ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ತುಂಬಿ ಹರಿದ ಹಳ್ಳ–ಕೊಳ್ಳಗಳು

ಥಾನುನಾಯ್ಕ ತಾಂಡಾ–ಯರಗೋಳ ಗ್ರಾಮಗಳ ಸಂಪರ್ಕ ಕಡಿತ; ಶಾಲಾ ಮಕ್ಕಳನ್ನು ಹಳ್ಳ ದಾಟಿಸಿದ ಗ್ರಾಮಸ್ಥರು
Last Updated 2 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ವಿವಿಧೆಡೆ ಭಾನುವಾರ ಇಡೀ ರಾತ್ರಿ ಜೋರು ಮಳೆಯಾಗಿದ್ದು, ಹಳ್ಳ–ಕೊಳ್ಳಗಳು ತುಂಬಿ ಹರಿದಿವೆ. ಯಾದಗಿರಿ ತಾಲ್ಲೂಕಿನ ಕೊಂಕಲ್‌, ಹತ್ತಿಕುಣಿ, ಗುರುಮಠಕಲ್, ಅಜಲಾಪುರ, ಸೈದಾಪುರ ಹೋಬಳಿಗಳಲ್ಲಿ ಭಾರೀ ಮಳೆಯಾಗಿದ್ದು, ಕೆರೆಗಳು ತುಂಬಿವೆ.

ತಾಲ್ಲೂಕಿನ ಯರಗೋಳ ಹೋಬಳಿಯ ಥಾನುನಾಯ್ಕ ತಾಂಡಾದ ಹಳ್ಳತುಂಬಿ ಹರಿದಿದ್ದು, ಶಾಲಾ ಮಕ್ಕಳಿಗೆ ಸಂಕಷ್ಟ ತಂದೊಡ್ಡಿದೆ. ಮಂಗಳವಾರ ಹಳ್ಳ ತುಂಬಿ ಹರಿದಿದ್ದರಿಂದ ತಾಂಡಾದ ಪ್ರಾಥಮಿಕ ಶಾಲೆಯ ಶಿಕ್ಷಕ ಗಾಂಧಿ ಜಯಂತಿ ಆಚರಣೆಗೆ ಗೈರು ಹಾಜರಾಗಿದ್ದರು. ಇದರಿಂದ ಗ್ರಾಮಸ್ಥರು ಗಾಂಧಿ ಜಯಂತಿ ಆಚರಣೆಗೆ ಸಿದ್ಧರಾಗಿದ್ದ ಮಕ್ಕಳನ್ನು ಮೂರು ಕಿಲೋ ಮೀಟರ್ ದೂರದ ಯರಗೋಳ ಗ್ರಾಮದ ಶಾಲೆಗೆ ಕರೆ ತರಬೇಕಾಯಿತು. ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ನೀರಿನ ಸೆಳೆತ ಹೆಚ್ಚಿದ್ದರಿಂದ ಗ್ರಾಮಸ್ಥರೇ ಬಂದು ಮಕ್ಕಳನ್ನು ಹಳ್ಳ ದಾಟಿಸಿದರು.

ಸೇತುವೆ ನಿರ್ಮಾಣಕ್ಕೆ ಆಗ್ರಹ: ಜೋರು ಮಳೆಯಾದಾಗಲೆಲ್ಲ ಥಾನುನಾಯ್ಕ ತಾಂಡಾ– ಯರಗೋಳ ಗ್ರಾಮಗಳ ಸಂಪರ್ಕ ಕಡಿತವಾಗುತ್ತದೆ. ಕೂಡಲೇ ಸೇತುವೆ ನಿರ್ಮಾಣ ಮಾಡಬೇಕು ಎಂದು ಥಾನು ನಾಯ್ಕ ತಾಂಡಾದ ಮುಖಂಡ ಶ್ರೀನಿವಾಸ್ ಆಗ್ರಹಿಸಿದ್ದಾರೆ.

ಮಳೆಯಿಂದಾಗಿ ರಾಯಚೂರು ಜಿಲ್ಲೆ ದೇವಸೂಗೂರು ಹೋಬಳಿ ವ್ಯಾಪ್ತಿಯಲ್ಲಿ 15 ಮನೆಗಳು ಕುಸಿದಿದ್ದು, ಯಾವುದೇ ಜೀವಹಾನಿಯಾಗಿಲ್ಲ. ಸೋಮವಾರ ಸಂಜೆ ಬೀದರ್‌ನಲ್ಲಿ ಉತ್ತಮ ಮಳೆ ಸುರಿಯಿತು.

**

110 ಅಡಿ ಗಡಿ ತಲುಪಿದ ಕೆಆರ್‌ಎಸ್‌ ಜಲಾಶಯದ ನೀರು

ಮಂಡ್ಯ: ಕಾವೇರಿ ಕಣಿವೆಯಲ್ಲಿ ಕಳೆದ ವಾರ ಸುರಿದ ಉತ್ತಮ ಮಳೆಯಿಂದಾಗಿ ಏಳು ದಿನಗಳಲ್ಲಿ ಕೆಆರ್‌ಎಸ್‌ ಜಲಾಶಯಕ್ಕೆ 4 ಅಡಿ ನೀರು ಹರಿದು ಬಂದಿದ್ದು ನೀರಿನ ಮಟ್ಟ 110ರ ಗಡಿ ತಲುಪಿದೆ.

ಸೋಮವಾರ ಸಂಜೆಯ ವೇಳೆಗೆ ನೀರಿನ ಮಟ್ಟ 109.45 ಅಡಿ ಇತ್ತು. ಒಳಹರಿವು 3,304 ಕ್ಯುಸೆಕ್‌, ಹೊರಹರಿವು 3,597 ಕ್ಯುಸೆಕ್‌ ಇದೆ. ಸೆ. 25ರಂದು ಜಲಾಶಯದ ನೀರಿನ ಮಟ್ಟ 105.65 ಅಡಿ ಇತ್ತು. ಸದ್ಯ ಜಲಾಶಯದಲ್ಲಿ 31 ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ ಇದೇ ದಿನ 89.60 ಅಡಿ ನೀರು ಸಂಗ್ರಹವಾಗಿತ್ತು.

‘ಶ್ರೀರಂಗಪಟ್ಟಣ ವ್ಯಾಪ್ತಿಯ ನಾಲೆಗಳಿಗೆ ಕಟ್ಟು ನೀರು ಹರಿಸಲಾಗುತ್ತಿದೆ. ವಿಶ್ವೇಶ್ವರಯ್ಯ ನಾಲೆಗಳಲ್ಲಿ ಮಳೆ ನೀರು ಹರಿಯುತ್ತಿದ್ದು, ಕೆಆರ್‌ಎಸ್‌ ನೀರು ಸ್ಥಗಿತಗೊಳಿಸಲಾಗಿದೆ. ತಮಿಳುನಾಡಿಗೆ ಅಲ್ಪ ಪ್ರಮಾಣದ ನೀರು ಹರಿದು ಹೋಗುತ್ತಿದೆ’ ಎಂದು ಕಾವೇರಿ ನೀರಾವರಿ ನಿಗಮದ ಮೂಲಗಳು ತಿಳಿಸಿವೆ.

**

ಸಿಡಿಲು ಬಡಿದು ಇಬ್ಬರ ಸಾವು

ಬೀದರ್‌: ಸೋಮವಾರ ಸಿಡಿಲು ಬಡಿದು ಭಾಲ್ಕಿ ತಾಲ್ಲೂಕಿನ ಹಾಲಹಿಪ್ಪರ್ಗಾ ಗ್ರಾಮದ ದಿಲೀಪ್‌ಕುಮಾರ ವೈಜಿನಾಥ (44), ಔರಾದ್‌ ತಾಲ್ಲೂಕು ಕಮಲನಗರ ಸಮೀಪದ ಮದನೂರ ಶಿವಾರದ ಸಂಜನಾ ನಾಮದೇವ ಸಗರ (25) ಮೃತಪಟ್ಟಿದ್ದಾರೆ.

ದಿಲೀಪ್‌ಕುಮಾರ ಅವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಬಂದ ಮಳೆಯಿಂದ ರಕ್ಷಣೆ ಪಡೆಯಲು ಹುಣಸೆ ಮರದ ಕೆಳಗೆ ನಿಂತಿದ್ದರು. ಆಗ ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ. ಅವರ ಪತ್ನಿ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT