ಗಾಂಧಿ ಜಯಂತಿಗೆ ನೆನಪಾಗುವ ‘ಸ್ವಚ್ಛತಾ ಅಭಿಯಾನ’

ಭಾನುವಾರ, ಮೇ 26, 2019
27 °C
ಮೂರು ವರ್ಷ ಗತಿಸಿದರೂ ಸ್ವಚ್ಛತೆಯಿಲ್ಲ; ತಪ್ಪದ ಅನೈರ್ಮಲ್ಯ ವಾತಾವರಣ

ಗಾಂಧಿ ಜಯಂತಿಗೆ ನೆನಪಾಗುವ ‘ಸ್ವಚ್ಛತಾ ಅಭಿಯಾನ’

Published:
Updated:
ಗಾಂಧಿ ಜಯಂತಿಗೆ ನೆನಪಾಗುವ ‘ಸ್ವಚ್ಛತಾ ಅಭಿಯಾನ’

ವಿಜಯಪುರ: ‘ರಾಷ್ಟ್ರಪಿತ’ನ ಕನಸನ್ನು ನನಸಾಗಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬರೋಬ್ಬರಿ ಮೂರು ವರ್ಷದ ಹಿಂದೆ ಆರಂಭಿಸಿದ ಮಹತ್ವಾಕಾಂಕ್ಷೆಯ ‘ನಿರ್ಮಲ ಭಾರತ ಅಭಿಯಾನ’ ನಗರ ವ್ಯಾಪ್ತಿಯಲ್ಲಿ ಗಾಂಧಿ ಜಯಂತಿಗೆ ಸೀಮಿತವಾಗಿದೆ ಎಂಬ ದೂರು ಪುಂಖಾನುಪುಂಖವಾಗಿ ಕೇಳಿ ಬಂದಿದೆ.

ಸ್ವಚ್ಛ ಭಾರತ ಅಭಿಯಾನ ಎಂಬುದು ರಾಷ್ಟ್ರೀಯ ದಿನಾಚರಣೆಗಳು, ಗಾಂಧಿ ಜಯಂತಿ ಆಸುಪಾಸು ಮಾತ್ರ ನಗರದಲ್ಲಿ ಸದ್ದು ಮಾಡಲಿದ್ದು, ಅದೂ ನೈಜ ಕಳಕಳಿಯಿಂದಲ್ಲ. ಪ್ರಚಾರದ ಉದ್ದೇಶದಿಂದ ಮಾತ್ರ ಎಂಬ ಆರೋಪವೂ ವ್ಯಾಪಕವಾಗಿದೆ.

‘ಮೂರು ವರ್ಷದ ಹಿಂದೆ ‘ನಿರ್ಮಲ ಭಾರತ ಅಭಿಯಾನ’ಕ್ಕೆ ಚಾಲನೆ ನೀಡಿದ ಸಂದರ್ಭ, ನಗರದ ಸ್ವಚ್ಛತೆಗಾಗಿ ವಾರಕ್ಕೊಮ್ಮೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವುದಾಗಿ ವಾಗ್ದಾನ ನೀಡಿದ್ದ ಜನಪ್ರತಿನಿಧಿಗಳು, ಅಧಿಕಾರಿ ವರ್ಗ, ಸಂಘ–ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಮಾತನ್ನೇ ಮರೆತು ಬಿಟ್ಟಿದ್ದಾರೆ. ಇದಕ್ಕಾಗಿ ಜಿಲ್ಲಾಡಳಿತ ಅಂದು ರೂಪಿಸಿದ್ದ ವೇಳಾಪಟ್ಟಿ ಒಮ್ಮೆಯೂ ಅನುಷ್ಠಾನಗೊಳ್ಳಲಿಲ್ಲ. ಇವರಿಗೆಲ್ಲ ಮತ್ತೆ ಸ್ವಚ್ಛತಾ ಅಭಿಯಾನ ನೆನಪಾಗಿದ್ದು ಗಾಂಧಿ ಜಯಂತಿ ದಿನದಂದೇ’ ಎಂದು ಖಾಸಗಿ ಸಂಸ್ಥೆಯ ಉದ್ಯೋಗಿ ಬಿ.ವಿ.ಕುಲಕರ್ಣಿ ವ್ಯಂಗ್ಯವಾಡಿದರು.

‘ನಗರದ ಸ್ವಚ್ಛತೆಗಾಗಿ ಬೆರಳೆಣಿಕೆಯ ಸಂಘ–ಸಂಸ್ಥೆಗಳು ಅವಿರತವಾಗಿ ಶ್ರಮಿಸುತ್ತಿದ್ದರೂ, ಸಂಪೂರ್ಣ ಸ್ವಚ್ಛತೆ ಸಾಧ್ಯವಾಗಿಲ್ಲ. ನಿತ್ಯವೂ ಸ್ವಚ್ಛತಾ ಕಾಯಕದಲ್ಲಿ ತೊಡಗಿಸಿಕೊಳ್ಳುವ ಪೌರ ಕಾರ್ಮಿಕರಿಗೆ ಇನ್ನೂ ಕನಿಷ್ಠ ಮೂಲ ಸೌಕರ್ಯ ಲಭ್ಯವಿಲ್ಲ. ಮಹಾನಗರ ಪಾಲಿಕೆ ಆಡಳಿತ ಪೌರ ಕಾರ್ಮಿಕರ ಸುರಕ್ಷತೆಗೆ ಹಲವು ಕ್ರಮಗಳನ್ನು ತೆಗೆದುಕೊಂಡಿರುವುದು ಕಡತಗಳಲ್ಲಿ ದಾಖಲಾಗಿದೆಯೇ ಹೊರತು, ಕಾರ್ಮಿಕರನ್ನು ತಲುಪಿಲ್ಲ. ಇಂದಿಗೂ ಬರಿಗೈಯಲ್ಲಿ, ಮಾಸ್ಕ್ ಇಲ್ಲದೆ ಸ್ವಚ್ಛತಾ ಕೆಲಸ ನಿರ್ವಹಿಸುವುದನ್ನು ನಿತ್ಯ ಮುಂಜಾನೆ ನೋಡುವೆ’ ಎಂದು ಅವರು ಪಾಲಿಕೆ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಸ್ವಚ್ಛ ಭಾರತ ಅಭಿಯಾನದ ಪರಿಕಲ್ಪನೆ ವಿಜಯಪುರದಿಂದ ದೂರ. ಪ್ರಮುಖ ರಸ್ತೆ ಬದಿಯೇ ನಿತ್ಯವೂ ಅನೈರ್ಮಲ್ಯದ ರುದ್ರತಾಂಡವ ಗೋಚರಿಸುತ್ತದೆ. ಇನ್ನೂ ಓಣಿಗಳ ರಸ್ತೆ, ಬಡಾವಣೆಗಳಲ್ಲಿ ಸ್ವಚ್ಛತೆಯನ್ನು ಊಹಿಸಿಕೊಳ್ಳುವುದು ಅಸಾಧ್ಯ. ರಸ್ತೆ ಬದಿಯೇ ತ್ಯಾಜ್ಯದ ರಾಶಿ ಬಿದ್ದಿರುತ್ತದೆ. ಕೋಟೆ ಗೋಡೆ ಸುತ್ತಲಿನ ಕಂದಕ ಘನ ತ್ಯಾಜ್ಯ ವಿಲೇವಾರಿಯ ತಾಣವಾಗಿದೆ. ನಿತ್ಯವೂ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ನಡೆಯುತ್ತಿಲ್ಲ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸ್ತುತ ಕೊಂಚ ತಗ್ಗಿದೆ. ಆದರೂ ಇನ್ನೂ ವ್ಯಾಪಕ ಪ್ರಮಾಣದಲ್ಲಿ ಸುಧಾರಿಸಬೇಕಿದೆ’ ಎಂದು ಸ್ವಚ್ಛ ಭಾರತ ಅಭಿಯಾನ ಕುರಿತಂತೆ ಗೃಹಿಣಿ ಜ್ಯೋತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

‘ಜನಪ್ರತಿನಿಧಿಗಳು, ಅಧಿಕಾರಿಗಳು ಸ್ವಚ್ಛತೆ ಸಾಧ್ಯವಿಲ್ಲ. ಇವರಿಗೆಲ್ಲ ಸ್ವಚ್ಛ ಭಾರತ ಅಭಿಯಾನ ಅ 2ರಂದು ಮಾತ್ರ ನೆನಪಾಗುತ್ತದೆ. ಗಾಂಧಿ ಜಯಂತಿಯಂದು ಕೈಗೆ ಗ್ಲೌಸ್‌ ತೊಟ್ಟು, ಮುಖಕ್ಕೆ ಮಾಸ್ಕ್‌ ಧರಿಸಿ ಹೊಸ ಪೊರಕೆ ಹಿಡಿದು ಮೊಬೈಲ್‌ಗೆ ಫೋಜ್‌ ನೀಡಿ, ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್‌ ಮಾಡುವುದಷ್ಟೇ ಇವರ ಸ್ವಚ್ಛ ಭಾರತದ ಕಲ್ಪನೆಯಾಗಿದೆ. ಸ್ವಚ್ಛತಾ ಅಭಿಯಾನ ಒಂದು ದಿನಕ್ಕೆ ಸೀಮಿತವಾಗಬಾರದು. ಯಾರಿಂದ ಸಾಧ್ಯವಿಲ್ಲ ಎಂಬುದು ಎರಡು ವರ್ಷಗಳ ಬಳಿಕವಾದರೂ ಅರಿತು ನಗರದ ಜನತೆಯೇ ತಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ನಿತ್ಯವೂ ಸ್ವಚ್ಛತಾ ಅಭಿಯಾನ ನಡೆಸಿದಾಗ ಮಾತ್ರ ರಾಷ್ಟ್ರಪಿತನ ಕನಸು ನನಸಾಗಬಲ್ಲದು’ ಎನ್ನುತ್ತಾರೆ ಎಸ್‌.ಪಿ.ಪಾಟೀಲ.

***

<p>ವಿಜಯಪುರದ ಸ್ವಚ್ಛತೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ₹12.27 ಕೋಟಿ ಮೊತ್ತದ ಯೋಜನೆ ಅನುಷ್ಠಾನಗೊಳ್ಳಲಿದೆ. ಪರಿಣಾಮಕಾರಿ ಅನುಷ್ಠಾನಕ್ಕೆ ಇನ್ನೂ ₹ 20 ಕೋಟಿ ಅಗತ್ಯವಿದೆ

ಹರ್ಷಶೆಟ್ಟಿ, ಪಾಲಿಕೆ ಆಯುಕ್ತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry