ಜಿಲ್ಲೆಯಾದ್ಯಂತ ಮೊಹರಂ ಆಚರಣೆ

ಸೋಮವಾರ, ಮೇ 27, 2019
29 °C

ಜಿಲ್ಲೆಯಾದ್ಯಂತ ಮೊಹರಂ ಆಚರಣೆ

Published:
Updated:

ಬೀದರ್‌: ಮೊಹರಂ ಹಬ್ಬವನ್ನು ಭಾನುವಾರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಜಿಲ್ಲೆಯ ವಿವಿಧ ಕಡೆ ಪೀರ್‌ಗಳ ಮೆರವಣಿಗೆ ನಡೆಯಿತು. ಪೀರ್‌ಗಳಿಗೆ ಹಿಂದೂ–ಮುಸ್ಲಿಮರು ವಿಶೇಷ ಪೂಜೆ ಸಲ್ಲಿಸಿದರು.

ಇಲ್ಲಿಯ ಇರಾನಿ ಕಾಲೊನಿಯ ಶಿಯಾ ಮುಸ್ಲಿಮರು ಹುಸೇನರ ಸ್ಮರಣೆಯಲ್ಲಿ ಉಪವಾಸ ಮಾಡಿ ಶೋಕ ಆಚರಿಸಿದರು. ಕಪ್ಪು ಬಟ್ಟೆ ಧರಿಸಿ ನಗರದಲ್ಲಿ ಮೆರವಣಿಗೆ ನಡೆಸಿದರು. ಸಣ್ಣ ಆಯುಧಗಳಿಂದ ಎದೆ, ಬೆನ್ನಿನ ಮೇಲೆ ಹೊಡೆದುಕೊಳ್ಳುತ್ತ ಇರಾನಿ ಕಾಲೊನಿಯಿಂದ ರೈಲ್ವೆ ನಿಲ್ದಾಣ ಮಾರ್ಗವಾಗಿ ಮೆರವಣಿಗೆ ಮೂಲಕ ಹರಳಯ್ಯ ವೃತ್ತದ ಬಳಿ ಬಂದು ಜಮಾಯಿಸಿದರು. ಅಲ್ಲಿ ಯುವಕರು ಸರಪಳಿಗೆ ಚಾಕುಗಳನ್ನು ಸಿಕ್ಕಿಸಿ ಬೆನ್ನ ಮೇಲೆ ಹೊಡೆದುಕೊಂಡು ರಕ್ತ ಚೆಲ್ಲಿ ಇಮಾಮ್ ಹುಸೇನರಿಗೆ ಭಕ್ತಿ ನಮನ ಸಲ್ಲಿಸಿದರು.

ಹುಮನಾಬಾದ್‌: ತ್ಯಾಗ ಬಲಿದಾನಗಳ ಹಬ್ಬ ಮೊಹರಂ ಅಂಗವಾಗಿ ಪಟ್ಟಣ ಸೇರಿದಸಂತೆ ತಾಲ್ಲೂಕಿನ ವಿವಿಧೆಡೆ ಪೀರ್‌ಗಳ ಮೆರವಣಿಗೆ ನಡೆಯಿತು. ಜೋಷಿ ಗಲ್ಲಿಯಲ್ಲಿ ಬುಧವಾರ ನಡೆದ ಚಾಂದ್‌ ಹುಸೇನ್‌, ಲಾಲಾ ಹೈದರ್‌, ಮೌಲಾಲಿ ಪೀರಾಗಳ ಮೆರವಣಿಗೆ ವೇಳೆ ಭಕ್ತರು ನೀರು ಸಿಂಪರಿಸಿ, ದಾರಿಯುದ್ದಕ್ಕೂ ಉರುಳುಸೇವೆ ಮೂಲಕ ಭಕ್ತಿಸೇವೆ ಸಲ್ಲಿಸಿದರು.

ಪೀರಾ ಪ್ರತಿಷ್ಠಾಪನೆ ಉತ್ಸವ ಸಮಿತಿ ಪ್ರಮುಖರಾದ ಗೋರಖನಾಥ ಶಾಸ್ತ್ರಿ, ಮೋಗಲಪ್ಪ, ಫಕೀರಚಂದ್‌, ವಿನೋದ ವಾಕೋಡೆ ಶಾಸ್ತ್ರಿ, ತುಕಾರಾಮ ಶಾಸ್ತ್ರಿ, ಯಲಾಲಸಾಬ್‌, ಸುಭಾಷ ಚಿಂಚೋಳಿಕರ್, ದಿಲೀಪರಾವ ಶಾಸ್ತ್ರಿ, ಕಾಳಪ್ಪ ಶಾಸ್ತ್ರಿ ಇದ್ದರು.

ಶಿವಪುರ ಅಗಸಿ ಹತ್ತಿರದ ಮುಚಾವಲೆ ಪೀರಾ ಮತ್ತಿತರ ಕಡೆಗಳಲ್ಲೂ ಪೀರ್‌ಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಭಾವೈಕ್ಯತೆ ಪ್ರತೀಕದ ಮೊಹರಂ ಹಬ್ಬದಲ್ಲಿ ಹಿಂದೂ– ಮುಸ್ಲಿಮರು ನೈವೇದ್ಯ ಸಮರ್ಪಿಸುತ್ತಿರುವುದು ಎಲ್ಲೆಡೆ ಕಂಡು ಬಂತು.

ಹಳ್ಳಿಖೇಡ(ಬಿ), ನಂದಗಾಂವ್, ಸುಲ್ತಾನಾಬಾದವಾಡಿ, ಮುಗನೂರ್‌, ಬೇನಚಿಂಚೋಳಿ, ಹುಡಗಿ, ಸಿಂಧನಕೇರಾ, ಗಡವಂತಿ, ಮೋಳಕೇರಾ, ಘೋಡವಾಡಿ, ಘಾಟಬೋರಾಳ್, ಕನಕಟ್ಟಾ, ಹಂದಿಕೇರಾ ಗ್ರಾಮಗಳಲ್ಲಿ ಮೊಹರಂ ಆಚರಿಸಲಾಯಿತು.

ಬಸವಕಲ್ಯಾಣ: ಮುಖ್ಯ ರಸ್ತೆಯಲ್ಲಿ ಭಾನುವಾರ ಮೊಹರಂ ಪೀರ್ ಗಳ ಮೆರವಣಿಗೆ ನಡೆಯಿತು.ವಿವಿಧ ಓಣಿಗಳಲ್ಲಿ ಪ್ರತಿಷ್ಠಾಪಿಸಿದ್ದ ಮತ್ತು ಸುತ್ತಲಿನ ಗ್ರಾಮಗಳಾದ ಪ್ರತಾಪುರ, ಶಿವಪುರ, ನಾರಾಯಣಪುರ ಮತ್ತು ನೀಲಕಂಠ ಗ್ರಾಮದ ಪೀರ್ ಗಳನ್ನು ಕೂಡ ಮೆರವಣಿಗೆ ಮೂಲಕ ತರಲಾಗಿತ್ತು. ಮಹಾತ್ಮಗಾಂಧಿ ವೃತ್ತದಲ್ಲಿ ಎಲ್ಲ ಪೀರ್ ಗಳು ಒಟ್ಟುಗೂಡಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry