ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ವಾರ್ಡ್‌ಗಳಲ್ಲಿ ಇನ್ನೂ ಸಿಕ್ಕಿಲ್ಲ ಜಾಗ

50 ಇಂದಿರಾ ಕ್ಯಾಂಟೀನ್‌ ಸಾಂಕೇತಿಕ ಉದ್ಘಾಟನೆ
Last Updated 2 ಅಕ್ಟೋಬರ್ 2017, 20:18 IST
ಅಕ್ಷರ ಗಾತ್ರ

ಬೆಂಗಳೂರು: ನಗರದ 15 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಇನ್ನೂ ಜಾಗ ಸಿಕ್ಕಿಲ್ಲ. ಹೀಗಾಗಿ ಬಿಬಿಎಂಪಿಯ ಎಲ್ಲ 198 ವಾರ್ಡ್‌ಗಳಲ್ಲೂ ಕ್ಯಾಂಟೀನ್‌ ಆರಂಭಗೊಳ್ಳುವುದು ಅನುಮಾನ.

‘ಮೂರನೇ ಹಂತದಲ್ಲಿ 47 ಕ್ಯಾಂಟೀನ್‌ಗಳು ನಿರ್ಮಾಣವಾಗಲಿದ್ದು, ಅವುಗಳನ್ನು ನವೆಂಬರ್‌ 1ರಂದು ಉದ್ಘಾಟಿಸಲು ನಿರ್ಧರಿಸಿದ್ದೇವೆ. ಆದರೆ, 15 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ ನಿರ್ಮಿಸಲು ಸೂಕ್ತ ಜಾಗ ಸಿಕ್ಕಿಲ್ಲ. ಇಂತಹ ಕಡೆ ಪರ್ಯಾಯ ಮಾರ್ಗೋಪಾಯ ಹುಡುಕುತ್ತಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾವುದಾದರೂ ವಾರ್ಡ್‌ನಲ್ಲಿ ಜಾಗ ಲಭಿಸದಿದ್ದರೆ, ಪಕ್ಕದ ವಾರ್ಡ್‌ನಲ್ಲಿ ಕ್ಯಾಂಟೀನ್‌ ನಿರ್ಮಿಸಲು ನಿರ್ಧರಿಸಿದ್ದೇವೆ. ಈಗಾಗಲೇ ಎರಡು ಕಡೆ ಪಕ್ಕದ ವಾರ್ಡ್‌ನಲ್ಲಿ ಅಧಿಕಾರಿಗಳು ಜಾಗ ಗುರುತಿಸಿದ್ದಾರೆ’ ಎಂದರು.

‘ಕ್ಯಾಂಟೀನ್‌ ನಿರ್ಮಾಣಕ್ಕೆ ಸಾಮಾನ್ಯವಾಗಿ ಬಿಬಿಎಂಪಿ, ಬಿಡಿಎ, ಜಲಮಂಡಳಿಗೆ ಸೇರಿದ ಜಾಗಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಈ ಸಂಸ್ಥೆಗಳಿಗೆ ಸೇರಿದ ಜಾಗ ಲಭ್ಯವಿಲ್ಲದ ಕೆಲ ವಾರ್ಡ್‌ಗಳಲ್ಲಿ ಆಸ್ಪತ್ರೆ, ಮಾರುಕಟ್ಟೆ ಹಾಗೂ ಬಸ್‌ನಿಲ್ದಾಣಗಳ ಬಳಿ ಕ್ಯಾಂಟೀನ್‌ ಆರಂಭಿಸುವ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಅಲ್ಲೂ ಜಾಗ ಲಭ್ಯವಿಲ್ಲದಿದ್ದರೆ, ಖಾಸಗಿ ಜಾಗವನ್ನು ಬಾಡಿಗೆಗೆ ಪಡೆದು ಕ್ಯಾಂಟೀನ್‌ ಆರಂಭಿಸಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

50 ಕ್ಯಾಂಟೀನ್‌ಗಳಿಗೆ ಸಾಂಕೇತಿಕ ಚಾಲನೆ:

ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ನ ಕೆ.ಆರ್‌.ಮಾರುಕಟ್ಟೆ ಬಸ್‌ ನಿಲ್ದಾಣ ಹಾಗೂ ಹೊಸಕೆರೆಹಳ್ಳಿ ಬಳಿಯ ಕ್ಯಾಂಟೀನ್‌ಗಳನ್ನು ಸೋಮವಾರ ಉದ್ಘಾಟಿಸುವ ಮೂಲಕ ಎರಡನೇ ಹಂತದಲ್ಲಿ ನಿರ್ಮಾಣವಾಗಿರುವ 50 ಕ್ಯಾಂಟೀನ್‌ಗಳಿಗೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.

ಕೆ.ಆರ್‌.ಮಾರುಕಟ್ಟೆ ಬಸ್‌ ನಿಲ್ದಾಣ ಬಳಿಯ ಕ್ಯಾಂಟೀನ್‌ ಅನ್ನು ಶಾಸಕ ಆರ್‌.ವಿ.ದೇವರಾಜ್‌ ಉದ್ಘಾಟಿಸಿದರು. ಕಾರ್ಯಕ್ರಮದ ಪ್ರಯುಕ್ತ 700ಕ್ಕೂ ಹೆಚ್ಚು ಮಂದಿಗೆ ಉಚಿತವಾಗಿ ಪಲಾವ್‌, ಮೊಸರನ್ನ ಹಾಗೂ ಅನ್ನ–ಸಾಂಬಾರ್‌ ವಿತರಿಸಲಾಯಿತು.

‘ಕೆ.ಆರ್‌.ಮಾರುಕಟ್ಟೆ ಪ್ರದೇಶವು ವ್ಯಾಪಾರ ಕೇಂದ್ರವಾಗಿದ್ದು, ನಿತ್ಯ ಸಾವಿರಾರು ಜನ ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿಂದ ನಗರದ ವಿವಿಧ ಕಡೆಗಳಿಗೆ ಜನರು ಪ್ರಯಾಣಿಸುತ್ತಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಗಿದೆ’ ಎಂದು ದೇವರಾಜ್‌ ತಿಳಿಸಿದರು.

‘ಈ ಪ್ರದೇಶದಲ್ಲಿ ಜನದಟ್ಟಣೆ ಹೆಚ್ಚಾಗಿರುತ್ತದೆ. ಇಲ್ಲಿನ ಕ್ಯಾಂಟೀನ್‌ನಲ್ಲಿ ದಿನದ ಮೂರು ಹೊತ್ತು ತಲಾ 500 ಮಂದಿಗಷ್ಟೇ ತಿಂಡಿ, ಊಟ ನೀಡಿದರೆ ಸಾಲದು. ಪ್ರತಿ ಹೊತ್ತು ಕನಿಷ್ಠ 1,000 ಮಂದಿಗಾದರೂ ತಿಂಡಿ, ಊಟ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ’ ಎಂದರು.

ಎನ್‌.ಮಂಜುನಾಥ ಪ್ರಸಾದ್‌, ‘ಈ ಕ್ಯಾಂಟೀನ್‌ನಲ್ಲಿ ಬೇಡಿಕೆ ಹೇಗಿದೆ ಎಂಬುದನ್ನು ಒಂದು ವಾರ ನೋಡಿಕೊಂಡು ಆಹಾರ ಪೂರೈಕೆ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ನಿರ್ಧರಿಸುತ್ತೇವೆ’ ಎಂದು ತಿಳಿಸಿದರು.

600 ಜನರಿಗೆ ರಾತ್ರಿ ಊಟ: ‘ರಾತ್ರಿಯ ಊಟವನ್ನು 600 ಜನರಿಗೆ ನೀಡುತ್ತೇವೆ. ಆಹಾರ ಪೂರೈಕೆ ಹೆಚ್ಚಿಸುವಂತೆ ಪಾಲಿಕೆ ಕಡೆಯಿಂದ ಸೂಚನೆ ಬರಬೇಕು. ಅಲ್ಲಿಯವರೆಗೆ ನಿಗದಿತ ಆಹಾರವನ್ನೇ ಪೂರೈಸುತ್ತೇವೆ’ ಎಂದು ಶೆಫ್‌ಟಾಕ್‌ ಸಂಸ್ಥೆಯ ಚಿಕ್ಕಪೇಟೆ ಪ್ರದೇಶದ ವ್ಯವಸ್ಥಾಪಕ ಹರಿದಾಸ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT