ತಾಲ್ಲೂಕಿನ ಎಲ್ಲೆಡೆ ಆವರಿಸಿದ ಡೆಂಗಿ

ಭಾನುವಾರ, ಜೂನ್ 16, 2019
29 °C

ತಾಲ್ಲೂಕಿನ ಎಲ್ಲೆಡೆ ಆವರಿಸಿದ ಡೆಂಗಿ

Published:
Updated:

ಪಾವಗಡ: ‘ಇದ್ದ ಒಬ್ಬ ಮಗ ಡೆಂಗಿ ರೋಗಕ್ಕೆ ತುತ್ತಾದ. ಇದೀಗ ಅಕ್ಕ ಪಕ್ಕದ ಮನೆಗಳ ಕಂದಮ್ಮಗಳಿಗೂ ಡೆಂಗಿ ಆವರಿಸಿದೆ. ಅಧಿಕಾರಿಗಳು ಕಾಟಾಚಾರಕ್ಕೆ ಭೇಟಿ ನೀಡಿ ಹೋಗಿದ್ದಾರೆ. 50ಕ್ಕೂ ಹೆಚ್ಚಿನವರು ಜ್ವರ ಪೀಡಿತರಾಗಿ ಆಸ್ಪತ್ರೆ ಅಲೆಯುತ್ತಿದ್ದಾರೆ’.

ಇದು ತಾಲ್ಲೂಕಿನ ಕನ್ನಮೇಡಿ ಗ್ರಾಮ ಪಂಚಾಯಿತಿಯ ಆಲದಮರದಹಟ್ಟಿಯಲ್ಲಿ ಕಳೆದ ವಾರ ಡೆಂಗಿ ಪೀಡಿತ ಮಗ ಲೋಕೇಶ್ (6)ನನ್ನು ಕಳೆದುಕೊಂಡ ತಂದೆ ಕೃಷ್ಣಮೂರ್ತಿ ಅವರ ಅಳಲು.

ಸುಮಾರು 25 ಮಂದಿ ಪುಟಾಣಿ ಮಕ್ಕಳು ಸೇರಿದಂತೆ 50ಕ್ಕೂ ಹೆಚ್ಚಿನ ಗ್ರಾಮಸ್ಥರು ಮಲೇರಿಯಾ, ಚಿಕೂನ್‌ಗುನ್ಯಾ, ಶಂಕಿತ ಡೆಂಗಿ ರೋಗಗಳಿಗೆ ಚಿಕಿತ್ಸೆ ಪಡೆಯಲು ಆಂಧ್ರದ ಹಿಂದೂಪುರ, ಮಡಕಶಿರಾ, ಕೊರಟಗೆರೆ ಆಸ್ಪತ್ರೆಗಳಿಗೆ ಎಡತಾಕುತ್ತಿದ್ದಾರೆ.

ಗ್ರಾಮದಲ್ಲಿ ಸುಮಾರು ಎರಡು ನೂರು ಮನೆಗಳಿವೆ. 800 ಜನಸಂಖ್ಯೆಯಿದೆ. ಇಲ್ಲಿಯವರೆಗೆ ಗ್ರಾಮಕ್ಕೆ ಚರಂಡಿ ಸೌಕರ್ಯ ಕಲ್ಪಿಸಿಲ್ಲ. ಶುದ್ಧೀಕರಣ ಘಟಕದ ನೀರು ಕುಡಿದಿಲ್ಲ. ಕೊಳವೆ ಬಾವಿಗಳ ನೀರನ್ನೇ ನೇರವಾಗಿ ಕುಡಿಯುತ್ತಿದ್ದಾರೆ. ಒಡೆದ ಪೈಪ್‌ಲೈನ್ ಮೂಲಕ ಕೊಳಚೆ ನೀರು ಮಿಶ್ರಣವಾಗುತ್ತಿದೆ. ಅದೇ ನೀರನ್ನು ಸೇವಿಸುವ ಅನಿವಾರ್ಯತೆ ಇದೆ. ಶುದ್ಧೀಕರಣ ಘಟಕ ಅಳವಡಿಸಿ ಎಂಬ ಗ್ರಾಮಸ್ಥರ ಕೂಗು ಅಧಿಕಾರಿಗಳ ಕಿವಿಗೆ ಕೇಳುತ್ತಿಲ್ಲ ಎಂಬ ದೂರುಗಳು ಗ್ರಾಮಸ್ಥರದ್ದು.

‘ಗ್ರಾಮಕ್ಕೆ ಭೇಟಿ ನೀಡುವವರನ್ನು ತಿಪ್ಪೆಗಳು ಸ್ವಾಗತಿಸುತ್ತವೆ. ರಸ್ತೆಯ ಎರಡೂ ಬದಿಗಳಲ್ಲಿ, ಮನೆ ಮುಂಭಾಗದಲ್ಲಿ, ಎಲ್ಲೆಂದರಲ್ಲಿ ತಿಪ್ಪೆಗಳನ್ನು ಹಾಕಲಾಗಿದೆ. ಇಡೀ ಗ್ರಾಮವನ್ನು ಪಾರ್ಥೇನಿಯಂ ಗಿಡಗಳು ಆವರಿಸಿಕೊಂಡಿವೆ. ಬಾಲಕ ಲೋಕೇಶ್ ಮೃತಪಟ್ಟ ನಂತರ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಜರುಗಿಸುವುದಾಗಿ ತಿಳಿಸಿ ಹೋದರು.

ಆದರೆ ಈವರೆಗೆ ಗ್ರಾಮದ ಸ್ವಚ್ಚತೆಯತ್ತ ಗಮನಹರಿಸಿಲ್ಲ. ಗ್ರಾಮದಲ್ಲಿ ಆರೋಗ್ಯ ಶಿಬಿರ ಏರ್ಪಡಿಸಿಲ್ಲ. ಕುಡಿಯುವ ನೀರಿನಿಂದಲೇ ಜ್ವರ ಬರುತ್ತಿದೆ ಎಂದು ತಿಳಿಸಿದರೂ ಪರ್ಯಾಯ ವ್ಯವಸ್ಥೆ ಮಾಡಿಲ್ಲ’ ಎಂದು ಗ್ರಾಮದ ಚಿತ್ತಪ್ಪ, ಸಿದ್ದಲಿಂಗಪ್ಪ, ಈರಣ್ಣ, ವೀರಭದ್ರಪ್ಪ ಆರೋಪಿಸಿದ್ದಾರೆ.

ತಾಲ್ಲೂಕಿನ ಕೊತ್ತೂರು, ಹನುಮಯ್ಯನಪಾಳ್ಯ, ಕನ್ನಮೇಡಿ, ಬ್ಯಾಡನೂರು, ಕೃಷ್ಣಗಿರಿ, ಜೂಲಪ್ಪನಹಟ್ಟಿ, ದವಡಬೆಟ್ಟ ತಾಂಡ ಸೇರಿದಂತೆ ತಾಲ್ಲೂಕಿನ ಸಾಕಷ್ಟು ಗ್ರಾಮಗಳಲ್ಲಿ ಚಿಕೂನ್‌ಗುನ್ಯಾ, ಮಲೇರಿಯಾ, ಶಂಕಿತ ಡೆಂಗಿ ಜ್ವರದಿಂದ ಜನರು ಬಳಲುತ್ತಿದ್ದಾರೆ. ಆದರೆ ಅಧಿಕಾರಿಗಳು ಕಂಡೂ ಕಾಣದೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬುದು ಗ್ರಾಮಸ್ಥರ ದೂರು.

ಪಟ್ಟಣದಲ್ಲಿ ವಾರದ ಅಂತರದಲ್ಲಿ ಒಂದೇ ಕುಟುಂಬದ ಇಬ್ಬರು ಡೆಂಗಿ ರೋಗಕ್ಕೆ ಬಲಿಯಾಗಿದ್ದಾರೆ. ಪಟ್ಟಣದಲ್ಲಿ ಫಾಗಿಂಗ್, ಬ್ಲೀಚಿಂಗ್ ಕೆಲಸ ಸರಿಯಾಗಿ ನಡೆಯುತ್ತಿಲ್ಲ ಎಂದು ಪಟ್ಟಣ ವಾಸಿಗಳು ದೂರಿದ್ದಾರೆ.

ಅಂಕಿ ಅಂಶ

ಸರ್ಕಾರಿ ಆಸ್ಪತ್ರೆ ಅಂಕಿ ಅಂಶಗಳ ಪ್ರಕಾರ

ತಾಲ್ಲೂಕಿನಲ್ಲಿ (ಜೂನ್-ಸೆಪ್ಟಂಬರ್) ಡೆಂಗಿ ರೋಗದಿಂದ ಮೃತಪಟ್ಟವರು 4

ಡೆಂಗಿ ರೋಗಕ್ಕೆ ತುತ್ತಾಗಿ ಗುಣಮುಖರಾಗಿರುವವರು 5

ಆಲದಮರದಹಟ್ಟಿ ಗ್ರಾಮದಲ್ಲಿನ ಜನಸಂಖ್ಯೆ 800

ಗ್ರಾಮದಲ್ಲಿರುವ ಮನೆಗಳ ಸಂಖ್ಯೆ 200

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry