ದೇಶಕ್ಕೆ ಮತ್ತೆರಡು ತೇಲುವ ಸೌರ ಶಕ್ತಿ ಸ್ಥಾವರ!

ಮಂಗಳವಾರ, ಜೂನ್ 25, 2019
28 °C

ದೇಶಕ್ಕೆ ಮತ್ತೆರಡು ತೇಲುವ ಸೌರ ಶಕ್ತಿ ಸ್ಥಾವರ!

Published:
Updated:
ದೇಶಕ್ಕೆ ಮತ್ತೆರಡು ತೇಲುವ ಸೌರ ಶಕ್ತಿ ಸ್ಥಾವರ!

ಕೋಲ್ಕತ್ತ : ಮುಂದಿನ ವರ್ಷದ ಒಳಗಾಗಿ ಆಂಧ್ರಪ್ರದೇಶ ಮತ್ತು ಕೇರಳಗಳಲ್ಲಿ ತಲಾ 10 ಮೆಗಾವಾಟ್‌ ಸಾಮರ್ಥ್ಯದ ಎರಡು ತೇಲುವ ಸೌರವಿದ್ಯುತ್‌ ಸ್ಥಾವರಗಳು ತಲೆ ಎತ್ತಲಿವೆ.

ನಿರುಪಯುಕ್ತ ಜಲಮೂಲಗಳಲ್ಲಿ ನಿರ್ಮಾಣಗೊಳ್ಳಲಿರುವ ಈ ಸ್ಥಾವರಗಳು, ದೇಶದ ಅತ್ಯಂತ ದೊಡ್ಡ ‘ತೇಲುವ ಸೌರಶಕ್ತಿ ಉತ್ಪಾದನಾ ಯೋಜನೆ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿವೆ.

‘ಸದ್ಯ ಈ ಎರಡೂ ಸ್ಥಾವರಗಳ ವಿನ್ಯಾಸವನ್ನು ಸಿದ್ಧಪಡಿಸುತ್ತಿದ್ದೇವೆ’ ಎಂದು ನವೀಕರಿಸಬಹುದಾದ ಇಂಧನ ತಜ್ಞ ಮತ್ತು ‘ಅರ್ಕ ನವೀಕರಿಸಬಹುದಾದ ಇಂಧನ ಕಾಲೇಜಿ’ನ ಮುಖ್ಯಸ್ಥ ಎಸ್‌.‍ಪಿ.ಜಿ. ಚೌಧರಿ ಹೇಳಿದ್ದಾರೆ.

ಆಂಧ್ರಪ್ರದೇಶದಲ್ಲಿ ಮುಂದಿನ ವರ್ಷಾರಂಭದಲ್ಲಿ ಯೋಜನೆಗೆ ಚಾಲನೆ ಸಿಗಲಿದೆ. ಕೇರಳದಲ್ಲಿ ಇನ್ನೂ ಸ್ಥಾವರ ಅಳವಡಿಸುವ ಸ್ಥಳ ನಿಗದಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಆಯಾ ರಾಜ್ಯ ಸರ್ಕಾರ ಅಥವಾ ಭಾರತೀಯ ಸೌರ ಶಕ್ತಿ ನಿಗಮವು ಈ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಜಮೀನಿನ ಕೊರತೆ

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಈಗ ಸೌರಶಕ್ತಿಗೆ ಹೆಚ್ಚು ಪ್ರಾಮುಖ್ಯ ಸಿಗುತ್ತಿದೆ. ಆದರೆ, ಸೌರ ವಿದ್ಯುತ್‌ ಘಟಕ ಸ್ಥಾಪನೆಗೆ ದೊಡ್ಡ ಪ್ರಮಾಣದಲ್ಲಿ ಜಮೀನು ಸಿಗುವುದು ಕಷ್ಟವಾಗಿರುವುದರಿಂದ, ತೇಲುವ ಸೌರವಿದ್ಯುತ್‌ ಸ್ಥಾವರಗಳ ಕಲ್ಪನೆ ಹೆಚ್ಚು ಗಮನ ಸೆಳೆದಿದೆ. ಈ ಸ್ಥಾವರಗಳನ್ನು ನಿರ್ಮಿಸಲು ಬಳಕೆಗೆ ಯೋಗ್ಯವಲ್ಲದ ಜಲಮೂಲಗಳನ್ನು ಆಯ್ಕೆ ಮಾಡಲಾಗುತ್ತದೆ.

ಸದ್ಯ ನಿಂತ ನೀರಿನಲ್ಲಿ ಮಾತ್ರ ತೇಲುವ ಸೌರವಿದ್ಯುತ್‌ ಘಟಕವನ್ನು ನಿರ್ಮಿಸಲಾಗುತ್ತದೆ. ಸಮುದ್ರದಲ್ಲೂ ಇಂತಹ ಸ್ಥಾವರಗಳನ್ನು ನಿರ್ಮಿಸುವ ಬಗ್ಗೆ ಯೋಚಿಸಲಾಗುತ್ತಿದೆ. ಆದರೆ, ಸಮುದ್ರಗಳ ಅಲೆಗಳನ್ನು ಎದುರಿಸಿ ಸ್ಥಾವರಗಳು ಕಾರ್ಯನಿರ್ವಹಿಸಬೇಕಾಗಿರುವುದರಿಂದ ಅದಕ್ಕೆ ಬೇರೆಯದೇ ಯೋಜನೆ, ವಿನ್ಯಾಸದ ಅಗತ್ಯವಿದೆ ಎಂದು ಚೌಧರಿ ಹೇಳಿದ್ದಾರೆ.

ಲಕ್ಷದ್ವೀಪದಲ್ಲಿ 100 ಕಿಲೊವಾಟ್‌ ಸಾಮರ್ಥ್ಯದ ಸ್ಥಾವರ ಸ್ಥಾಪಿಸುವ ಬಗ್ಗೆ ಈ ಮೊದಲು ಚಿಂತಿಸಲಾಗಿತ್ತು. ಅಲೆಗಳಿಗೆ ಎದುರಾಗಿ ಸ್ಥಾವರಗಳು ದೃಢವಾಗಿ ನಿಲ್ಲಬೇಕಿರುವುದರಿಂದ ಯೋಜನೆಯ ರೂಪುರೇಷೆಯನ್ನು ಬದಲಾಯಿಸಬೇಕಾಗಿದೆ ಎಂದು ಅವರು ವಿವರಿಸಿದ್ದಾರೆ.

ಕೇರಳದಲ್ಲಿ ದೊಡ್ಡ ಸ್ಥಾವರ

ಪ್ರಸ್ತುತ, ದೇಶದ ಅತ್ಯಂತ ದೊಡ್ಡ ತೇಲುವ ಸೌರವಿದ್ಯುತ್‌ ಸ್ಥಾವರ ಕೇರಳದ ಕಾಯಂಕುಳಂನಲ್ಲಿದೆ. 100 ಕಿಲೊ ವಾಟ್‌ ಸಾಮರ್ಥ್ಯದ ಈ ಸ್ಥಾವರವನ್ನು ಈ ವರ್ಷದ ಮಾರ್ಚ್‌ನಲ್ಲಿ ಲೋಕಾರ್ಪಣೆಗೊಳಿಸಲಾಗಿತ್ತು. ರಾಷ್ಟ್ರೀಯ ಉಷ್ಣ ವಿದ್ಯುತ್‌ ನಿಗಮ (ಎನ್‌ಟಿಪಿಸಿ) ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿತ್ತು.

ಕೋಲ್ಕತ್ತದಲ್ಲಿ ಮೊದಲ ಘಟಕ

ದೇಶದ ಮೊತ್ತ ತೇಲುವ ಸೌರವಿದ್ಯುತ್‌ ಘಟಕವನ್ನು ಪಶ್ಚಿಮಬಂಗಾಳದ ರಾಜಾರ್‌ಹಾಟ್‌ನಲ್ಲಿ 2014ರಲ್ಲಿ ಸ್ಥಾಪಿಸಲಾಗಿತ್ತು. ಪ್ರತಿ ದಿನ 10 ಕಿಲೊ ವಾಟ್‌ ಸೌರವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ಇದಕ್ಕಿದೆ.

ಚೀನಾದಲ್ಲಿದೆ ಜಗತ್ತಿನ ಅತಿ ದೊಡ್ಡ ಸ್ಥಾವರ!

ಜಗತ್ತಿನ ಅತ್ಯಂತ ದೊಡ್ಡ ತೇಲುವ ಸೌರವಿದ್ಯುತ್‌ ಸ್ಥಾವರ ಚೀನಾದಲ್ಲಿದೆ. 40 ಮೆಗಾವಾಟ್‌ ಸಾಮರ್ಥ್ಯದ ಈ ಸ್ಥಾವರವನ್ನು ಹುಯಿನನ್‌ನಲ್ಲಿ ಸ್ಥಾಪಿಸಲಾಗಿದೆ. ಸನ್‌ಗ್ರೋವ್‌ ಎಂಬ ಸಂಸ್ಥೆ ಈ ಘಟಕದ ನಿರ್ಮಾತೃ. ಈ ವರ್ಷದ ಮೇ ತಿಂಗಳಿನಿಂದ ಇದು ಕಾರ್ಯಾಚರಿಸುತ್ತಿದೆ.

ದಕ್ಷಿಣ ಅನ್‌ಹುಯಿ ಪ್ರಾಂತ್ಯದಲ್ಲಿರುವ ಹುಯಿನನ್‌ ನಗರ ಕಲ್ಲಿದ್ದಲು ನಿಕ್ಷೇಪಗಳಿಗೆ ಹೆಸರುವಾಸಿ. ಭಾರಿ ಮಳೆಯಿಂದಾಗಿ ಕಲ್ಲಿದ್ದಲು ಗಣಿಗಾರಿಕೆ ನಡೆಸಿದ ಜಾಗದಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ಜಾಗದಲ್ಲಿ ಈಗ ತೇಲುವ ಸೌರವಿದ್ಯುತ್‌ ಸ್ಥಾವರವನ್ನು ನಿರ್ಮಿಸಲಾಗಿದೆ. ಆ ಪ್ರದೇಶದಲ್ಲಿನ ನೀರು ಖನಿಜಯುಕ್ತವಾಗಿದ್ದು ಬಳಕೆಗೆ ಯೋಗ್ಯವಾಗಿಲ್ಲ. ಹಾಗಾಗಿ, ಅಲ್ಲಿಯೇ ಸ್ಥಾವರ ನಿರ್ಮಿಸಲು ಚೀನಾ ಆಡಳಿತ ಯೋಚನೆ ರೂಪಿಸಿತ್ತು.

ಈಗ ಸನ್‌ಗ್ರೋವ್‌ ಸಂಸ್ಥೆ ಈ ಸ್ಥಾವರದ ಸಮೀಪದಲ್ಲೇ 150 ಮೆಗಾವಾಟ್‌ ಸಾಮರ್ಥ್ಯದ ಇನ್ನೊಂದು ತೇಲುವ ಸ್ಥಾವರವನ್ನು ನಿರ್ಮಿಸುತ್ತಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry