ಗುರುವಾರ , ಸೆಪ್ಟೆಂಬರ್ 19, 2019
26 °C

ಹುಡುಗರಿಗೂ ಸ್ಕರ್ಟ್

Published:
Updated:
ಹುಡುಗರಿಗೂ ಸ್ಕರ್ಟ್

ದಿನಕ್ಕೊಂದು ಹೊಸ ಹುಟ್ಟು ಪಡೆಯುತ್ತದೆ ಫ್ಯಾಷನ್. ಅದಕ್ಕೆ ಉದಾಹರಣೆ ಎಂಬಂತೆ, ಇತ್ತೀಚೆಗೆ ನಡೆದ ಕಾರ್ಯಕ್ರಮ ವೊಂದರಲ್ಲಿ ಬಾಲಿವುಡ್‌ ನಟ ರಣವೀರ್ ಸಿಂಗ್ ಪಿನ್‌ ಸ್ಟ್ರೈಪ್ ಸ್ಕರ್ಟ್‌ನಲ್ಲಿ ಎಂಟ್ರಿ ಕೊಟ್ಟಿದ್ದು.

ಲಂಡನ್‌ನಲ್ಲಿ ಈಚೆಗೆ ಹುಡುಗರ ದಂಡೊಂದು ಸ್ಕರ್ಟ್‌ ತೊಟ್ಟು ಹೊರತಿರುಗಿತ್ತು. ನೋಡುಗರೆಲ್ಲರೂ ಅದಕ್ಕೆ ಬಿಡುಗಣ್ಣಾಗಿದ್ದರು. ಆ ಸಂಗತಿ ವೈರಲ್ ಕೂಡ ಆಯಿತು. ನಂತರ ಮ್ಯಾನ್‌ಸ್ಕರ್ಟ್‌ಗಳು ಅಲ್ಲಲ್ಲಿ ಕಾಣಿಸಿಕೊಳ್ಳಲು ಶುರುವಾದವು.

ಇಂದಿನ ವಿನ್ಯಾಸ ನಾಳೆಗೆ ಹಳಸು. ಅದಕ್ಕೆಂದೇ ಪ್ರಯೋಗದ ಅನಿವಾರ್ಯತೆಯೂ ಇದೆಯೆನ್ನಿ. ಹಾಗೆಂದು ಅನಿವಾರ್ಯಕ್ಕಷ್ಟೇ ಸೀಮಿತವಾಗಿಲ್ಲ ಈ ಮ್ಯಾನ್‌ಸ್ಕರ್ಟ್‌.

ಜೆಂಡರ್ ಬೆಂಡಿಂಗ್, ಜೆಂಡರ್ ಫ್ಲ್ಯುಡಿಟಿ, ಆ್ಯಂಡ್ರೋಜಿನಸ್ ಫ್ಯಾಷನ್ ಪರಿಕಲ್ಪನೆಯಲ್ಲಿ ಲಿಂಗಬೇಧದ ಗೆರೆಯನ್ನು ಮಸುಕುಗೊಳಿಸುವ ಪ್ರಯತ್ನಗಳು ಫ್ಯಾಷನ್ ಕ್ಷೇತ್ರದಲ್ಲಿ ಗರಿಗೆದರುತ್ತಿವೆ.

ಲಿಂಗಬೇಧದ ಮೊದಲ ಸೂಚಕಗಳೇ ಉಡುಪು. ಇಂಥ ಉಡುಪನ್ನು ಇಂಥವರೇ ತೊಟ್ಟುಕೊಳ್ಳ ಬೇಕೆಂಬ ಅಘೋಷಿತ ನಿಯಮವೂ ನೋಡುಗರ ಕಣ್ಣಿನಲ್ಲಿರುತ್ತದೆ. ಆದರೆ ಈ ಒಂದು ನೋಟವನ್ನು ಬದಲಿಸಬೇಕೆಂದೇ ಭಾರತ ಹಾಗೂ ಅಂತರರಾಷ್ಟ್ರೀಯ ಮಟ್ಟದ ಫ್ಯಾಷನ್ ಕ್ಷೇತ್ರದಲ್ಲಿ ಸಾಕಷ್ಟು ಪ್ರಯೋಗಗಳೂ ನಡೆಯುತ್ತಿವೆ.

ಇಂಥ ಫ್ಯಾಷನ್‌ಗಳು ಹೆಚ್ಚು ಪ್ರಚಲಿತಗೊಳ್ಳುವುದು ಸೆಲೆಬ್ರಿಟಿಗಳನ್ನು ಅನುಸರಿಸುವ ಅಭಿಮಾನಿಗಳಿಂದ. ಆದರೆ ಈ ರೀತಿ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ತಾರೆ ಯರು ಕಡಿಮೆಯೇ. ತಮ್ಮ ಇಮೇಜ್‌ಗೆ ಯಾವುದೇ ಧಕ್ಕೆ ಬರದ ರೀತಿಯ, ತಮ್ಮನ್ನು ಒಂದು ಸಿದ್ಧ ಮಾದರಿಗೆ ಒಪ್ಪಿಸಿಕೊಳ್ಳುವಂಥ ತಾರೆಯರೇ ಹೆಚ್ಚು.

ಬಾಲಿವುಡ್ ನಟ ರಣವೀರ್ ಸಿಂಗ್ ಇದಕ್ಕೆ ಭಿನ್ನ. ಫ್ಯಾಷನ್ ಸೆನ್ಸ್‌ಗೆ ಹೆಸರುವಾಸಿಯಾದ ರಣವೀರ್ ಈ ಮ್ಯಾನ್‌ಸ್ಕರ್ಟ್‌ಗೆ ಮುನ್ನುಡಿ ಬರೆದಿದ್ದರು. 2015ರಲ್ಲೇ ಈ ಲಾಂಗ್ ಸ್ಕರ್ಟ್‌ ತೊಟ್ಟು ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿದ್ದರು. ‘ಹೊಸತು ನಿರಂತರವಾಗಿರಬೇಕು.

ಪ್ರಯೋಗಗಳಿಗೆ ಮುಜುಗರ ಪಟ್ಟುಕೊಳ್ಳ ಬಾರದು’ ಎನ್ನುತ್ತಲೇ ಲಾಂಗ್ ಸ್ಕರ್ಟ್‌ ತೊಟ್ಟು ಮಿಂಚಿದ್ದರು. ಸುಮಾರು ಐದಾರು ಕಾರ್ಯಕ್ರಮಗಳಲ್ಲೂ ಬೇರೆ ಬೇರೆ ರೀತಿಯ ಸ್ಕರ್ಟ್‌ ತೊಟ್ಟು ಬೆರಗುಗೊಳಿಸಿದ್ದರು. ಬ್ಲೇಜರ್, ಕುರ್ತಾ, ಶೇರ್ವಾನಿ ಹೀಗೆ ಸಾಕಷ್ಟು ಉಡುಪುಗಳಿಗೆ ಸ್ಕರ್ಟ್‌ ತೊಟ್ಟು ಪ್ರಯೋಗ ನಡೆಸಿದ್ದರು. ಮ್ಯಾನ್‌ಸ್ಕರ್ಟ್‌ ಟ್ರೆಂಡ್ ಅನ್ನು ಹಾಲಿವುಡ್‌ ನಟರಾದ ಜೇರ್ಡ್ ಲೆಟೊ, ವೆಸ್ಟ್, ಜೇಡನ್ ಸ್ಮಿತ್ ಡೀಸೆಲ್ ಕೂಡ ಬೆಂಬಲಿಸಿದ್ದಾರೆ.

Post Comments (+)