ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಹಿಯಾದ ಮೈಸೂರು ಪಾಕ್

ಜಿಎಸ್‌ಟಿಯಿಂದ ಸಿಹಿತಿನಿಸು ಕೊಳ್ಳುವವರ ಸಂಖ್ಯೆಯಲ್ಲೂ ಇಳಿಕೆ
Last Updated 6 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ‘ಸಿಹಿ ತಿನಿಸುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಾಕದೆ ಇದ್ದರೆ ಚೆನ್ನಾಗಿರುತ್ತಿತ್ತು. ಸ್ವೀಟನ್ನೂ ಲೆಕ್ಕ ಹಾಕಿ ತಿನ್ನುತ್ತಿದ್ದೇವೆ. ನಾಲ್ಕು ಪೀಸು ಮೈಸೂರು ಪಾಕು ತಿನ್ನುವ ಬದಲು ಎರಡೇ ಪೀಸು ತಿನ್ನುತ್ತಿದ್ದೇವೆ’ ಎಂದು ವರ್ತಕ ಇರ್ಫಾನ್ ಅಹ್ಮದ್‌ ಬೇಸರ ವ್ಯಕ್ತಪಡಿಸಿದರು. ನಗರದ ದೇವರಾಜ ಮಾರುಕಟ್ಟೆಯಲ್ಲಿ ಮೈಸೂರು ಪಾಕ್‌ ಕೊಳ್ಳಲು ಬಂದಾಗ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

‘ಜಿಎಸ್‌ಟಿ ಬರುವ ಮೊದಲು ಮನೆಗೆ, ಬಂಧುಗಳಿಗೆ ಕೆ.ಜಿಗಟ್ಟಲೆ ಮೈಸೂರು ಪಾಕ್‌ ಒಯ್ಯುತ್ತಿದ್ದೆ. ಈಗ ಕೆ.ಜಿ ಬದಲು ಅರ್ಧ ಕೆ.ಜಿ, ಮುಕ್ಕಾಲು ಕೆ.ಜಿ ಒಯ್ಯುತ್ತಿರುವೆ’ ಎಂದು ರಾಮಕೃಷ್ಣನಗರದ ರೇಖಾ ಹೇಳಿದರು.

ಸಿಹಿತಿಂಡಿಗಳಿಗೆ ಶೇ 5, ಖಾರಾತಿಂಡಿಗಳಿಗೆ ಶೇ 12ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದರ ಪರಿಣಾಮ ಪ್ರತಿ ಪದಾರ್ಥಗಳಿಗೂ ಜಿಎಸ್‌ಟಿ ಕಟ್ಟಿ ಕೊಳ್ಳಬೇಕು. ಇದನ್ನು ಸಹಜವಾಗಿ ಗ್ರಾಹಕರ ಮೇಲೆ ವಿಧಿಸಲಾಗುತ್ತಿದೆ. ಇದರಿಂದ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಜತೆಗೆ, ಕೊಳ್ಳುವ ಪ್ರಮಾಣವೂ ಕಡಿಮೆಯಾಗಿದೆ. ಅಲ್ಲದೆ, ಸಕಾಲಕ್ಕೆ ಮಳೆಯಾಗದೆ ಇರುವುದು, ಬೆಳೆ ಕೈಗೆ ಬರದಿರುವುದರಿಂದ ರೈತರ ಕೈಯಲ್ಲಿ ದುಡ್ಡು ಓಡಾಡುತ್ತಿಲ್ಲ. ಸಹಜವಾಗಿ ಕೊಳ್ಳುವುದು ಕಡಿಮೆಯಾಗುವುದರ ಜತೆಗೆ, ಸಿಹಿತಿಂಡಿಗಳ ತಯಾರಿಕೆಯೂ ಕಡಿಮೆಯಾಗಿದೆ.

ಜಿಎಸ್‌ಟಿ ಯಾಕೆ ಕೊಡಬೇಕು ಎಂದು ವಾದ ಮಾಡುವ ಗ್ರಾಹಕರೇ ಹೆಚ್ಚು. ಜಿಎಎಸ್‌ಟಿ ಸೇರಿಸಿ ಬಿಲ್ಲು ಕೊಟ್ಟರೆ ಕೊಳ್ಳದೆ ವಾಪಸು ಹೋಗುವವರೂ ಇದ್ದಾರೆ. ‘ಇದಕ್ಕಾಗಿ ತಾಳ್ಮೆಯಿಂದ ಅವರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ. ಈಗ ಅನಿವಾರ್ಯವಾಗಿ ಕೊಡುತ್ತಿದ್ದಾರೆ. ಬಿಲ್ಲು ಕೊಡುವುದು ತಡವಾದರೆ ಗ್ರಾಹಕರು ತಾಳ್ಮೆ ಕಳೆದುಕೊಳ್ಳುತ್ತಾರೆ. ಇದರೊಂದಿಗೆ ತಿಂಗಳಿಗೆ 5, 10 ಹಾಗೂ 20ರಂದು ಜಿಎಸ್‌ಟಿಗೆ ಸಂಬಂಧಿಸಿ ಫೈಲ್‌ ಮಾಡಬೇಕು. ಮೊದಲಾದರೆ 20ರಂದು ಮಾತ್ರ ಫೈಲ್‌ ಮಾಡಬೇಕಿತ್ತು. ಮೂರು ಬಾರಿ ಫೈಲ್‌ ಮಾಡುವುದರಿಂದ ಅನಾನುಕೂಲವಾಗಿದೆ’ ಎನ್ನುವ ನೋವು ತೋಡಿಕೊಂಡರು ಮಹಾಲಕ್ಷ್ಮಿ ಸ್ವೀಟ್ಸ್‌ ಮಾಲೀಕರಾದ ಶಿವಕುಮಾರ್.

‘ನೋಟು ರದ್ದತಿಯಾದ ನಂತರ ವ್ಯಾಪಾರ ಕಡಿಮೆಯಾಯಿತು. ಈಗ ಜಿಎಸ್‌ಟಿಯಿಂದ ವ್ಯಾಪಾರ ಇನ್ನಷ್ಟು ಕಡಿಮೆಯಾಗಿದೆ. ಜನರ ಬಳಿ ದುಡ್ಡಿದ್ದರೆ ಮೈಸೂರು ಪಾಕ್‌ ಜತೆಗೆ, ಇತರ ಸಿಹಿತಿಂಡಿ, ಖಾರಾ ಪದಾರ್ಥಗಳನ್ನು ಕೊಳ್ಳುತ್ತಾರೆ. ಈಗ 100 ಗ್ರಾಂ ಮೈಸೂರು ಪಾಕ್‌ ಕೊಳ್ಳುವವರು 50 ಗ್ರಾಂಗೆ ಸೀಮಿತರಾಗಿದ್ದಾರೆ. ಆದರೂ ಪ್ರತಿವರ್ಷ ಶೇ 5ರಷ್ಟು ಮೈಸೂರು ಪಾಕ್‌ ದರ ಏರಿಸುತ್ತೇವೆ. ಈ ಬಾರಿಯ ದೀಪಾವಳಿಯೊಳಗೆ ಏರಿಕೆಯಾಗುತ್ತದೆ. ಸದ್ಯ ಸ್ಪೆಷಲ್ ಮೈಸೂರು ಪಾಕು ಕೆ.ಜಿಗೆ ₹ 400 ದರವಿದೆ. ಏರಿಕೆಯಾದ ನಂತರ ₹ 440 ಆಗಲಿದೆ’ ಎಂದು ಗುರು ಸ್ವೀಟ್ಸ್‌ ಮಾರ್ಟ್ ಮಾಲೀಕರಾದ ಶಿವಾನಂದ್‌ ಮಾಹಿತಿ ನೀಡಿದರು.

ಇಂದಿರಾ ಕೆಫೆಯ ಪಾಲುದಾರ ರಾಕೇಶಕುಮಾರ್‌ ಅವರು, ‘ಬೆಣ್ಣೆ ಮೈಸೂರು ಪಾಕನ್ನು ಕೆ.ಜಿಗೆ ₹ 480ಕ್ಕೆ ಮಾರುತ್ತೇವೆ. ಜತೆಗೆ, ಶೇ 12ರಷ್ಟು ಜಿಎಸ್‌ಟಿ ವಿಧಿಸುತ್ತೇವೆ. ಇದರಿಂದ ಶೇ 10ರಿಂದ 15ರಷ್ಟು ವ್ಯಾಪಾರ ಕಡಿಮೆಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನ್ಯೂ ಬಾಂಬೆ ಟಿಫಾನಿಸ್ ಮಾಲೀಕ ಮನೀಶಕುಮಾರ್‌ ಅವರು, ‘ನಮ್ಮಲ್ಲಿ ತುಪ್ಪದ ಮೈಸೂರು ಪಾಕನ್ನು ₹ 500, ಗೋಡಂಬಿ ಮೈಸೂರು ಪಾಕನ್ನು ₹ 600 ದರದಲ್ಲಿ ಮಾರುತ್ತೇವೆ. ಜತೆಗೆ, ಜಿಎಸ್‌ಟಿ ಹಾಕಿದ ಕೂಡಲೇ ಗ್ರಾಹಕರು ಕಂಗಾಲಾಗಿ ಜಗಳವಾಡುತ್ತಾರೆ. ಶೇ 70ರಷ್ಟು ಜನರಿಗೆ ಈ ಬಗ್ಗೆ ಮಾಹಿತಿ ಇಲ್ಲ. ಒಟ್ಟಾರೆ ಶೇ 30ರಿಂದ 35ರಷ್ಟು ವ್ಯಾಪಾರ ಕಡಿಮೆಯಾಗಿದೆ’ ಎನ್ನುವ ಆತಂಕ ಅವರದು.

ತಿನಿಸುಗಳು ಜಿಎಸ್‌ಟಿಗೂ ಮೊದಲಿದ್ದ ದರ ಜಿಎಸ್‌ಟಿ ನಂತರದ ದರ (ರೂಪಾಯಿಗಳಲ್ಲಿ)
ಆರ್ಡಿನರಿ ಮೈಸೂರು ಪಾಕ್ 280 294
ವಿಶೇಷ ಮೈಸೂರು ಪಾಕ್ 420 462
ಜಹಾಂಗೀರ್ 360 378
ಆರ್ಡಿನರಿ ಲಡ್ಡು 280 294
ಸ್ಪೆಷಲ್ ಲಡ್ಡು 400 420
ಆರ್ಡಿನರಿ ಖಾರಾ 260 291
ಸ್ಪೆಷಲ್‌ ಖಾರಾ 280 314

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT