ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಕಾಲೀನ ಸಂಗತಿಗಳಿಗೆ ಕನ್ನಡಿಯಾದ ಸ್ತಬ್ಧಚಿತ್ರಗಳು

Last Updated 1 ಅಕ್ಟೋಬರ್ 2017, 8:43 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಇಲ್ಲಿ ನಡೆದ ದಸರಾ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಸಮಕಾಲೀನ ಸಮಸ್ಯೆಗಳನ್ನು ಬಿಂಬಿಸುವ ಸ್ತಬ್ಧ ಚಿತ್ರಗಳು ಪ್ರೇಕ್ಷಕರ ಗಮನಸೆಳೆದವು ಬಾಳೆಲೆಯಲ್ಲಿ ಸಾಲಗಾರನಿಗೆ ನಾಯಿಯಿಂದ ಕಚ್ಚಿಸಿದ ತೋಟದ ಮಾಲಿಕನ ಕೃತ್ಯ, ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈಚೆಗೆ ನಡೆದ ವಿಯೆಟ್ನಾಂ ಕರಿಮೆಣಸು ಹಗರಣ, ಬ್ಲೂವೆಲ್ ಮೊಬೈಲ್‌ ಆಟ ಸ್ತಬ್ಧಚಿತ್ರಗಳಿಗೆ ವಸ್ತುವಾಗಿದ್ದವು.

ಸೀಗೆತೋಡು ಇಂಡಿಯನ್ ಯುವಕ ಸಂಘ ಸಾಲಗಾರನ ಮೇಲೆ ನಾಯಿ ಛೂ ಬಿಟ್ಟು ಕಚ್ಚಿಸಿದ ಮಾಲೀಕನ ಕೃತ್ಯ ಖಂಡನೀಯ ಎಂಬ ಸಂದೇಶವಿದ್ದ ಸ್ತಬ್ಧ ಚಿತ್ರ ಪ್ರದರ್ಶಿಸಿತು.
ಪಟೇಲ್ ನಗರದ ಗೆಳೆಯರ ಬಳಗ ವಿಯಟ್ನಾಂ ಕರಿಮೆಣಸಿನಿಂದ ಕೊಡಗಿನ ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯ ಕುರಿತ ವಸ್ತು ಆಯ್ಕೆ ಮಾಡಿಕೊಂಡರೆ; ಭಗತ್ ಪುರುಷ ಸ್ವಸಹಾಯ ಸಂಘದ ‘ಬ್ಲೂವೇಲ್ ಚಾಲೆಂಜ್’ ಮೊಬೈಲ್‌ ಗೇಮ್‌ ನಿಂದ ಯುವಜನರ ಮೇಲೆ ಆಗುತ್ತಿರುವ ಪ್ರತಿಕೂಲ ಪರಿಣಾಮವನ್ನು ಬಿಂಬಿಸಿತು. ‘ಆರದಿರಲಿ ಮನೆಯ ನಂದಾ ದೀಪ’ ಇದರ ಘೋಷವಾಕ್ಯವಾಗಿತ್ತು.

ಹಿಂದೂಸ್ತಾನ್‌ ಇಂಡಸ್ಟ್ರೀಸ್ ಸಾಲು ಮರದ ತಿಮ್ಮಕ್ಕನ ಚಿತ್ರವಿದ್ದ ಚಿತ್ರ ರೂಪಿಸಿದ್ದು, ಪುಟ್ಟಲಕ್ಷ್ಮಮ್ಮ ತಿಮ್ಮಕ್ಕನ ಪಾತ್ರಧಾರಿಯಾಗಿದ್ದರು.ಸರ್ವಂ ನ ವಿದೇಶಿಕಲೆ ಪ್ರೋತ್ಸಾಹಿಸಿ, ದೇಸಿ ಕಲೆ ಉಳಿಸಿ ಎಂಬ ವಾಕ್ಯದ ಕೋಲಾಟ, ಭರತ ನಾಟ್ಯ, ಕಥಕ್ಕಳಿ ಕಲಾವಿದರನ್ನು ಒಳಗೊಂಡ ಸ್ತಬ್ಧ ಚಿತ್ರ, ಕೊಪ್ಪ ದೇಶಪ್ರೇಮಿ ಯುವಕ ಸಂಘ ಸೆಲ್ಫಿ ಸೆಳೆತದಿಂದ ಉಂಟಾಗುವ ಅಪಘಾತ. ವಾರ್ಧಾ ಸಂಘದ ವಿದೇಶಿ ಆಹಾರ ಬಿಟ್ಟು, ದೇಸಿ ಆಹಾರ ಸೇವಿಸಿ, ಆರೋಗ್ಯವಾಗಿರಿ ಎಂಬ ಘೋಷ ವಾಕ್ಯದ ಚಿತ್ರ, ಅರುವತ್ತೊಕ್ಕಲು ಶಾರದಾಂಬ ದಸರಾ ಸಮಿತಿಯ ಕಸಮುಕ್ತ ಪರಿಸರದಿಂದ ಆರೋಗ್ಯ ರಕ್ಷಣೆ; ಡೆಂಗಿ, ಚಿಕೂನ್‌ಗುನ್ಯಾ ವಿರುದ್ಧ ಜಾಗೃತಿ ಮೂಡಿಸಲು ಒತ್ತು ನೀಡಿತ್ತು.

8 ಸ್ತಬ್ಧ ಚಿತ್ರಗಳು ಪಾಲ್ಗೊಂಡಿದ್ದವು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದ ಬಳಿ ಸಿಪಿಐ ಪಿ.ಕೆ.ರಾಜು ಮೆರವಣಿಗೆ ಉದ್ಘಾಟಿಸಿದರು. ನಾಡಹಬ್ಬ ದಸರಾ ಸಮಿತಿ ಪದಾಧಿಕಾರಿಗಳು ಪ್ರತಿ ವರ್ಷದಂತೆ ಮೆರವಣಿಗೆ ಆಯೋಜಿಸಿದ್ದರು.

ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮೆರವಣಿಗೆ 2 ಕಿಮೀ ಅಂತರ ಕ್ರಮಿಸಿ, ಉಮಾ ಮಹೇಶ್ವರಿ ದೇವಸ್ಥಾನದ ಬಳಿಕ ಬಲಕ್ಕೆ ತಿರುಗಿ ಸಮುದಾಯ ಆರೋಗ್ಯಕೇಂದ್ರದ ಬಳಿ ಸಂಜೆ 6.30ರ ವೇಳೆಗೆ ಸಮಾಪ್ತಿಗೊಂಡಿತು.

ಸರ್ವಂ ದೇಸಿ ಸ್ತಬ್ಧ ಚಿತ್ರ ಪ್ರಥಮ: ಸರ್ವ ಸಮಿತಿ ದೇಸಿ ಕಲೆಗಳನ್ನು ಉಳಿಸಿ ಸ್ತಬ್ಧ ಚಿತ್ರ ಪ್ರಥಮ ಬಹುಮಾನ ಪಡೆಯಿತು. ಸಮಿತಿಯು ಸತತವಾಗಿ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡ ಹಿರಿಮೆಗೆ ಪಾತ್ರವಾಯಿತು.

ಭಗತ್ ಪುರುಷರ ಸ್ವಸಹಾಯ ಸಂಘದ ಬ್ಲೂವೇಲ್‌ನ ಆರದಿರಲಿ ಮನೆಯ ನಂದಾ ದೀಪ ಸ್ತಬ್ಧ ಚಿತ್ರ ದ್ವಿತೀಯ ಸ್ಥಾನ ಗಳಿಸಿತು. ಅರುವತ್ತೊಕ್ಕಲು ಶಾರದಾಂಬಾ ದಸರಾ ಸಮಿತಿ ಸಮರ್ಪಕ ತ್ಯಾಜ್ಯ ವಿಲೇವಾರಿಯಿಂದ ಕಸಮುಕ್ತ ಪರಿಸರ ಸಂದೇಶದ ಸ್ತಬ್ಧ ಚಿತ್ರ ತೃತೀಯ ಬಹುಮಾನ ಪಡೆದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT