ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಕ್ಕೆ ಎರವಾದ ಮಿಸ್ಡ್‌ಕಾಲ್‌ ಪ್ರೇಮ!

ಅಚನೂರಿನ ಮಹಿಳೆ ಕೊಲೆ ಪ್ರಕರಣ; ಬೆಂಗಳೂರಿನ ಬಾಣಸಿಗ ಬಂಧನ
Last Updated 5 ಅಕ್ಟೋಬರ್ 2017, 20:06 IST
ಅಕ್ಷರ ಗಾತ್ರ

ಬಾಗಲಕೋಟೆ: ಮೊಬೈಲ್‌ನ ಮಿಸ್ಡ್‌ ಕಾಲ್‌ನಿಂದ ಬೆಂಗಳೂರಿನ ಚಿತ್ತಾಗನಹಳ್ಳಿಯ ಬಾಣಸಿಗ ಹಾಗೂ ತಾಲ್ಲೂಕಿನ ಅಚನೂರಿನ ಗೃಹಿಣಿಯ ನಡುವೆ ಉಂಟಾದ ಪರಿಚಯವು ಪ್ರೇಮಕ್ಕೆ ತಿರುಗಿ, ಮಹಿಳೆಯ ಕೊಲೆಯಲ್ಲಿ ಅಂತ್ಯವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ನಿವಾಸಿಯಾದ, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ವಿರಪಸಂದಿರಮ್ ಗ್ರಾಮದ ನಾರಾಯಣ ಯಲ್ಲೋಜಿ (39) ಎಂಬಾತನನ್ನು ಬಂಧಿಸಲಾಗಿದೆ.

ಸೆ.27ರಂದು ಸಮೀಪದ ಮಲ್ಲಾಪುರ ಗುಡ್ಡದಲ್ಲಿ ಅಚನೂರಿನ 38 ವರ್ಷದ ವಿವಾಹಿತ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಅವರ ಮೊಬೈಲ್‌ ಕರೆ ವಿವರ ಪರಿಶೀಲಿಸಿ, ಆರೋಪಿಯನ್ನು ಪತ್ತೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಿಸ್ಡ್‌ಕಾಲ್‌ ಪ್ರೇಮ: ‘ಬೆಂಗಳೂರಿನಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡಿದ್ದ ಯಲ್ಲೋಜಿ ಮೊಬೈಲ್‌ಗೆ ಮಾರ್ಚ್‌ನಲ್ಲಿ ಮಿಸ್‌ ಕಾಲ್ಡ್‌ ಬಂದಿತ್ತು. ಮರಳಿ ಕರೆ ಮಾಡಿದಾಗ ಆಚನೂರಿನ ಮಹಿಳೆಯ ಪರಿಚಯವಾಯಿತು. ನಂತರ ಅವರ ಸ್ನೇಹ, ಪ್ರೇಮಕ್ಕೆ ತಿರುಗಿತ್ತು. ಮೂವರು ಮಕ್ಕಳ ತಾಯಿಯಾದ ಆ ಮಹಿಳೆ ಪ್ರತಿ ಅಮವಾಸ್ಯೆಗೆ ಮಲ್ಲಾಪುರ ಗುಡ್ಡದಲ್ಲಿರುವ ಮೈಲಾರಲಿಂಗನ ದೇವಸ್ಥಾನಕ್ಕೆ ಹೋಗುತ್ತಿದ್ದರು. ಅಲ್ಲಿಗೆ ಯಲ್ಲೋಜಿಯೂ ಹೋಗುತ್ತಿದ್ದ. ನಾಲ್ಕಾರು ಬಾರಿ ಇಬ್ಬರೂ ಗೌಪ್ಯವಾಗಿ ಅಲ್ಲಿ ಭೇಟಿಯಾಗಿದ್ದರು’ ಎಂಬುದನ್ನು ಪೊಲೀಸರು ತಿಳಿಸಿದ್ದಾರೆ.

‘ಸೆ.19ರಂದು ಮಹಾಲಯ ಅಮಾವಾಸ್ಯೆಯ ದಿನ ಯಲ್ಲೋಜಿ ಗುಡ್ಡಕ್ಕೆ ಹೋದಾಗ ತನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಮಹಿಳೆ ಪೀಡಿಸಿದ್ದಾರೆ. ಈ ವಿಷಯದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ. ನಂತರ ಕತ್ತು ಹಿಸುಕಿ ಕೊಲೆ ಮಾಡಿ ಗುಡ್ಡದಲ್ಲಿನ ಮುಳ್ಳಿನ ಪೊದೆಯಲ್ಲಿ ಬಿಸಾಕಿ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ಮೊಬೈಲ್‌ ಕರೆ ವಿವರ ಪರಿಶೀಲಿಸಿದಾಗ ಪ್ರತಿ ಅಮಾವಾಸ್ಯೆ ದಿನ ಯಲ್ಲೋಜಿ ಕರೆ ಮಾಡುತ್ತಿದ್ದ ವಿಷಯ ಗೊತ್ತಾಗಿದೆ. ವಿಚಾರಣೆ ಮಾಡಿದಾಗ ಕೊಲೆ ಮಾಡಿದ ವಿಷಯವನ್ನು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT