ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ಮನೆ ಎದುರು ಧರಣಿ: ಎಚ್ಚರಿಕೆ

Last Updated 4 ಅಕ್ಟೋಬರ್ 2017, 7:28 IST
ಅಕ್ಷರ ಗಾತ್ರ

ಮಂಗಳೂರು: ಮೀನುಗಾರಿಕೆಗೆ ಸಂಬಂಧಿಸಿದ ಬೇಡಿಕೆಗಳನ್ನು ಈಡೇರಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗಿಲ್‌ನೆಟ್‌ ಮೀನುಗಾರರ ಸಂಘ ಹಾಗೂ ನಾಡದೋಣಿ ಮೀನುಗಾರರ ಸಂಘದ ಜಿಲ್ಲಾ ಘಟಕದ ಸದಸ್ಯರು, ಮಂಗಳವಾರ ಇಲ್ಲಿಯ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಗಿಲ್‌ನೆಟ್‌ ಮೀನುಗಾರರ ಸಂಘದ ಅಧ್ಯಕ್ಷ ಅಲಿ ಹಸನ್‌, ಮೀನುಗಾರಿಕೆ ಆರಂಭವಾಗಿ ತಿಂಗಳು ಕಳೆದರೂ, ಗಿಲ್‌ನೆಟ್‌ ಮತ್ತು ನಾಡದೋಣಿಗೆ ಸಬ್ಸಿಡಿ ಸೀಮೆ ಎಣ್ಣೆ ಪರವಾನಗಿ ನವೀಕರಣ ಮಾಡಿಲ್ಲ. ಮೀನುಗಾರಿಕೆಗೆ ಬೇಕಾದ ಸೀಮೆ ಎಣ್ಣೆಯನ್ನು ಸಕಾಲದಲ್ಲಿ ಪೂರೈಕೆ ಮಾಡಬೇಕು. ಇಲ್ಲದಿದ್ದರೆ ಮೀನುಗಾರಿಕೆ ಸಚಿವ ಪ್ರಮೋದ್‌ ಮಧ್ವರಾಜ್‌, ಆಹಾರ ಸಚಿವ ಯು.ಟಿ. ಖಾದರ್ ನಿವಾಸದ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿದರು.

ಪಡಿತರ ವ್ಯವಸ್ಥೆಯಡಿ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಸಬ್ಸಿಡಿ ಸಹಿತ ಸೀಮೆ ಎಣ್ಣೆಯನ್ನು ರಾಜ್ಯದ ಪಡಿತರ ಚೀಟಿದಾರರಿಗೆ ವಿತರಿಸಲಾಗುತ್ತಿದೆ. ಇದರ ಜತೆಗೆ ಕರಾವಳಿ ಮೀನುಗಾರರ ಹಿತದೃಷ್ಟಿಯಿಂದ ರಾಜ್ಯದ ಸರ್ಕಾರದ ಘೋಷಣೆಯಂತೆ ಯಾಂತ್ರೀಕೃತ ನಾಡದೋಣಿಗಳಿಗೆ ಹಲವು ವರ್ಷಗಳಿಂದ ಆಹಾರ ಇಲಾಖೆಯ ಮೂಲಕ ಸೀಮೆ ಎಣ್ಣೆ ವಿತರಿಸಲಾಗುತ್ತಿದೆ. ಆದರೆ ಈ ವರ್ಷ ಏಪ್ರಿಲ್‌ 26 ರಿಂದ ಕೇಂದ್ರ ಸರ್ಕಾರವು, ಸೀಮೆ ಎಣ್ಣೆಯನ್ನು ಅಡುಗೆ ಮತ್ತು ಬೆಳಕಿನ ಉದ್ದೇಶಕ್ಕೆ ಮಾತ್ರ ಬಳಸಲು ಕಡ್ಡಾಯ ಮಾಡಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 1,300ಕ್ಕೂ ಅಧಿಕ ಮೀನುಗಾರಿಕೆ ದೋಣಿಗಳು ಪರ್ಮಿಟ್‌ ಹೊಂದಿವೆ. ಸುಮಾರು 25 ಸಾವಿರಕ್ಕೂ ಅಧಿಕ ಮಂದಿ ದೋಣಿಗಳಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ತಿಂಗಳಾದರೂ ಸಬ್ಸಿಡಿ ಸೀಮೆ ಎಣ್ಣೆ ಪೂರೈಕೆಯಾಗದೇ ಇರುವುದರಿಂದ ಮೀನುಗಾರರು ಸಮಸ್ಯೆಗೆ ಸಿಲುಕುವಂತಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT