ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ತಿಂಗಳಲ್ಲಿ 461 ಮಕ್ಕಳ ಸಾವು

ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
Last Updated 6 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಒಂಬತ್ತು ತಿಂಗಳಲ್ಲಿ 461 ಮಕ್ಕಳು ಮೃತಪಟ್ಟಿವೆ.

ಬಿಜೆಪಿ ಸತ್ಯಶೋಧನಾ ಸಮಿತಿ ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿದಾಗ ಈ ವಿಷಯ ತಿಳಿದುಬಂದಿದೆ.

ಆಸ್ಪತ್ರೆಗೆ ಪ್ರತಿ ತಿಂಗಳು ಸರಾಸರಿ 1,300 ಮಕ್ಕಳು ದಾಖಲಾಗುತ್ತಾರೆ. ಇದರಲ್ಲಿ 40 ರಿಂದ 50 ಮಕ್ಕಳು ಸಾಯುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಆಗಸ್ಟ್‌ನಲ್ಲಿ 93 ಮಕ್ಕಳು ಮೃತಪಟ್ಟಿವೆ.

‘ಬೇರೆ ಆಸ್ಪತ್ರೆಯವರು ಮಕ್ಕಳ ಆರೋಗ್ಯ ಗಂಭೀರ ಹಂತ ತಲುಪಿದ ಬಳಿಕ ನಮ್ಮ ಆಸ್ಪತ್ರೆಗೆ ಕಳುಹಿಸುತ್ತಾರೆ. ಸಾವಿನ ಸಂಖ್ಯೆ ಹೆಚ್ಚುವುದಕ್ಕೆ ಇದು ಪ್ರಮುಖ ಕಾರಣ. ಡೆಂಗಿ ಮತ್ತು ನ್ಯುಮೋನಿಯಾದಿಂದಲೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ’ ಎಂದು ಆಸ್ಪತ್ರೆಯ ನಿರ್ದೇಶಕಿ ಆಶಾ ಬೆನಕಪ್ಪ ತಿಳಿಸಿದರು.

‘ಸಾಮಾನ್ಯವಾಗಿ ಜುಲೈ ನಂತರ ದಾಖಲಾತಿಯೂ ಹೆಚ್ಚಿರುತ್ತದೆ, ಸಾವಿನ ಸಂಖ್ಯೆಯೂ ಹೆಚ್ಚಿರುತ್ತದೆ. ಇದರಲ್ಲಿ ಡೆಂಗಿ ಪ್ರಕರಣಗಳೇ ಜಾಸ್ತಿ ಇವೆ. ಜುಲೈನಿಂದ ಸೆಪ್ಟೆಂಬರ್‌ವರೆಗೆ 892 ಡೆಂಗಿ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 80ಕ್ಕಿಂತ ಹೆಚ್ಚು ಮಕ್ಕಳು ಮೃತಪಟ್ಟಿವೆ’ ಎಂದರು.

‘ಸರ್ಕಾರಿ ಆಸ್ಪತ್ರೆಗಳಿಂದ ಡೆಂಗಿ ಪೀಡಿತ ಮಕ್ಕಳನ್ನು ನಮ್ಮಲ್ಲಿಗೆ ಕಳುಹಿಸುವುದರಿಂದ ದಾಖಲಾತಿ ಹೆಚ್ಚಿದೆ. ಅಲ್ಲದೆ, ಉತ್ತರ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಕಡೆಯ ಸಾಕಷ್ಟು ಮಕ್ಕಳೂ ಇಲ್ಲಿ ದಾಖಲಾ
ಗಿದ್ದಾರೆ’ ಎಂದು ಮಾಹಿತಿ ನೀಡಿದರು.

‘ನಮ್ಮಲ್ಲಿ ಒಂದು ವರ್ಷದೊಳಗಿನ ಮಕ್ಕಳಿಗೆ ಉಚಿತ ವೆಂಟಿಲೇಟರ್‌ ವ್ಯವಸ್ಥೆ ಇದೆ. ಈ ಕಾರಣಕ್ಕೆ, ಕಾರ್ಪೊರೇಟ್‌ ಆಸ್ಪತ್ರೆಗಳೂ ಕಾಯಿಲೆ ಉಲ್ಬಣಗೊಂಡ ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಿವೆ. ಇದರಿಂದಲೂ ಒತ್ತಡ ಹೆಚ್ಚುತ್ತಿದೆ.ದಿನಕ್ಕೆ ಕನಿಷ್ಠ 50 ಮಕ್ಕಳು ದಾಖಲಾಗುತ್ತಾರೆ. ಆದರೆ, 20 ವೆಂಟಿಲೇಟರ್‌ಗಳು ಮಾತ್ರ ಇವೆ’ ಎಂದು ಪರಿಸ್ಥಿತಿಯನ್ನು ವಿವರಿಸಿದರು.

ಸಿಬ್ಬಂದಿ ಕೊರತೆ: ‘ಉತ್ತಮವಾಗಿ ಚಿಕಿತ್ಸೆ ನೀಡಲು ಇಲ್ಲಿ ಸಿಬ್ಬಂದಿಯ ಕೊರತೆ ಇದೆ. ಒಂದು ಹಾಸಿಗೆಗೆ ಪಾಳಿಗೆ ಒಬ್ಬರು ವೈದ್ಯಕೀಯ ಸಿಬ್ಬಂದಿ ಪ್ರಕಾರ ಒಟ್ಟು 540 ಸಿಬ್ಬಂದಿ ಅಗತ್ಯವಿದೆ. ಎರಡು ತೀವ್ರ ನಿಗಾ ಘಟಕಗಳಲ್ಲಿ 60 ಹಾಸಿಗೆಗಳಿಗೆ, 20 ವೈದ್ಯಕೀಯ ಸಿಬ್ಬಂದಿ ಇದ್ದಾರೆ’ ಎಂದು ಸಮಿತಿಯ ನೇತೃತ್ವ ವಹಿಸಿದ್ದ ಶಾಸಕ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದರು.

‘ವೆಂಟಿಲೇಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಅವುಗಳನ್ನು ಬಳಸಲು ಪರಿಣಿತ ಸಿಬ್ಬಂದಿಯನ್ನು ಒದಗಿಸಬೇಕು. ಈ ಆಸ್ಪತ್ರೆಗೆ ಕಾಯಂ ಸಿಬ್ಬಂದಿ
ಯನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಡಬೇಕು’ ಎಂದರು.

ಡೆಂಗಿ ಸೋಂಕಿತರ ಸಂಖ್ಯೆ ಹೆಚ್ಚಳ: ‘ಡೆಂಗಿ ರೋಗದಿಂದ ಸಾಕಷ್ಟು ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದನ್ನು ಮುಚ್ಚಿಡಲು ಪ್ರಯತ್ನಿಸದೇ, ಡೆಂಗಿ ನಿರ್ಮೂಲನೆಯ ಬಗ್ಗೆ ಚಿಂತಿಸಬೇಕು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷ ಡೆಂಗಿ ಸೋಂಕಿತರು ಹಾಗೂ ಅದರಿಂದ ಸಾಯುವವರು ಹೆಚ್ಚಾಗಿದ್ದಾರೆ’ ಎಂದರು.

‘ರಾಜ್ಯದಲ್ಲಿ ಪ್ರತಿವರ್ಷ 26 ಸಾವಿರ ಶಿಶುಗಳು ಸಾಯುತ್ತಿವೆ ಎಂಬ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿ ನೋಡಿ ಸತ್ಯಶೋಧನಾ ಸಮಿತಿ ರಚಿಸಲಾಗಿದೆ. ಇಲ್ಲಿಯವರೆಗೆ ಕೋಲಾರ, ಕಲಬುರ್ಗಿ, ಯಾದಗಿರಿ, ದಾವಣಗೆರೆಗೆ ಭೇಟಿ ನೀಡಿದ್ದೇವೆ. ಮಕ್ಕಳ ಸಾವಿಗೆ ಆರೋಗ್ಯ ಶಿಕ್ಷಣದ ಕೊರತೆ, ಅಪೌಷ್ಟಿಕತೆ, ಡೆಂಗಿ, ನ್ಯುಮೋನಿಯಾ ಪ್ರಮುಖ ಕಾರಣ. ಕೆಲವೆಡೆ ಆಸ್ಪತ್ರೆಗಳ ನಿರ್ಲಕ್ಷ್ಯವೂ ಕಂಡುಬಂದಿದೆ’ ಎಂದು ಸುರೇಶ್ ಕುಮಾರ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT