ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳಿಂದ ಊರು ಸ್ವಚ್ಛಗೊಳಿಸುತ್ತಿರುವ ಶಿವರಾಯ!

Last Updated 1 ಅಕ್ಟೋಬರ್ 2017, 19:19 IST
ಅಕ್ಷರ ಗಾತ್ರ

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ರುದ್ನೂರು ಗ್ರಾಮದ 70 ವರ್ಷದ ಶಿವರಾಯ ಸಾಯಬಣ್ಣ ಫೈದಾರ್‌ ಅವರು ಕಳೆದ 50 ವರ್ಷಗಳಿಂದ ತಮ್ಮೂರಿನ ಬೀದಿಗಳನ್ನು ಗುಡಿಸಿ ಸ್ವಚ್ಛ ಮಾಡುತ್ತಿದ್ದಾರೆ!

ಇದಕ್ಕಾಗಿ ಇವರು ಯಾರಿಂದಲೂ ಏನನ್ನೂ ಪಡೆಯುವುದಿಲ್ಲ. ತಾವೇ ಮನೆಯಿಂದ ಪೊರಕೆಯನ್ನು ತೆಗೆದುಕೊಂಡು ಬಂದು ಕಸ ತೆಗೆಯುವ ಸೇವೆಯಲ್ಲಿ ಮಾಡುತ್ತಾರೆ.

‘ನಮ್ಮ ಸುತ್ತಲಿನ ಹಾದಿ ಬೀದಿ ಸ್ವಚ್ಛವಾಗಿರಬೇಕು. ಸ್ವಚ್ಛತೆ ಜೀವನದ ಉಸಿರಾಗಬೇಕು. ಹೀಗಾಗಿ, ನಾನು ಕಸ ಗುಡಿಸುವುದರಲ್ಲಿಯೇ ಜೀವನದ ತೃಪ್ತಿ ಕಂಡುಕೊಂಡಿದ್ದೇನೆ’ ಎನ್ನುತ್ತಾರೆ ಶಿವರಾಯ.

‘ನನಗೀಗ 53 ವರ್ಷ. ನಾನು ಚಿಕ್ಕವನಿದ್ದಾಗಿನಿಂದಲೂ ಶಿವರಾಯ ಕಸ ಗುಡಿಸುತ್ತಿರುವುದು ಕಂಡಿದ್ದೇನೆ. ಅವರು ಅಪರೂಪದ ವ್ಯಕ್ತಿ ’ ಎನ್ನುತ್ತಾರೆ ಗ್ರಾಮದ ನಾಗಣ್ಣ ಕರೆಪ್ಪನೋರ.

ಶಿವರಾಯ ಕೃಷಿಕರು. ತಮ್ಮ ಕಾಯಕದ ನಡುವೆಯೇ ಊರಿನ ಪ್ರಮುಖ ಭಾಗವನ್ನು ಸ್ವಚ್ಛಗೊಳಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ಕಾಲುಜಾರಿ ಬಿದ್ದು ಸೊಂಟದ ಭಾಗ ಮುರಿದಿದೆ. ಈಗ ಸ್ವತಂತ್ರವಾಗಿ ನಡೆಯಲು ಆಗುವುದಿಲ್ಲ. ಆದರೂ, ತಮ್ಮ ಸೇವಾ ಕಾಯಕವನ್ನು ಮಾತ್ರ ನಿಲ್ಲಿಸಿಲ್ಲ. ಒಂದು ಕೈಯಲ್ಲಿ ಪೊರಕೆ, ಇನ್ನೊಂದು ಕೈಯಲ್ಲಿ ನಡೆಯಲು ಸಹಾಯಕವಾದ ‘ವಾಕರ್‌’ ಹಿಡಿದು ಬಜಾರ್‌ ಹಾಗೂ ಚವಡಿ ಸುತ್ತಲೂ ಕಸ ಗುಡಿಸುತ್ತಾರೆ. ನಂತರ ಸಂಗ್ರಹವಾದ ಕಸವನ್ನು ತೆಗೆದುಕೊಂಡು ಹೋಗಿ ತಿಪ್ಪೆಗೆ ಹಾಕುತ್ತಾರೆ.

‘ನಾವು ಅವರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡಿಲ್ಲ. ಇವರಿಗೆ ಮಾಸಿಕ ₹500 ವೃದ್ಧಾಪ್ಯ ವೇತನ ಬರುತ್ತಿತ್ತು. ಆರು ತಿಂಗಳಿಂದ ಸ್ಥಗಿತಗೊಂಡಿದೆ. ಅಗತ್ಯ ದಾಖಲಾತಿಗಳೊಂದಿಗೆ ಮರು ಅರ್ಜಿ ಸಲ್ಲಿಸಿದರೂ ಇನ್ನೂ ಮಾಸಾಶನ ಬಂದಿಲ್ಲ’ ಎಂದು ಅವರ ಎಂದು ಪುತ್ರ ಅಂಬರೀಷ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT