೆಲ ಕಂಡಿಲ್ಲವೆನ್ನಬೇಕು.

ಯಾರದೋ ಮಕ್ಕಳು, ಇನ್ಯಾರದ್ದೋ ಮೊಮ್ಮಕ್ಕಳಿಗಾಗಿ ಬದುಕುವ ಶಾಪವನ್ನು ವರವಾಗಿ ಬದುಕಿದ ಈ ‘ಒಂಟಿ ಸಂಸಾರಿ’ ಇಂದಿಗೂ ಅಚ್ಚರಿಯ ಮಾದರಿ. ಕಟುಟೀಕೆಗಳನ್ನು ಹುಟ್ಟಿನಿಂದ ಮರಣದವರೆಗೂ ನಿರಂತರ ಕೇಳುತ್ತಾ ಎದುರಿಗೆ ಸಿಕ್ಕಿದ ಪ್ರತಿ ಜೀವಕ್ಕೂ ಅಚ್ಚರಿಯಾಗಿ ಕಂಡ ಕೃಷ್ಣ, ಲೌಕಿಕದ ಲೆಕ್ಕದಲ್ಲಿಯೂ ದೊಡ್ಡ ಸಂಸಾರಿ.

ಅಷ್ಟ ಮಹಿಷಿಯರೊಂದಿಗೆ ಹದಿನಾರು ಸಾವಿರ ಹೆಂಡಿರು ಈ ಕೃಷ್ಣನಿಗೆ! ಇದಲ್ಲದೇ ಹೋದೆಡೆಯಲ್ಲೆಲ್ಲ ಕಟ್ಟಿಕೊಳ್ಳುತ್ತಿದ್ದ ಭಾವನಾತ್ಮಕ ಬಂಧಗಳು ಇವನನ್ನು ಈರ್ಷೆಯೊಂದಿಗೇ ಅಚ್ಚರಿಯಾಗಿ ನೋಡುವಂತೇ ಮಾಡಿದೆ. ಕೊನೆಗೆ ತನ್ನ ಕುಲವನ್ನು ಉಳಿಸುವ ಕನಿಷ್ಠ ಯೋಚನೆಯನ್ನೂ ಮಾಡದ ಕೃಷ್ಣ ಸಂಸಾರದಲ್ಲಿದ್ದೂ ಸಂಸಾರವನ್ನು ಮನಸ್ಸಿಗೆ ಮುಟ್ಟಿಸಿಕೊಳ್ಳದ ಸನ್ಯಾಸಿ.

ಮೂವತ್ತೈದರ ಅವಿವಾಹಿತೆ ದೇವಿಕಾ, ಅನಾಥಾಶ್ರಮವೊಂದರ ಪಾಲಕಿಯಾಗಿ ಕೆಲಸ ಮಾಡುತ್ತಿದ್ದು, ಆಶ್ರಮದ ಇಪ್ಪತ್ತೈದು ಮಕ್ಕಳ ಕಡುಪ್ರೀತಿಯ ಅಕ್ಕ. ವರ್ಷಕ್ಕೊಮ್ಮೆ ದೂರದ ಗದಗಿನ ತನ್ನ ಮನೆಗೆ ಹೋದರೂ ವಾರದಲ್ಲೇ ಮಕ್ಕಳ ನೆನಪಾಗಿ ಧಾವಿಸಿ ಬರುತ್ತಾಳೆ. ಮಕ್ಕಳೆಡೆಗಿನ ಆಕೆಯ ಆಪ್ತತೆ ನೋಡಿದರೆ ಅವಳ ಕುಟುಂಬ ನಾವು ನೋಡುತ್ತಿರುವ ಅತ್ಯುತ್ತಮ ಕುಟುಂಬದಲ್ಲಿ ಒಂದೆಂದು ಅನಿಸುತ್ತದೆ.

ಅಪ್ಪ–ಅಮ್ಮ, ಒಂದು ಗಂಡು ಗು, ಒಂದು ಹೆಣ್ಣುಮಗು ಎಂದರೆ ಸಂಪೂರ್ಣ ಕುಟುಂಬ ಎನ್ನುವ ಸಿದ್ಧಮಾದರಿಗಿಂತ ಭಿನ್ನವಾಗಿ ಈ ಮನುಷ್ಯಸಮಾಜದಲ್ಲಿ ಭಿನ್ನತೆಯೇ ವಿಶೇಷವೆನ್ನುವಂತೇ ಅನೇಕ ಮಾದರಿಗಳು ನಮ್ಮ ನಡುವೆ ಇವೆ. ಸಂಗಾತಿಯನ್ನು ಕಳೆದುಕೊಂಡು ಮಕ್ಕಳಿಗಾಗಿ ದುಡಿಯುತ್ತಾ ಕೆಲಸ ಮುಗಿದೊಡನೇ ಧಾವಿಸಿ ಬರುವ, ಒಂಟಿಯಾಗಿ ಬದುಕುವ, ಮಕ್ಕಳಿಲ್ಲದೇ ಗಂಡಹೆಂಡಿರಿಬ್ಬರೇ ಇರುವ, ಒಂದೇ ಮಗುವಿರುವ, ದತ್ತುಮಗುವನ್ನು ಸ್ವೀಕರಿಸುವ – ಹೀಗೆ ಪ್ರತಿಯೊಬ್ಬರ ಸಂಸಾರಗಳು ವಿಶೇಷ ಕುಟುಂಬಗಳೇ. ಎಲ್ಲ ಆಯ್ಕೆಗಳೂ ಸಹಜವೇ.

ಯಾವ ವ್ಯಕ್ತಿಯ ಬದುಕು ಕೂಡ ತಿರಸ್ಕಾರಾರ್ಹವಲ್ಲ. ಹೊರಗಿನ ಸಾಮಾಜಿಕ ಸಂಬಂಧಗಳಿಗೆ ಒಳಗಾಗದೇ, ಆದರೆ ಎಲ್ಲರನ್ನೂ ತಮ್ಮವರೆಂದು ಬದುಕಿದ ಸಂತರ, ಜ್ಞಾನಿಗಳ ಅದ್ಭುತ ಮಾದರಿಗಲೂ ನಮ್ಮ ಮುಂದಿವೆ. ಸಂಸಾರ, ಕುಟುಂಬ – ಎನ್ನುವುದು ಮನಸ್ಸಿಗೆ ಸಂಬಂಧಿಸಿದ ಅಪ್ಯಾಯಮಾನವಾದ ಸೆಳೆತ, ಅಕ್ಕರೆಗಳು ಎನ್ನುವುದು ಅರಿವಾದಾಗ ಬಹಿರಂಗದ ಸಂಬಂಧಗಳು ಕೇವಲ ಅಗತ್ಯಗಳಾಗಿ, ಶುಷ್ಕವಾಗಿ ಕಾಣಿಸುವುದಿದೆ.

ಸಂಸಾರ ಆರಂಭವಾಗುವುದು ನಮ್ಮ ಮನಸ್ಸಿನ ಭೂಮಿಕೆಯಲ್ಲಿ. ಯಾವುದರೆಡೆಗಾದರೂ ಪ್ರೀತಿ ಮೂಡಿ, ಅದೇ ಆಲಂಬನೆಯಾಗಿ ನಮ್ಮೊಂದಿಗೆ ಜೊತೆಯಾದಾಗ ಅಲ್ಲಿಯೇ ಸಂಸಾರ ರೂಪುಗೊಳ್ಳುತ್ತದೆ. ಭೂಮಿ ಮೇಲೆ ನಡೆದಾಡುವ ಪ್ರತಿ ಮನುಷ್ಯನೂ ಸಂಸಾರಿಯೇ. ಹಾಗೇ ಯಾವ ಸಂಸಾರವೂ ಪರಿಪೂರ್ಣವಲ್ಲ. ಪೂರ್ಣಗೊಳ್ಳುವುದು ಭಾವದಿಂದಲೇ ಹೊರತು ಜೀವಗಳಿಂದಲ್ಲ.

ಕುಟುಂಬದ ಬಗ್ಗೆ ನಿಮಗೂ ಸ್ಪಷ್ಟ ಕಲ್ಪನೆಗಳಿವೆಯೆ? ಹಾಗಾದರೆ ಅವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಬರಹ 300 ಪದಗಳನ್ನು ಮೀರದಂತಿರಲಿ. ಸಂಪಾದಕರ ತೀರ್ಮಾನವೇ ಅಂತಿಮ. ನಿಮ್ಮ ಬರಹಗಳನ್ನು ಕಳುಹಿಸಬೇಕಾದ ವಿಳಾಸ: ಸಂಪಾದಕರು, ಭೂಮಿಕಾ ಪುರವಣಿ, ಪ್ರಜಾವಾಣಿ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560 001. ನುಡಿ, ಬರಹ ಅಥವಾ ಯೂನಿಕೋಡ್‌ಗಳಲ್ಲಿ ಪ್ರಬಂಧಗಳನ್ನು ಇ–ಮೇಲ್‌ ಮೂಲಕವೂ ಕಳುಹಿಸಬಹುದು. ಇ–ಮೇಲ್: bhoomika@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry