ಶಿವಾಜಿ ಕಾಲೇಜಿನಲ್ಲಿ ರಂಗೋಲಿಯ ರಂಗು

ಬುಧವಾರ, ಜೂನ್ 19, 2019
27 °C

ಶಿವಾಜಿ ಕಾಲೇಜಿನಲ್ಲಿ ರಂಗೋಲಿಯ ರಂಗು

Published:
Updated:

ಕಾರವಾರ: ಇಲ್ಲಿನ ಚಿತ್ತಾಕುಲದ ಶಿವಾಜಿ ಪದವಿ ಪೂರ್ವ ಮಹಾ ವಿದ್ಯಾಲಯದಲ್ಲಿ ಶಾರದಾ ಪೂಜೆಯ ನಿಮಿತ್ತ ಹಮ್ಮಿಕೊಳ್ಳುವ ರಂಗೋಲಿ ಪ್ರದರ್ಶನ 50ನೇ ವರ್ಷಕ್ಕೆ ಕಾಲಿಟ್ಟಿದ್ದು, ಸುವರ್ಣ ಮಹೋತ್ಸವದ ಅಂಗವಾಗಿ ಈ ಬಾರಿ ಮುಂಬೈ ನೌಕಾದಳದ ರಂಗಾವಳಿ ಸಂಸ್ಕಾರ ಜೋಪಾಸನ್‌ ಗ್ರೂಪಿನ ಕಲಾವಿದರು ರಚಿಸಿದ 48x22 ಅಳತೆಯ ರಂಗೋಲಿ ಎಲ್ಲರ ಕಣ್ಮನ ಸೆಳೆಯಿತು.

ಸ್ಥಳೀಯ ಕಲಾವಿದರಾದ ಸಂಜೀವ ಹಳದನಕರ ಹಾಗೂ ಲಕ್ಷ್ಮಿಪತಿ ಮಾಜಾಳಿಕರ ಅವರ ನೇತೃತ್ವದಲ್ಲಿ ಮುಂಬೈನ ನಿಲೇಶ್‌ ಮಿಂಡೆ, ಸಂಕೇತ ಗಡಿಗಾಂವಕರ್, ಸಂದೀಪ ಕಳಸೇಕರ್, ಆಕಾಶ ಮಿಂಡೆ ಮತ್ತು ಸಂದೀಪ ಜಗತಾಪ ಅವರು ರಂಗೋಲಿಯಲ್ಲಿ ಎರಡು ಬೃಹದಾಕಾರದ ಚಿತ್ರವನ್ನು ರಚಿಸಿದ್ದರು. ಒಂದು ಕಾಲೇಜಿನ ಆವರಣದಲ್ಲಿ, ಇನ್ನೊಂದು ಕಾಲೇಜಿನ ಸಭಾಂಗಣದಲ್ಲಿ ರಚಿಸಲಾಗಿತ್ತು.

ರಂಗೋಲಿಯ ಚಿತ್ತಾರ: ನುರಿತ ಕಲಾವಿದರು ತಮ್ಮ ಕೈಚಳಕದಿಂದ ಅದ್ಭುತವಾದ ಹತ್ತಾರು ಚಿತ್ರವನ್ನು ಅರಳಿಸಿದ್ದರು. ಜಾನಪದ ಕಲಾವಿದೆ ಅಂಕೋಲೆಯ ಸುಕ್ರಿ ಬೊಮ್ಮು ಗೌಡ, ಹಿಂದಿ ಚಿತ್ರನಟ ದಿ. ಓಂಪುರಿ, ಎ.ಪಿ.ಜೆ ಅಬ್ದುಲ್‌ ಕಲಾಂ, ಶಿವಾಜಿ ಮಹಾರಾಜ, ಬಾಹುಬಲಿ ಚಿತ್ರದ ನಟ ಪ್ರಭಾಸ್‌ ಹೀಗೆ ನಾನಾ ವ್ಯಕ್ತಿ ಚಿತ್ರಗಳನ್ನು ಬಿಡಿಸಲಾಗಿತ್ತು. ಅಲ್ಲದೇ ಹೂವು, ಧಾನ್ಯಗಳಿಂದ ಅನೇಕ ಚಿತ್ರಗಳನ್ನು ರಚಿಸಲಾಗಿತ್ತು.

ಭಾನುವಾರ ಸಂಜೆ 4.30ರಿಂದ ರಾತ್ರಿ 9 ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಕಾರವಾರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಬಂದಿದ್ದ ಜನರು ರಂಗೋಲಿಯನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದಿದ್ದರು. ಕೆಲವರು ತಮ್ಮ ಮೊಬೈಲ್‌ನಲ್ಲಿ ಚಿತ್ರ ಸೆರೆ ಹಿಡಿದರು.

1967–68ರಲ್ಲಿ ಆರಂಭ: ‘ಪ್ರತಿ ವರ್ಷ ದಸರಾ ಹಬ್ಬದ ವೇಳೆ ಕಾಲೇಜಿನಲ್ಲಿ ಶಾರದಾ ಪೂಜೆ ವಿಜೃಂಭಣೆಯಿಂದ ನಡೆಯುತ್ತದೆ. ಶಾರದಾ ಪೂಜೆಯ ಅಂಗವಾಗಿ 1967-68ರಲ್ಲಿ ಆಗಿನ ಮುಖ್ಯಶಿಕ್ಷಕರಾದ ಜಿ.ಡಿ.ದೇಸಾಯಿ ಅವರು ಈ ರಂಗೋಲಿ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಆರಂಭಿಸಿದರು. ಅದು ಈಗ ದೊಡ್ಡ ಪರಂಪರೆಯಾಗಿ ಬೆಳೆದುಬಂದಿದೆ. ಆರಂಭದಲ್ಲಿ ಕೇವಲ ಐದಾರು ಚಿತ್ರಗಳನ್ನು ಬಿಡಿಸಲಾಗುತ್ತಿತ್ತು. ಈ ಸಲ 70ರಿಂದ 80 ಚಿತ್ರಗಳು ರಚನೆಯಾಗಿವೆ’ ಎನ್ನುತ್ತಾರೆ ಕಾಲೇಜಿನ ಪ್ರಾಂಶುಪಾಲ ಪಿ.ಕೆ.ಚಾಪಗಾಂವಕರ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry