ಸಾಕ್ಷಾತ್‌ ಚಿತ್ರಣ!

ಸೋಮವಾರ, ಜೂನ್ 17, 2019
22 °C

ಸಾಕ್ಷಾತ್‌ ಚಿತ್ರಣ!

Published:
Updated:
ಸಾಕ್ಷಾತ್‌ ಚಿತ್ರಣ!

‘ಹೊಲಸು ಬಳಿಯುವ ಬದುಕಿನ ಬವಣೆ’ ಸಚಿತ್ರ ಲೇಖನ ಮಲ ಹೊರುವವರ ಹೀನಾಯ ಬದುಕಿನ ಸಾಕ್ಷಾತ್‌ ಚಿತ್ರಣವನ್ನು ಓದುಗರಿಗೆ ಕಟ್ಟಿಕೊಟ್ಟು ಆಡಳಿತ ವೈಖರಿಯ ವಿಶ್ವರೂಪ ಬಯಲು ಮಾಡಿದೆ (ಪ್ರ.ವಾ., ಸೆ. 23). ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ನಾಗಾಲೋಟದಲ್ಲಿದೆ. ನಮ್ಮ ಪ್ರಧಾನಿಗಳು ‘ಅಚ್ಛೇ ದಿನ್‌’ ಬಗ್ಗೆ ಮಾತನಾಡುತ್ತಿದ್ದಾರೆ. 20 ವರ್ಷಗಳ ಹಿಂದೆ ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರು ಭಾರತ ಪ್ರಕಾಶಿಸುತ್ತಿದೆ (ಇಂಡಿಯಾ ಶೈನಿಂಗ್‌) ಎಂದಿದ್ದರು. ಆದರೆ, ವಾಸ್ತವದಲ್ಲಿ ಅಸ್ಥಿಪಂಜರಗಳಂತೆ ಕಾಣುವ ಅದೆಷ್ಟೊ ಅಪಸವ್ಯಗಳು, ಅಪಸ್ಮಾರಗಳು ಇನ್ನೂ ಜೀವ ಹಿಡಿದುಕೊಂಡಿರುವುದು ವ್ಯಥೆ ತರುತ್ತದೆ.

ಮಲ ಹೊರುವ ಹೀನ ಪದ್ಧತಿಗೆ ಮೊದಲು ಅಂತ್ಯ ಹಾಡಿದ್ದು ನಮ್ಮ ಕರ್ನಾಟಕ ಎಂಬುದು ಹೆಮ್ಮೆಯ ಸಂಗತಿ. ದೇವರಾಜ ಅರಸು ನೇತೃತ್ವದ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಬಿ. ಬಸವಲಿಂಗಪ್ಪ ಅವರ ದಿಟ್ಟ ನಿರ್ಧಾರದಿಂದಾಗಿ 1974ರಲ್ಲಿಯೇ ಈ ಪದ್ಧತಿಗೆ ನಿಷೇಧ ಹೇರಿದ್ದು ಐತಿಹಾಸಿಕ ಸಂಗತಿ. ನಿಷೇಧ ಜಾರಿಗೆ ಬಂದು 43 ವರ್ಷಗಳು ಕಳೆದಿದ್ದರೂ, ರಾಜ್ಯದ ಹಲವೆಡೆ ಇನ್ನೂ ಈ ಪದ್ಧತಿ ಜಾರಿಯಲ್ಲಿದೆ ಎಂಬುದು ಸಮಾಜ ತಲೆತಗ್ಗಿಸಬೇಕಾದ ವಿಚಾರ. ಇದನ್ನೇ ವೃತ್ತಿಯಾಗಿಸಿಕೊಂಡಿರುವ ನೂರಾರು ಕುಟುಂಬಗಳಿಗೆ ಈ ಉದ್ಯೋಗ ಬಿಟ್ಟು ಅನ್ಯ ದಾರಿ ಕಾಣುತ್ತಿಲ್ಲ ಅಥವಾ ಕಾಣಲು ಯತ್ನಿಸಿಲ್ಲವೇನೋ! ಅದರೆ ಒಂದು ಸಾಮಾಜಿಕ ಅನಿಷ್ಟ ಪದ್ಧತಿಯೆಂದು ಗೊತ್ತಾಗಿ ಅದನ್ನು ನಿಷೇಧಿಸುವ ಇಲ್ಲವೇ ರದ್ದುಮಾಡುವ ನಿರ್ಧಾರ ತಳೆಯುವ ಸರ್ಕಾರಗಳು, ಅಂಥ ಕುಟುಂಬಗಳ ಪುನರ್ವಸತಿಗೆ ಏನು ಕ್ರಮ ಕೈಗೊಂಡಿವೆ ಎಂದರೆ ಆಡಳಿತಗಾರರಲ್ಲಿ ಉತ್ತರವಿಲ್ಲ.

‘ಮಲ ಹೊರುವ ಪದ್ಧತಿ ಅಸ್ತಿತ್ವದಲ್ಲಿ ಇಲ್ಲ, ಎಲ್ಲಾ ಕಡೆ ಸಕ್ಕಿಂಗ್‌ ಯಂತ್ರಗಳು ಬಂದಿವೆ’ ಎನ್ನುವ ಸರ್ಕಾರ, ಸ್ಥಳೀಯ ಸಂಸ್ಥೆಗಳಿಗೆ ಯಂತ್ರವನ್ನೇನೋ ಕೊಟ್ಟಿದೆ. ಅದನ್ನು ಒಯ್ಯಲು ವಾಹನ ಕೊಡಲು ಮರೆತಿದೆ. ಇಂದಿಗೂ ಎಷ್ಟೋ ಸಕ್ಕಿಂಗ್‌ ಯಂತ್ರಗಳು ಸ್ಥಳೀಯ ಸಂಸ್ಥೆಗಳ ಅವರಣದಲ್ಲೇ ನಿಂತಿವೆ ಎಂಬುದು ವಾಸ್ತವ.

ಆಕರ್ಷಕ ಯೋಜನೆಗಳನ್ನು ಘೋಷಿಸುವುದೇ ಅ‌ಗ್ಗಳಿಕೆ ಎಂದು ಸರ್ಕಾರಗಳು ಭಾವಿಸಿದಂತಿವೆ. ಅಂಥ ಯೋಜನೆಗಳ ಲಾಭ ಜನರಿಗೆ ತಲುಪುತ್ತಿದೆಯಾ ಎಂಬ ಬಗ್ಗೆಯೂ ಸರ್ಕಾರಗಳಿಗೆ ಚಿಕಿತ್ಸಾತ್ಮಕ ದೃಷ್ಟಿಕೋನ ಇರಬೇಕಲ್ಲವೇ? ಸ್ವಾಭಿಮಾನಿ ಬದುಕು ಎಲ್ಲರದ್ದಾಗಬೇಕು ಎಂಬ ಘೋಷವಾಕ್ಯ ತುಂಬಾ ಹಿತವಾಗಿ ಕೇಳುತ್ತದೆ. ಆದರೆ ಅದರ ಸಾಕಾರಕ್ಕೆ ಏನೇನು ಮಾಡಬೇಕೆಂಬ ಸಿದ್ಧತೆಯ ಜವಾಬ್ದಾರಿಯೂ ಇದ್ದರೆ ಚೆನ್ನ ಅಲ್ಲವೇ?

–ಎಸ್‌. ಸುಬ್ರಮಣ್ಯ, ಕಡೂರು

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry