ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾನಾಡಿಗಳ ಹುಡುಕುತ್ತಾ ಕಲಕೇರಿ ಕಾಡಲ್ಲಿ ಸುತ್ತಾಡಿ...

Last Updated 6 ಅಕ್ಟೋಬರ್ 2017, 6:20 IST
ಅಕ್ಷರ ಗಾತ್ರ

ಧಾರವಾಡ: ವನ್ಯಜೀವಿ ಸಪ್ತಾಹದ ಅಂಗವಾಗಿ ಕರ್ನಾಟಕ ವಿಶ್ವವಿದ್ಯಾಲಯದ ಪಬ್ಲಿಕ್‌ ಶಾಲೆಯ ಮಕ್ಕಳು ತಾಲ್ಲೂಕಿನ ಕಲಕೇರಿ ಅರಣ್ಯ ಪ್ರದೇಶದಲ್ಲಿ ಗುರುವಾರ ಚಾರಣ ನಡೆಸಿ ಪ್ರಾಣಿ, ಪಕ್ಷಿ ವೀಕ್ಷಣೆಯ ಮಜ ಸವಿದರು.

ಅರಣ್ಯ ಇಲಾಖೆಯ ಸಹಯೋಗದಲ್ಲಿ ದೃಷ್ಟಿ ಸೃಷ್ಟಿ ಫೋಟೊಗ್ರಫಿ ಕ್ಲಬ್‌ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಗುರುವಾರ ಬೆಳಿಗ್ಗೆ ದಟ್ಟವಾಗಿ ಕವಿದಿದ್ದ ಮಂಜಿನಲ್ಲೇ ಮಕ್ಕಳು ಕಾಡಿನಲ್ಲಿ ಚಾರಣಕ್ಕೆ ಅಣಿಯಾದರು. ದಾರಿಯುದ್ದಕ್ಕೂ ಮುಂಜಾವಿನ ಹಕ್ಕಿಗಳ ಚಿಲಿಪಿಲಿ ಆಲಿಸಿ ಪುಳಕಗೊಂಡರು. ಹಾದಿ ಮಧ್ಯೆ ಕಣ್ಣಿಗೆ ಕಂಡ ತರಹೇವಾರಿ ಪ್ರಾಣಿ ಹಾಗೂ ಪಕ್ಷಿಗಳ ಕುರಿತು ಕುತೂಹಲದಿಂದ ಮಾಹಿತಿ ಪಡೆದರು.

5 ಮತ್ತು 6ನೇ ತರಗತಿಯ ಶಾಲೆಯ 27 ಮಕ್ಕಳು, ಅರಣ್ಯ ಇಲಾಖೆ ಜೀಪಿನಲ್ಲಿ ಧಾರವಾಡದಿಂದ ಕಲಕೇರಿಗೆ ಬಂದಿಳಿದಾಗ ಬೆಳಿಗ್ಗೆ 7 ಆಗಿತ್ತು. ಅಲ್ಲಿನ ಮಕ್ಕಳಿಗೆ ವನ್ಯಜೀವಿ ಸಪ್ತಾಹ ಕುರಿತು ಹವ್ಯಾಸಿ ಛಾಯಾಗ್ರಾಹಕ ಅನಿಲ್‌ಕುಮಾರ್‌ ಕಿತ್ತೂರು ಮಾಹಿತಿ ನೀಡಿದರು. ನಂತರ ಅದೇ ಕಾಡಿನೊಳಗಿರುವ ಕೆರೆಯ ಸುತ್ತ ಮಕ್ಕಳು ಓಡಾಡಿ ಸಂಭ್ರಮಿಸಿದರು.

ಅಲ್ಲಿ  ಕಂಡ ಅಪರೂಪದ ಕೆಂದೆಳೆ ಗಿಳಿ, ಗುಲಾಬಿ ಕತ್ತಿನ ಗಿಳಿ, ಕಂದು ಬಣ್ಣದ ಮುನಿಯಾ, ಬೂದು ಕೊಕ್ಕರೆ, ಕೆಂದಳಿಲು, ಆಮೆ, ಬ್ರಾಹ್ಮಿಣಿ ಡಕ್‌, ಸ್ಪಾಟೆಡ್‌ ಡವ್‌ ಸೇರಿದಂತೆ ಹಲವಾರು ಪಕ್ಷಿ ಹಾಗೂ ಪ್ರಾಣಿಗಳನ್ನು ತೋರಿಸಿದ ಹವ್ಯಾಸಿ ಛಾಯಾಗ್ರಾಹಕ ಅನಿಲ್‌ಕುಮಾರ್‌ ಕಿತ್ತೂರು ಮಾಹಿತಿ ನೀಡಿದರು. ವನ್ಯಜೀವಿಗಳ ಉಳಿವಿನಿಂದ ಪ್ರಕೃತಿಗೆ ಆಗುವ ಲಾಭ ಕುರಿತು ಮಕ್ಕಳು ಅವರಿಂದ ಕೇಳಿ ಮಾಹಿತಿ ಪಡೆದರು.

ಪ್ರಕಾಶ ಗೌಡರ ಅವರು ಕಾಡಿನಲ್ಲಿರುವ ವಿವಿಧ ತಳಿಯ ಸಸ್ಯಗಳು ಹಾಗೂ ಅದರ ಉಪಯೋಗಗಳನ್ನು ಮಕ್ಕಳಿಗೆ ತಿಳಿಸಿದರು. ಕಾಡಿನಲ್ಲಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಕಳೆದ ಮಕ್ಕಳು ಅರಣ್ಯದೊಳಗೆ ಸುತ್ತಾಡಿ ಸಂಭ್ರಮಿಸಿದರು.

ಅರಣ್ಯ ಅಧಿಕಾರಿಗಳು ತಮ್ಮ ಕರ್ತವ್ಯಗಳ ವಿವರಣೆಯ ಜತೆಗೆ, ಗಿಡ, ಮರ, ಪ್ರಾಣಿ ಹಾಗೂ ಪಕ್ಷಿಗಳು ಸೇರಿದಂತೆ ಕಾಡಿನೊಳಗಿರುವ ಅಪರೂಪದ ಜೀವಸಂಕುಲಗಳನ್ನು ಉಳಿಸುವುದರ ಮೂಲಕ ಪರಿಸರ ಸಮತೋಲನ ಕಾಪಾಡುವುದರ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ಜತೆಗೆ ಅರಣ್ಯ ಸಂಪತ್ತು ನಾಶಪಡಿಸುವವರ ವಿರುದ್ಧ ಇರುವ ಕಠಿಣ ಕಾನೂನು ಕುರಿತು ಅರಿವು ಮೂಡಿಸಿದರು.

ಶ್ರೀಹರ್ಷ, ಉದಯ ಕುಮಾರ್‌ ಭಾಗವಹಿಸಿದ್ದರು. ವಲಯ ಅರಣ್ಯಾಧಿಕಾರಿಗಳಾದ ವಿಜಯ ಕುಮಾರ್‌, ಎಂ.ಉಷಾ ಹಾಗೂ ಉಪ ವಲಯಾರಣ್ಯ ಅಧಿಕಾರಿ ಮಣಕೂರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT