ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕ ಬೆಳೆ ಪದ್ಧತಿ ಮಾರಕ... ಮಿಶ್ರ ಬೆಳೆ ರಕ್ಷಕ..!

Last Updated 4 ಅಕ್ಟೋಬರ್ 2017, 9:02 IST
ಅಕ್ಷರ ಗಾತ್ರ

‘ಏಕ ಬೆಳೆ ಪದ್ಧತಿಯ ಬೇಸಾಯ ಕೃಷಿಕರ ಪಾಲಿಗೆ ಮಾರಕ. ಮಿಶ್ರ ಬೆಳೆ ಪದ್ಧತಿ ರೈತರ ರಕ್ಷಕನಿದ್ದಂತೆ. ಅದರಲ್ಲೂ ರಾಸಾಯನಿಕ ಮುಕ್ತ ಕೃಷಿ ಅಳವಡಿಸಿಕೊಂಡರೆ ಎಂದೂ ನಷ್ಟ ಎಂಬ ಮಾತೇ ಬೆಳೆಗಾರರ ಬಾಯಿಂದ ಹೊರ ಬರಲ್ಲ...’

ಒಂದೂವರೆ ದಶಕದಿಂದ ಕೃಷಿಯಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಂಡಿರುವ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಗಡಿ ಗ್ರಾಮ ಇಂಚಗೇರಿಯ ಶೆಟ್ಟೆಪ್ಪ ದುಂಡಪ್ಪ ನಾವಿ ಅವರ ಅನುಭವದ ನುಡಿಗಳಿವು.

ಮುಂಗಾರು–ಹಿಂಗಾರು ಹಂಗಾಮಿನಲ್ಲಿ ‘ಸಮಗ್ರ ಸುಸ್ಥಿರ ಸಾವಯವ ಪದ್ಧತಿ’ಯಡಿ ಬಂಪರ್‌ ಬೆಳೆ ಪಡೆಯುವುದು ಶೆಟ್ಟೆಪ್ಪ–ಮಲ್ಲಮ್ಮ ನಾವಿ ಕುಟುಂಬಕ್ಕೆ ಕರಗತ. ತಮ್ಮ ಒಡೆತನದ 12 ಎಕರೆ, ತಮ್ಮನ ಒಡೆತನದ 12 ಎಕರೆ ಭೂಮಿಯಲ್ಲಿ ವೈವಿಧ್ಯಮಯ ಬೆಳೆ ಬೆಳೆಯುವ ಮೂಲಕ ಕೃಷಿಯಲ್ಲಿ ಯಶಸ್ಸಿನ ದಾಪುಗಾಲಿಟ್ಟಿದೆ.

ಜಮೀನಿನ ಸುತ್ತ ಗುಡ್ಡಗಳಿದ್ದು, ಅತಿವೃಷ್ಟಿ–ಅನಾವೃಷ್ಟಿಯನ್ನು ಸಮರ್ಥವಾಗಿ ಎದುರಿಸುವ ತಾಂತ್ರಿಕತೆ ಇಲ್ಲಿ ಅಳವಡಿಕೆಯಾಗಿದೆ. ಪ್ರಕೃತಿಗೆ ಪೂರಕವಾದ, ಆಯಾ ಕಾಲಘಟ್ಟಕ್ಕೆ ತಕ್ಕಂತೆ ಬದಲಾವಣೆಗೆ ತೆರೆದುಕೊಂಡಿದ್ದು, ಪ್ರತಿ ಹಂಗಾಮಿನಲ್ಲೂ ನೂತನ ಕೃಷಿ ಪ್ರಯೋಗ ನಡೆಸುವ ಮೂಲಕ ಶೆಟ್ಟೆಪ್ಪ ಮಾದರಿ ರೈತರಾಗಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ತೊಗರಿ, ಶೇಂಗಾ, ಹುರುಳಿ, ಮುಕುಣಿ, ಸಜ್ಜೆ, ಮೆಕ್ಕೆಜೋಳ, ಅಲಸಂದಿ, ಕೊತ್ತಂಬರಿ, ಉದ್ದು, ಹೆಸರು, ಸಿರಿ ಧಾನ್ಯಗಳಾದ ನವಣೆ, ಬರಗು ಬೆಳೆಯಲಾಗಿದೆ. ಈ ಬಾರಿ ನೂತನ ಬೆಳೆಯಾಗಿ ಸೊಯಾಬಿನ್‌ ಬೆಳೆದಿದ್ದಾರೆ.

ಹಿಂಗಾರು ಹಂಗಾಮಿನಲ್ಲಿ ಏಳೆಂಟು ತಳಿಯ ಬಿಳಿ ಜೋಳ, ಕಡಲೆ, ಕುಸುಬೆ, ಗೋಧಿ, ಅಗಸಿ, ಮೆಕ್ಕೆಜೋಳ, ಕರೆಳ್ಳು, ಸಾಸಿವೆ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಎರಡೂ ಹಂಗಾಮಿನಿಂದ ಖರ್ಚು ಕಳೆದು ಕನಿಷ್ಠ ಏಳೆಂಟು ಲಕ್ಷ ರೂಪಾಯಿ ಆದಾಯವನ್ನು ವಾರ್ಷಿಕವಾಗಿ ಗಳಿಸುತ್ತಿದ್ದಾರೆ.

ಪ್ರಯೋಗ ಶಾಲೆಯಿದು..!
ಪ್ರತಿ ವರ್ಷ ತಮ್ಮ ಜಮೀನಿನಲ್ಲಿ ಕೃಷಿ ಪ್ರಯೋಗಕ್ಕೆಂದು ಭೂಮಿ ಮೀಸಲಿಡುವುದು ನಾವಿ ಕುಟುಂಬದ ಕೃಷಿ ವಿಶೇಷ. ಪ್ರಸ್ತುತ ವರ್ಷದ ಮುಂಗಾರು ಹಂಗಾಮಿನಲ್ಲಿ ಎಂಟು ಎಕರೆಯಲ್ಲಿ ಹೊಸ ಬೆಳೆಯಾಗಿ ಸೊಯಾಬಿನ್‌ ಬೆಳೆದಿದ್ದಾರೆ. ಬಂಪರ್ ಬೆಳೆ ಬಂದಿದೆ. ಫಸಲನ್ನು ಕಿತ್ತು ರಾಶಿ ಹಾಕಿದ್ದು, 11 ಟನ್‌ ಇಳುವರಿಯ ನಿರೀಕ್ಷೆ ಹೊಂದಿದ್ದಾರೆ. ಹಿಂಗಾರು ಬಿತ್ತನೆ ಬಳಿಕ ರಾಶಿ ಮಾಡಿ ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯದ ಮಾರಾಟ ವಿಭಾಗದ ಮೂಲಕ ಉತ್ಪನ್ನ ಮಾರುವ ಆಲೋಚನೆ ಶೆಟ್ಟೆಪ್ಪ ಅವರದ್ದು.

ಒಂದೇ ಬೆಳೆಯ ಮೇಲೆ ಅವಲಂಬಿತವಾದರೆ ಬದುಕು ಸುಸ್ಥಿರತೆಯಿಂದ ಕೂಡಿರದೆ, ಸದಾ ಅತಂತ್ರದ ಭೀತಿಯಲ್ಲೇ ನಡೆಸಬೇಕಾಗುತ್ತದೆ. ಇದಕ್ಕೆ ಇತಿಶ್ರೀ ಹಾಕಲು ಈಗಷ್ಟೇ ಒಣ ಬೇಸಾಯದಲ್ಲಿ ಅಂತಸ್ತು ಹಣ್ಣಿನ ತೋಟಗಾರಿಕೆ ಮಾಡಿದ್ದಾರೆ.

ಇಲ್ಲಿಯೂ ನಿಂಬೆ, ಪೇರು, ಚಿಕ್ಕು, ಮಾವು, ಕರಿಬೇವು, ಸೀತಾಫಲ, ತೆಂಗು, ನುಗ್ಗೆ, ಹೆಬ್ಬೇವು ಬೆಳೆಯುವ ಮೂಲಕ ಅರಣ್ಯ ಕೃಷಿಗೂ ಒತ್ತು ನೀಡಿದ್ದಾರೆ. ಈ ಹಣ್ಣಿನ ಗಿಡಗಳಿಗೆ ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ಜೀವಾಮೃತ ನೀಡಲು ಉಪಯೋಗಿಸಿ ಬಿಸಾಡಿದ ಗ್ಲುಕೋಸ್‌ ಬಾಟಲಿ ಸದ್ಬಳಕೆ ಮಾಡಿಕೊಂಡು, ಹನಿ ಹನಿ ಜೀವಾಮೃತವನ್ನು ಗಿಡಗಳಿಗೆ ವ್ಯವಸ್ಥಿತವಾಗಿ ಉಣಬಡಿಸಿದ್ದು, ಸಮೃದ್ಧವಾಗಿ ಬೆಳೆದಿವೆ. ಈ ಗಿಡಗಳ ಸುತ್ತಲೂ ಮಣ್ಣಿನ ಫಲವತ್ತತೆ ಹೆಚ್ಚಿಸಲು, ಕಳೆ ಬೆಳೆಯುವುದನ್ನು ತಡೆಗಟ್ಟಲು ಹೂವು, ತರಕಾರಿ, ಹಣ್ಣಿನ ಗಿಡಗಳ ಜತೆ ರಾಗಿ ಬೆಳೆದಿದ್ದಾರೆ.

ಬೀಜಾಮೃತ...
ಯಾವ ಬೆಳೆಯನ್ನಾದರೂ ಬೆಳೆಯಲಿ. ಬೀಜೋಪಚಾರ ನಡೆಸದೆ ಬಿತ್ತನೆ ನಡೆಸಲ್ಲ. ಭೂಮಿಗೆ ಬೀಜ ಬೀಳುವ ಮುನ್ನಾದಿಂದಲೇ ಸಾವಯವ ಪದ್ಧತಿ ಅನುಸರಿಸುವಿಕೆ. ಉತ್ತಮ ತಳಿಯ ಬೀಜ ಆಯ್ದುಕೊಂಡು ಗೋಮೂತ್ರ, ಸೆಗಣಿ, ಸುಣ್ಣದ ಮಿಶ್ರಣ ಲೇಪಿಸಿ ಬೀಜಾಮೃತ ಮಾಡಲಾಗುತ್ತದೆ.

ಬಿತ್ತನೆಯ ಹಿಂದಿನ ದಿನದ ರಾತ್ರಿ 12ಕ್ಕೆ ಬಿತ್ತನೆ ಬೀಜವನ್ನು ಈ ಬೀಜಾಮೃತದೊಳಗೆ ಅದ್ದಿ ಮುಂಜಾನೆ 7 ಗಂಟೆವರೆಗೂ ನೆರಳಿನಲ್ಲಿ ಒಣಗಿಸಲಾಗುತ್ತದೆ. ಬಳಿಕ ರಂಜಕ ಕರಗಿಸುವ ಗೊಬ್ಬರವಾದ ಪಿಎಸ್‌ಬಿ ಜೈವಿಕ ಗೊಬ್ಬರ, ಗಿಡದ ಬೇರಿಗೆ ಹಾನಿಕಾರಕ ಶಿಲೀಂಧ್ರ ಹಾವಳಿ ತಡೆಯಲಿಕ್ಕೆ ಟೈಕೋಡರ್ಮಾ, ವಾತಾವರಣದಲ್ಲಿನ ಸಾರಜನಕ ಒದಗಿಸಲಿಕ್ಕೆ ಅಜೋಸ್ಪೆರಿಲಿಯಂನ್ನು ತಲಾ 10 ಗ್ರಾಂ ನಂತೆ ಒಂದು ಕೆ.ಜಿ. ಬಿತ್ತನೆ ಬೀಜಕ್ಕೆ ಬೆಲ್ಲದ ದ್ರಾವಣದ ಜತೆ ಮಿಶ್ರಣ ಮಾಡಿಕೊಂಡು ಚುಮುಕಿಸುವ ಮೂಲಕ ಬೀಜೋಪಚಾರ ಮಾಡಿ ಬಿತ್ತನೆ ನಡೆಸಲಾಗುವುದು.

ಬೆಳವಣಿಗೆ ಹಂತದಲ್ಲಿ ಗಿಡದಲ್ಲಿ ರೋಗ ಕಾಣಿಸಿಕೊಂಡರೆ ನಿವಾರಣೆಗಾಗಿ ಗೋಮೂತ್ರ, ಸೆಗಣಿ, ಬೇವಿನ ತಪ್ಪಲು, ನಾರಂಜಿ ಎಲೆ, ಅಡಕೆ ತಪ್ಪಲಿನ ಮಿಶ್ರಣದ ಕಷಾಯ ಸಿಂಪಡಿಸುವೆ. ಬೇವಿನ ಕಷಾಯ, ಹಸಿಮೆಣಸಿನಕಾಯಿ–ಬೆಳ್ಳುಳ್ಳಿ ಮಿಶ್ರಣದ ಕಷಾಯ, ಅಡಕೆ ತಪ್ಪಲು, ಹುಳಿ ಮಜ್ಜಿಗೆ ಮಿಶ್ರಣದ ಕಷಾಯ ಸಿಂಪಡಿಸುವ ಮೂಲಕ ರೋಗ ನಿಯಂತ್ರಿಸುವೆ. ಕೆಲ ಕೀಟಗಳ ನಿವಾರಣೆಗಾಗಿ ಗಿಡಕ್ಕೆ ಬೆಲ್ಲದ ನೀರು ಚಿಮುಕಿಸಿ ಇರುವೆಗಳ ಸಹಕಾರವನ್ನು ಪಡೆಯುವೆ. ಇದರ ಜತೆಗೆ ರೋಗ ನಿಯಂತ್ರಣಕ್ಕಾಗಿಯೇ ಬದು ಬೆಳೆ ಬೆಳೆಯುತ್ತೇನೆ. ಈ ಬೆಳೆ ಕೀಟಗಳನ್ನು ನಿಯಂತ್ರಿಸುತ್ತದೆ.

ದ್ವಿದಳ ಧಾನ್ಯ ಬೆಳೆಯೊಳಗೆ ಏಕ ಧಾನ್ಯ ಬೆಳೆ ಬೆಳೆಯಬೇಕು. ಏಕಧಾನ್ಯದೊಳಗೆ ದ್ವಿದಳ ಧಾನ್ಯ ಬೆಳೆಯಿರಬೇಕು. ಇದರಿಂದಲೂ ರೋಗ–ಕೀಟ ನಿಯಂತ್ರಣ ಸುಲಭ. ಮಳೆ ಅಭಾವದಿಂದ ಬೆಳೆಗಳಿಗೆ ನೀರಿನ ಕೊರತೆ ಎದುರಾದಾಗ ಒಂದೆರೆಡು ಬಾರಿ ನೀರು ಹಾಯಿಸುವೆ ಎಂದು ಶೆಟ್ಟೆಪ್ಪ ತಮ್ಮ ಕೃಷಿ ಪದ್ಧತಿಯ ಮಾಹಿತಿ ನೀಡಿದರು.

ನೀರಿನ ನಿರ್ವಹಣೆ...
‘ಓಡುವ ನೀರನ್ನು ನಿಲ್ಲಿಸುವುದು. ನಿಂತ ನೀರನ್ನು ಭೂಮಿಗೆ ಹಿಂಗಿಸುವಿಕೆ. ಹಿಂಗಿ ಹೆಚ್ಚಾದ ನೀರನ್ನು ಶೃಂಗಾರ ಮೋರಿಯಿಂದ ಹೊರ ಹಾಕುವಿಕೆ’ ಪದ್ಧತಿ ಮೂಲಕ ಅತಿವೃಷ್ಟಿ–ಅನಾವೃಷ್ಟಿಗೆ ಬೆಳೆ ಬಾಧಿತವಾಗದಂತೆ ಕಾಪಾಡುವ ತಂತ್ರಗಾರಿಕೆ ಶೆಟ್ಟೆಪ್ಪ ಹೊಲದಲ್ಲಿ ಅಳವಡಿಕೆಯಾಗಿದೆ.

ಒಂದು ಹನಿ ನೀರು ವ್ಯರ್ಥವಾಗದಂತೆ ಮುನ್ನೆಚ್ಚರಿಕೆ ವಹಿಸಿ ಕಾಪಿಡಲಾಗಿದೆ. 12 ಲಕ್ಷ ಲೀಟರ್ ಸಾಮರ್ಥ್ಯದ ಕೃಷಿ ಹೊಂಡವಿದೆ. ಜಮೀನಿನ ಎಲ್ಲೆಡೆ ಭದ್ರ ಬದು ನಿರ್ಮಿಸಲಾಗಿದೆ. ಈ ಬದುಗಳ ಮೇಲೆ ಹಸಿರು ಬೇಲಿಯಾಗಿ ಗ್ಲಿಸರಿನ್‌ ಗಿಡ ಬೆಳೆಸಿದ್ದಾರೆ. ಟ್ರಂಚ್‌ ನಿರ್ಮಿಸಿ ನೀರು ಸಂಗ್ರಹಿಸಲಾಗಿದೆ. ಕಾಂಪೋಸ್ಟ್‌ ಗೊಬ್ಬರವೂ ಇಲ್ಲಿಯೇ ತಯಾರಾಗುವುದು ವಿಶೇಷ. ಅಂತಸ್ತು ಕೋಳಿ ಸಾಕಣೆ, ಆಡು ಸಾಕಣೆಯನ್ನು ನಡೆಸಿರುವ ಶೆಟ್ಟೆಪ್ಪ ಉಳುಮೆಗಾಗಿ ಎರಡು ಎತ್ತು, ಸಾವಯವ ಪದ್ಧತಿಯ ಕೃಷಿ ನಿರ್ವಹಣೆಗಾಗಿ ಒಂದು ಆಕಳು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT