ಶುಕ್ರವಾರ, ಸೆಪ್ಟೆಂಬರ್ 20, 2019
25 °C

15 ಗಂಟೆ ಸಾಗಿದ ದಸರಾ ಮೆರವಣಿಗೆ

Published:
Updated:
15 ಗಂಟೆ ಸಾಗಿದ ದಸರಾ ಮೆರವಣಿಗೆ

ಮಂಗಳೂರು: ಇಲ್ಲಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ನವರಾತ್ರಿ ಉತ್ಸವದ ಅಂಗವಾಗಿ ಶನಿವಾರ ಸಂಜೆ 6.15ಕ್ಕೆ ಆರಂಭವಾಗಿದ್ದ ದಸರಾ ಮೆರವಣಿಗೆ 15 ಗಂಟೆಗಳ ಕಾಲ ಸಾಗಿತು. ಬೆಳಿಗ್ಗೆ 9.35ಕ್ಕೆ ಗೋಕರ್ಣನಾಥ ಕ್ಷೇತ್ರದ ಪುಷ್ಕರಣಿಯಲ್ಲಿ ಶಾರದೆಯ ಮೂರ್ತಿಯ ವಿಸರ್ಜನೆಯೊಂದಿಗೆ ಶೋಭಾಯಾತ್ರೆಗೆ ತೆರೆಬಿತ್ತು.

ಕುದ್ರೋಳಿ ಗೋಕರ್ಣನಾಥ ದೇವ ಸ್ಥಾನದಿಂದ ಶನಿವಾರ ಸಂಜೆ 6.15ಕ್ಕೆ ಹೊರಟಿದ್ದ ಶೋಭಾಯಾತ್ರೆಯು ಮಣ್ಣಗುಡ್ಡ, ಲೇಡಿಹಿಲ್‌, ಪಿವಿಎಸ್‌ ವೃತ್ತ, ನವಭಾರತ್‌ ವೃತ್ತ, ಕೆ.ಎಸ್‌.ರಾವ್ ರಸ್ತೆ, ಕೆ.ಬಿ.ವೃತ್ತ, ಗಣಪತಿ ಪ್ರೌಢಶಾಲೆ ವೃತ್ತ, ಮೋಹಿನಿ ವಿಲಾಸ, ಓಂ ಮಹಲ್‌ ಜಂಕ್ಷನ್‌, ರಥಬೀದಿ, ಕೆಳಗಿನ ರಥಬೀದಿ, ನ್ಯೂಚಿತ್ರ, ಅಳಕೆಯ ಮಾರ್ಗವಾಗಿ ಭಾನುವಾರ ಬೆಳಿಗ್ಗೆ 6.30ಕ್ಕೆ ಪುನಃ ಕುದ್ರೋಳಿ ಗೋಕರ್ಣನಾಥ ಕ್ಷೇತ್ರವನ್ನು ತಲುಪಿತು.

ಮೆರವಣಿಗೆಯನ್ನು ಸ್ವಾಗತಿಸಿದ ಬಳಿಕ ಮಹಾಗಣಪತಿ ಮತ್ತು ನವ ದುರ್ಗೆಯರ ಮೂರ್ತಿಗಳನ್ನು ಒಂದೊಂದಾಗಿ ಪುಷ್ಕರಣಿಯಲ್ಲಿ ವಿಸರ್ಜಿಸುವ ಪ್ರಕ್ರಿಯೆಗೆ ಚಾಲನೆ ದೊರೆಯಿತು. ಅಂತಿಮವಾಗಿ ಶಾರ ದೆಯ ಮೂರ್ತಿಯನ್ನು ತೆಪ್ಪೋತ್ಸ ವದೊಂದಿಗೆ ವಿಸರ್ಜಿಸುವ ಪ್ರಕ್ರಿಯೆ ಪೂರ್ಣಗೊಂಡಾಗ ಬೆಳಿಗ್ಗೆ 9.35 ಆಗಿತ್ತು.

ಎರಡು ದೋಣಿಗಳನ್ನು ಜೋಡಿಸಿ ನಿರ್ಮಿಸಿದ್ದ ತೆಪ್ಪದಲ್ಲಿ ಶಾರದೆಯ ಮೂರ್ತಿಯನ್ನು ಇರಿಸಿ ಜಲವಿಹಾರ ನಡೆಸಲಾಯಿತು. ಬಳಿಕ ಭಕ್ತರ ಜಯಘೋಷದೊಂದಿಗೆ ನೀರಿ ನಲ್ಲಿ ವಿಸರ್ಜಿಸಲಾಯಿತು. ಕ್ಷೇತ್ರದ ಸ್ವಯಂ ಸೇವಕರು ಮೂರ್ತಿಗಳ ವಿಸರ್ಜನೆಯ ಪ್ರಕ್ರಿಯೆ ನಡೆಸಿದರು. ಸ್ವಯಂಸೇವಕರ ಎರಡು ತಂಡಗಳು ಮಾತ್ರ ಲಭ್ಯವಿದ್ದುದ್ದರಿಂದ ವಿಸರ್ಜನೆ ಪ್ರಕ್ರಿಯೆ ಮೂರು ಗಂಟೆಗಳಷ್ಟು ದೀರ್ಘಕಾಲ ನಡೆಯಿತು.

ಆಗಾಗ ಬೆದರಿಸಿದ ಮಳೆರಾಯ: ರಾತ್ರಿ 8 ಗಂಟೆಯ ಬಳಿಕ ಆಗಸದಲ್ಲಿ ಮೋಡಗಳು ದಟ್ಟೈಸಿದ್ದವು. ಹಲವು ಬಾರಿ ಗುಡುಗು, ಮಿಂಚು ಕಾಣಿಸಿಕೊಂಡಿತು. ಮಳೆ ಸುರಿಯ ಬಹುದೇನೋ ಎಂಬ ಆತಂಕವೂ ವ್ಯಕ್ತವಾಗಿತ್ತು. ಆದರೆ, ಬೆಳಿಗ್ಗೆಯವರೆಗೂ ಮಳೆ ಬೀಳಲಿಲ್ಲ. ಇದರಿಂದಾಗಿ ದಸರಾ ಮೆರವಣಿಗೆ ಸುಸೂತ್ರವಾಗಿ ಪೂರ್ಣಗೊಳ್ಳಲು ಅವಕಾಶವಾಯಿತು.

Post Comments (+)